

ಭೌಗೋಳಿಕತೆಯೇ ಗಮ್ಯಸ್ಥಾನವಾಗಿತ್ತು! ದಶಕಗಳ ಕಾಲ ಇದೇ ನಿಯಮ, ವ್ಯವಹಾರದ ಯಶಸ್ಸನ್ನು ಆಳಿತ್ತು. ಯಶಸ್ಸಿಗಾಗಿ ಕೈಗಾರಿಕೆ ಮತ್ತು ಬಂಡವಾಳವಿದ್ದ ಅವಕಾಶಗಳ ದೈತ್ಯನಾಡಾದ ಅಮೆರಿಕದಂತಹ ದೇಶಕ್ಕೆ ಹೋಗಬೇಕಾಗಿತ್ತು.
ಈಗ? ಅವಕಾಶ ಎಲ್ಲೆಲ್ಲೂ ಇದೆ. ಬೀದರೋ ಅಥವಾ ಬೆಂಗಳೂರೋ... ಕಾರವಾರವೋ ಅಥವಾ ಕೋಲಾರವೋ! ಅದರಾಚೆ ಕೂಡ! ತಂತ್ರಜ್ಞಾನ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸುತ್ತಿರುವುದರಿಂದ ಭೌಗೋಳಿಕ ಇತಿಮಿತಿಗಳು ಕರಗಿಹೋಗುತ್ತಿವೆ. ಸ್ಥಳಾಂತರದ ಅಥವಾ ಸಂಸಾರ ಸಮೇತ ಊರು ಬಿಡುವ ಹಂಗಿಲ್ಲ. ಯಾರಾದರೂ ಜಗತ್ತನ್ನು ಬದಲಿಸುವ ಉದ್ಯಮ ಕಟ್ಟಬಹುದು. ಲಾಭವನ್ನೂ ಗಳಿಸಬಹುದು. ನೀವೂ ಕೂಡ!
ಇತಿಹಾಸದ ಬಹುತೇಕ ಸಮಯದಲ್ಲಿ ಭೌಗೋಳಿಕತೆಯೇ ವ್ಯವಹಾರದ ಯಶಸ್ಸನ್ನು ನಿರ್ಧರಿಸುತ್ತಿತ್ತು.
ತಂತ್ರಜ್ಞಾನ ಈಗ ಆ ಅಡ್ಡಗೋಡೆಯನ್ನು ಅಳಿಸಿ ಹಾಕಿದೆ. ಬಂಡವಾಳ ಹಾಗೂ ಪೂರಕ ಸೇವೆಗಳು ನಿಮ್ಮ ಬೆರಳ ತುದಿಯಲ್ಲೇ ಲಭ್ಯ.
ಉದ್ಯಮಿಗಳು ಅವಕಾಶಗಳ ನಾಡನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಅದು ನಿಮ್ಮ ಕಾಲಡಿಯಲ್ಲೇ ಇದೆ!
1970 ಮತ್ತು 1980ರ ದಶಕದಲ್ಲಿ ತಂತ್ರಜ್ಞಾನ ಸಂಸ್ಥೆಗಳು ಅರಳುತ್ತಿದ್ದ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಗೆ ಉದ್ಯಮಿಗಳು ದಾಂಗುಡಿ ಇಟ್ಟರು. ಅವಕಾಶವಾದಿ ಬ್ಯಾಂಕರ್ಗಳೂ ಇದೇ ದಾರಿ ಹಿಡಿದರು. ಸ್ಯಾಂಡ್ ಹಿಲ್ ರೋಡ್ ವಿಶ್ವದ ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆಗಳ ಮುಖ್ಯ ಕೇಂದ್ರವಾಯಿತು. ತಂತ್ರಜ್ಞಾನ ಸಂಸ್ಥೆಗಳ ಆರಂಭಿಕ ಸಾರ್ವಜನಿಕ ಷೇರು ಕೊಡುಗೆಗಳು (ಐಪಿಒ) ಭಾರಿ ಯಶಸ್ಸು ಕಂಡವು. ಇದು ವಕೀಲರು, ಅಕೌಂಟೆಂಟ್ಗಳು ಸೇರಿದಂತೆ ಅಸಂಖ್ಯಾತರನ್ನು ಆಕರ್ಷಿಸಿತು.
ನನ್ನಂತೆಯೇ! 1979ರಲ್ಲಿ ಸಿಲಿಕಾನ್ ಕಣಿವೆಯ ಹೊರಭಾಗದಲ್ಲಿ ನನ್ನ ನೆಲಮಾಳಿಗೆಯಲ್ಲೇ ಬರಿಗೈಯಲ್ಲಿ ಕಂಪನಿ ಶುರು ಮಾಡಿದೆ. ಆಡಂಬರದ ಕಚೇರಿಯಿರಲಿಲ್ಲ. ಪ್ರತಿಷ್ಠಿತ ಪದವಿ ಇರಲಿಲ್ಲ. ಅದೇ ಅವಕಾಶದ ನಾಡಾಗಿತ್ತು. ಹಣದ ಮಹಾಪೂರವೇ ಹರಿಯುತ್ತಿತ್ತು! ತಮ್ಮ ಹಣಕಾಸಿನ ಕನಸುಗಳನ್ನು ಸಾಕಾರಗೊಳಿಸಲು ನೆರವು ಹುಡುಕುತ್ತಿದ್ದ ಅಸಂಖ್ಯ ಜನ! ಅಲಬಾಮಾ, ಅಲ್ಬೇನಿಯಾ ಅಥವಾ ಅಂಕೋಲಾಕ್ಕಿಂತ ಹೆಚ್ಚಿನ ಅವಕಾಶಗಳು ಅಲ್ಲಿ ಸಿಕ್ಕವು!
ಅಲ್ಲಿಂದ? ಹಣಕಾಸು ಸೇವೆಗಳು ವಿಶ್ವವನ್ನೇ ವ್ಯಾಪಿಸಿದವು. ನನ್ನ ಸಂಸ್ಥೆಯ ಕಚೇರಿಗಳು ನಾಲ್ಕು ಖಂಡಗಳಿಗೆ ಹರಡಿವೆ. ಜಗತ್ತಿನಾದ್ಯಂತ 7,500ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಗ್ರಾಹಕರನ್ನು ಹೊಂದಿವೆ. ನಮ್ಮ ನೆಲೆಯಾದ ಟೆಕ್ಸಾಸ್ನ ಡಲ್ಲಾಸ್, ಅಮೆರಿಕದ ಬೆಳೆಯುತ್ತಿರುವ ಅನೇಕ ಟೆಕ್-ಫೈನಾನ್ಸ್ ಕೇಂದ್ರಗಳಲ್ಲೊಂದು.
ಜಾಗತಿಕವಾಗಿ ವೆಂಚರ್ ಕ್ಯಾಪಿಟಲ್ ಭಾರಿ ಏರಿಕೆಯಾಯಿತು. ಹೌದು, 2023ರಲ್ಲಿ ಶೇಕಡ 46ರ ಕನಿಷ್ಠ ಬಂಡವಾಳದ ಪಾಲನ್ನು ಹೊಂದಿದ್ದ ಅಮೆರಿಕದ ಕಂಪನಿಗಳು, ಈಗ ಶೇ. 70ನ್ನು ಮೀರಿಸಿವೆ. ಆದರೆ, ಮಾರುಕಟ್ಟೆ ದೊಡ್ಡದಾದಷ್ಟೂ ಎಲ್ಲರಿಗೂ ಲಾಭ. 2023ರಲ್ಲಿ ಜಾಗತಿಕ ವಿಸಿ ಸಂಸ್ಥೆಗಳು ಸಂಗ್ರಹಿಸಿದ್ದು 324 ಶತಕೋಟಿ ಡಾಲರ್. ಪ್ರಸಕ್ತ ಸಾಲಿನಲ್ಲಿ, ಜೂನ್ ಮುಕ್ತಾಯದೊಳಗೆ 506 ಶತಕೋಟಿ ಡಾಲರ್!
2021ರ ಕುಸಿತ ಮತ್ತು 2022ರ ಭರಾಟೆ ನಂತರ ಭಾರತದ ವಿಸಿ ಚಟುವಟಿಕೆ ಮತ್ತೆ ಗರಿಗೆದರುತ್ತಿದೆ. ಕರ್ನಾಟಕವೇ ಇದರ ಕೇಂದ್ರಬಿಂದು. 2025ರಲ್ಲಿ ಬೆಂಗಳೂರಿನ ಸ್ಟಾರ್ಟಪ್ಗಳು 4.5 ಶತಕೋಟಿ ಡಾಲರ್ ಸಂಗ್ರಹಿಸಿದ್ದು, ಉಳಿದೆಲ್ಲ ಭಾರತೀಯ ನಗರಗಳಿಗಿಂತ ದುಪ್ಪಟ್ಟು ಸಾಧಿಸಿವೆ. 3ಒನ್4ನಂತಹ ಕಂಪನಿಗಳು ದೊಡ್ಡ ಮೊತ್ತದ ಫಂಡ್ಗಳನ್ನು ರೂಪಿಸಿ, ಪ್ರಪಂಚದಾದ್ಯಂತ ಹೂಡಿಕೆ ಮಾಡಿವೆ. ಇದರಲ್ಲಿ ಡ್ರೋನ್ ತಯಾರಿಕಾ ಸಂಸ್ಥೆ ಏರಿಯೋ ಮತ್ತು ಫಿನ್ಟೆಕ್ ಸಂಸ್ಥೆಯಾದ ಓಪನ್ನಂತಹ ಸ್ಥಳೀಯ ಕಂಪನಿಗಳ ಮೇಲಿನ ಹೂಡಿಕೆಗಳೂ ಸೇರಿವೆ. ಅಮೆಜಾನ್ನಂತಹ ದೈತ್ಯರೇ ಸ್ಟಾರ್ಟಪ್ಗಳಲ್ಲಿ ಹೂಡಿಕೆ ಮಾಡುತ್ತಿರುವಾಗ ನಿಮಗೆ ಸಾಂಪ್ರದಾಯಿಕ ವಿಸಿಗಳ ಅಗತ್ಯವೇ ಇರುವುದಿಲ್ಲ.
ಪ್ರೖೆವೇಟ್ ಈಕ್ವಿಟಿ (ಪಿಇ) ಬಂಡವಾಳ ಕೂಡ ಹೇರಳವಾಗಿ ಲಭ್ಯವಿದೆ. ವೆಸ್ಟ್ಬ್ರಿಡ್ಜ್, ಅಸೆಂಟ್ ಕ್ಯಾಪಿಟಲ್ನಂತಹ ಕರ್ನಾಟಕದ ದಿಗ್ಗಜರು ಭಾರತೀಯ ಒಡೆತನದ ಉದ್ಯಮಗಳನ್ನು ಬೆಂಬಲಿಸುತ್ತಾರೆ. ಜಾಗತಿಕ ಪಿಇ ದಿಗ್ಗಜರ ಗುರಿಯೂ ಭಾರತವೇ. ಹಣಕಾಸಿನ ನೆರವು, ಸಣ್ಣ ಮೊತ್ತದಿಂದ ಹಿಡಿದು ಬೃಹತ್ ಬಂಡವಾಳದವರೆಗೂ ಲಭ್ಯ. ಉದ್ಯಮ ವೇದಿಕೆಗಳು ಮತ್ತು ಸರ್ಕಾರಿ ಪ್ರಾಯೋಜಿತ ಯೋಜನೆಗಳು ಸ್ಟಾರ್ಟಪ್ಗಳ ಫಂಡಿಂಗ್ಗೆ ನೆರವಾಗಿವೆ. ಕರ್ನಾಟಕ ಇನ್ಪಮೇಷನ್ ಟೆಕ್ನಾಲಜಿ ವೆಂಚರ್ ಕ್ಯಾಪಿಟಲ್ ಫಂಡ್ (ಕೆಇಟಿವಿಇಎನ್- ಕಿಟ್ವೆನ್) 1999ರಿಂದ ಸ್ಥಳೀಯ ಉದ್ಯಮಗಳಲ್ಲಿ ಬಂಡವಾಳ ಹೂಡುತ್ತಿದೆ.
ರಾಷ್ಟ್ರಮಟ್ಟದಲ್ಲಿ, ಸ್ಟಾರ್ಟಪ್ ಇಂಡಿಯಾ ಯೋಜನೆಯು ಸಾವಿರಾರು ಹೊಸ ಕಂಪನಿಗಳಿಗೆ ಹೂಡಿಕೆ ಮತ್ತು ಅಗತ್ಯ ನೆರವನ್ನು ಒದಗಿಸಿದೆ. ಭಾರತದಲ್ಲಿ ಈಗ 2.2 ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್ಗಳಿವೆ. 2025-26ರ ಹಣಕಾಸು ವರ್ಷದಲ್ಲಿ 55,000ಕ್ಕೂ ಅಧಿಕ ಹೊಸ ಸ್ಟಾರ್ಟಪ್ಗಳು ಹುಟ್ಟಿಕೊಂಡಿವೆ!
ಭೌಗೋಳಿಕತೆಯ ಆಚೆಗಿನ ಬೇಲಿಗಳೂ ಮುರಿದುಬೀಳುತ್ತಿವೆ. 2014ರಲ್ಲಿ 44ರಷ್ಟಿದ್ದ ಅಮೆರಿಕದ ಮಹಿಳಾ ಮತ್ತು ಅಲ್ಪಸಂಖ್ಯಾತ ಒಡೆತನದ ಪಿಇ ಸಂಸ್ಥೆಗಳು 2025ಕ್ಕೆ 471ಕ್ಕೆ ಏರಿಕೆಯಾಗಿವೆ. ವೈವಿಧ್ಯಮಯ ದೃಷ್ಟಿಕೋನವೇ ಆರ್ಥಿಕತೆಯ ನಿಜವಾದ ಬಲ. ಇದು ಹೊಸ ಆಲೋಚನೆಗಳು, ಆವಿಷ್ಕಾರ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಭಾರತದ ಸುಮಾರು ಅರ್ಧದಷ್ಟು ಸ್ಟಾರ್ಟಪ್ಗಳಲ್ಲಿ ನಿರ್ದೇಶಕರು ಅಥವಾ ಪಾಲುದಾರರು ಮಹಿಳೆಯರೇ ಆಗಿದ್ದಾರೆ. ಹೆಚ್ಚು ಮಹಿಳಾ ನಿಯಂತ್ರಿತ ಸಂಸ್ಥೆಗಳು ಆರ್ಥಿಕತೆಯನ್ನು ಮತ್ತಷ್ಟು ಕ್ರಿಯಾಶೀಲವಾಗಿಸುತ್ತವೆ.
ನಿಮ್ಮ ಬಳಿ ಆಲೋಚನೆ ಇದೆಯೇ? ಹಾಗಾದರೆ, ಇಂಟರ್ನೆಟ್ ಮೂಲಕ ನೀವು ಫಂಡಿಂಗ್ನ್ನು ಎಲ್ಲಿಂದಲೂ ಹುಡುಕಬಹುದು. ಆನ್ಲೈನ್ನಲ್ಲಿ ಕಂಪನಿ ನೋಂದಣಿ ಈಗ ಹಿಂದೆಂದಿಗಿಂತ ಸುಲಭ. ಕೇಂದ್ರ ಕಾರ್ಪೆರೇಟ್ ಸಚಿವಾಲಯದ ಖಕಐಇಛಿ+ ಡಿಜಿಟಲ್ ಅರ್ಜಿಗಳನ್ನು ಉಪಯೋಗಿಸಿ. ವ್ಯಾಪಾರ ಕಾರ್ಯಾಚರಣೆ, ತಾಂತ್ರಿಕ ನೆರವು ಮತ್ತು ಕಾನೂನು ಸಲಹೆಗಳು- ಎಲ್ಲವೂ ಕಡಿಮೆ ವೆಚ್ಚದಲ್ಲಿ ರಿಮೋಟ್ ಆಗಿ ಲಭ್ಯವಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಸಂಸ್ಥೆ ಕಟ್ಟಿ. ನಿಮ್ಮ ಕೆಲಸವು ಗ್ರಾಹಕರು ಮತ್ತು ಸಿಬ್ಬಂದಿಯ ಬದುಕನ್ನು ಹಸನಾಗಿಸಲಿ. ಏನೇ ಆಗಲಿ, ಗೆಲುವಿನ ಅರ್ಥವನ್ನು ನೀವು ನಿರ್ಧರಿಸಿ, ಅದನ್ನು ಎಲ್ಲಿ ಬೇಕಾದರೂ ಸಾಧಿಸಬಹುದು.
ಸಾಧಿಸುವವರು ಕೆಲವರಷ್ಟೇ. ಸಮೀಕ್ಷೆಗಳ ಪ್ರಕಾರ, ಭಾರತದ ಮುಕ್ಕಾಲು ಪಾಲು ವೃತ್ತಿಪರರು ಸ್ವಂತ ಉದ್ಯಮವನ್ನೇ ಬಯಸುತ್ತಿದ್ದಾರೆ. ಆದರೆ, ಸೋಲುವ ಭಯದಿಂದಲೇ ಅರ್ಧಕ್ಕೂ ಹೆಚ್ಚು ಮಂದಿ ಹಿಂದೆ ಸರಿಯುತ್ತಾರೆ ಎಂದು ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಮಾನಿಟರ್ ವರದಿ ತಿಳಿಸಿದೆ. ಅದೇ ನಿಮಗೆ ಸಿಕ್ಕಿರುವ ಅವಕಾಶ. ಹೌದು, ಸೋಲಲೂಬಹುದು. ಆದರೆ ಅದೇ ಕೊನೆಯಲ್ಲ. ಗೆಲ್ಲುವ ಮುನ್ನ ನಾನೂ ಹತ್ತು ವರ್ಷ ಸೋತಿದ್ದೆ. ಯಾವುದು ವರ್ಕೌಟ್ ಆಗುತ್ತೆ ಮತ್ತು ಏನನ್ನು ಬದಲಾಯಿಸಬೇಕು ಎಂದು ಸೋಲು ನಿಮಗೆ ತಿಳಿಸಿಕೊಡುತ್ತದೆ. ಕಲಿತುಕೊಳ್ಳಿ. ಮತ್ತೊಮ್ಮೆ ಪ್ರಯತ್ನಿಸಿ. ಪುನರಾವರ್ತಿಸಿ. ಸತತ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ! ಸಂಪತ್ತೇ ನಿಮ್ಮ ಪ್ರತಿಫಲ. ಸೃಜನಶೀಲತೆಯನ್ನು ವಿಕೇಂದ್ರೀಕೃತವಾಗಿ ಬಳಸಿಕೊಳ್ಳುವುದರಲ್ಲೇ ಬಂಡವಾಳಶಾಹಿಯ ನಿಜವಾದ ಸೌಂದರ್ಯ ಅಡಗಿದೆ. ಅದರ ಮೂಲ ಮಂತ್ರ ಒಂದೇ- ಪ್ರಯತ್ನಿಸದೆ ಗೆಲುವಿನ ಗುಟ್ಟು ತಿಳಿಯದು. ಉದ್ಯಮ ಪ್ರವೇಶಿಸಲು ಇದ್ದ ಅಡೆತಡೆಗಳೆಲ್ಲವೂ ಈಗ ಇಲ್ಲವಾಗಿವೆ. ನಿಮಗೇಕೆ ಹಿಂಜರಿಕೆ?
ಲೇಖಕರು ಫಿಶರ್ ಇನ್ವೆಸ್ಟ್ಮೆಂಟ್ಸ್ನ ಸಂಸ್ಥಾಪಕ, ಕಾರ್ಯಕಾರಿ ಅಧ್ಯಕ್ಷ ಮತ್ತು ಸಹ-ಮುಖ್ಯ ಹೂಡಿಕೆ ಅಧಿಕಾರಿ. 1979ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿ 37 ವರ್ಷ ಅದರ ಸಿಇಒ ಆಗಿದ್ದರು. ಇದು ಜಾಗತಿಕವಾಗಿ 386 ಬಿಲಿಯನ್ ಅಮೆರಿಕನ್ ಡಾಲರ್ಗಿಂತ ಹೆಚ್ಚಿನ ಹಣಕಾಸು ನಿರ್ವಹಿಸುವ ಹೂಡಿಕೆ ಸಲಹಾ ಸಂಸ್ಥೆ. ನ್ಯೂಯಾರ್ಕ್ ಟೈಮ್ಸ್ನ 4 ಬೆಸ್ಟ್ಸೆಲ್ಲರ್ ಸೇರಿದಂತೆ 11 ಪುಸ್ತಕಗಳ ಲೇಖಕರಾಗಿರುವ ಫಿಶರ್, ವಿಶ್ವದ 28 ದೇಶಗಳ ಪ್ರಮುಖ ಮಾಧ್ಯಮಗಳಲ್ಲಿ ಅಂಕಣಗಳನ್ನು ಆಯಾ ದೇಶದ ಸ್ಥಳೀಯ ಭಾಷೆಗಳಲ್ಲಿ ಬರೆಯುತ್ತಾರೆ.