ವಾಟ್ಸ್​ಆ್ಯಪ್​ಗೂ ಇನ್ಮುಂದೆ ವಯಸ್ಸಿನ ಮಿತಿ! ಬಳಕೆಗೂ ಮೊದಲೇ ಆಗಬೇಕಾ ರಿವೀಲ್? ಏನಿದು ಹೊಸ ಪ್ರಾಂಪ್ಟ್​ ತಲೆಬಿಸಿ?

ವಾಟ್ಸ್​ಆ್ಯಪ್​ಗೂ ಇನ್ಮುಂದೆ ವಯಸ್ಸಿನ ಮಿತಿ
ವಾಟ್ಸ್​ಆ್ಯಪ್​ಗೂ ಇನ್ಮುಂದೆ ವಯಸ್ಸಿನ ಮಿತಿ
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ವಾಟ್ಸಾಪ್ ಬಳಕೆದಾರರಿಗೆ ಹೊಸ ತಲೆಬಿಸಿ?
  • ವಾಟ್ಸ್​ಆ್ಯಪ್​ ಬಳಕೆಗೂ ವಯಸ್ಸಿನ ಮಿತಿ?
  • ಬಳಕೆದಾರರು ವಯಸ್ಸಿನ ಪರಿಶೀಲನೆ ಬಗ್ಗೆ ಹೊಸ ಪ್ರಾಂಪ್ಟ್‌ ಸೃಷ್ಟಿಸಿದೆ ಗೊಂದಲ
Whatsapp Age Restrictions: ಈಗಾಗಲೇ ಸಾಮಾಜಿಕ ಜಾಲತಾಣಗಳ ಹಲವು ಆ್ಯಪ್​ಗಳಿಗೆ ವಿಧಿಸಿರುವ ವಯಸ್ಸಿನ ಮಿತಿಯೆಂಬ ಕಟ್ಟುನಿಟ್ಟಿನ ನಿಯಮ ಇದೀಗ ವಾಟ್ಸ್​ಆ್ಯಪ್​ಗೂ ಅನ್ವಯ ಎಂಬ ಹೊಸ ಪ್ರಾಂಪ್ಟ್​ ಸದ್ಯ ಭಾರತೀಯ ಬಳಕೆದಾರರಲ್ಲಿ ತೀವ್ರ ಗೊಂದಲ ಸೃಷ್ಟಿಸಿದೆ.
ಮೆಟಾ ಮಾಲೀಕತ್ವದ ಮೆಸೇಜಿಂಗ್ ಆ್ಯಪ್ ಇದೀಗ ಭಾರತೀಯ ಬಳಕೆದಾರರಿಗೆ ಹುಟ್ಟಿದ ದಿನಾಂಕ ತಿಳಿಸುವಂತೆ ಕೇಳಿದೆ ಎಂದು ಎಕ್ಸ್​ (ಟ್ವಿಟರ್)​ ಖಾತೆಯಲ್ಲಿ ಟೆಕ್ನಿಕಲ್​ ಬಗ್ಗೆ ಮಾಹಿತಿ ನೀಡುವ ಅಭಿಷೇಕ್ ಯಾದವ್ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ಸದ್ಯ ಸಾಕಷ್ಟು ಗೊಂದಲ, ಚರ್ಚೆಗಳನ್ನು ಹುಟ್ಟುಹಾಕಿದೆ. ದೇಶದಲ್ಲಿ ಶೀಘ್ರದಲ್ಲೇ ವಯಸ್ಸಿನ ದೃಢೀಕರಣ (Age Verification) ನಿಯಮಗಳು ಜಾರಿಗೆ ಬರಲಿದೆಯೇ ಎಂಬ ಕುತೂಹಲ ನೆಟ್ಟಿಗರಲ್ಲಿ ಕಾಡತೊಡಗಿದೆ.

ಭಾರತದಲ್ಲಿ ವಯಸ್ಸಿನ ಮಿತಿ?

ಅಭಿಷೇಕ್ ಯಾದವ್ ಹಂಚಿಕೊಂಡ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಯಾವುದೇ ಬಲವಾದ ವರದಿಗಳು ಲಭಿಸಿಲ್ಲ ಎಂಬುದು ಗಮನಾರ್ಹ. ಈ ಕುರಿತಾಗಿ ಖುದ್ದು ಮೆಟಾ ಅಥವಾ ಕೇಂದ್ರ ಸರ್ಕಾರ ಆಗಲಿ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ವಯೋಮಿತಿ ದೃಢೀಕರಣ ರೂಲ್ಸ್​ಗಳ ಅಳವಡಿಕೆ ಬಗ್ಗೆ ಎಲ್ಲಿಯೂ ಸ್ಪಷ್ಟತೆ ದೊರತಿಲ್ಲ.

ಇತರ ದೇಶಗಳಲ್ಲಿ ಕಟ್ಟುನಿಟ್ಟಿನ ರೂಲ್ಸ್

ಈಗಾಗಲೇ, ಆಸ್ಟ್ರೇಲಿಯಾ ಮತ್ತು ಬ್ರಿಟನ್​ ದೇಶಗಳು ಅಪ್ರಾಪ್ತ ವಯಸ್ಕರ ಆನ್‌ಲೈನ್ ಸುರಕ್ಷತೆಗಾಗಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಿವೆ. ಈ ಹಿನ್ನೆಲೆಯಲ್ಲಿ, ಭಾರತವೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಅದರ ನಡುವೆಯೇ, ವಯಸ್ಸಿನ ಮಿತಿ ವಿಚಾರ ಚರ್ಚೆಗೆ ಬಂದಿರುವುದು ಸದ್ಯ ಬಳಕೆದಾರರಲ್ಲಿ ಗೊಂದಲ ಮೂಡಿಸಿದೆ.
ಅಕಸ್ಮಾತ್​ ಇಂತಹ ನೀತಿ ಏನಾದರೂ ಭಾರತದಲ್ಲಿ ಜಾರಿ ಆಗಿದ್ದೇ ಆದರೆ, ವಾಟ್ಸ್​ಆ್ಯಪ್​ ಜತೆ ಇನ್​ಸ್ಟಾಗ್ರಾಮ್​, ಟೆಲಿಗ್ರಾಮ್​, ಸ್ನ್ಯಾಪ್​ಚಾಟ್​, ಸಿಗ್ನಲ್​ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ, ಸದ್ಯಕ್ಕೆ ಇದೆಲ್ಲಾ ಊಹಾಪೋಹ ಎನ್ನಲಾಗಿದ್ದು, ಕೇಂದ್ರ ಸರ್ಕಾರ ಮತ್ತು ಮೆಟಾ ಸಂಸ್ಥೆಯಿಂದ ಹೊರಬೀಳುವ ಅಧಿಕೃತ ಮಾಹಿತಿಯೇ ಅಂತಿಮ ದೃಢೀಕರಣ ಎಂಬುದು ಗೊತ್ತಿರಲಿ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net