ಮನೆಯ ಗೋಡೆಗಳಲ್ಲಿ ನೇತಾಡುವ ದಪ್ಪ ಕಣ್ಣಿನ ಈ ನಿಗೂಢ ಮಹಿಳೆ ಯಾರು? ಉತ್ತರ ಹುಡುಕಿದ ನೆಟ್ಟಿಗರು! Big Eyed Mystery Woman

ದಪ್ಪ ಕಣ್ಣಿನ ಈ ನಿಗೂಢ ಮಹಿಳೆ ಯಾರು?
ದಪ್ಪ ಕಣ್ಣಿನ ಈ ನಿಗೂಢ ಮಹಿಳೆ ಯಾರು?
Published on

ಪ್ರಮುಖ ಮುಖ್ಯಾಂಶಗಳು

  • ನೀವು ಬೆಂಗಳೂರಿನಲ್ಲಿ ಒಂದು ಸುತ್ತು ಹಾಕಿದರೆ ಸಾಮಾನ್ಯವಾಗಿ ಒಂದು ಫೋಟೋ ನಿಮಗೆ ಕಣ್ಣಿಗೆ ಬೀಳುತ್ತದೆ
  • ಯಾವುದೇ ಕಟ್ಟಡಗಳಲ್ಲಿ ದಪ್ಪ ಕಣ್ಣಿನ ನಿಗೂಢ ಮಹಿಳೆಯ ಫೋಟೋ ರಾರಾಜಿಸುತ್ತಿರುತ್ತದೆ
  • ವೈರಲ್​ ಫೋಟೋ ನೋಡಿದವರಿಗೆ ಆ ಮಹಿಳೆ ಯಾರು ಅನ್ನೋ ಪ್ರಶ್ನೆ ಮೂಡದೇ ಇರುವುದಿಲ್ಲ
Big Eyed Mystery Woman : ನೀವು ಬೆಂಗಳೂರಿನಲ್ಲಿ ಒಂದು ಸುತ್ತು ಹಾಕಿದರೆ ಈ ಮೇಲೆ ಕಾಣುತ್ತಿರುವ ಫೋಟೋ ಹೆಚ್ಚಾಗಿ ನಿಮಗೆ ಕಣ್ಣಿಗೆ ಬೀಳುತ್ತದೆ. ಕೇವಲ ಬೆಂಗಳೂರು ಮಾತ್ರವಲ್ಲ, ಕರ್ನಾಟಕದ ಯಾವುದೇ ಪ್ರದೇಶಕ್ಕೆ ಹೋದರೂ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳಾಗಲಿ, ಹೋಟೆಲ್​, ದಿನಸಿ ಅಂಗಡಿಗಳು ಸೇರಿದಂತೆ ಇನ್ನಿತರ ಯಾವುದೇ ಕಟ್ಟಡಗಳಲ್ಲಿ ಈ ಮಹಿಳೆಯ ಫೋಟೋ ರಾರಾಜಿಸುತ್ತಿರುತ್ತದೆ. ಅದರಲ್ಲೂ ಹೊಸದಾಗಿ ನಿರ್ಮಾಣವಾಗುವ ಕಟ್ಟಡಗಳಲ್ಲಿ ಈ ಫೋಟೋ ಇದ್ದೇ ಇರುತ್ತದೆ. ಈ ಫೋಟೋ ನೋಡಿದ ಕೂಡಲೇ ಎಲ್ಲರ ದೃಷ್ಟಿ ಅದರತ್ತ ಹೋಗುತ್ತದೆ.
ಜನರು ದೃಷ್ಟಿಗೊಂಬೆಯಾಗಿ ಈ ಫೋಟೋವನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಹಣೆಯಲ್ಲಿ ಹಾಗೂ ಮುಂದಲೆಯಲ್ಲಿ ಕುಂಕುಮ ಇಟ್ಟುಕೊಂಡಿರುವ ಹಾಗೂ ಭಾರತೀಯಳಂತೆ ಕಾಣುವ ಈ ಮಹಿಳೆಯ ಕಣ್ಣುಗಳೇ ಇಡೀ ಫೋಟೋದ ಕೇಂದ್ರ ಬಿಂದು. ಯಾರನ್ನೋ ಹೆದರಿಸುತ್ತಿರುವಂತೆ ಕೋಪದಿಂದ, ದೊಡ್ಡದಾಗಿ ಬಿಟ್ಟಿರುವ ಕಣ್ಣುಗಳನ್ನು ಚಿಕ್ಕ ಮಕ್ಕಳೇನಾದರೂ ನೋಡಿದರೆ ಹೆದರುವುದು ಗ್ಯಾರಂಟಿ. ಅಂದಹಾಗೆ, ದೃಷ್ಟಿ ನಿವಾರಣೆಗಾಗಿ ಈ ಫೋಟೋವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ನಿರ್ಮಿಸುತ್ತಿರುವ ಹಾಗೂ ಹೊಸದಾಗಿ ನಿರ್ಮಾಣವಾದ ಕಟ್ಟಡ ಮತ್ತು ಜನರ ಕಣ್ಣುಕುಕ್ಕವ ಯಾವುದೇ ವಸ್ತುಗಳ ಮೇಲೆ ಜನರ ಕೆಟ್ಟ ದೃಷ್ಟಿ ಬೀಳದಿರಲಿ ಎಂಬ ಉದ್ದೇಶದಿಂದ ಈ ಫೋಟೋವನ್ನು ಅಳವಡಿಸಲಾಗುತ್ತದೆ. ಈ ಫೋಟೋ ನೋಡಿದರೆ ಸಾಕು ಎಲ್ಲರ ದೃಷ್ಟಿ ಮೊದಲು ಫೋಟೋ ಕಡೆ ಹೋಗುತ್ತದೆ. ಇದರಿಂದ ಜನರ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬ ನಂಬಿಕೆ ಇದೆ.

ಫೋಟೋದಲ್ಲಿರುವ ನಿಗೂಢ ಮಹಿಳೆ ಯಾರು?

ಈ ಫೋಟೋಗಳನ್ನು ನೋಡಿದವರಿಗೆ ಆ ಮಹಿಳೆ ಯಾರು ಅನ್ನೋ ಪ್ರಶ್ನೆ ಮೂಡದೇ ಇರುವುದಿಲ್ಲ. ಅದೇ ರೀತಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮಹಾರಾಷ್ಟ್ರ ಮೂಲದ ಮಹಿಳೆಯೊಬ್ಬರಿಗೂ ಈ ಪ್ರಶ್ನೆ ಮೂಡಿದೆ. ಉತ್ತರ ತಿಳಿದುಕೊಳ್ಳುವ ಕುತೂಹಲದಿಂದ @unitechy ಹೆಸರಿನ ತಮ್ಮ ಎಕ್ಸ್​ ಖಾತೆಯ ಮೂಲಕ ವೈರಲ್​ ಫೋಟೋ ಶೇರ್​ ಮಾಡಿ ಈಕೆ ಯಾರು ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನ ಹೊರ ಭಾಗದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಪ್ರತಿ ಕಟ್ಟಡದಲ್ಲೂ ನಾನು ಈ ಮಹಿಳೆಯನ್ನು ಕಂಡಿದ್ದೇನೆ. ಈಕೆ ಯಾರೆಂದು ತಿಳಿಯಲು ನಾನು ಗೂಗಲ್ ಲೆನ್ಸ್‌ನಲ್ಲೂ ಸಹ ಹುಡುಕಿದೆ. ಆದರೆ, ಆಕೆಯ ಬಗ್ಗೆ ಯಾವುದೇ ವಿವರಗಳು ಸಿಗಲಿಲ್ಲ. ಈಕೆ ಯಾರು ನಿಮಗೆ ಗೊತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.
2026, ಜನವರಿ 5ರಂದು ಕರ್ನಾಟಕದ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಳಿ ಕಂಡುಬಂದ ಈ ಫೋಟೋವನ್ನು ತಮ್ಮ ಎಕ್ಸ್​ನಲ್ಲಿ ಮಹಿಳೆ ಶೇರ್​ ಮಾಡಿದ್ದು, ಈವರೆಗೂ 3.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಟ್ವೀಟ್​ ವೈರಲ್​ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ.
ನೆಟ್ಟಿಗರೊಬ್ಬರು ಇದು ನಿರ್ಮಾಣಕ್ಕಾಗಿ ಇಡಲಾಗಿರುವ ನಜರ್‌ಬಟ್ಟು (ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ದುಷ್ಟ ಕಣ್ಣಿಗೆ ಸಮಾನವಾದದ್ದು) ಎಂದಿದ್ದಾರೆ.
ಇನ್ನೊಬ್ಬರು ಪೋಸ್ಟರ್‌ನಲ್ಲಿರುವ ಮಹಿಳೆಯನ್ನು ಪತ್ತೆಹಚ್ಚಲು ಗ್ರೋಕ್ ಸಹಾಯ ಪಡೆದರು. ಅದಕ್ಕೆ ಸಂಬಂಧಿಸಿದ ಸ್ಕ್ರೀನ್​ ಶಾಟ್​ ಸಹ ಹಂಚಿಕೊಂಡಿದ್ದಾರೆ. ಎಐ, ಆ ಮಹಿಳೆಯನ್ನು ಕರ್ನಾಟಕ ಮೂಲದ ಯೂಟ್ಯೂಬರ್ ನಿಹಾರಿಕಾ ರಾವ್ ಎಂದು ಗುರುತಿಸಿದೆ. 2023ರ ವೈರಲ್ ವಿಡಿಯೋ ಕ್ಲಿಪ್‌ನಲ್ಲಿ ಆಕೆ ವ್ಯಕ್ತಪಡಿಸಿದ ಆಶ್ಚರ್ಯದ ಮುಖಭಾವ ಸಾಮಾಜಿಕ ಜಾಲತಾಣದಲ್ಲಿ ಮೀಮ್ ರೂಪ ಪಡೆದುಕೊಂಡಿತು. ಇದೀಗ ದುಷ್ಟ ಕಣ್ಣನ್ನು ದೂರವಿಡಲು ಅದನ್ನು 'ದೃಷ್ಟಿ ಗೊಂಬೆ'ಯಾಗಿ ಬಳಸುತ್ತಿದ್ದಾರೆ ಎಂದು ಉತ್ತರ ನೀಡಿದೆ.
ಕಳ್ಳರು ಏನನ್ನಾದರೂ ಕದ್ದರೆ ಅವರ ಹಿಂದೆ ಬರುವ ರಾಕ್ಷಸ ಚಿಹ್ನೆ ಇದು ಎಂದು ಮತ್ತೊಬ್ಬ ಬಳಕೆದಾರರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಆದರೆ, ಈ ಫೋಟೋ ಬಗ್ಗೆ ಇರುವ ನಿಗೂಢತೆ ಮಾತ್ರ ಇನ್ನೂ ಆಗೇ ಉಳಿದಿದೆ. ಈಕೆ ಯಾರೆಂದು ನಿಮಗೆ ಗೊತ್ತಿದ್ದರೆ ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net