_1771696796024.webp?w=480&auto=format%2Ccompress&fit=max)
_1771696796024.webp?w=480&auto=format%2Ccompress&fit=max)
ತುಂಬ ಜನರು ಇಷ್ಟಪಟ್ಟು ತಿನ್ನುವ ಖಾದ್ಯ ಹೈದರಾಬಾದ್ ಬಿರಿಯಾನಿ! ಈ ಖಾದ್ಯದಿಂದಲೇ ಖ್ಯಾತಿ ಗಳಿಸಿದ ಹೋಟೆಲ್ಗಳಿಗೆ ಕೊರತೆ ಇಲ್ಲ. ರುಚಿ ಹಾಗೂ ಗುಣಮಟ್ಟಕ್ಕೆ ಮನಸೋಲುವ ಗ್ರಾಹಕರು, ಬಿಲ್ ಸ್ವಲ್ಪ ಹೆಚ್ಚಾದರೂ ತಲೆ ಕೆಡಿಸಿಕೊಳ್ಳದೆ, ಅದನ್ನು ಪಾವತಿಸಿ ಸಂತೃಪ್ತಿಯ ಭಾವದಲ್ಲಿ ಮರಳುತ್ತಾರೆ. ಆದರೆ, ಭಾರಿ ವಹಿವಾಟು ನಡೆಸುವ ಹೋಟೆಲ್ಗಳು ತೆರಿಗೆ ಪಾವತಿಸುವಾಗ ಮಾತ್ರ ವಂಚನೆಯ ಹಾದಿ ತುಳಿಯುತ್ತಿರುವುದು ಭಾರಿ ಕಳವಳ ಮೂಡಿಸಿದೆ. ಇಂಥದ್ದೇ ತೆರಿಗೆ ವಂಚನೆಯ ಪ್ರಕರಣ ಈಗ ದೇಶಾದ್ಯಂತ ‘ಬಿರಿಯಾನಿ ಗೇಟ್’ ಹೆಸರಿನಲ್ಲಿ ಸುದ್ದಿಯಲ್ಲಿದೆ.
ಬಿಲ್ಲಿಂಗ್ ಸಾಫ್ಟ್ವೇರ್ನಲ್ಲಿ ಬಿಲ್ಗಳನ್ನು ಅಳಿಸಿ ಅಥವಾ ಎಡಿಟ್ ಮಾಡಿ, ವಹಿವಾಟನ್ನೇ ಕಡಿಮೆ ತೋರಿಸುವ ಮೂಲಕ ಐಟಿ ರಿಟರ್ನ್ಸ್ನಲ್ಲಿ ಮೋಸ ಎಸಗಲಾಗಿದೆ. ಇದು ಮೊದಲು ಹೈದರಾಬಾದಿನಲ್ಲಿ ಪತ್ತೆಯಾಗಿ, ಬೆಚ್ಚಿಬೀಳಿಸಿತು. ಇದೇ ಬಗೆಯ ಅಕ್ರಮ ಇನ್ನಷ್ಟು ಕಡೆ ನಡೆದಿರಬಹುದು ಎಂಬ ಗುಮಾನಿಯಲ್ಲಿ ಆದಾಯ ತೆರಿಗೆ ಇಲಾಖೆ ಪರಿಶೀಲನೆ ನಡೆಸಿದಾಗ, ಈ ವಂಚನೆಯ ಜಾಲ ಹಲವು ರಾಜ್ಯಗಳಿಗೆ ವಿಸ್ತರಿಸಿಕೊಂಡಿರುವುದು ದೃಢಪಟ್ಟಿದೆ. ಹಾಗಾಗಿಯೇ, ಈಗ ದೇಶಾದ್ಯಂತ ತನಿಖೆಗೆ ಆದೇಶಿಸಲಾಗಿದೆ. ಮಾತ್ರವಲ್ಲ, ಮನುಷ್ಯರ ಕಣ್ಣಿಗೆ ಕಾಣದ ವಂಚನೆಗಳನ್ನು ಕೃತಕ ಬುದ್ಧಿಮತ್ತೆ (ಎಐ) ಹೇಗೆ ಪತ್ತೆ ಮಾಡಬಲ್ಲದು ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ಉದಾಹರಣೆಯಾಗಿದೆ.
ಸಿಬ್ಬಂದಿ ಮೋಸ ಅಥವಾ ವಂಚನೆ ಮಾಡಬಾರದು ಎಂಬ ಕಾರಣಕ್ಕಾಗಿಯೇ ಹೋಟೆಲ್ಗಳಲ್ಲಿ ಗ್ರಾಹಕರಿಂದ ಕಾರ್ಡ್, ಯುಪಿಐ ಮತ್ತು ನಗದು ರೂಪದಲ್ಲಿ ಪಡೆದ ಪಾವತಿಯನ್ನು ಸಾಫ್ಟ್ವೇರ್ನಲ್ಲಿ ನೋಂದಣಿ ಮಾಡಲಾಗುತ್ತದೆ. ಆದರೆ, ಇಲ್ಲಿ ಹೋಟೆಲ್ ಮಾಲೀಕರೇ ಬಿಲ್ಲಿಂಗ್ ಸಾಫ್ಟ್ವೇರ್ ದುರುಪಯೋಗ ಪಡಿಸಿಕೊಂಡಿರುವುದು ದೃಢಪಟ್ಟಿದೆ. ಸಾಮಾನ್ಯವಾಗಿ, ನಗದು ರೂಪದಲ್ಲಿ ಸ್ವೀಕರಿಸಲಾದ ಪಾವತಿಯ ನೋಂದಣಿಯನ್ನು ಅಳಿಸಿ ಹಾಕಲಾಗಿದೆ. ಏಕೆಂದರೆ, ಆದಾಯ ತೆರಿಗೆ ವಿಭಾಗಕ್ಕೆ ನಗದು ವಹಿವಾಟು ಟ್ರಾ್ಯಕ್ ಮಾಡುವುದು ಕಷ್ಟಸಾಧ್ಯ. ಅಲ್ಲದೆ, ಹಲವು ಪ್ರಕರಣಗಳಲ್ಲಿ ಕೆಲ ಆಯ್ದ ದಿನಾಂಕಗಳ ಎಲ್ಲ ಬಿಲ್ಗಳ ಎಂಟ್ರಿಯನ್ನು ಡಿಲೀಟ್ ಮಾಡಲಾಗಿದೆ. ಕೆಲ ಹೋಟೆಲ್ಗಳ ಆಯ್ದ ಕ್ಯಾಶ್ ಇನ್ವಾಯ್ಸ್ಗಳನ್ನು ಅಳಿಸಿ ಹಾಕಿವೆ.
ಹೈದರಾಬಾದ್ನ ಕೆಲವು ಪ್ರಸಿದ್ಧ ಬಿರಿಯಾನಿ ಹೋಟೆಲ್ಗಳು ದಿನಕ್ಕೆ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದರೂ, ತೆರಿಗೆ ಪಾವತಿಸುವಾಗ ಮಾತ್ರ ಅತಿ ಕಡಿಮೆ ಆದಾಯ ತೋರಿಸುತ್ತಿದ್ದವು. ಗ್ರಾಹಕರಿಂದ ಹಣವನ್ನು ಡಿಜಿಟಲ್ ಪಾವತಿ (ಯುಪಿಐ/ಕಾರ್ಡ್) ಮೂಲಕ ಪಡೆಯುವ ಬದಲು ಹೆಚ್ಚಾಗಿ ನಗದು ರೂಪದಲ್ಲಿ ಪಡೆಯಲಾಗುತ್ತಿರುವುದು ತನಿಖೆಯಲ್ಲಿ ದೃಢಪಟ್ಟಿದೆ. 2019-20ರಿಂದ 2025-26ರವರೆಗೆ ಕನಿಷ್ಠ 70 ಸಾವಿರ ಕೋಟಿ ರೂಪಾಯಿ ಮೌಲ್ಯದ ಬಿರಿಯಾನಿ ಮಾರಾಟವನ್ನು ಮರೆಮಾಚಲಾಗಿದೆ.
ಆದಾಯ ತೆರಿಗೆ ಇಲಾಖೆಯು ಕೇವಲ ಹೋಟೆಲ್ ನೀಡಿದ ದಾಖಲೆಗಳನ್ನು ನಂಬದೆ, ಎಐ ಟೂಲ್ಗಳ ಸಹಾಯದಿಂದ ‘ಪರೋಕ್ಷ ದತ್ತಾಂಶ’ಗಳನ್ನು (Indirect Data) ವಿಶ್ಲೇಷಿಸಿತು. ಹೋಟೆಲ್ಗೆ ಸರಬರಾಜಾಗುವ ಅಕ್ಕಿ, ಮಾಂಸ, ಎಣ್ಣೆ ಮತ್ತು ಮಸಾಲೆ ಪದಾರ್ಥಗಳ ಪ್ರಮಾಣವನ್ನು ಎಐ ಟೂಲ್ ಪರಿಶೀಲಿಸಿತು. ಈ ಸಂದರ್ಭದಲ್ಲಿ ಎಐ ಟೂಲ್ ಒಂದು ಸರಳ ಪ್ರಶ್ನೆ ಕೇಳಿತು- ‘ನೀವು ಕೇವಲ 200 ಪ್ಲೇಟ್ ಬಿರಿಯಾನಿ ಮಾರಾಟ ಮಾಡಿದ್ದರೆ, 500 ಕೆಜಿ ಮಾಂಸ ಮತ್ತು 300 ಕೆಜಿ ಅಕ್ಕಿ ಏಕೆ ಖರೀದಿಸಿದ್ದೀರಿ?’ ಈ ಒಂದು ತಾಳೆಯಾಗದ ಅಂಶವೇ ದೊಡ್ಡ ಹಗರಣವನ್ನು ಬಯಲು ಮಾಡಿತು.
ಹೋಟೆಲ್ ಮಾಲೀಕರು ಮಾರಾಟವಾದ ಬಿರಿಯಾನಿ ಪ್ರಮಾಣವನ್ನು ಲೆಕ್ಕಪತ್ರದಲ್ಲಿ ಮರೆಮಾಚುತ್ತಿದ್ದರು. ಉದಾ ಹರಣೆಗೆ, ದಿನಕ್ಕೆ 1,000 ಪ್ಲೇಟ್ ಮಾರಾಟವಾದರೆ, ದಾಖಲೆಗಳಲ್ಲಿ ಕೇವಲ 200 ಪ್ಲೇಟ್ ಎಂದು ತೋರಿಸಿ ತೆರಿಗೆ ವಂಚಿಸುತ್ತಿದ್ದರು.
ಆದಾಯ ತೆರಿಗೆ ಇಲಾಖೆಯು ಪ್ರಮುಖವಾಗಿ ‘ಪ್ರೊಜೆಕ್ಟ್ ಇನ್ಸೈಟ್’ ಎಂಬ ಯೋಜನೆಯಡಿ ಸುಧಾರಿತ ಎಐ ಸಾಧನಗಳನ್ನು ಬಳಸುತ್ತಿದೆ. ‘ಇನ್ಸೈಟ್ ಪೋರ್ಟಲ್’ ತೆರಿಗೆದಾರರ ಪ್ಯಾನ್ ಕಾರ್ಡ್ ಅನ್ನು ಸಾಮಾಜಿಕ ಜಾಲತಾಣಗಳು, ಬ್ಯಾಂಕ್ ವಹಿವಾಟು ಮತ್ತು ಜೀವನಶೈಲಿಯೊಂದಿಗೆ ಲಿಂಕ್ ಮಾಡುತ್ತದೆ.
Machine Learning Algorithms: ಇವುಗಳು ವಹಿವಾಟಿನ ಮಾದರಿಗಳನ್ನು ಗುರುತಿಸುತ್ತವೆ. ಅಸಹಜವಾದ ಖರ್ಚು ಅಥವಾ ಕಡಿಮೆ ಆದಾಯದ ವರದಿ ಕಂಡುಬಂದಾಗ ಇವು ಎಚ್ಚರಿಕೆ ನೀಡುತ್ತವೆ.
Big Data Analytics: ಕೋಟಿಗಟ್ಟಲೆ ವಹಿವಾಟುಗಳನ್ನು ಕ್ಷಣಾರ್ಧದಲ್ಲಿ ಸ್ಕಾ್ಯನ್ ಮಾಡಲು ಇದನ್ನು ಬಳಸಲಾಗುತ್ತದೆ.
ಡೇಟಾ ಅನಲಿಟಿಕ್ಸ್ ಪಾತ್ರ: ಡೇಟಾ ಅನಲಿಟಿಕ್ಸ್ ‘ಡಿಜಿಟಲ್ ಪತ್ತೇದಾರಿ’ಯಂತೆ ಕೆಲಸ ಮಾಡುತ್ತದೆ. ಗ್ಯಾಸ್ ಸಿಲಿಂಡರ್ ಬಳಕೆ, ವಿದ್ಯುತ್ ಬಿಲ್, ಹೋಟೆಲ್ ಮಾಲೀಕನ ಜಿಎಸ್ಟಿ ರಿಟರ್ನ್ಸ್ ಮತ್ತು ಹೋಟೆಲ್ನ ಆನ್ಲೈನ್ ಡೆಲಿವರಿ ಡೇಟಾವನ್ನು ಸಂಗ್ರಹಿಸಲಾ ಗುತ್ತದೆ. ಹೋಟೆಲ್ ತೋರಿಸಿದ ಆದಾಯ ಮತ್ತು ಖರ್ಚುಗಳನ್ನು ಎಐ ಹೋಲಿಕೆ ಮಾಡುತ್ತದೆ.
Predictive Modeling: ನಿರ್ದಿಷ್ಟ ಪ್ರಮಾಣದ ಕಚ್ಚಾ ವಸ್ತುಗಳಿಂದ ಎಷ್ಟು ಬಿರಿಯಾನಿ ತಯಾರಿಸಬಹುದು ಮತ್ತು ಎಷ್ಟು ಲಾಭ ಬರಬೇಕು ಎಂಬುದನ್ನು ಎಐ ಲೆಕ್ಕಾಚಾರ ಮಾಡುತ್ತದೆ. ಒಂದು ವೇಳೆ ಹೋಟೆಲ್ ತೋರಿಸಿದ ಲಾಭವು ಎಐ ಲೆಕ್ಕಾಚಾರಕ್ಕಿಂತ ತೀರಾ ಕಡಿಮೆಯಿದ್ದರೆ, ಅದು ವಂಚನೆ ಎಂದು ಸಾಬೀತಾಗುತ್ತದೆ.