ಮೊನ್ನೆಯವರೆಗೂ ಕೂಲಿ ಕೆಲಸ, ಇಂದು ಶಾಸಕಿ! 12 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದ ಕಲಿತ ಮಾಝಿ ಯಾರು?

ಬಿಜೆಪಿ ಶಾಸಕಿ ಕಲಿತಾ ಮಾಝಿ
ಬಿಜೆಪಿ ಶಾಸಕಿ ಕಲಿತಾ ಮಾಝಿ
Published on

ಪ್ರಮುಖ ಮುಖ್ಯಾಂಶಗಳು

  • ಮನೆಗೆಲಸ ಮಾಡುತ್ತಿದ್ದ ಮಹಿಳೆ ಇಂದು ಶಾಸಕಿ
  • 12000ಕ್ಕೂ ಅಧಿಕ ಮತಗಳಿಂದ ಭಾರೀ ಅಂತರದಲ್ಲಿ ಗೆಲುವು
  • ಅಷ್ಟಕ್ಕೂ ಯಾರು ಈ ಕಲಿತ ಮಾಝಿ?
  • ಇಲ್ಲಿದೆ ನೋಡಿ ಸಂಪೂರ್ಣ ವಿವರ
Kalita Majhi: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಸದ್ಯ ಭಾರೀ ಸಂಚಲನ ಸೃಷ್ಟಿಸಿದೆ. ಸತತ 15 ವರ್ಷಗಳಿಂದ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನಿರ್ಮಿಸಿದ್ದ ಭದ್ರಕೋಟೆಯನ್ನು ಛಿದ್ರಗೊಳಿಸುವಲ್ಲಿ ಕಮಲ ಪಡೆ ಭರ್ಜರಿ ಯಶಸ್ವಿಯಾಗಿದೆ.
15 ವರ್ಷಗಳ ತೃಣಮೂಲ ಆಡಳಿತ ಕಡೆಗೂ ಕೇಸರಿ ಅರಳುವಿಕೆಯಿಂದ ಅಂತ್ಯಗೊಂಡಿದೆ. ಈ ಚುನಾವಣೆಗಳ ಫಲಿತಾಂಶಗಳಲ್ಲಿ ಹಲವು ಅಚ್ಚರಿ ಸಂಗತಿಗಳು ಕೇಳಿಬಂದಿದ್ದು, ಅವುಗಳಲ್ಲಿ ಬಂಗಾಳದ ಕಲಿತಾ ಮಾಝಿ ಅವರ ಗೆಲುವು ಕೂಡ ಒಂದಾಗಿದೆ. ಪಶ್ಚಿಮ ಬಂಗಾಳದಲ್ಲಿ ಮನೆ ಮನೆಗಳಿಗೆ ಹೋಗಿ ಪಾತ್ರೆ ತೊಳೆಯುವುದು ಸೇರಿದಂತೆ ಕೂಲಿ ಕೆಲಸ ಮಾಡಿಕೊಂಡಿದ್ದ ಈಕೆ, ಇಂದು ಬಿಜೆಪಿಯಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಭಾರೀ ಅಂತರದಲ್ಲಿ ಗೆದ್ದು ಬೀಗಿರುವುದು ಸದ್ಯ ದೇಶದ ಜನತೆಯ ಹುಬ್ಬೇರಿಸಿದೆ.
ದಿನನಿತ್ಯ ಕೂಲಿ ಕೆಲಸವನ್ನೇ ನಂಬಿಕೊಂಡು, ತಿಂಗಳಿಗೆ 2500 ರೂ. ಆದಾಯ ಬರುವಂತೆ ಜೀವನ ಸಾಗಿಸುತ್ತಿದ್ದ ಕಲಿತಾ, ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದಲ್ಲದೇ, 12 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದು ಶಾಸಕಿಯಾಗಿ ರಾಜಕೀಯ ಅಖಾಡಕ್ಕಿಳಿದಿರುವುದು ನಿಜಕ್ಕೂ ಇದೆಲ್ಲ ಸಾಧ್ಯವೇ? ಎಂಬ ಹತ್ತಾರು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ.
37 ವರ್ಷ ವಯಸ್ಸಿನ ಕಲಿತಾ ಮಾಝಿ ಪಶ್ಚಿಮ ಬಂಗಾಳ ರಾಜ್ಯದ ಆಸ್ಗ್ರಾಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅವರು ಒಟ್ಟು 1,07,692 ಮತಗಳನ್ನು ಪಡೆದು, ತಮ್ಮ ಎದುರಾಳಿ ಶ್ಯಾಮ ಪ್ರಸನ್ನ ಲೋಹರ್ ಅವರನ್ನು ಬರೋಬ್ಬರಿ 12,535 ಮತಗಳ ಅಂತರದಿಂದ ಸೋಲಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಮಾಝಿ, ತೃಣಮೂಲ ಕಾಂಗ್ರೆಸ್‌ನ ಅಭೇದಾನಂದ್ ಥಂಡರ್ ವಿರುದ್ಧ 11,815 ಮತಗಳ ಅಂತರದಿಂದ ಸೋತಿದ್ದರು.
ಸೋಲಿನ ಸೇಡು ತೀರಿಸಿಕೊಳ್ಳಲು 2026ರ ಚುನಾವಣೆಯಲ್ಲೂ ಸ್ಪರ್ಧಿಸಿದ ಕಲಿತಾ, ಬಿಜೆಪಿಯಿಂದ ಟಿಎಂಸಿ ಎದುರು ಮತ್ತೊಮ್ಮೆ ಕಣಕ್ಕಿಳಿದರು. ಈಗ ಸ್ಥಳೀಯ ಜನರ ಬೆಂಬಲದೊಂದಿಗೆ ಭಾರಿ ಗೆಲುವು ಸಾಧಿಸಿರುವುದು ಅವರ ಬಗ್ಗೆ ಹೆಚ್ಚು ಚರ್ಚಿಸುವಂತೆ, ತಿಳಿದುಕೊಳ್ಳುವಂತೆ ಮಾಡಿದೆ. ಅಷ್ಟಕ್ಕೂ ಯಾರು ಈಕೆ? ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದ್ದೇಕೆ ಕಲಿತಾ? ಇವರ ಹಿನ್ನೆಲೆ ಏನು? ಎಂಬ ಒಂದಷ್ಟು ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ನೋಡಿ ಮಾಹಿತಿ.
ಕಲಿತಾ ಮಾಝಿ ಮೂಲತಃ ಬಂಗಾಳದವರು. ಇವರ ಪತಿ (ಪ್ಲಂಬರ್) ಕೂಡ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ದಂಪತಿಗೆ ಒಬ್ಬ ಮಗನಿದ್ದಾನೆ. ಕಳೆದ ಎರಡು ದಶಕಗಳಿಂದ, ಅವರು ಮನೆಕೆಲಸ ಮಾಡಿಕೊಂಡೇ ಸರಳ ಜೀವನ ಮಾಡುತ್ತಿದ್ದಾರೆ. ಈಗ ಚುನಾವಣೆಯಲ್ಲಿ ಗೆದ್ದು, ಶಾಸಕಿಯಾಗಿ ಆ ರಾಜ್ಯದ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣರಾಗಿದ್ದಾರೆ. ಬಡತನದಿಂದ ಬಂದ ಮಹಿಳೆಯೊಬ್ಬರು, ರಾಜಕೀಯ ಪ್ರವೇಶ ಮಾಡಿರುವುದು ಅಷ್ಟು ಸುಲಭದ ಮಾತಲ್ಲ ಬಿಡಿ. ಇದಕ್ಕೆ ಬಿಜೆಪಿ ಅವರನ್ನು ತಳಮಟ್ಟದಿಂದ ಏರಿದ ನಾಯಕಿ ಎಂದು ಶ್ಲಾಘಿಸಿದೆ.
ಒಟ್ಟಾರೆಯಾಗಿ, 2026ರ ವಿಧಾನಸಭಾ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ದಾಖಲೆಯ ಫಲಿತಾಂಶದಿಂದ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿದ್ದು, ರಾಜ್ಯದ ಒಟ್ಟು 293 ಕ್ಷೇತ್ರಗಳ ಪೈಕಿ 206 ಕ್ಷೇತ್ರಗಳನ್ನು ಗೆದ್ದು ಬೀಗಿದೆ. ತೃಣಮೂಲ 81 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಅಭ್ಯರ್ಥಿಗಳು ಎರಡು ಸ್ಥಾನಗಳನ್ನು ಮಾತ್ರ ಗೆದ್ದಿದ್ದಾರೆ. ಅಲ್ಲಿಗೆ, 15 ವರ್ಷಗಳ ಬಳಿಕ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬುದು ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net