ವಂತಾರದಲ್ಲಿ ಲಿಯೋನೆಲ್ ಭೇಟಿ ಮಾಡಿದ ಮೆಸ್ಸಿ: ಹಿಂದು ಆಚರಣೆಯಲ್ಲಿ ಭಾಗಿ, ಫುಟ್ಬಾಲ್​ ದಿಗ್ಗಜನಿಗೆ ಭಾರತೀಯರ ಬಹುಪರಾಕ್​! Lionel Messi

ವಂತಾರಗೆ ಭೇಟಿ ನೀಡಿದ ಫುಟ್ಬಾಲ್​ ದಿಗ್ಗಜ  ಲಿಯೋನೆಲ್ ಮೆಸ್ಸಿ
ವಂತಾರಗೆ ಭೇಟಿ ನೀಡಿದ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ
Published on

ಪ್ರಮುಖ ಮುಖ್ಯಾಂಶಗಳು

  • ವಂತಾರಗೆ ಭೇಟಿ ನೀಡಿದ ಜಾಗತಿಕ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ
  • ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ವಂತಾರ ಅನಂತ್​ ಅಂಬಾನಯ ಕನಸಿನ ಕೂಸು
  • ವಂತಾರ ಭೇಟಿ ಬಳಿಕ ಮೆಸ್ಸಿ ಅವರ ಗೋಟ್​ ಇನ್​ ಇಂಡಿಯಾ ಟೂರ್​-2025 ಮುಕ್ತಾಯ
ನವದೆಹಲಿ: ಜಾಗತಿಕ ಫುಟ್ಬಾಲ್ ಐಕಾನ್​ ಆಗಿರುವ ಲಿಯೋನೆಲ್ ಮೆಸ್ಸಿ ( Lionel Messi ) ಅವರು ದೇಶದ ನಂಬರ್​ 1 ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಅವರ ಪುತ್ರ ಅನಂತ್​ ಅಂಬಾನಿ ಅವರ ಕನಸಿನ ಕೂಸಾದ ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ವಂತಾರಗೆ ಭೇಟಿ ನೀಡಿ ಜೀವ ಸಂಕುಲಗಳ ಜತೆ ಅಮೂಲ್ಯ ಸಮಯ ಕಳೆದರು.
ಗೋಟ್​ ಇನ್​ ಇಂಡಿಯಾ ಟೂರ್​-2025 ಭಾಗವಾಗಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡ ಮೆಸ್ಸಿ ಅವರು ಮಂಗಳವಾರ (ಡಿ.16) ಸಂಜೆ ಗುಜರಾತಿನ ಜಾಮ್​ನಗರದಲ್ಲಿರುವ ವಂತಾರ ಕೇಂದ್ರಕ್ಕೆ ಭೇಟಿ ನೀಡಿದರು. ಈ ವೇಳೆ ಹಿಂದೂ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸಿದ ಮೆಸ್ಸಿ, ವಂತಾರದ ಪ್ರಾಣಿಗಳೊಂದಿಗೆ ಮೌನ ಸಂವಹನ ನಡೆಸಿದರು.
ವಂತಾರದ ಆವರಣದಲ್ಲಿರುವ ದೇವಸ್ಥಾನದಲ್ಲಿ ನಡೆದ ಗಣೇಶ ಪೂಜೆ, ಹನುಮಂತನ ಪೂಜೆ ಹಾಗೂ ಶಿವ ಅಭಿಷೇಕದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮೆಸ್ಸಿ ಅವರ ಇಂಟರ್ ಮಿಯಾಮಿ ತಂಡದ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಸಾಥ್​ ನೀಡಿದರು. ಇದು ಮೆಸ್ಸಿಯವರ ಭಾರತ ಭೇಟಿಯ ಕೊನೆಯ ಹಂತವಾಗಿತ್ತು. ಇದಾದ ಬಳಿಕ ಮೆಸ್ಸಿ ಅವರು ತಮ್ಮ ತವರಿಗೆ ಹಾರಿದರು.
ಫುಟ್ಬಾಲ್ ದಿಗ್ಗಜನಿಗೆ ಗೌರವಾರ್ಥವಾಗಿ ವಂತಾರದ ಪಾಲನಾ ಕೇಂದ್ರದಲ್ಲಿ ಸಿಂಹದ ಮರಿಗೆ "ಲಿಯೋನೆಲ್" ಎಂದು ಹೆಸರಿಸಲಾಯಿತು. ಈ ಸಿಂಹದ ಜತೆ ಮೆಸ್ಸಿ ಉಭಯ ಕುಶಲೋಪರಿ ನಡೆಸಿದರು. ಅಲ್ಲದೆ, ರಕ್ಷಿಸಲ್ಪಟ್ಟ ಆನೆ ಮರಿ ಮಾಣಿಕ್‌ಲಾಲ್ ಜೊತೆ ಆಟವಾಡುವ ಮೂಲಕ ಮೆಸ್ಸಿ ಸಂತಸಪಟ್ಟರು. ಮೆಸ್ಸಿ ಅವರು ವಂತಾರಗೆ ಭೇಟಿ ನೀಡಿದ ಸಮಯದಲ್ಲಿ ಸೆರೆಹಿಡಿದಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಭಾರತೀಯರ ಬಹುಪರಾಕ್​

ಭಾರತೀಯ ಆಚರಣೆಗಳಲ್ಲಿ ಭಾಗಿಯಾಗಿದ್ದಕ್ಕೆ ಸಂತಸಗೊಂಡಿರುವ ಭಾರತದ ಅಭಿಮಾನಿಗಳು ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ಇಂದಿನಿಂದ ನಿಮ್ಮ ಹೆಸರು ಲೀಲಾಧರ್ ಮೆಸ್ಸಿ ಎಂದು ಮೆಸ್ಸಿ ಆರತಿ ಮಾಡುತ್ತಿರುವ ಫೋಟೋಗೆ ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಅಲ್ಲದೆ, ಜಾಗತಿಕ ಐಕಾನ್‌ಗಳು ಸ್ಥಳೀಯ ಸಂಪ್ರದಾಯಗಳನ್ನು ಗೌರವಿಸಿ, ಅದರಲ್ಲಿ ತೊಡಗಿಸಿಕೊಂಡಾಗ ಆ ಸಂದೇಶವು ಸಾರ್ವತ್ರಿಕವಾಗುತ್ತದೆ. ಅಲ್ಲದೆ, ನಮ್ರತೆ, ಕೃತಜ್ಞತೆ ಮತ್ತು ಸಾಮರಸ್ಯವು ಪದಗಳನ್ನು ಮೀರಿ ಎದ್ದು ಕಾಣುತ್ತದೆ. ನಿಮ್ಮ ಈ ಕ್ಷಣಗಳು ನಮ್ಮೊಂದಿಗೆ ಹಂಚಿಕೊಂಡ ನಿಮ್ಮ ಮಾನವೀಯ ಮೌಲ್ಯಗಳನ್ನು ನೆನಪಿಸುತ್ತವೆ ಎಂದು ಮತ್ತೊಬ್ಬ ನೆಟ್ಟಿಗ ಮೆಸ್ಸಿ ಅವರನ್ನು ಮನಸಾರೆ ಕೊಂಡಾಡಿದ್ದಾರೆ.
ಮೆಸ್ಸಿ ಅವರು ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗಿಯಾಗಿದ್ದಲ್ಲದೆ, ವಂತಾರದ ಕೆಲಸವನ್ನು ಬೆಂಬಲಿಸುವುದನ್ನು ನೋಡಿದರೆ ನಿಜವಾಗಿಯೂ ಭಾರತದ ಸಂಸ್ಕೃತಿಯ ಬಗ್ಗೆ ಅವರಿಗೆ ಇರುವ ಗೌರವ ಮತ್ತು ಎಲ್ಲ ಜೀವಿಗಳ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಮಗದೊಬ್ಬ ನೆಟ್ಟಿಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಮೆಸ್ಸಿ ಅವರು ತಮ್ಮ GOAT ಪ್ರವಾಸವನ್ನು ಕೋಲ್ಕತಗೆ ಆಗಮಿಸುವ ಮೂಲಕ ಪ್ರಾರಂಭಿಸಿದರು. ಇದಾದ ಬಳಿಕ ಹೈದರಾಬಾದ್, ಮುಂಬೈ ಮತ್ತು ನವದೆಹಲಿಯಲ್ಲಿ ಅನೇಕ ಉತ್ತಮ ಕ್ಷಣಗಳನ್ನು ಕಳೆದರು. ಭಾರತದಿಂದ ಹೊರಡುವ ಮೊದಲು, ಭಾರತೀಯರು ತೋರಿದ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಮೆಸ್ಸಿ ಧನ್ಯವಾದ ಅರ್ಪಿಸಿದರು. ನಮಸ್ತೆ ಭಾರತ! ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ ಭೇಟಿ ನಿಜಕ್ಕೂ ಅದ್ಭುತವಾಗಿತ್ತು. ನನ್ನ ಪ್ರವಾಸದ ಉದ್ದಕ್ಕೂ ಆತ್ಮೀಯ ಸ್ವಾಗತ, ಉತ್ತಮ ಆತಿಥ್ಯ ಮತ್ತು ತೋರಿದ ಪ್ರೀತಿಗೆ ನನ್ನ ಧನ್ಯವಾದಗಳು. ಭಾರತದಲ್ಲಿ ಫುಟ್ಬಾಲ್​ಗೆ ಉಜ್ವಲ ಭವಿಷ್ಯವಿದೆ ಎಂದು ನಾನು ಭಾವಿಸುತ್ತೇನೆ ಎಂದು ಮೆಸ್ಸಿ ಅವರು ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net