E20 ಪೆಟ್ರೋಲ್​ ಗೊಂದಲದ ಮಧ್ಯೆ ಏನಿದು E21, E25? ಭಾರತೀಯ ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ!

ಈ21, ಈ25 ಪೆಟ್ರೋಲ್​ ಜಾರಿಗೆ ಸಿದ್ಧತೆ
ಈ21, ಈ25 ಪೆಟ್ರೋಲ್​ ಜಾರಿಗೆ ಸಿದ್ಧತೆ
Published on

ಪ್ರಮುಖ ಮುಖ್ಯಾಂಶಗಳು

  • ಈ20 ಪೆಟ್ರೋಲ್​ ಗೊಂದಲದ ನಡುವೆಯೇ ಏನಿದು ಈ21, ಈ25?
  • ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳೇನು?
  • ಭಾರತೀಯ ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ
E25 Petrol: ಪ್ರಸ್ತುತ ಈ20 ಪೆಟ್ರೋಲ್​ ತಮ್ಮ ವಾಹನಗಳ ಮೈಲೇಜ್​ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಅನೇಕ ವಾಹನ ಸವಾರರು ಕೇಂದ್ರ ಸರ್ಕಾರ ನಡೆಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ಇದೀಗ ಇಂಧನ ಕ್ಷೇತ್ರದಲ್ಲಿ ಹೊಸದೊಂದು ಬದಲಾವಣೆ ಮುನ್ನೆಲೆಗೆ ಬಂದಿದೆ.
ಭಾರತದ ಇಂಧನ ನೀತಿಯಲ್ಲಿ ಪ್ರಮುಖ ಬದಲಾವಣೆಗಳು ನಡೆಯುತ್ತಿದ್ದು, ದೇಶಾದ್ಯಂತ E20 ಪೆಟ್ರೋಲ್ ಅನುಷ್ಠಾನದ ನಂತರ, ಕೇಂದ್ರ ಸರ್ಕಾರವು ಈಗ E21 ಮತ್ತು E25 ಪೆಟ್ರೋಲ್ ಜಾರಿಗೊಳಿಸುವ ಬಗ್ಗೆ ಗಮನ ಹರಿಸಿದೆ. ಯೋಜನೆಯ ಪ್ರಕಾರ, 2027ರ ವೇಳೆಗೆ ದೇಶದಲ್ಲಿ E21 ಮತ್ತು 2029ರ ವೇಳೆಗೆ E25 ಪೆಟ್ರೋಲ್ ಪರಿಚಯಿಸುವ ಸಾಧ್ಯತೆಯನ್ನು ಸರ್ಕಾರ ಪರಿಗಣಿಸುತ್ತಿದೆ.
ಸದ್ಯದ ಮಟ್ಟಿಗೆ ಈ20 ಪೆಟ್ರೋಲ್​ ವಿರುದ್ಧ ಕೇಳಿಬರುತ್ತಿರುವ ಆಕ್ಷೇಪಣೆ ಕೂಗುಗಳನ್ನು ಕೇಂದ್ರ ಹೇಗೆ ತಗ್ಗಿಸಲಿದೆ? ಇದಕ್ಕೆ ಏನೆಲ್ಲ ಪರ್ಯಾಯ ಮಾರ್ಗಗಳನ್ನು ತರಲಿದೆ ಎಂಬ ಪ್ರಶ್ನೆಗಳ ಬೆನ್ನಲ್ಲೇ ಕೇಂದ್ರವು ತೈಲ ಆಮದುಗಳನ್ನು ಕಡಿತಗೊಳಿಸುವುದು, ವಿದೇಶಿ ವಿನಿಮಯವನ್ನು ಉಳಿಸುವುದು ಮತ್ತು ಈ ಬದಲಾವಣೆಯ ಮೂಲಕ ದೇಶದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವತ್ತ ಮುಖ ಮಾಡಿದೆ.
ಏನಿದು E25 ಪೆಟ್ರೋಲ್?
E25 ಶೇ.75 ಪೆಟ್ರೋಲ್ ಮತ್ತು ಶೇ.25ರಷ್ಟು ಎಥೆನಾಲ್ ಹೊಂದಿರುವ ಇಂಧನ. ಪ್ರಸ್ತುತ, E20 ಪೆಟ್ರೋಲ್ ದೇಶದಲ್ಲಿ ವಾಹನ ಸವಾರರಿಗೆ ಲಭ್ಯವಿದೆ. ಅಂದರೆ ಇದು ಶೇ.20ರಷ್ಟು ಎಥೆನಾಲ್ ಮತ್ತು 80ರಷ್ಟು ಪೆಟ್ರೋಲ್ ಹೊಂದಿರುತ್ತದೆ. ಈಗ ಸರ್ಕಾರವು ಕ್ರಮೇಣ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸಲು E21 ಮತ್ತು ಅದರ ನಂತರದ E25 ಕಡೆಗೆ ಬದಲಾಗಲು ದಾಪುಗಾಲಿಟ್ಟಿದೆ.

2027ಕ್ಕೆ E21, 2029ಕ್ಕೆ E25 ಗುರಿ

ಮೂಲಗಳ ಪ್ರಕಾರ, ಎಥೆನಾಲ್ ಮಿಶ್ರಣವನ್ನು ಏಕಕಾಲದಲ್ಲಿ ಹೆಚ್ಚಿಸುವ ಬದಲಿಗೆ ಹಂತ ಹಂತವಾಗಿ ಹೆಚ್ಚಿಸುವ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. 2027ರ ವೇಳೆಗೆ E21 ಮತ್ತು 2029ರ ವೇಳೆಗೆ E25 ಪೆಟ್ರೋಲ್ ಪರಿಚಯಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರೊಟ್ಟಿಗೆ, ಎಥೆನಾಲ್ ಮಿಶ್ರಣಕ್ಕೆ ಗರಿಷ್ಠ ಮಿತಿಯನ್ನು ಶೇ.25ರಷ್ಟು ನಿಗದಿಪಡಿಸಲು ಸಾಕಷ್ಟು ಚರ್ಚೆಗಳು ಕೂಡ ತೆರೆಮೆರೆಯಲ್ಲಿ ನಡೆಯುತ್ತಿವೆ.

ನಿಗದಿತ ಸಮಯಕ್ಕಿಂತ ಮುಂಚೆಯೇ ಜಾರಿಗೆ

ಸರ್ಕಾರವು 2030ರ ವೇಳೆಗೆ ದೇಶದಲ್ಲಿ E20 ಪೆಟ್ರೋಲ್ ಅನ್ನು ಸಂಪೂರ್ಣವಾಗಿ ಅಳವಡಿಸುವ ಗುರಿಯನ್ನು ಹೊಂದಿತ್ತು. ಆದರೆ, ಆ ಗುರಿಯನ್ನು ಐದು ವರ್ಷಗಳ ಮೊದಲೇ ಸಾಧಿಸಲಾಗಿದೆ. E20 ಪೆಟ್ರೋಲ್ ಈಗ ದೇಶಾದ್ಯಂತ ಲಭ್ಯವಿದ್ದು, ಇದು ಮುಂದಿನ ಹಂತದಲ್ಲಿ E21 ಮತ್ತು E25 ಅನುಷ್ಠಾನಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಲಾಗಿದೆ.

ವಾಹನ ಸವಾರರ ಕಳವಳ

ಈ20 ಪೆಟ್ರೋಲ್​ನಿಂದ ತಮ್ಮ ವಾಹನಗಳ ಇಂಧನ ದಕ್ಷತೆ ಮತ್ತು ನಿರ್ವಹಣೆಯ ಬಗ್ಗೆ ಮಾಲೀಕರು ಕಳವಳ ವ್ಯಕ್ತಪಡಿಸಿದ್ದಾರೆ. 2023ಕ್ಕಿಂತ ಮೊದಲು ತಯಾರಿಸಿದ ಪೆಟ್ರೋಲ್ ವಾಹನಗಳ ಶೇ.66ರಷ್ಟು ಮಾಲೀಕರು ತಮ್ಮ ವಾಹನಗಳ ಮೈಲೇಜ್ ಇಳಿದಿದೆ ಎಂದು ಆರೋಪಿಸಿದ್ದಾರೆ. E20 ಪೆಟ್ರೋಲ್‌ಗೆ ಬದಲಾಯಿಸಿದ ನಂತರ ಮೈಲೇಜ್ ಶೇ.10ರಷ್ಟು ಕುಸಿದಿದೆ ಎಂದು ದೂರಿದ್ದಾರೆ.
ಇನ್ನು ಇತ್ತೀಚಿನ ಸಮೀಕ್ಷೆಯೊಂದರಲ್ಲಿ, ಶೇ.45ರಷ್ಟು ಜನರು ಇಂಜಿನ್ ಭಾಗಗಳ ಸವೆತ, ಟೇರ್​ ಹೆಚ್ಚಳ ಮತ್ತು ನಿರ್ವಹಣೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 2023ಕ್ಕೂ ಮೊದಲಿನ ಪೆಟ್ರೋಲ್ ವಾಹನ ಮಾಲೀಕರಲ್ಲಿ ಸುಮಾರು ಶೇ.31ರಷ್ಟು ಮಂದಿ ಹೆಚ್ಚು ಪಾವತಿ ಮಾಡಬೇಕಾದರೂ ಸಹ E0 ಅಥವಾ E10 ಪೆಟ್ರೋಲ್ ಅನ್ನು ಖರೀದಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಒಟ್ಟಾರೆಯಾಗಿ, E20ಯಿಂದ E25 ರವರೆಗಿನ ಪ್ರಯಾಣವು ಭಾರತೀಯ ಇಂಧನ ವಲಯದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಲಿದೆ. ಒಂದೆಡೆ ತೈಲ ಆಮದು ಕಡಿಮೆಯಾಗುವುದು ಮತ್ತು ವಿದೇಶಿ ವಿನಿಮಯ ಉಳಿತಾಯದಂತಹ ಪ್ರಯೋಜನಗಳಿದ್ದರೂ, ಸರ್ಕಾರವು ವಾಹನ ಚಾಲಕರ ಕಳವಳಗಳನ್ನು ಸುಧಾರಿಸುವತ್ತ ಗಮನ ಹರಿಸಬೇಕಿದೆ. ತಾಂತ್ರಿಕವಾಗಿ ತಯಾರಾಗುವ ವಾಹನಗಳು ಮತ್ತು ಸಾಕಷ್ಟು ಮೂಲಸೌಕರ್ಯಗಳು ಲಭ್ಯವಾದ ನಂತರವೇ E25 ಅನುಷ್ಠಾನವು ಸಂಪೂರ್ಣವಾಗಿ ಯಶಸ್ವಿಯಾಗುವ ಸಾಧ್ಯತೆಯಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net