ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆಯ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಹೋಟೆಲ್, ಆತಿಥ್ಯ ರಂಗ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಪರಿಣಾಮವಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಪರಿಹಾರದ ಪರ್ಯಾಯ ದಾರಿಗಳನ್ನೂ ಶೋಧಿಸುತ್ತಿದೆ. ಭಾರತವು ಪ್ರಸ್ತುತ ತನ್ನ ಎಲ್ಪಿಜಿ ಬೇಡಿಕೆಯ ಶೇಕಡ 60ರಷ್ಟು ಭಾಗವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುತ್ತಿದೆ ಎಂಬುದು ಗಮನಾರ್ಹ. 2024-25ರ ಅಂಕಿಅಂಶಗಳ ಪ್ರಕಾರ, ದೇಶದ ಒಟ್ಟು ಎಲ್ಪಿಜಿ ಬಳಕೆ ಸುಮಾರು 31 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಆಗಿದ್ದು, ಇತ್ತೀಚಿನ ತಿಂಗಳುಗಳಲ್ಲಿ 33 ಮೆಟ್ರಿಕ್ ಟನ್ಗೆ ಏರಿಕೆಯಾಗಿದೆ. ಈ ಪೈಕಿ 18-20 ಮಿಲಿಯನ್ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ. ಸಾಂಪ್ರದಾಯಿಕವಾಗಿ ಭಾರತವು ತನ್ನ ಶೇ.90ರಷ್ಟು ಆಮದಿಗಾಗಿ ಪಶ್ಚಿಮ ಏಷ್ಯಾದ (ಗಲ್ಪ್) ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ.