ಯಾರೀ ಅನು ಗ್ರೋವರ್? ಪ್ರಧಾನಿ ಮೋದಿ ಆದೇಶಿಸಿದ ಫಾಸ್ಟ್ ಟ್ರ್ಯಾಕ್ ಕೋರ್ಟ್​ಗೆ ವಿಶೇಷ ನ್ಯಾಯಾಧೀಶರು​ ​

 ಫಾಸ್ಟ್​ಟ್ಯ್ರಾಕ್​ ಕೋರ್ಟ್​ ವಿಶೇಷ  ಜಡ್ಜ್​ ಅನು ಗ್ರೋವರ್ ಬಾಲಿಗಾ
ಫಾಸ್ಟ್​ಟ್ಯ್ರಾಕ್​ ಕೋರ್ಟ್​ ವಿಶೇಷ ಜಡ್ಜ್​ ಅನು ಗ್ರೋವರ್ ಬಾಲಿಗಾ
Published on

ಪ್ರಮುಖ ಮುಖ್ಯಾಂಶಗಳು

  • ಫಾಸ್ಟ್ ಟ್ರ್ಯಾಕ್ ಕೋರ್ಟ್​ಗೆ ವಿಶೇಷ ಜಡ್ಜ್ ಆಗಿ ಅನು ಗ್ರೋವರ್​ ನೇಮಕ
  • ಮಹಾರಾಷ್ಟ್ರದಲ್ಲೂ ಎರಡು ವಿಶೇಷ ನ್ಯಾಯಾಲಯ
  • ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಅಭಯ
ನವದೆಹಲಿ: ದೇಶವ್ಯಾಪಿ ಭಾರಿ ಸಂಚಲನ ಹುಟ್ಟುಹಾಕಿರುವ ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂತರ್​ ಮಂತರ್​ನಲ್ಲಿ ನಡೆಯುತ್ತಿರುವ ಸಿಜೆಪಿ ಹಾಗೂ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು, ಕೇಸ್​ ಅನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್​ಟ್ಯ್ರಾಕ್​ ಕೋರ್ಟ್​ಗಳ ಸ್ಥಾಪನೆಗೆ ಆದೇಶಿಸಿದರು. ಇದರ ಬೆನ್ನಲ್ಲೇ ಈ ವಿಶೇಷ ನ್ಯಾಯಾಲಯಕ್ಕೆ ಜಡ್ಜ್​ ಆಗಿ ಅನು ಗ್ರೋವರ್ ಬಾಲಿಗ (Anu Grover Baliga) ಅವರನ್ನು ನೇಮಕ ಮಾಡಲಾಗಿದೆ. 
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರ ಆದೇಶದಂತೆ, ಹಿರಿಯ ನ್ಯಾಯಾಧೀಶೆ ಅನು ಗ್ರೋವರ್ ಬಾಲಿಗಾ ಅವರನ್ನು ಈ ಹೊಸ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಧೀಶರಾಗಿ ನೇಮಕ ಮಾಡಿಕೊಳ್ಳಲಾಗಿದೆ. ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆ ಕೇಸ್​ಗಳ ವಿಚಾರಣೆ ನಡೆಸುವಲ್ಲಿ ಪ್ರಮುಖರಾದ ಅನು ಅವರನ್ನೇ ಜಡ್ಜ್​ ಆಗಿ ನೇಮಿಸಿರುವುದು ಪ್ರಕರಣಕ್ಕೆ ಹೊಸ ಆಯಾಮ ನೀಡಲಿದೆ.  
2000 ಇಸವಿಯಲ್ಲಿ ದೆಹಲಿ ನ್ಯಾಯಾಂಗ ಸೇವೆಗೆ ಸೇರ್ಪಡೆಯಾದ ಅನು ಗ್ರೋವರ್​ ಅವರು, ಸಾಕೆಟ್ ವಾಣಿಜ್ಯ ನ್ಯಾಯಾಲಯ ಮತ್ತು ದ್ವಾರಕಾ ಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಪ್ರಕರಣಗಳನ್ನು ಅತ್ಯಂತ ಶೀಘ್ರವಾಗಿ ಬಗೆಹರಿಸುವಲ್ಲಿ ಹೆಸರುವಾಸಿಯಾಗಿರುವ ಇವರ ನ್ಯಾಯಾಲಯವು ದೆಹಲಿ ಜಿಲ್ಲಾ ನ್ಯಾಯಾಲಯಗಳ ಪಟ್ಟಿಯಲ್ಲಿ ಗರಿಷ್ಠ ಪ್ರಕರಣ ಇತ್ಯರ್ಥಪಡಿಸಿದ ಹೆಗ್ಗಳಿಕೆಯೂ ಇವರಿಗಿದೆ.

ಮಹಾರಾಷ್ಟ್ರದಲ್ಲೂ 2 ವಿಶೇಷ ನ್ಯಾಯಾಲಯ

ಇನ್ನೊಂದೆಡೆ, ಬಾಂಬೆ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಅವರು ಔರಂಗಾಬಾದ್ ಮತ್ತು ನಾಗ್ಪುರದಲ್ಲಿ ನೀಟ್ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಎರಡು ವಿಶೇಷ ನ್ಯಾಯಾಲಯಗಳನ್ನು ನಿಯೋಜಿಸಿದ್ದಾರೆ. ಔರಂಗಾಬಾದ್‌ಗೆ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಸ್.ವಿ. ಪವಾರ್ ಮತ್ತು ನಾಗ್ಪುರಕ್ಕೆ ಜಿ. ಕೊಲ್ಟೆ ಅವರನ್ನು ನೇಮಿಕ ಮಾಡಲಾಗಿದೆ.

ಪ್ರಧಾನಿ ಮೋದಿ ಅಭಯ

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮೊದಲ ಬಾರಿಗೆ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, "ಯುವಕರ ಭವಿಷ್ಯದ ಜೊತೆ ಆಟವಾಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಖಾತರಿಪಡಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸಲಾಗುವುದು" ಎಂದು ವಿದ್ಯಾರ್ಥಿಗಳಿಗೆ ಅಭಯ ನೀಡಿದರು. 
ಇದರೊಟ್ಟಿಗೆ, ಪರೀಕ್ಷಾ ಅಕ್ರಮಗಳನ್ನು ತಡೆಯಲು ಇನ್ನಷ್ಟು ಕಠಿಣ ಶಿಕ್ಷೆ ಹಾಗೂ ನಿಬಂಧನೆಗಳನ್ನು ಒಳಗೊಂಡ ಹೊಸ ವಿಧೇಯಕವನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಆದ್ರೆ, ಸಿಜೆಪಿ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳು ಮಾತ್ರ ನಮಗೆ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡುಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net