

ಏಳು ದಶಕಗಳಿಗೂ ಹೆಚ್ಚು ಕಾಲ ದೇಶದಲ್ಲಿ ಭವಿಷ್ಯ ನಿಧಿ ಆಡಳಿತವನ್ನು ನಿಯಂತ್ರಿಸುತ್ತಿದ್ದ ‘ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ 1952’ ಈಗ ನೇಪಥ್ಯಕ್ಕೆ ಸರಿದಿದೆ. ಅದರ ಸ್ಥಾನದಲ್ಲಿ ಹೊಸ ‘ಇಪಿಎಫ್ ಯೋಜನೆ 2026’ ಜಾರಿಗೆ ಬಂದಿದೆ. ಈ ಹೊಸ ಯೋಜನೆಯ ಜತೆಗೆ ಕೇಂದ್ರ ಸರ್ಕಾರ ‘ಉದ್ಯೋಗಿಗಳ ನೋಂದಣಿ ಅಭಿಯಾನ 2026’, ‘ವಿಶ್ವಾಸ್ 2026’ ಮತ್ತು ‘ಕ್ಷಮಾದಾನ ಯೋಜನೆ 2026’ರಂತಹ ವಿಶೇಷ ಉಪಕ್ರಮಗಳನ್ನೂ ಅನುಷ್ಠಾನಗೊಳಿಸಿದೆ. ಹಳೇ ವ್ಯವಸ್ಥೆಯ ಹಲವು ಫೀಚರ್ಗಳು ಹೊಸ ಯೋಜನೆಯಲ್ಲಿ ಉಳಿದಿವೆಯಾದರೂ, ನೌಕರರ ಸದಸ್ಯತ್ವ, ವಂತಿಗೆ, ವಿತ್ಡ್ರಾ ಮುಂತಾದವುಗಳ ಕುರಿತು ಹೊಸ ಯೋಜನೆ ಹೆಚ್ಚಿನ ಸ್ಪಷ್ಟತೆ ನೀಡುತ್ತದೆ. ಸೇವೆಯ ನಿರಂತರತೆ ಕಾಯ್ದು ಕೊಳ್ಳುವುದು, ಫ್ಲೆಕ್ಸಿಬಿಲಿಟಿಯ ಸುಧಾರಣೆ, ಸವಲತ್ತುಗಳ ಸುಲಭ ಲಭ್ಯತೆಗೂ ಇದರಲ್ಲಿ ಅವಕಾಶವಿದೆ. ಇದಲ್ಲದೆ ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯ ‘ಉದ್ಯೋಗಿಗಳ ಪಿಂಚಣಿ ಯೋಜನೆ’ ಹಾಗೂ ‘ಉದ್ಯೋಗಿಗಳ ಠೇವಣಿ ಆಧಾರಿತ ವಿಮಾ ಯೋಜನೆ’ಯನ್ನೂ ಪ್ರಕಟಿಸುವ ಮೂಲಕ ಸಮಗ್ರ ಸಾಮಾಜಿಕ ಭದ್ರತಾ ಚೌಕಟ್ಟನ್ನು ರೂಪಿಸಿದೆ.
ಯಾವುದೇ ಹೊಸ ನಿಯಮಗಳು ಜಾರಿಗೆ ಬಂದಾಗಲೂ ತಮ್ಮ ಹಾಲಿ ಸೌಲಭ್ಯಗಳಿಗೇನಾದರೂ ಧಕ್ಕೆಯಾಗಬಹುದೇ ಎಂಬ ಆತಂಕ ಉದ್ಯೋಗಿಗಳನ್ನು ಕಾಡುತ್ತದೆ. ಹೊಸ ಪಿಎಫ್ ಯೋಜನೆಯಲ್ಲಿ ಇಂತಹ ಆತಂಕಕ್ಕೆ ಆಸ್ಪದವಿಲ್ಲ. 1952ರ ಯೋಜನೆಯಡಿ ಸದಸ್ಯರಾಗಿದ್ದವರು ಯಾವುದೇ ಬದಲಾವಣೆಯಿಲ್ಲದೆ ಹೊಸ ಯೋಜನೆಯಡಿಯೂ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಈಗಾಗಲೇ ಪಿಎಫ್ ವಂತಿಗೆ ಪಾವತಿಸುತ್ತಿರುವವರ ಖಾತೆಯಲ್ಲಿರುವ ಹಣ ಹಾಗೆಯೇ ಇರುತ್ತದೆ. ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ವಿನಾಯತಿ ಪಡೆದ ಉದ್ಯೋಗಿ (ಎಕ್ಸ್ಕ್ಲೂಡೆಡ್ ಎಂಪ್ಲಾಯೀ) ಎಂಬ ಪರಿಕಲ್ಪನೆಯೂ ಹೊಸ ಯೋಜನೆಯಲ್ಲಿ ಮುಂದುವರಿದಿದೆ. ಮೊದಲ ಬಾರಿಗೆ ಸದಸ್ಯತ್ವಕ್ಕೆ ಅರ್ಹರಾಗುವ ಸಮಯದಲ್ಲಿ ನಿಗದಿತ ವೇತನ ಮಿತಿಗಿಂತ (ಪ್ರಸ್ತುತ ತಿಂಗಳಿಗೆ 15,000 ರೂ.) ಹೆಚ್ಚಿನ ವೇತನ ಹೊಂದಿರುವ ಉದ್ಯೋಗಿಗಳು, ನಿಯಮಗಳಿಗೆ ಒಳಪಡದ ಹೊರತು, ಕಡ್ಡಾಯ ಪಿಎಫ್ ವ್ಯಾಪ್ತಿಯಿಂದ ಹೊರಗುಳಿಯಲಿದ್ದಾರೆ.
ಹಣ ವಾಪಸ್ ಪಡೆಯುವುದಕ್ಕಿದ್ದ ಕೆಟಗರಿಗಳ ಸಂಖ್ಯೆಯನ್ನು 13ರಿಂದ 3ಕ್ಕೆ ಇಳಿಸಲಾಗಿದೆ- ಅನಾರೋಗ್ಯ, ಶಿಕ್ಷಣ, ವಿವಾಹದಂತಹ ಅನಿವಾರ್ಯತೆಗಳು; ವಸತಿ ಅಗತ್ಯಗಳು; ವಿಶೇಷ ಸಂದರ್ಭಗಳು ಹೀಗೆ. ಒಟ್ಟು ವಿತ್ಡ್ರಾವಲ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಎಲ್ಲ ಉದ್ಯೋಗದಾತರು ತಮ್ಮ ಎಲ್ಲ ಉದ್ಯೋಗಿಗಳ ಆಧಾರ್, ಪ್ಯಾನ್, ಯುಎಎನ್, ಒಟ್ಟು ವೇತನ, ಪಿಎಫ್ ವಿವರ ಒಳಗೊಂಡ ಏಕೀಕೃತ ರಿಟರ್ನನ್ನು 15 ದಿನಗಳ ಒಳಗೆ ಸಲ್ಲಿಸುವುದು ಕಡ್ಡಾಯ. ನಿವೃತ್ತಿ, ವಿದೇಶದಲ್ಲಿ ಖಾಯಂ ಆಗಿ ನೆಲೆಸಲು ಭಾರತದಿಂದ ವಲಸೆ ಹೋಗುವುದು, ವಿದೇಶದಲ್ಲಿ ಉದ್ಯೋಗ ಕೈಗೊಳ್ಳುವುದು ಮತ್ತು ಇತರ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಹಣ ಹಿಂಪಡೆಯಲು ಹೊಸ ಯೋಜನೆಯಲ್ಲಿ ಅವಕಾಶವಿದೆ. ಅದಲ್ಲದೆ ಷರತ್ತುಗಳಿಗೆ ಒಳಪಟ್ಟು ಅನಾರೋಗ್ಯ, ಶಿಕ್ಷಣ, ವಿವಾಹ, ವಸತಿಯಂತಹ ಅವಶ್ಯಕತೆಗಳಿಗಾಗಿ ಭಾಗಶಃ ಹಣ ಹಿಂಪಡೆಯಬಹುದು. ಜತೆಗೆ ಒಟ್ಟಾರೆ ವಂತಿಗೆಯ ಕನಿಷ್ಠ ಶೇ. 25ರಷ್ಟು ಬ್ಯಾಲೆನ್ಸ್ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಪಿಎಫ್ ಕಾಂಟ್ರಿಬ್ಯೂಷನ್ ಪಾವತಿಯಲ್ಲಿ ನೀಡಲಾಗಿರುವ ಫ್ಲೆಕ್ಸಿಬಿಲಿಟಿ ಕೂಡ ಹೊಸ ಯೋಜನೆಯ ಹೈಲೈಟ್ಗಳಲ್ಲೊಂದು. ಉದ್ಯೋಗಿ, ಉದ್ಯೋಗದಾತ ಇಬ್ಬರೂ ಉದ್ಯೋಗಿಯ ವೇತನದ ಶೇ.12ರಷ್ಟು ಹಣವನ್ನು ಭವಿಷ್ಯ ನಿಧಿಗೆ ವಂತಿಗೆಯಾಗಿ ಪಾವತಿಸಬೇಕಾಗುತ್ತದೆ. ಒಂದು ವೇಳೆ ಉದ್ಯೋಗಿಯ ವೇತನ ಕಾನೂನುಬದ್ಧ ವೇತನ ಮಿತಿಗಿಂತ ಹೆಚ್ಚಾಗಿದ್ದರೆ, ಕಡ್ಡಾಯ ವಂತಿಗೆಯನ್ನು ಆ ಗರಿಷ್ಠ ವೇತನ ಮಿತಿಯ ಮೊತ್ತಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಮಾಸಿಕ 15,000 ರೂ.ಗಳ ವೇತನ ಮಿತಿಯನ್ನು ಪರಿಗಣಿಸಿದರೆ ಉದ್ಯೋಗಿ, ಉದ್ಯೋಗದಾತ ಇಬ್ಬರಿಂದಲೂ ಪಾವತಿಯಾಗಬೇಕಾದ ಕಾನೂನುಬದ್ಧ ವಂತಿಗೆ ತಲಾ 1,800 ರೂ.ಗೆ (15,000 ರೂ.ಗಳ ಶೇ. 12) ಸೀಮಿತವಾಗಿರುತ್ತದೆ.
1,800 ರೂ.ಗಿಂತ ಹೆಚ್ಚಿನ ಮೊತ್ತವನ್ನು ಸ್ವಯಂಪ್ರೇರಿತವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಉದ್ಯೋಗಿಯೊಬ್ಬರ ಮಾಸಿಕ ವೇತನ 1 ಲಕ್ಷ ರೂ. ಆಗಿದ್ದರೂ, ಅವರ ಕಡ್ಡಾಯ ಪಿಎಫ್ ವಂತಿಗೆ ತಿಂಗಳಿಗೆ 1,800 ರೂಪಾಯಿಯೇ ಆಗಿರುತ್ತದೆ. ಆದರೆ, ಆ ಉದ್ಯೋಗಿ ಬಯಸಿದರೆ ತಿಂಗಳಿಗೆ ಹೆಚ್ಚುವರಿಯಾಗಿ 10,200 ರೂ.ಗಳ (1 ಲಕ್ಷ ರೂ.ಗಳ ಶೇ. 12ರಲ್ಲಿ ಕಾನೂನುಬದ್ಧ ವಂತಿಗೆಯಾದ 1,800 ರೂ.ಗಳನ್ನು ಕಳೆದಾಗ ಬರುವ ಮೊತ್ತ) ಸ್ವಯಂಪ್ರೇರಿತ ವಂತಿಗೆ ಪಾವತಿಸಬಹುದು. ಇದಕ್ಕೆ ಪೂರಕವಾಗಿ ಉದ್ಯೋಗದಾತರೂ ಅಷ್ಟೇ ಮೊತ್ತದ ಸ್ವಯಂಪ್ರೇರಿತ ವಂತಿಗೆ ಪಾವತಿಸಬಹುದು.
ಹೊಸ ಯೋಜನೆ ಪ್ರಕಾರ, ಉದ್ಯೋಗಿಗಳು ತಮ್ಮ ಆಧಾರ್, ಪ್ಯಾನ್, ಯುಎಎನ್, ಆಧಾರ್ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ವಿವರಗಳನ್ನು ಉದ್ಯೋಗದಾತರಿಗೆ ಒದಗಿಸುವುದು ಕಡ್ಡಾಯ. ಅರ್ಜಿಗಳ ವಿಲೇವಾರಿ, ವಿತ್ಡ್ರಾವಲ್, ಪಿಎಫ್ ಖಾತೆಗಳ ವರ್ಗಾವಣೆ ಮುಂತಾದ ಕೆಲಸಗಳು ಇದರಿಂದ ತ್ವರಿತ ಹಾಗೂ ಸುಲಭವಾಗುತ್ತವೆ.
ಭಾರತದಲ್ಲಿ ಉತ್ಪಾದನೆ, ಲಾಜಿಸ್ಟಿಕ್ಸ್, ಫೆಸಿಲಿಟಿ ಮ್ಯಾನೇಜ್ವೆುಂಟ್, ಭದ್ರತಾ ಸೇವೆಗಳು, ಆತಿಥ್ಯ ಮತ್ತು ನಿರ್ವಣದಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ವಿುಕರು ಗುತ್ತಿಗೆದಾರರ ಮೂಲಕ ನಿಯೋಜನೆಗೊಳ್ಳುತ್ತಾರೆ. ಹೊಸ ಯೋಜನೆಯಲ್ಲಿ ಮುಖ್ಯ ಉದ್ಯೋಗದಾತರ ಪಾತ್ರವನ್ನು ಸ್ಪಷ್ಟವಾಗಿ ಗುರುತಿಸ ಲಾಗಿದೆ. ಇದು ಉದ್ಯೋಗಿಗಳ ಹಿತದೃಷ್ಟಿಯಿಂದ ಮಹತ್ವದ್ದು. ಗುತ್ತಿಗೆದಾರರು ಬದ್ಧರಾಗದಿದ್ದರೆ, ಪಿಎಫ್ ಪಾವತಿಸುವ ಜವಾಬ್ದಾರಿ ಮುಖ್ಯ ಉದ್ಯೋಗದಾತರದು.
ವೇತನ ಸಂಹಿತೆಯ ಸೆಕ್ಷನ್ 18ರ ಉಪ-ಸೆಕ್ಷನ್ 2ರಡಿ ಅನುಮತಿಸಲಾದ ಕಡಿತಗಳ ನಂತರದ ವೇತನವನ್ನು ಮೀರದಂತೆ, ಯಾವುದೇ ವೇತನ ಶ್ರೇಣಿಯ ಉದ್ಯೋಗಿಯೂ ವಿಪಿಎಫ್ ವಂತಿಗೆ ಪಾವತಿಸಬಹುದು. * ಉದ್ಯೋಗಿ ಅಥವಾ ಉದ್ಯೋಗದಾತ ಯಾವುದೇ ಸಮಯದಲ್ಲಿ ಹೆಚ್ಚುವರಿ ಸ್ವಯಂ ಪ್ರೇರಿತ ವಂತಿಗೆಯನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ನಿಲ್ಲಿಸಬಹುದು.