

ನವದೆಹಲಿ: ಉತ್ತರಪ್ರದೇಶದ ಗಾಜಿಯಾಬಾದ್ನ ಭಾರತ್ ಸಿಟಿ ಸೊಸೈಟಿಯಲ್ಲಿ ಫೆಬ್ರವರಿ 3-4ರ ಮಧ್ಯರಾತ್ರಿ 12, 14, 16 ವರ್ಷ ವಯಸ್ಸಿನ ಮೂವರು ಸಹೋದರಿಯರು ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತು. ಈ ಬಾಲಕಿಯರು ಬರೆದಿಟ್ಟಿದ್ದ ಡೆತ್ನೋಟ್ನಲ್ಲಿ, ‘ನಾವು ಕೊರಿಯಾಕ್ಕೆ ಹೋಗಬೇಕು’ ಎಂಬ ಸಾಲು ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಕೊರಿಯನ್ ಆನ್ಲೈನ್ ಗೇಮ್ ಗೀಳಿಗೆ ಒಳಗಾಗಿದ್ದ ಈ ಮೂವರೂ, ತಮಗೆ ಕೊರಿಯನ್ ಹೆಸರುಗಳನ್ನೇ ಇಟ್ಟುಕೊಂಡಿದ್ದರು.
ಅಷ್ಟೇ ಅಲ್ಲ, ಕೊರಿಯಾದ ಹುಡುಗಿಯರಂತೆಯೇ ಬಟ್ಟೆ ಧರಿಸುವುದು, ಅವರಂತೆಯೇ ಮೇಕಪ್ ಮಾಡಿಕೊಳ್ಳುವುದು, ಭಾರತೀಯ ಹುಡುಗರನ್ನು ಇಷ್ಟಪಡದೆ ಕೊರಿಯನ್ ಹುಡುಗರತ್ತ ಒಲವು ಹೊಂದುವುದು ಸೇರಿದಂತೆ ಬಹುವಾಗಿ ಕೊರಿಯನ್ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದರು. ಆದರೆ, ಈ ‘ಹಲ್ಯು’ (ಏಚ್ಝ್ಝ್ಠ ಅಂದರೆ ಕೊರಿಯನ್ ಅಲೆ ಭಾರತದಲ್ಲಿ ವ್ಯಾಪಕವಾಗಿ ಹರಡಿಕೊಳ್ಳುತ್ತಿದ್ದು, ಜೆನ್ ಝಿ ಪೀಳಿಗೆ ಕೊರಿಯನ್ ಮಂತ್ರ ಜಪಿಸುವಂತಾಗಿದೆ.
ಭಾರತವೇ ಬಹುಸಂಸ್ಕೃತಿಯ, ವಿಶಿಷ್ಟ ಸಂಸ್ಕೃತಿಯ ದೇಶವಾಗಿದ್ದು, ವಿದೇಶಿಯರು ಇಲ್ಲಿನ ಸಂಸ್ಕೃತಿಯನ್ನು ಮೆಚ್ಚಿಕೊಂಡು, ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಪಾಶ್ಚಾತ್ಯ ದೇಶಗಳ ಜೋಡಿಗಳು ಇಲ್ಲಿ ಬಂದು ಭಾರತೀಯ ಪದ್ಧತಿಯಂತೆ ಸಾಂಪ್ರದಾಯಿಕವಾಗಿ ಮದುವೆಯಾಗಿ, ಹೊಸ ಜೀವನ ಆರಂಭಿಸುತ್ತಿದ್ದಾರೆ. ಹೀಗಿರುವಾಗ. ಕೊರಿಯನ್ ಸಂಸ್ಕೃತಿಯ ಮೋಹವೇಕೆ? ಎಂಬ ಜಿಜ್ಞಾಸೆಯ ಬೆನ್ನು ಹತ್ತಿ ಹೊರಟರೆ ಹಲವು ಆಸಕ್ತಿಕರ ಸಂಗತಿಗಳು ಅನಾವರಣಗೊಳ್ಳುತ್ತವೆ. ಮುಖ್ಯವಾಗಿ, ಕೊರಿಯನ್ ಸಂಸ್ಕೃತಿಯು ಪರಂಪರೆ ಮತ್ತು ಆಧುನಿಕತೆಯ ಅದ್ಭುತ ಮಿಶ್ರಣವಾಗಿದೆ. ಕೊರಿಯನ್ ಬಹುಆಯಾಮದ ಸಂಸ್ಕೃತಿಯಾಗಿದ್ದು, ಇದರಲ್ಲಿ ಅಬ್ಬರದ ಸಂಗೀತ (ಪಾಪ್ ಮ್ಯೂಜಿಕ್), ಮನರಂಜನೆ, ವಿಶಿಷ್ಟ ಖಾದ್ಯಗಳು, ಸಾಮಾಜಿಕ ರೂಢಿಗಳು, ಪರಂಪರೆಗಳು, ಸೌಂದರ್ಯಪ್ರಜ್ಞೆ, ವಿಶಿಷ್ಟ ವಸ್ತ್ರವಿನ್ಯಾಸ ಹಾಗೂ ಡಿಜಿಟಲ್ ಲೈಫ್ಸ್ಟೈಲ್ ಮಿಳಿತವಾಗಿವೆ. ಅಲ್ಲದೆ, ಭಾರತೀಯ ಜೀವನಪದ್ಧತಿಗೆ ಅಥವಾ ಸಂಸ್ಕೃತಿಗೆ ಹತ್ತಿರವಾದ ಅನೇಕ ಸಂಗತಿಗಳಿದ್ದು, ಇವು ಯುವಜನರನ್ನು ಹೆಚ್ಚು ಆಕರ್ಷಿಸುತ್ತಿವೆ.
1945ರಲ್ಲಿ ಕೊರಿಯಾ ಎರಡು ಹೋಳಾಗಿ ವಿಭಜನೆಯಾಗುವ ಮುಂಚೆ (ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ) ಜಪಾನ್ ವಶದಲ್ಲಿತ್ತು. ಜಪಾನ್ನಲ್ಲಿ ಕೊರಿಯನ್ ಭಾಷೆ ಮತ್ತು ಸಂಸ್ಕೃತಿಯ ಮೇಲೆ ನಿಷೇಧ ಹೇರಲಾಗಿತ್ತು. ವಿಭಜನೆಯ ಬಳಿಕ ದಕ್ಷಿಣ ಕೊರಿಯಾದಲ್ಲಿ ಆರ್ಥಿಕ ಹಾಗೂ ಸಾಂಸ್ಕೃತಿಕ ವಿಕಾಸ ವೇಗವಾಗಿ ಆಯಿತು. 1997ರ ಹೊತ್ತಲ್ಲಿ ಏಷ್ಯಾ ಗಂಭೀರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾಗ, ದಕ್ಷಿಣ ಕೊರಿಯಾದಲ್ಲಿ ಸಂಸ್ಕೃತಿಯಾಧಾರಿತ ಇಂಡಸ್ಟ್ರಿ ತಲೆಎತ್ತಿ ನಿಂತಿತು.
ಯುವ ಸಮೂಹ ಅದರಲ್ಲೂ ಜೆನ್ ಝಿ ಪೀಳಿಗೆಯವರು ಕೊರಿಯನ್ ಯುವಕರಂತೆ ಬಟ್ಟೆ ತೊಡುತ್ತಿದ್ದಾರೆ (ಉದ್ದನೆಯ ಕೋಟು, ಪ್ಯಾಂಟು). ಕೊರಿಯನ್ ಪಾಪ್ ಸಂಗೀತ ಅನುಕರಿಸುತ್ತಿದ್ದಾರೆ, ಕಲಿಯುತ್ತಿದ್ದಾರೆ. ಅಲ್ಲಿನ ಆಹಾರಗಳನ್ನು ಇಷ್ಟಪಡುತ್ತಿದ್ದಾರೆ. ಮಾತ್ರವಲ್ಲ, ಕೊರಿಯನ್ ಪಾಪ್ ಸಂಗೀತ ಕಾರ್ಯಕ್ರಮ ವೀಕ್ಷಿಸಲು ದೂರದೂರಿಗೆ ಪ್ರಯಾಣ ಬೆಳೆಸುತ್ತಿದ್ದು, ಇದಕ್ಕಾಗಿ ದೊಡ್ಡ ಮೊತ್ತವನ್ನೇ ಖರ್ಚು ಮಾಡುತ್ತಿದ್ದಾರೆ.
ಭಾರತದಲ್ಲಿ ‘ಕೊರಿಯನ್ ಅಲೆ’ ಆರಂಭವಾಗಿದ್ದು 2000ನೇ ಇಸ್ವಿಯ ನಂತರ ಮಣಿಪುರ ಹಾಗೂ ಮಿಜೋರಂನಂಥ ಈಶಾನ್ಯ ರಾಜ್ಯಗಳ ಮೂಲಕ. ಕೆಲ ಸಮಯ ಈಶಾನ್ಯದ ರಾಜ್ಯಗಳಲ್ಲಿ ಹಿಂದಿ ಭಾಷೆ ನಿಷೇಧದಂಥ ವಾತಾವರಣ ಸೃಷ್ಟಿಯಾಗಿತ್ತು. ಈ ಸಮಯದಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಿತು. ಭಾರತದ ದೂರದರ್ಶನದಲ್ಲಿ ಮೊದಲ ಬಾರಿ ಪ್ರಸಾರವಾದ ಕೊರಿಯನ್ ಸರಣಿ ‘ಎಂಪರರ್ ಆಫ್ ದ ಸೀ’ (2006). ನಾಗಾಲ್ಯಾಂಡ್ ರಾಜಧಾನಿ ಕೊಹಿಮಾದಲ್ಲಿ 2008ರಲ್ಲಿ ಮೊದಲ ಬಾರಿಗೆ ಕೊರಿಯನ್ ಮ್ಯೂಜಿಕ್ ಫೆಸ್ಟಿವಲ್ ಆಯೋಜಿಸಲಾಗಿತ್ತು. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಕಾಯಿಲೆಯ ಪರಿಣಾಮ ವಿಧಿಸಲಾದ ಲಾಕ್ಡೌನ್ ಸಂದರ್ಭದಲ್ಲಿ ಕೊರಿಯನ್ ವೇವ್ ಭಾರತದ ಪಾಪ್ ಕಲ್ಚರ್ ಮೇಲೆ ಪ್ರಭಾವ ಬೀರಿತು.
ಫೇಸ್ಬುಕ್ ಎನಾಲಿಟಿಕ್ಸ್ನ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ಒಂದೂವರೆ ಕೋಟಿ ಜನರು ಕೊರಿಯನ್ ಸಂಸ್ಕೃತಿಯೊಂದಿಗೆ ಬೆಸೆದಿರುವ ಕೆ-ಪಾಪ್, ಕೆ-ಡ್ರಾಮಾ ನೋಡುತ್ತಾರೆ/ಕೇಳುತ್ತಾರೆ. 2020ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್ಇಪಿ) ಕೊರಿಯನ್ ಭಾಷೆಯ ಅಧ್ಯಯನಕ್ಕೆ ಆದ್ಯತೆ ನೀಡಿದೆ. ಅಲ್ಲದೆ, 2018ರಲ್ಲಿ ಭಾರತದಿಂದ ದಕ್ಷಿಣ ಕೊರಿಯಾಕ್ಕೆ 1 ಲಕ್ಷಕ್ಕಿಂತ ಅಧಿಕ ಜನರು ಭೇಟಿ ನೀಡಿದ್ದು, ಅಲ್ಲಿಂದ ಪ್ರತಿವರ್ಷ ಕೊರಿಯಾಕ್ಕೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಹೆಚ್ಚುತ್ತಲೇ ಇರುವುದು ಗಮನಾರ್ಹ. ಈ ಮೂಲಕ ಸಾಂಸ್ಕೃತಿಕ ಕೊಡುಕೊಳ್ಳುವಿಕೆ ನಡೆಯುತ್ತಿದ್ದು, ಸಂಸ್ಕೃತಿಯ ಗಾಢಪ್ರಭಾವವೂ ಆವರಿಸಿಕೊಂಡಿದೆ.
ಯುವಸಮೂಹಕ್ಕೆ ಸದಾ ಝುಗಮಗಿಸುವ ಲೋಕವೇ ಇಷ್ಟ. ಅದರತ್ತ ಬಹುಬೇಗ ಆಕರ್ಷಿತರಾಗುತ್ತಾರೆ. ಈಗಂತೂ ಇಂಟರ್ನೆಟ್ನ 5ಜಿ ಜಮಾನಾ. ಜಗದಗಲ ಸಂಸ್ಕೃತಿಯ ಅನೇಕ ಮುಖಗಳು ಬಹುಬೇಗ ಪರಿಚಿತವಾಗುತ್ತವೆ. ವಿದೇಶಿ ಪ್ರಭಾವ, ಅಲ್ಲಿನ ಸಂಸ್ಕೃತಿಯ ಅನುಕರಣೆ ನಮ್ಮಲ್ಲಿ ಹೊಸದೇನಲ್ಲ. ಏಕೆಂದರೆ, ಬ್ರಿಟಿಷ್ ಪದ್ಧತಿ ಇನ್ನೂ ಹಲವು ರಂಗಗಳಲ್ಲಿ ಜೀವಂತವಾಗಿದೆ. ಆದರೆ, ಈಗಿನ ಜೆನ್ ಝಿ ಪೀಳಿಗೆ ಕೊರಿಯನ್ ಅದರಲ್ಲೂ ದಕ್ಷಿಣ ಕೊರಿಯಾ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದು, ಭಾರತದಲ್ಲಿ ಕೊರಿಯನ್ ಅಲೆಯೇ ಸೃಷ್ಟಿಯಾಗಿದೆ. ಇದಕ್ಕೆ ಕಾರಣಗಳೇನು? ಇದರಿಂದಾಗುವ ಪರಿಣಾಮಗಳೇನು? ಇಲ್ಲಿದೆ ವಿವರ.
ವೆಬ್ಸರಣಿಗಳು: ಭಾರತದಲ್ಲಿ ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ನಂಥ ಓಟಿಟಿ ವೇದಿಕೆಗಳಲ್ಲಿ ಕೆ-ಡ್ರಾಮಾ ಮತ್ತು ಕೆ-ಪಾಪ್ ಹಾಗೂ ಕೆ-ಸಿನಿಮಾಗಳ ವೀಕ್ಷಣೆ ಸುಲಭಸಾಧ್ಯವಾಯಿತು. ಓಟಿಟಿ ವೇದಿಕೆಗಳು ಕೊರಿಯನ್ ಸರಣಿಗಳನ್ನು ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಿವೆ. ‘ಬಿಟಿಎಸ್’ನಂತಹ ಸಂಗೀತ ತಂಡಗಳು ಮತ್ತು ಸ್ಕ್ವಿಡ್ ಗೇಮ್ನಂತಹ ವೆಬ್ ಸರಣಿಗಳು ಯುವಕರನ್ನು ಸೆಳೆದಿವೆ. ಇವುಗಳ ಕಥಾವಸ್ತು ಮತ್ತು ಸಂಗೀತದ ಗುಣಮಟ್ಟ ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ. ಅಲ್ಲದೆ, ಈ ವೆಬ್ಸರಣಿಗಳೊಂದಿಗೆ ಯುವಕರು ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಿದ್ದು, ಇವುಗಳ ಜನಪ್ರಿಯತೆ ಹೆಚ್ಚಲು ಪ್ರಮುಖ ಕಾರಣ.
ಸಾಮಾಜಿಕ ಜಾಲತಾಣಗಳು: ಇನ್ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ಮೂಲಕ ಕೊರಿಯನ್ ಆಹಾರ, ಫ್ಯಾಷನ್ ಮತ್ತು ಸೌಂದರ್ಯವರ್ಧಕಗಳು ಮನೆಮಾತಾಗಿವೆ.
ಸ್ಟೋರ್ಗಳು: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಕೊರಿಯನ್ ಸ್ಟೋರ್ಗಳ ಸಂಖ್ಯೆ ಹೆಚ್ಚುತ್ತಿದ್ದು, ವಿಶೇಷವಾಗಿ ಸೌಂದರ್ಯವರ್ಧಕಗಳಿಗೆ ಇಲ್ಲಿನ ಯುವಕ-ಯುವತಿಯರು ಮನಸೋತಿದ್ದಾರೆ. ಕೊರಿಯಾದ ಬಹುತೇಕ ಯುವಕ-ಯುವತಿಯರು ಸ್ಪುರದ್ರೂಪಿಯಾಗಿದ್ದು, ಅವರಂತೆ ಆಕರ್ಷಕವಾಗಿ ಕಾಣಲು ಕೊರಿಯನ್ ಸೌಂದರ್ಯವರ್ಧಕಗಳ ಮೊರೆ ಹೋಗುತ್ತಿದ್ದಾರೆ.
ಸಾಂಸ್ಕೃತಿಕ ಸಾಮ್ಯ: ಕೊರಿಯನ್ ಸಂಸ್ಕೃತಿಯಲ್ಲಿರುವ ಹಿರಿಯರಿಗೆ ಗೌರವ ನೀಡುವಿಕೆ, ಕುಟುಂಬದ ಮೌಲ್ಯಗಳು ಮತ್ತು ಭಾವನಾತ್ಮಕ ಸಂಬಂಧಗಳು ಭಾರತೀಯ ಜೀವನಶೈಲಿಗೆ ಹತ್ತಿರವಾಗಿವೆ.
ಕೊರಿಯಾದ ಸುಪ್ರಸಿದ್ಧ ಮ್ಯೂಜಿಕ್ ಬ್ಯಾಂಡ್ ಬಿಟಿಎಸ್ 2013ರಲ್ಲಿ ತನ್ನ ಮೊದಲ ಆಲ್ಬಂ 2 ಬಿಡುಗಡೆ ಮಾಡಿತು. ಇದಾದ ಬಳಿಕ ಬಿಟಿಎಸ್ ಹಾಗೂ ಬ್ಲ್ಯಾಕ್ಪಿಂಕ್ನಂಥ ಕೊರಿಯನ್ ಮ್ಯೂಸಿಕ್ ಬ್ಯಾಂಡ್ಗಳು ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದವು.
ಭಾಷಾ ಕಲಿಕೆ: ಅನೇಕ ಯುವಕ-ಯುವತಿಯರು ಕೊರಿಯನ್ ಭಾಷೆಯನ್ನು ಕಲಿಯಲು ಆಸಕ್ತಿ ತೋರುತ್ತಿದ್ದಾರೆ.
ಹೊಸ ರುಚಿ: ‘ರಾಮ್ಯುನ್’ (ನೂಡಲ್ಸ್), ‘ಕಿಮ್ಚಿ’ ಯಂತಹ ಕೊರಿಯನ್ ಆಹಾರಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿವೆ.
ಫ್ಯಾಷನ್ ಪ್ರಜ್ಞೆ: ಕೊರಿಯನ್ ಶೈಲಿಯ ಉಡುಪುಗಳು ಮತ್ತು ಚರ್ಮದ ಆರೈಕೆ ವಿಧಾನಗಳು ಯುವಸಮೂಹದಲ್ಲಿ ಜನಪ್ರಿಯಗೊಂಡಿವೆ.
ವಾಸ್ತವದಿಂದ ದೂರ: ವೆಬ್ ಸರಣಿಗಳಲ್ಲಿ ತೋರಿಸುವ ‘ಪರ್ಫೆಕ್ಟ್’ ಜೀವನ ಮತ್ತು ಸೌಂದರ್ಯವನ್ನು ನೋಡಿ ಯುವಕರು ತಮ್ಮ ನೈಜ ಜೀವನದ ಬಗ್ಗೆ ಬೇಸರ ಹೊಂದುತ್ತಿದ್ದಾರೆ. ಅಲ್ಲದೆ, ಇಂಥ ವೆಬ್ ಸರಣಿಗಳ ಮೂಲಕ ಭಾವನಾತ್ಮಕ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದ್ದು, ಸರಣಿಗಳು ಬೇಸರ ಮೂಡಿಸಿದಾಗ ಯುವಕ-ಯುವತಿಯರು ಖಿನ್ನತೆಗೆ ಜಾರುವ ಅಪಾಯವಿದೆ. ಅಲ್ಲದೆ, ಅತಿಯಾದ ಅನುಕರಣೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ.