ರೆಡ್​, ಯೆಲ್ಲೋ, ಆರೆಂಜ್​​, ಗ್ರೀನ್​... ಅಷ್ಟಕ್ಕೂ ಐಎಂಡಿ ಘೋಷಿಸುವ ಈ ಬಣ್ಣಗಳ ಅಲರ್ಟ್​ಗಳು ಹೇಳುವುದೇನು?

ಐಎಂಡಿ ಸೂಚಿಸುವ ಬಣ್ಣಗಳ ಅಲರ್ಟ್​
ಐಎಂಡಿ ಸೂಚಿಸುವ ಬಣ್ಣಗಳ ಅಲರ್ಟ್​
Published on
IMD Colour Alerts: ಮಳೆಗಾಲದಲ್ಲಿ ಆಗಾಗ್ಗೆ ಹವಾಮಾನ ಇಲಾಖೆಯಿಂದ ಕೇಳಿಬರುವ ಬಣ್ಣಗಳ ಸೂಚನೆಗಳ ಬಗ್ಗೆ ಎಷ್ಟೋ ಜನಕ್ಕೆ ಇಂದಿಗೂ ಸರಿಯಾದ ಮಾಹಿತಿ ಇಲ್ಲ. ಮೇಲ್ನೋಟಕ್ಕೆ ರೆಡ್​ ಎಂದರೆ ಅಪಾಯ ಮಟ್ಟ, ಯೆಲ್ಲೋ ಅಂದರೆ ಸಾಧಾರಣ ಹೀಗೆಲ್ಲ ಅಂದುಕೊಂಡಿದ್ದಾರೆ. ಆದರೆ, ಐಎಂಡಿ ಈ ಬಣ್ಣಗಳನ್ನು ಎಚ್ಚರಿಕೆಯ ಮುನ್ಸೂಚನೆಯಾಗಿ ಬಳಸಿಕೊಂಡಿರುವ ಉದ್ದೇಶವೇನು ಎಂಬುದರ ಕಂಪ್ಲೀಟ್​ ಸ್ಟೋರಿ ಇಲ್ಲಿದೆ ನೋಡಿ.
ಈ ಬಣ್ಣ ಎಚ್ಚರಿಕೆಗಳು ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯದಿಂದ ಆಗುವ ಅತಿವೃಷ್ಟಿ ಸಮಸ್ಯೆಗಳಿಂದ ಜನರನ್ನು ಎಚ್ಚರಿಸುತ್ತವೆ. ಮೋಡ ಕವಿದ ವಾತಾವರಣ ಮತ್ತು ಭಾರಿ ಮಳೆಯ ಸಾಧ್ಯತೆಯ ಬಗ್ಗೆ ಜನರಿಗೆ ಮುಂಚೆಯೇ ಮಾಹಿತಿ ಕೊಟ್ಟರೆ, ದೊಡ್ಡ ಮಟ್ಟದ ಅಪಾಯಗಳಿಂದ ಅವರು ದೂರ ಉಳಿಯಲು ಸಹಾಯವಾಗಲಿ ಎಂಬುದು ಇದರ ಮುಖ್ಯ ಉದ್ದೇಶ. ಅಸಲಿಗೆ, ಈ ಬಣ್ಣಗಳ ಅಲರ್ಟ್​ ಹಿಂದೆ ಒಂದಷ್ಟು ಕುತೂಹಲಕಾರಿ ಸಂಗತಿಗಳು ಅಡಗಿವೆ. 
ಮಳೆಯ ಸಮಯದಲ್ಲಿ ಮಾತ್ರವಲ್ಲ, ಗರಿಷ್ಠ ತಾಪಮಾನ, ಶೀತ ಅಲೆಗಳು ಮತ್ತು ಚಂಡಮಾರುತಗಳ ಸಮಯದಲ್ಲಿಯೂ ಭಾರತ ಹವಾಮಾನ ಇಲಾಖೆ (IMD) ಈ ಬಣ್ಣ ಸಂಕೇತಿತ ಎಚ್ಚರಿಕೆಗಳನ್ನು ಘೋಷಿಸುತ್ತದೆ. ಅಪಾಯದ ತೀವ್ರತೆಯನ್ನು ಅವಲಂಬಿಸಿ ಜನರು ಮತ್ತು ಸರ್ಕಾರಿ ಸಂಸ್ಥೆಗಳು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಈ ಬಣ್ಣವನ್ನು ಪರಿಚಯಿಸಲಾಗಿದೆ.

ಯಾವ ಬಣ್ಣ ಏನು ಹೇಳುತ್ತೆ?

ಮೂಲತಃ, ಹವಾಮಾನ ಇಲಾಖೆ ನಾಲ್ಕು ರೀತಿಯ ಬಣ್ಣಗಳನ್ನು ಮುನ್ಸೂಚನೆಗೆ ಬಳಸಿಕೊಂಡಿದೆ. ಹಸಿರು, ಹಳದಿ, ಕೇಸರಿ ಮತ್ತು ಕೆಂಪು ಬಣ್ಣಗಳನ್ನು ಕನಿಷ್ಠ ಮತ್ತು ಗರಿಷ್ಠ ಮಳೆಯನ್ನು ಆಧಾರಿಸಿ ಸೂಚನೆ ನೀಡಲಾಗುವುದು. ಆಯಾ ಬಣ್ಣಗಳ ಹಿಂದಿರುವ ವಿಷಯಗಳೇನು ಎಂಬುದರ ವಿವರ ಹೀಗಿದೆ ಗಮನಿಸಿ.

ಹಸಿರು

ಇದರರ್ಥ ಹವಾಮಾನವು ಸಾಧಾರಣವಾಗಿದೆ. ಸದ್ಯಕ್ಕೆ ಹೆಚ್ಚಿನ ಅಥವಾ ಯಾವುದೇ ಅಪಾಯವಿಲ್ಲ ಎಂದು ಹೇಳಲು ಅಧಿಕಾರಿಗಳು ಈ ಬಣ್ಣವನ್ನು ಬಳಸುತ್ತಾರೆ. ಇದನ್ನು ಹೊರಡಿಸಿದಾಗ, ಜನರು ಎಂದಿನಂತೆ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಬಹುದು. ಇನ್ನೂ ಚಿಂತಿಸುವ ಅಗತ್ಯವಿಲ್ಲ ಎಂಬರ್ಥ.

ಹಳದಿ

ಮುಂದಿನ ಕೆಲವು ದಿನಗಳಲ್ಲಿ ಹವಾಮಾನ ಬದಲಾಗುವ ಸಾಧ್ಯತೆಯಿದೆ ಮತ್ತು ಲಘು ಮಳೆಯಾಗುವ ನಿರೀಕ್ಷೆಯಿದೆ ಎಂದು ಸೂಚಿಸಲು ನೀಡಲಾಗುತ್ತೆ. ಇದು ಒಂದು ರೀತಿಯ ಮುಂಗಡ ಎಚ್ಚರಿಕೆ ಎಂದೇ ಹೇಳಬಹುದು. ಈ ಸಂಕೇತದ ಅರ್ಥ ಪರಿಸ್ಥಿತಿಯ ಮೇಲೆ ನಿಗಾ ಇರಿಸಿ ಮತ್ತು ಅಗತ್ಯವಿದ್ದರೆ ನಿಮ್ಮ ದೂರ ಪ್ರಯಾಣವನ್ನು ತಾತ್ಕಾಲಿಕವಾಗಿ ಮುಂದೂಡಿ ಎಂದು ವಿವರಿಸುತ್ತದೆ. 

ಕಿತ್ತಳೆ 

ಹವಾಮಾನ ಹದಗೆಟ್ಟಾಗ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದ್ದಾಗ ಇದನ್ನು ಘೋಷಿಸಲಾಗುತ್ತೆ. ಇದು ರಸ್ತೆ ತಡೆ, ವಿದ್ಯುತ್ ಕಡಿತ ಮತ್ತು ಸಾರಿಗೆಗೆ ಅಡ್ಡಿಪಡಿಸುವಿಕೆಗೆ ಕಾರಣವಾಗಬಹುದು. ಇದರರ್ಥ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಜನರು ಹೊರಬನ್ನಿ ಎಂದು. ಮತ್ತು ಅಧಿಕಾರಿಗಳು ಅಲರ್ಟ್​ ಆಗಿರಿ ಎಂದು ಹೇಳುತ್ತದೆ.

ಕೆಂಪು (ರೆಡ್​ ಅಲರ್ಟ್​)

ಇದು ಅತ್ಯಂತ ಅಪಾಯಕಾರಿ ಅಲರ್ಟ್​. ಅತಿ ಹೆಚ್ಚು ಹಾಗೂ ನಿರೀಕ್ಷೆಗೂ ಮೀರಿ ಸುರಿಯುವ ಭಾರಿ ಮಳೆ ಮತ್ತು ಪ್ರವಾಹದ ಅಪಾಯ ಇದ್ದಾಗ ರೆಡ್ ಅಲರ್ಟ್​ ಘೋಷಿಸಲಾಗುತ್ತದೆ. ಈ ಅಲರ್ಟ್​ ನೀಡಿದಾಗ, ಜೀವಹಾನಿ ಮತ್ತು ಆಸ್ತಿ-ಪಾಸ್ತಿ ಹಾನಿಯಾಗುವ ಸಾಧ್ಯತೆ ಹೆಚ್ಚು. ಈ ಎಚ್ಚರಿಕೆ ಘೋಷಿಸಿದಾಗ ಶಾಲೆಗಳು ಮತ್ತು ಕಚೇರಿಗಳಿಗೆ ರಜೆ ಘೋಷಿಸಲಾಗುತ್ತೆ. ಇದೇ ಸಂದರ್ಭದಲ್ಲಿ, ಅಪಾಯ ಸ್ಥಳದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗುತ್ತದೆ.

ಮಳೆ ತೀವ್ರತೆ ಆಧಾರ

24 ಗಂಟೆಗಳಲ್ಲಿ ಎಷ್ಟು ಮಿಲಿಮೀಟರ್ ಮಳೆ ಬೀಳುವ ನಿರೀಕ್ಷೆಯಿದೆ ಎಂಬುದರ ಆಧಾರದ ಮೇರೆಗೆ ಹವಾಮಾನ ಇಲಾಖೆಯು ಈ ಬಣ್ಣಗಳ ಅಲರ್ಟ್​ ಅನ್ನು ಘೋಷಿಸುತ್ತದೆ. ಉದಾಹರಣೆಗೆ, 20 ಸೆಂಟಿಮೀಟರ್‌ಗಳಿಗಿಂತ ಹೆಚ್ಚು ಮಳೆ ಬೀಳುವ ನಿರೀಕ್ಷೆಯಿದ್ದರೆ ಅದನ್ನು ರೆಡ್ ಅಲರ್ಟ್ ಎಂದು ಪರಿಗಣಿಸಲಾಗುತ್ತೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net