ಬಿಹಾರದ ರಾಜಕೀಯವು ಪ್ರವಾಹದ ಸಮಯದ ಕೋಸಿ ನದಿ ಇದ್ದಂತೆ, ಯಾವಾಗ ದಿಕ್ಕು ಬದಲಿಸುತ್ತದೆ ಎನ್ನುವುದನ್ನು ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. 2024ರ ಆರಂಭದಲ್ಲಿ ನಿತೀಶ್ ಕುಮಾರ್ ಮತ್ತೆ ಮಹಾಘಟಬಂಧನ ತ್ಯಜಿಸಿ ಎನ್‌ಡಿಎ ಮಡಿಲಿಗೆ ಮರಳಿದಾಗ ಚೌಧರಿ ಶಪಥ ಒಂದು ಹಂತಕ್ಕೆ ಈಡೇರಿದಂತೆ ಕಂಡಿತು. ಆದರೆ ಚೌಧರಿ ಪೇಟ ಅದಕ್ಕೂ ಮೊದಲೇ ಕಳಚಿತ್ತು! ಜುಲೈ 2024 ರಲ್ಲಿ, ಅವರು ಅಯೋಧ್ಯೆಗೆ ತೆರಳಿ ಸರಯು ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ಮುಂಡನ ಮಾಡಿಸಿಕೊಂಡು ತಮ್ಮ ಪೇಟವನ್ನು ಭಗವಾನ್ ರಾಮಲಲ್ಲಾನ ಪಾದಗಳಿಗೆ ಅರ್ಪಿಸಿದ್ದರು. ನಿತೀಶ್ ಪದಚ್ಯುತಗೊಳ್ಳುವ ಮೊದಲೇ ಪೇಟ ತೆಗೆದಿದ್ದಕ್ಕೆ ವಿರೋಧ ಪಕ್ಷ ಆರ್‌ಜೆಡಿ, ಇದು ಕುಲದ ಘನತೆಗೆ ಮಾಡಿದ ಅವಮಾನ ಎಂದು ಟೀಕಿಸಿತ್ತು ಎಂದು ವರದಿಯಾಗಿದೆ.