ಮೊದಲ ಸಹಿಯಲ್ಲೇ ಫ್ರೀ ಪವರ್!... ಡಿಎಂಕೆ ಸಾಲದ ಗುಟ್ಟು ರಟ್ಟು ಮಾಡುತ್ತಾ ಶ್ವೇತಪತ್ರದ ಸಮರ ಸಾರಿದ ಸಿಎಂ ವಿಜಯ್​ | TVK Vijay

TVK Vijay | ತಮಿಳುನಾಡು ನೂತನ ಮುಖ್ಯಮಂತ್ರಿ  ಸಿ. ಜೋಸೆಫ್ ವಿಜಯ್
TVK Vijay | ತಮಿಳುನಾಡು ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್
Published on
TVK Vijay: ತಮಿಳುನಾಡು ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿರುವ ಸಿ. ಜೋಸೆಫ್ ವಿಜಯ್ ಭಾನುವಾರ ಹಲವಾರು ಕಡತಗಳಿಗೆ ಸಹಿ ಹಾಕುವ ಮೂಲಕ ತಮ್ಮ ಆಡಳಿತಕ್ಕೆ ಚಾಲನೆ ನೀಡಿದ್ದು, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ವಿಜಯ್​ ಸಹಿ ಮಾಡಿದ ಮೊದಲ ಕಡತವು ಗೃಹಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೆ ತರಲು ಅನುಮೋದನೆ ನೀಡಿದ್ದು, ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಪಡೆಯ ರಚನೆ ಹಾಗೂ ರಾಜ್ಯದಲ್ಲಿನ ಮಾದಕವಸ್ತು ಪಿಡುಗನ್ನು ನಿವಾರಿಸಲು ಪ್ರತಿ ಜಿಲ್ಲೆಯಲ್ಲೂ ಮಾದಕವಸ್ತು ವಿರೋಧಿ ಘಟಕವನ್ನು ಸ್ಥಾಪಿಸುವ ಪ್ರಸ್ತಾಪಗಳಿಗೂ ತಕ್ಷಣವೇ ಒಪ್ಪಿಗೆ ನೀಡಿದ್ದಾರೆ. ಶಿಕ್ಷಣ, ಆಹಾರ ಪೂರೈಕೆ, ಆರೋಗ್ಯ ರಕ್ಷಣೆ ಮತ್ತು ಮಹಿಳಾ ಸುರಕ್ಷತೆ ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ವಿಜಯ್​ ತಿಳಿಸಿದ್ದಾರೆ.

ಸಚಿವ ಸಂಪುಟದ ವಿವರ

ವಿಜಯ್ ಅವರ ಹೊಸ ಸಚಿವ ಸಂಪುಟವು ಅನುಭವಿಗಳು ಮತ್ತು ಯುವಕರ ಮಿಶ್ರಣವಾಗಿದ್ದು, ಮಂತ್ರಿ ಮಂಡಲದಲ್ಲಿ ಹಿರಿಯ ನಾಯಕ ಕೆ.ಎ. ಸೆಂಗೋಟ್ಟಯ್ಯನ್​ರೊಂದಿಗೆ ಡಾ. ಟಿ.ಕೆ. ಪ್ರಭು ಮತ್ತು ಎಸ್. ಕೀರ್ತನಾರಂತಹ ಯುವ ಮುಖಗಳಿಗೆ ಸ್ಥಾನ ನೀಡಲಾಗಿದೆ. ವಿಜಯ್​ ಆಪ್ತ ಆಧವ್ ಅರ್ಜುನ, ಎನ್. ಆನಂದ್, ಆರ್. ನಿರ್ಮಲ್ ಕುಮಾರ್ ಮತ್ತು ಕೆ.ಜಿ. ಅರುಣ್ ರಾಜ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಡಿಎಂಕೆ ವಿರುದ್ಧ ವಾಗ್ದಾಳಿ...

ಪ್ರಮಾಣವಚನ ಸ್ವೀಕಾರದ ಬಳಿಕ ಮಾತನಾಡಿದ ಸಿಎಂ ವಿಜಯ್, ಈ ಹಿಂದಿನ ಡಿಎಂಕೆ ಸರ್ಕಾರ ತಮಗೆ 10 ಲಕ್ಷ ಕೋಟಿ ರೂ. ಸಾಲವನ್ನು ಬಿಟ್ಟು ಹೋಗಿದ್ದು, ಈ ಕುರಿತಾದ ವಿಷಯವನ್ನು ಜನಸಾಮಾನ್ಯರಿಗೆ ತಿಳಿಸಲು 2021-2026 ಅವಧಿಯ ರಾಜ್ಯದ ಹಣಕಾಸಿನ ಕುರಿತು ಶ್ವೇತಪತ್ರ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದರು.
ಪಾರದರ್ಶಕ ಆಡಳಿತ ನೀಡುವುದೇ ತಮ್ಮ ಗುರಿ ಎಂದಿರುವ ನೂತನ ಸಿಎಂ, ನಾಲ್ಕು ಗೋಡೆಗಳ ಮಧ್ಯ ರಾಜಕೀಯ ಮಾಡದೆ, ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡುತ್ತಾ, ಡಿಎಂಕೆಯ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿದ್ದ ಎಐಎಡಿಎಂಕೆಯನ್ನು ಟೀಕಿಸಿದರು. ತಮ್ಮ ಸರ್ಕಾರದಲ್ಲಿ ಒಂದೇ ಒಂದು ಶಕ್ತಿ ಕೇಂದ್ರ ಇರುತ್ತದೆ ಎಂದು ಹೇಳುವ ಮೂಲಕ, ಟಿವಿಕೆ ನೇತೃತ್ವದ ಸರ್ಕಾರವು ಯಾವುದೇ ಮೈತ್ರಿ ಪಾಲುದಾರರ ಒತ್ತಡಕ್ಕೆ ಒಳಗಾಗುವುದಿಲ್ಲ ಎಂಬ ಭರವಸೆಯನ್ನು ಜನರಿಗೆ ನೀಡಿದರು.
ಬಹುಮತಕ್ಕೆ ಸಂಖ್ಯಾಬಲದ ಅಗತ್ಯವಿದ್ದಾಗ ಟಿವಿಕೆಯನ್ನು ಬೆಂಬಲಿಸಲು ಮೊದಲು ಒಪ್ಪಿಕೊಂಡ ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರು ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಬೆಂಬಲಿಗರಿಗೆ ಮಹತ್ವದ ಸಂದೇಶ...

ವಿಜಯ್ ತಮ್ಮ ವಿರೋಧಿಗಳಿಗೂ ಸಮಾಧಾನಕರ ಸಂದೇಶ ನೀಡಿದ್ದು, ನನ್ನನ್ನು ಟೀಕಿಸಿದವರು ಮತ್ತು ಅವಮಾನಿಸಿದವರು ಕೂಡ ನನ್ನ ಜನರು ಎನ್ನುತ್ತಾ ಅಭಿವೃದ್ಧಿ ಪಯಣದಲ್ಲಿ ಎಲ್ಲರನ್ನೂ ಕರೆದೊಯ್ಯುವ ಭರವಸೆ ನೀಡಿದರು. ವಿಶೇಷವಾಗಿ ಜೆನ್‌ ಜಿ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ನನ್ನೆಲ್ಲಾ ಯುವ ಸ್ನೇಹಿತರಿಗೆ 0ಈ ವಿಜಯ್ ಮಾಮಾ ಒಳ್ಳೆಯದನ್ನೇ ಮಾಡುತ್ತಾರೆ ಎಂದು ಭರವಸೆ ನೀಡಿದರು. ತಮ್ಮ ಪಕ್ಷ ಅಧಿಕಾರಕ್ಕೆ ಬರಲು ಎರಡು ವರ್ಷಗಳ ಕಾಲ ಶ್ರಮಿಸಿದ ಕಾರ್ಯಕರ್ತರನ್ನು ಮತ್ತು ಸಾಮಾಜಿಕ ಜಾಲತಾಣಗಳ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net