ಯಾರು ದೇಶವಿರೋಧಿ?; ಬಹಿರಂಗ ಚರ್ಚೆಗೆ ಬರುವಂತೆ ಪ್ರಧಾನಿ ಮೋದಿಗೆ ಮತ್ತೆ ಸವಾಲು ಹಾಕಿದ ರಾಹುಲ್ ಗಾಂಧಿ | Rahul Gandhi

ಯಾರು ದೇಶವಿರೋಧಿ, ಯಾರು ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ
ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ
Published on: 

ನವದೆಹಲಿ: ಯಾರು ದೇಶವಿರೋಧಿ, ಯಾರು ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ವಿಡಿಯೋ ಮೂಲಕ ಮಾತನಾಡಿರುವ ರಾಹುಲ್ ಗಾಂಧಿ, ಮೋದಿ ಜೀ, ನಾನು ನಿಮಗೆ ಸವಾಲು ಹಾಕಿ 24 ಗಂಟೆಗಳಾಗಿವೆ. ವಿರೋಧ ಪಕ್ಷವು 'ದೇಶವಿರೋಧಿ' ಎಂದು ನೀವು ಹೇಳುತ್ತೀರಿ. ಯಾವುದೇ ವೇದಿಕೆ ಅಥವಾ ಸ್ಥಳವನ್ನು ಆರಿಸಿಕೊಳ್ಳಿ ಮತ್ತು ಈ ವಿಷಯದ ಬಗ್ಗೆ ನನ್ನೊಂದಿಗೆ ಚರ್ಚಿಸಿ. ನಿಜವಾಗಿಯೂ ದೇಶವಿರೋಧಿ ಯಾರು? ವಿದೇಶಿ ಶಕ್ತಿಗಳೊಂದಿಗೆ ಯಾರಿಗೆ ಸಂಪರ್ಕವಿದೆ? ಮತ್ತು ಆ ಸಂಪರ್ಕಗಳ ಸ್ವರೂಪವೇನು? ಇದರ ಬಗ್ಗೆ ಚರ್ಚೆ ಮಾಡೋಣ, ಹೆದರಬೇಡಿ ಎಂದಿದ್ದಾರೆ.

ಮುಂದುವರೆದು, ನಾವಿಬ್ಬರೂ ಇರುತ್ತೇವೆ, ಮಾಧ್ಯಮಗಳು ಇರುತ್ತವೆ. ದೇಶದ ಯುವಜನರು ಇರುತ್ತಾರೆ. ಒಂದು ಮೇಜಿನ ಎದುರು, ನೀವು ಒಂದು ಕಡೆ ಮತ್ತು ನಾನು ಇನ್ನೊಂದು ಕಡೆ ಕುಳಿತುಕೊಳ್ಳೋಣ. ನೀವು ಯಾರನ್ನಾದರೂ ತೀರ್ಪುಗಾರರನ್ನಾಗಿ ನೇಮಿಸಿಕೊಳ್ಳಬಹುದು. ಬೇಕಿದ್ದರೆ ಮೋಹನ್ ಭಾಗವತ್ ಜೀ ಅವರನ್ನೇ ತೀರ್ಪುಗಾರರನ್ನಾಗಿ ಮಾಡಿ ಎಂದು ತಿಳಿಸಿದ್ದಾರೆ.

Also Read
ಎಸ್​ಐಆರ್ ಕುರಿತು ಚರ್ಚಿಸಲು ವಿಶೇಷ ಸಂಸತ್ ಅಧಿವೇಶನ ಕರೆಯಲು ಸಿದ್ಧ; ಪ್ರತಿಪಕ್ಷಗಳು ಚರ್ಚೆಗೆ ಬರಲಿ: ಅಮಿತ್ ಶಾ ಸಾವಲು | Amit Shah
ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ

ಆರ್ಥಿಕ ವ್ಯವಸ್ಥೆ, ಅಮೆರಿಕದೊಂದಿಗಿನ ಒಪ್ಪಂದ ಹೇಗೆ ನಡೆಯಿತು, ಮತ್ತು ಇಷ್ಟೊಂದು ಆತುರದಲ್ಲಿ ಯಾಕೆ ನಡೆಯಿತು, ಸಂಪುಟಕ್ಕೆ ತಿಳಿಸದೆ ನೀವೊಬ್ಬರೇ ಯಾಕೆ ಈ ಒಪ್ಪಂದ ಮಾಡಿಕೊಂಡಿರಿ, ಅದಾನಿ ಪ್ರಕರಣವನ್ನು ಯಾಕೆ ಮುಚ್ಚಲಾಯಿತು, ಎಪ್ಸ್ಟೀನ್ ಪ್ರಕರಣ ಹೀಗೆ ಅನೇಕ ವಿಷಯಗಳ ಬಗ್ಗೆ ನಾವು ಮುಕ್ತವಾಗಿ ಚರ್ಚಿಸೋಣ. ಸತ್ಯ ಹೊರಬರಲಿ. ಎಲ್ಲವೂ ಸ್ಪಷ್ಟವಾಗಲಿ. ನೀವು ನನ್ನ ಮೇಲೆ ಆರೋಪಗಳನ್ನು ಮಾಡುತ್ತೀರಲ್ಲವೇ? ಮುಂದೆ ಬನ್ನಿ, ಎಲ್ಲವೂ ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?

ಅ.31ರಂದು ಗುಜರಾತ್​ನಲ್ಲಿ ನಡೆದ ರಾಷ್ಟ್ರೀಯ ಏಕ್ತಾ ದಿವಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಪ್ರಜಾಸತ್ತಾತ್ಮಕ ಜವಾಬ್ದಾರಿಯನ್ನು ಪ್ರತಿಪಕ್ಷಗಳು ಕೈಬಿಟ್ಟು ಪ್ರತಿಬಂಧಕ ಶಕ್ತಿಯಾಗಿ ಮಾರ್ಪಟ್ಟಿವೆ. ದೇಶವನ್ನು ವಿಭಜಿಸಲು ಕೆಲವು ಶಕ್ತಿಗಳು ಪಿತೂರಿ ನಡೆಸುತ್ತಿವೆ. ವಿದೇಶದಲ್ಲಿರುವ ಭಾರತ ವಿರೋಧಿ ಸಂಬಂಧವನ್ನು ಮುಂದುವರೆಸಿ, ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡಲು ಮತ್ತು ಭಾರತದ ಇಮೇಜ್ ಅನ್ನು ಹಾಳುಗೆಡವಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದರು.

ಇದಕ್ಕೆ ಕೌಂಟರ್ ನೀಡಿ ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ಮಿಸ್ಟರ್​ ಮೋದಿ, ಈ ದೇಶಕ್ಕೆ ಸುಳ್ಳು ಹೇಳುವುದನ್ನು ನಿಲ್ಲಿಸಿ. ನೀವು ಪ್ರಧಾನಿಯಾದದ್ದು ವಿದೇಶಿ ಸಹಾಯದಿಂದ. ಪ್ರಧಾನಿಯಾಗಿ ಮುಂದುವರಿದಿರುವುದೂ ವಿದೇಶಿ ಸಹಾಯದಿಂದಲೇ. ನಿಮ್ಮ ಆರ್ಥಿಕ ವ್ಯವಸ್ಥೆಯು ಸಂಪೂರ್ಣವಾಗಿ ವಿದೇಶಿಯರ ನಿಯಂತ್ರಣದಲ್ಲಿದೆ. ಮತ್ತು ಅವರ ಬೆಂಬಲವನ್ನು ಹೊಂದಿದೆ. ವಿದೇಶಿ ಸಾಮಾಜಿಕ ಜಾಲತಾಣಗಳು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಿವೆ.

ಈ ವಿಷಯದ ಕುರಿತು ಮುಕ್ತ ಚರ್ಚೆಗೆ ನಾನು ನಿಮಗೆ ಸವಾಲು ಹಾಕುತ್ತಿದ್ದೇನೆ. ಯಾವುದೇ ವೇದಿಕೆ, ಯಾವುದೇ ಸಮಯವಾಗಲಿ. ಧೈರ್ಯವಿದ್ದರೆ ಬನ್ನಿ. ಆದರೆ ನೀವು ಇದಕ್ಕೆ ಧೈರ್ಯ ಮಾಡಲಾರಿರಿ. ಯಾಕಂದರೆ, ನಿಮ್ಮ ಬಗ್ಗೆ ನನಗೆ ತಿಳಿದಿರುವ ವಿಷಯಗಳನ್ನು ಕಂಡು ನೀವು ಬೆಚ್ಚಿಬಿದ್ದಿದ್ದೀರಿ ಎಂದು ಹೇಳಿದ್ದರು (ಏಜೆನ್ಸೀಸ್).