ಯಾರೀ ಶಿಲ್ಪಾ ಶೈಲಾ? 4ನೇ ವಯಸ್ಸಿಗೆ ಕಾಲು ಕಳೆದುಕೊಂಡ ಮೈಸೂರಿನ ಕುವರಿಗೆ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕಂಚು​​

ಶರ್ಮಿಳಾ ಧಂಕರ್ (ಎಡ), ಕೆ.ಎಸ್​. ಶಿಲ್ಪಾ (ಬಲ)
ಶರ್ಮಿಳಾ ಧಂಕರ್ (ಎಡ), ಕೆ.ಎಸ್​. ಶಿಲ್ಪಾ (ಬಲ)
Published on

ಪ್ರಮುಖ ಮುಖ್ಯಾಂಶಗಳು

  • ಸ್ಕಾಟ್​ಲ್ಯಾಂಡ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್​ ಕ್ರೀಡಾಕೂಟ 2026
  • 5ನೇ ದಿನದಂದು ಭಾರತಕ್ಕೆ ಬರೋಬ್ಬರಿ 6 ಮೆಡಲ್​ಗಳು
  • ಕನ್ನಡತಿ ಶಿಲ್ಪಾ ಕೆ. ಶೈಲಾ ಅವರಿಗೆ ಒಲಿದ ಕಂಚಿನ ಪದಕ
ಗ್ಲ್ಯಾಸ್​ಗೋ: ಪ್ರಸಕ್ತ ವರ್ಷ ಸ್ಕಾಟ್​ಲ್ಯಾಂಡ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಬೇಟೆ ಬಲು ಜೋರಾಗಿದೆ. 5ನೇ ದಿನವೇ ಬರೋಬ್ಬರಿ 6 ಮೆಡಲ್​ಗಳು ಲಭಿಸಿದ್ದು, ಇದರಲ್ಲಿ ಶರ್ಮಿಳಾಗೆ ಚಿನ್ನಕ್ಕೆ ಮುತ್ತಿಟ್ಟು ಐತಿಹಾಸಿಕ ದಾಖಲೆ ಬರೆದರೆ, ಕನ್ನಡತಿ ಶಿಲ್ಪಾ ಕೆ. ಶೈಲಾ ಅವರಿಗೆ ಕಂಚಿನ ಪದಕ ಒಲಿದಿದೆ.
ಮೈಸೂರಿನ ಕಂಚುಗಾರಕೊಪ್ಪಲಿನ ಶೈಲಾ ಎಂದೇ ಪರಿಚಿತರಾದ ಕೆ.ಎಸ್​. ಶಿಲ್ಪಾ, ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ ಶಾಟ್‌ಪುಟ್ F57 (ಪ್ಯಾರಾ ಅಥ್ಲೆಟಿಕ್ಸ್) ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟು, ಕಂಚಿನ ಪದಕ ಗೆದ್ದು ಬೀಗಿದ್ದಾರೆ. ತಮ್ಮ 5ನೇ ಪ್ರಯತ್ನದಲ್ಲಿ 8.92 ಮೀಟರ್ ದೂರ ಎಸೆಯುವ ಮೂಲಕ ವಿದೇಶಿ ನೆಲದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 

ರೋಮಾಂಚಕ ಟ್ವಿಸ್ಟ್​!

ಸ್ಪರ್ಧೆಯ ಅಂತಿಮಗೊಂಡ ಬಳಿಕ ಅಧಿಕೃತ ಘೋಷಣೆಗಾಗಿ ಎಲ್ಲರೂ ಕಾಯುತ್ತಿದ್ದ ವೇಳೆ, ನೈಜೀರಿಯಾದ ಯುಚಾರಿಯಾ ಐಯಾಜಿ ಅವರು ಫೌಲ್ ಮಾಡಿದ್ದರಿಂದ ಮೂರನೇ ಸ್ಥಾನದಿಂದ ಅನರ್ಹಗೊಂಡರು. ಇದರಿಂದಾಗಿ, ಅದೇ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಶಿಲ್ಪಾ ಅವರಿಗೆ ಮೂರನೇ ಸ್ಥಾನಕ್ಕೆ ಬಡ್ತಿ ಸಿಕ್ಕಿ, ಕಂಚಿನ ಪದಕಕ್ಕೆ ಮುತ್ತಿಡುವಂತಾಯಿತು. 

4ನೇ ವಯಸ್ಸಿಗೆ ಅಪಘಾತ

ಮೂಲತಃ ಮೈಸೂರಿನ ಕೆಆರ್​ನಗರದ ಕಂಚುಗಾರಕೊಪ್ಪಲಿನ ಶಿಲ್ಪಾ, ಬೆಳೆದದ್ದು ಬೆಂಗಳೂರಿನಲ್ಲಿ. ಬಾಲ್ಯದಲ್ಲೇ ಸವಾಲುಗಳನ್ನು ಮೀರಿ ಬೆಳೆದ ಈಕೆ ತಮ್ಮ ನಾಲ್ಕನೇ ವಯಸ್ಸಿನಲ್ಲೇ ಭೀಕರ ರಸ್ತೆ ಅಪಘಾತದಲ್ಲಿ ಕಾಲುಗಳ ಕಾರ್ಯಕ್ಷಮತೆಯನ್ನು ಕಳೆದುಕೊಂಡರು. ನಂತರ ಪ್ಯಾರಾ ಕ್ರೀಡೆಗಳಲ್ಲಿ ತಮ್ಮ ಸಾಧನೆಯ ಓಟ ಮುಂದುವರಿಸಿದ ಅವರು, ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಕಂಚು ಗೆದ್ದು ಪಾಲಕರು ಮತ್ತು ದೇಶದ ಜನತೆಗೆ ಹೆಮ್ಮೆ ತಂದಿದ್ದಾರೆ.
ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ಕ್ಯಾಂಪಸ್‌ನಲ್ಲಿ ಕೋಚ್​ ಈಶನ್ ಎಸ್.ಡಿ ಅವರ ಮಾರ್ಗದರ್ಶನದಲ್ಲಿ ಶಿಲ್ಪಾ ಅವರು ತರಬೇತಿ ಪಡೆಯುತ್ತಿದ್ದಾರೆ,(ಏಜೆನ್ಸೀಸ್).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net