ಯಾರೀ ಸಯಾನಿ ಘೋಶ್​? 17ನೇ ವಯಸ್ಸಿಗೆ ಹೀರೋಯಿನ್​, ಅಲ್ಲಿಂದ ನೇರವಾಗಿ ಬಂಗಾಳ ಸಂಸದೆ! | Sayani Ghosh

ನಟಿ, ಸಂಸದೆ ಸಯಾನಿ ಘೋಷ್​
ನಟಿ, ಸಂಸದೆ ಸಯಾನಿ ಘೋಷ್​
Published on

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ಸಖತ್​ ಟ್ರೆಂಡ್​ ಆಗ್ತಿರುವ ಸಯಾನಿ ಘೋಷ್
  • ಮಮತಾ ಬ್ಯಾನರ್ಜಿ ಪಕ್ಷಕ್ಕೆ ಕೈಕೊಟ್ಟ ಸಂಸದರ ಪಟ್ಟಿಯಲ್ಲಿ ಈಕೆಯ ಹೆಸರು?
  • ಸ್ಟಾರ್​ ನಟಿಯಾಗಿದ್ದ ಬ್ಯೂಟಿ ರಾಜಕೀಯಕ್ಕೆ ದಿಢೀರ್ ಎಂಟ್ರಿ ಹೇಗೆ?
Sayani Ghosh: ಪ್ರಸ್ತುತ ದೇಶಾದ್ಯಂತ ಸಖತ್ ಚರ್ಚೆಗೆ ಒಳಗಾಗಿರುವ ಪಶ್ಚಿಮ ಬಂಗಾಳ ರಾಜಕೀಯ, ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪಕ್ಷಕ್ಕೆ ದೊಡ್ಡ ಕಂಟಕ ಕಾದಿದೆ ಎಂಬುದನ್ನು ಅಕ್ಷರಶಃ ಸೂಚಿಸಿದೆ. ಇದಕ್ಕೆ ಬಲವಾದ ಸಾಕ್ಷಿ 19 ಟಿಎಂಸಿ ಸಂಸದರು ಬಂಡಾಯ ಎದ್ದಿರುವುದು. ಈ ಪಟ್ಟಿಯಲ್ಲಿ, ಎಂಪಿ ಸಯಾನಿ ಘೋಶ್​ ಹೆಸರು ಟ್ರೆಂಡ್​ ಆಗುತ್ತಿರುವುದು ಅನೇಕರ ಕುತೂಹಲ ಕೆರಳಿಸಿದೆ.

ಗ್ಲಾಮರ್​ ಗೊಂಬೆ

ಬಂಗಾಳ ರಾಜಕೀಯದಲ್ಲಿ ಸಯಾನಿ ಘೋಷ್ ಯಾರೆಂದು ಗೊತ್ತಿಲ್ಲದವರೂ ಯಾರೂ ಇಲ್ಲ. ತಮ್ಮ ಸಿನಿಮಾಗಳಿಂದ ಜನಪ್ರಿಯತೆ ಹೆಚ್ಚಿಸಿಕೊಂಡ ಈ ಗ್ಲಾಮರ್‌ ಗೊಂಬೆ, ಉತ್ತುಂಗದಲ್ಲಿದ್ದಾಗಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಇನ್ನೂ ಹೆಚ್ಚಿನ ಜನಪ್ರಿಯತೆ ಗಳಿಸಿದ ನಾಯಕಿಯಾಗಿದ್ದು ರೋಚಕ. ಪ್ರಸ್ತುತ ಸಂಸತ್ ಸದಸ್ಯರಾಗಿರುವ ಕಾರಣ, ಅವರು ರಾಷ್ಟ್ರೀಯ ಮಟ್ಟದಲ್ಲಿಯೂ ಆಗಾಗ್ಗೆ ಸದ್ದು ಮಾಡುತ್ತಿರುತ್ತಾರೆ.
ಇತ್ತೀಚೆಗೆ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದ ಅವರು, 2029ರಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬೇಕೆಂದು ಬಯಸಿ, ಅವರಿಗಾಗಿ ಭರ್ಜರಿ ಪ್ರಚಾರ ಮಾಡಿದ್ದರು. ಈ ವೇಳೆ, ಅವರಾಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಆದರೆ, ಕೆಲವೇ ವಾರಗಳಲ್ಲಿ ಎಲ್ಲವೂ ತಲೆಕೆಳಗಾಯಿತು. ಚುನಾವಣೆಯಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ಟಿಎಂಸಿಯಲ್ಲಿ ಗಂಭೀರ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಮಮತಾ ಪಿಎಂ ಆಗಬೇಕೆಂದು ಕನಸು ಕಂಡವರೇ ಇದೀಗ ಬಂಡಾಯವೆದ್ದಿದ್ದಾರೆ.

ರಾಜಕೀಯಕ್ಕೆ ಲಗ್ಗೆ ಬೆನ್ನಲ್ಲೇ ಎಂಪಿ

ಈ ವಿಷಯ ಭಾರಿ ಚರ್ಚೆ, ಟೀಕೆಗಳಿಗೆ ಒಳಗಾಗುತ್ತಿದ್ದಂತೆ ಸಯಾನಿ ಘೋಷ್ ಯಾರು? ಅವರ ಹಿನ್ನೆಲೆ ಏನು ಎಂಬ ಕುತೂಹಲ ಜನರಲ್ಲಿ ಕೆರಳಿದೆ. ಅಷ್ಟಕ್ಕೂ ಯಾರೀ ಸಯಾನಿ? ಚಿತ್ರರಂಗದಲ್ಲಿದ್ದ ಬ್ಯೂಟಿ ಅದ್ಯಾಕೆ ರಾಜಕೀಯದತ್ತ ಒಲವು ತೋರಿದರು? ಎಂಬ ಹತ್ತಾರು ಪ್ರಶ್ನೆಗಳಿಗೆ ಹೀಗಿದೆ ನೋಡಿ ವಿವರವಾದ ಉತ್ತರ.
ಸಯಾನಿ ಘೋಷ್, ತಮ್ಮ 17ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಾಯಕಿ. ಬಹಳ ಕಡಿಮೆ ಸಮಯದಲ್ಲಿ ಹೆಚ್ಚಿನ ಮನ್ನಣೆ ಪಡೆದ ಈಕೆ, ಬೋಲ್ಡ್​ ಪಾತ್ರಗಳಲ್ಲಿಯೂ ನೋಡುಗರಿಗೆ ಮನರಂಜನೆ ನೀಡಿದರು. ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಲೇ, ವೆಬ್ ಸರಣಿಗಳಲ್ಲಿಯೂ ಅಭಿನಯಿಸಿದರು. ಎಲ್ಲರಿಗೂ ಪರಿಚಿತರಾಗಿ ಎಲ್ಲರಿಂದಲೂ ಪ್ರಶಂಸೆ ಪಡೆಯುತ್ತಿದ್ದ ಸಮಯದಲ್ಲೇ ದಿಢೀರ್​ ರಾಜಕೀಯ ಅವತಾರಕ್ಕೆ ತಿರುಗಿದ್ದು ಹಲವರ ಅಚ್ಚರಿಗೆ ಕಾರಣವಾಯಿತು. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಮುಖ ಯುವ ನಾಯಕರಲ್ಲಿ ಒಬ್ಬರಾದ ಸಯಾನಿ, ರಾಜಕೀಯ ಕಣದಲ್ಲೂ ಸದ್ದು ಮಾಡಲಾರಂಭಿಸಿದರು.

ದಿಢೀರ್​ ಟರ್ನ್​!

ಟಿವಿ ಸೀರಿಯಲ್​, ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ ಬಳಿಕ ರಾಜಕೀಯಕ್ಕೆ ಪ್ರವೇಶಿಸಿದ ಅವರು, 2021ರಲ್ಲಿ ಟಿಎಂಸಿ ಸೇರಿದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ, ಮಮತಾ ಬ್ಯಾನರ್ಜಿ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. 2024ರಲ್ಲಿ, ಸಯಾನಿಗೆ ಅನಿರೀಕ್ಷಿತವಾಗಿ ಸಂಸದೀಯ ಸ್ಥಾನವನ್ನು ನೀಡಲಾಯಿತು. ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಜಾದವ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು.

91.89 ಲಕ್ಷ ರೂ. ಆಸ್ತಿ

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಈ ಬ್ಯೂಟಿಯ ಒಟ್ಟು ಆಸ್ತಿ 91.89 ಲಕ್ಷ ರೂ.ಗಳಾಗಿದ್ದು, 59 ಲಕ್ಷ ರೂ. ಸಾಲವನ್ನು ಹೊಂದಿದ್ದಾರೆ ಎನ್ನಲಾಗಿದೆ. ಯಾವುದೇ ಕೃಷಿ ಭೂಮಿ, ಜಮೀನು ಅಥವಾ ವಾಣಿಜ್ಯ ಆಸ್ತಿಯನ್ನು ಹೊಂದಿಲ್ಲ. ಸಯಾನಿ ಕೋಲ್ಕತದ ಗಾಲ್ಫ್ ಗ್ರೀನ್‌ನಲ್ಲಿ ನಿವಾಸ ಹೊಂದಿದ್ದು, ಈ ಮನೆಯ ಮೌಲ್ಯ 62.64 ಲಕ್ಷ ರೂ.ಗಳೆಂದು ಹೇಳಲಾಗಿದೆ.
ಇನ್ನು ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಪರವಾಗಿ ನಿಲ್ಲಬೇಕಿದ್ದ ಅವರು ಬಂಡಾಯ ನಾಯಕರೊಂದಿಗೆ ಕೈಜೋಡಿಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಅವರು ಗುರುವಾರ ಕೋಲ್ಕತ ವಿಮಾನ ನಿಲ್ದಾಣದಲ್ಲಿ ಯಾರೂ ಗುರುತಿಸದೆ ಕಾಣಿಸಿಕೊಂಡರು. ಏರ್​ಪೋರ್ಟ್​ನಿಂದ ಹೊರಬಂದ ಕೂಡಲೇ ಕಾರು ಹತ್ತಿ, ಯಾರಿಗೂ ತಮ್ಮ ನಿಲುವಿನ ಬಗ್ಗೆ ತುಟಿಬಿಚ್ಚದೆ ಹೊರಟುಹೋದರು. ಬಿಕ್ಕಟ್ಟಿನ ಸಂದರ್ಭದಲ್ಲಿ ದಂಗೆ ಭುಗಿಲೆದ್ದಂತೆ, ಬಂಗಾಳದ ಜನರಿಗೆ ಇದು ಚರ್ಚೆಯ ವಿಷಯವಾಗಿದ್ದು, ಬಂಗಾಳ ರಾಜಕೀಯದ ಚದುರಂಗದಾಟ ಸದ್ಯ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net