ಟಿವಿಕೆಗೆ ಮತ ಹಾಕ್ಬೇಡಿ! ಬೀದಿ ಬೀದಿಯಲ್ಲಿ ವಿಜಯ್​ ವಿರುದ್ಧ ಪ್ರತಿಭಟಿಸಿದ ಈ ಬಿಗ್​ಬ್ಯಾಸ್​ ಬ್ಯೂಟಿ ಯಾರು? ​

ಟಿವಿಕೆ ಪಕ್ಷದ ನಾಯಕ ವಿಜಯ್​, ನಟಿ ಮಾರಿಯಾ ಜೂಲಿಯಾನ
ಟಿವಿಕೆ ಪಕ್ಷದ ನಾಯಕ ವಿಜಯ್​, ನಟಿ ಮಾರಿಯಾ ಜೂಲಿಯಾನ
Published on

ಪ್ರಮುಖ ಮುಖ್ಯಾಂಶಗಳು

  • ಟಿವಿಕೆ ಪಕ್ಷದಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ದಳಪತಿ ವಿಜಯ್
  • ತಮಿಳುನಾಡು ಚುನಾವಣಾ ಅಖಾಡದಲ್ಲಿ ಬಿರುಸಿನ ಪ್ರಚಾರದಲ್ಲಿ ವಿಜಯ್ ಸಖತ್ ಬಿಜಿ
  • ಟಿವಿಕೆ ಪಕ್ಷಕ್ಕೆ ಮತ ಹಾಕಬೇಡಿ ಎಂದು ಜನರಿಗೆ ಎಚ್ಚರಿಸಿದ ಬಿಗ್ ಬಾಸ್​ ಸ್ಪರ್ಧಿ
ಚೆನ್ನೈ: ಪಂಚರಾಜ್ಯ ಚುನಾವಣಾ ರಣರಂಗ ಬಿರುಸಿನಿಂದ ಸಾಗುತ್ತಿದ್ದು, ತಮಿಳುನಾಡಿನ ಅಖಾಡದಲ್ಲಿ ನಟ ವಿಜಯ್ ತಮ್ಮ ಟಿವಿಕೆ ಪಕ್ಷದಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯಗಳಲ್ಲಿ ಮತ್ತು ರ‍್ಯಾಲಿಗಳಲ್ಲಿ ಸಖತ್ ಬಿಜಿಯಾಗಿರುವ ದಳಪತಿ, ತಮಿಳುನಾಡಿನ ಜನತೆಗೆ ತಮ್ಮ ಅಮೂಲ್ಯವಾದ ಮತಗಳನ್ನು ತನಗೆ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ,  ಬಿಗ್ ಬಾಸ್​ ಬ್ಯೂಟಿಯೊಬ್ಬರು ನಟನ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸದ್ಯ ಹಲವರಲ್ಲಿ ಅಚ್ಚರಿ ಮೂಡಿಸಿದೆ.   
ಏ.23ರಂದು ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷವಾದ ಟಿವಿಕೆಗೆ ಮತ ನೀಡಿ, ಅಭೂತಪೂರ್ವ ಗೆಲುವಿಗೆ ಕಾರಣರಾಗಿ ಎಂದು ವಿಜಯ್ ಕೇಳಿಕೊಳ್ಳುತ್ತಿದ್ದಾರೆ. ಡಿಎಂಕೆ ಮೈತ್ರಿಕೂಟ ಮತ್ತು ಎನ್‌ಡಿಎ ಮೈತ್ರಿಕೂಟದ ಎದುರು ಗೆಲುವಿಗಾಗಿ ಪಣತೊಟ್ಟಿರುವ ಟಿವಿಕೆಗೆ ಯಾರೊಬ್ಬರು ಮತ ನೀಡಬೇಡಿ ಎಂದು ಬೀದಿ ಬೀದಿಗಳಲ್ಲಿ ಬ್ಯಾನರ್​, ಪೋಸ್ಟರ್ ​ಹಿಡಿದು ಅಪಪ್ರಚಾರ ಮಾಡಿರುವ ಬಿಗ್​ಬಾಸ್ ಸ್ಪರ್ಧಿ, ನಟಿ ಇದೀಗ ವಿಜಯ್ ಅಭಿಮಾನಿಗಳಿಗೆ ಬಿಗ್ ಶಾಕ್​ ನೀಡಿದ್ದಾರೆ.  
ತಮಿಳುನಾಡು ಚುನಾವಣೆಯ ಆರಂಭದಿಂದಲೂ ವಿಜಯ್ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ರಾಜಕೀಯ, ಸಿನಿಮಾ ಮತ್ತು ವೈಯಕ್ತಿಕ ಜೀವನದ ವಿಚಾರಗಳಿಂದ ಸಿಕ್ಕಾಪಟ್ಟೆ ಚರ್ಚೆಯಲ್ಲಿರುವ ವಿಜಯ್​, ಈ ಬಾರಿಯ ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬರಲು ಶ್ರಮಿಸುತ್ತಿರುವಾಗಲೇ ಇಂತಹ ಬೆಳವಣಿಗೆ ಆಗಿರುವುದು ದೊಡ್ಡ ಆಘಾತ ನೀಡಿದೆ. ನಟನಿಗೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ವಿಜಯ್​ ವಿರುದ್ಧ ಪ್ರಚಾರ ಮಾಡಿರುವ ನಟಿ ಬೇರಾರೂ ಅಲ್ಲ ಮಾರಿಯಾ ಜೂಲಿಯಾನ.
ತಮಿಳಿನ ಒಂದಷ್ಟು ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿರುವ ಈಕೆ, ತಮಿಳಿನ ಬಿಗ್ ಬಾಸ್​ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಮತ್ತು ಹೆಚ್ಚಿನ ಮನ್ನಣೆ ಗಳಿಸಿದ್ದಾರೆ. ಆದರೀಗ, ವಿಜಯ್​ ಅವರ ಟಿವಿಕೆ ಪಕ್ಷಕ್ಕೆ ಜನ ಮತ ಹಾಕಬೇಡಿ ಎಂದು ಹೇಳುವ ಪೋಸ್ಟರ್​ಗಳನ್ನು ಹಿಡಿದುಕೊಂಡು ಓಡಾಡುವುದನ್ನು ನೋಡಿ ಅನೇಕರು ಆಶ್ಚರ್ಯಚಕಿತರಾಗಿದ್ದಾರೆ. ಕೆಲವು ಸಮಯದಿಂದ ಸೋಷಿಯಲ್ ಮೀಡಿಯಾದಲ್ಲಿ ನಟನ ಬಗ್ಗೆ ನೆಗೆಟಿವ್​ ಪ್ರಚಾರ ಮಾಡುತ್ತಿರುವ ಅವರು ಒಂದು ಹೆಜ್ಜೆ ಮುಂದೆ ಹೋಗಿ ಚೆನ್ನೈ ಮರೀನಾ ಬೀಚ್‌ನಲ್ಲಿ ಟಿವಿಕೆ ವಿರುದ್ಧ ಧರಣಿ ನಡೆಸಿದ್ದಾರೆ.
ಟಿವಿಕೆ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಇದಕ್ಕಾಗಿಯೇ ನಾನು ನಿಮ್ಮಲ್ಲಿ ವಿಜಯ್‌ಗೆ ಯಾರೊಬ್ಬರೂ ಮತ ಹಾಕಬಾರದು ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಇನ್ನೊಂದರಲ್ಲಿ, ಡಿಎಂಕೆಗೆ ಮತ ಹಾಕಬೇಕು ಎಂದು ಹೇಳುವ ಎರಡು ಫಲಕಗಳನ್ನು ಹಿಡಿದುಕೊಂಡು ಓಡಾಡಿರುವುದು ಕೆಲವರನ್ನು ಕೆರಳಿಸಿದೆ. ನಟಿಯ ಈ ನಡೆಯಿಂದ ವಿಜಯ್ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದು, ಆಕೆಯ ಮೇಲೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net