'ಪದ್ಮ' ಪ್ರಶಸ್ತಿ ಪುರಸ್ಕೃತರಿಗೆ ಏನೆಲ್ಲ ಲಭಿಸುತ್ತೆ? ಎಷ್ಟೆಲ್ಲ ಪ್ರಯೋಜನಗಳಿವೆ? ಇಲ್ಲಿದೆ ನೋಡಿ ಉತ್ತರ | Padma Awards

ಪದ್ಮ ಪ್ರಶಸ್ತಿಗಳು
ಪದ್ಮ ಪ್ರಶಸ್ತಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳ ಪಟ್ಟಿ ಅನಾವರಣ
  • ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ ಆಯ್ಕೆಯಾದವರ ಹೆಸರು ಪ್ರಕಟ
  • ಪ್ರಶಸ್ತಿ ಪುರಸ್ಕೃತರಿಗೆ ಏನೆಲ್ಲ ಗೌರವ ಹಾಗೂ ಪ್ರಯೋಜನಗಳಿವೆ
ನವದೆಹಲಿ: ಜ.26ರಂದು ಗಣರಾಜ್ಯೋತ್ಸವ ದಿನಾಚರಣೆಯ ಹಿನ್ನೆಲೆ ಕೇಂದ್ರ ಸರ್ಕಾರ ತನ್ನ ಪ್ರತಿಷ್ಠಿತ, ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳ (Padma Awards ) ಪಟ್ಟಿಯನ್ನು ಅನಾವರಣಗೊಳಿಸಿತು. 2026ನೇ ಸಾಲಿನ ಈ ಪಟ್ಟಿಯಲ್ಲಿ ದೇಶದ ಒಟ್ಟು 45 ಸಾಧಕರ ಹೆಸರಿವೆ. ವಿಶೇಷ ಎಂದರೆ ಕರ್ನಾಟಕದ ಅಂಕೇಗೌಡ, ಡಾ. ಸುರೇಶ್ ಹನಗವಾಡಿ ಮತ್ತು ಎಸ್.ಜಿ.ಸುಶೀಲಮ್ಮ ಅವರಿಗೆ ಈ ಬಾರಿಯ ಪದ್ಮಶ್ರೀ ಗೌರವ ಒಲಿದಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
'ಭಾರತ ರತ್ನ'ದ ನಂತರದ ಸಾಲಿನಲ್ಲಿ ಬರುವ ಪದ್ಮ ಪ್ರಶಸ್ತಿಗಳು ಭಾರತದಲ್ಲಿ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಕಲೆ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ, ವಾಣಿಜ್ಯ, ಶಿಕ್ಷಣ, ವೈದ್ಯಕೀಯ, ಸಾಹಿತ್ಯ ಮತ್ತು ಕ್ರೀಡೆಯಂತಹ ವಿವಿಧ ಕ್ಷೇತ್ರಗಳಲ್ಲಿನ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ, ಕೇಂದ್ರ ಸರ್ಕಾರ ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ಘೋಷಿಸುತ್ತದೆ. 1954ರಲ್ಲಿ ಆರಂಭವಾದ ಈ ಪ್ರತಿಷ್ಠಿತ ಪ್ರಶಸ್ತಿಗಳು, ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ನಿಸ್ವಾರ್ಥ ವ್ಯಕ್ತಿಗಳಿಗೆ ಮೌಲ್ಯಯುತವಾದ ಅರ್ಪಣೆಯಾಗಿದೆ.

ಪದ್ಮ ಪ್ರಶಸ್ತಿಗಳಲ್ಲಿ ಮೂರು ವರ್ಗ (ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ)

1. ಪದ್ಮವಿಭೂಷಣ: ಇದು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಆಗಿದ್ದು, ಇದನ್ನು ಅತ್ಯುನ್ನತ ಕ್ರಮದ ಅಸಾಧಾರಣ ಮತ್ತು ವಿಶಿಷ್ಟ ಸೇವೆಗಳನ್ನು ಸಲ್ಲಿಸಿದವರಿಗೆ ನೀಡಲಾಗುತ್ತದೆ.
2. ಪದ್ಮಭೂಷಣ: ಇದು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ಯಾವುದೇ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
3. ಪದ್ಮಶ್ರೀ: ಇದು ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಿ ಪ್ರಶಂಸನೀಯ ಸೇವೆಗಳನ್ನು ನೀಡಿದ ಸಾಮಾನ್ಯ ವ್ಯಕ್ತಿಗಳಿಗೆ ದೊರೆಯುವ ಪ್ರಶಸ್ತಿ ಇದಾಗಿದೆ.

ಆಯ್ಕೆ ಪ್ರಕ್ರಿಯೆ, ನಾಮನಿರ್ದೇಶನಗಳು (ಪದ್ಮ ಪ್ರಶಸ್ತಿ ಸಮಿತಿ, ಸಾರ್ವಜನಿಕ ಭಾಗವಹಿಸುವಿಕೆ)

ಪದ್ಮ ಪ್ರಶಸ್ತಿ ಸಮಿತಿ: ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಪ್ರಕ್ರಿಯೆಯು ಬಹಳ ಪಾರದರ್ಶಕವಾಗಿರುತ್ತದೆ. ಪ್ರತಿ ವರ್ಷ, ಪ್ರಧಾನ ಮಂತ್ರಿಗಳು 'ಪದ್ಮ ಪ್ರಶಸ್ತಿ ಸಮಿತಿ'ಯನ್ನು ರಚಿಸುತ್ತಾರೆ. ಈ ಸಮಿತಿಯ ಅಧ್ಯಕ್ಷತೆಯನ್ನು ಸಂಪುಟ ಕಾರ್ಯದರ್ಶಿ ನಿರ್ವಹಿಸುತ್ತಾರೆ.
ಸಾರ್ವಜನಿಕ ಭಾಗವಹಿಸುವಿಕೆ: ಹಿಂದೆ, ಸರ್ಕಾರ ಮಾತ್ರ ಹೆಸರುಗಳನ್ನು ಸೂಚಿಸುತ್ತಿತ್ತು. ಆದರೀಗ ಯಾರಾದರೂ ಅರ್ಹ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಅಂತಿಮವಾಗಿ, 'ಸ್ವಯಂ ನಾಮನಿರ್ದೇಶನ' (ತಮ್ಮನ್ನು ತಾವು ನಾಮನಿರ್ದೇಶನ ಮಾಡಿಕೊಳ್ಳುವುದು) ಆಯ್ಕೆಯನ್ನು ಸಹ ಒದಗಿಸಲಾಗಿದೆ. ಇದು ಗಮನಾರ್ಹ.
ನಿರ್ಧಾರ: ಸಮಿತಿಯು ಶಿಫಾರಸ್ಸಿನ ಮೇರೆಗೆ ಹೆಸರುಗಳನ್ನು ಪ್ರಧಾನಿ ಮತ್ತು ರಾಷ್ಟ್ರಪತಿಗಳ ಅನುಮೋದನೆಯ ನಂತರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಆಯ್ಕೆಯಾದ ಗಣ್ಯರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ, ಗೌರವಿಸಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಿಗೆ ಏನೆಲ್ಲ ಸೌಲಭ್ಯ, ಗೌರವ?

ನಗದು ಬಹುಮಾನವಿಲ್ಲ: ಪದ್ಮ ಪ್ರಶಸ್ತಿ ಪುರಸ್ಕೃತರು ದೊಡ್ಡ ನಗದು ಬಹುಮಾನವನ್ನು ಪಡೆಯುತ್ತಾರೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ಅಸಲಿಗೆ ಇಲ್ಲಿ ಯಾವುದೇ ನಗದು ಬಹುಮಾನ ಅಥವಾ ಭತ್ಯೆ ಲಭಿಸುವುದಿಲ್ಲ. ಬದಲಿಗೆ ಗೌರವಿಸುವ ನಿಟ್ಟಿನಲ್ಲಿ ಕೊಡಲಾಗುವ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳು.
ಪದಕ, ಪ್ರಶಂಸಾ ಪತ್ರ: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿಗಳು ಸಹಿ ಹಾಕಿದ 'ಸನದ್' (ಶ್ಲಾಘನಾ ಪತ್ರ) ಮತ್ತು ಪದಕವನ್ನು ಕೊಟ್ಟು ಗೌರವಿಸಲಾಗುತ್ತದೆ.
ಪ್ರತಿಕೃತಿ ಪದಕ: ಈ ಸಂದರ್ಭದಲ್ಲಿ ಅಧಿಕೃತ ಕಾರ್ಯಕ್ರಮಗಳಲ್ಲಿ ಧರಿಸಲು ಮೂಲ ಪದಕದ ಚಿಕಣಿಯನ್ನು ಸಹ ನೀಡಲಾಗುತ್ತದೆ.
ಕೇಂದ್ರ ಸರ್ಕಾರ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಗಣ್ಯರನ್ನು, ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಿಗೆ ವಿಶೇಷವಾಗಿ ಆಹ್ವಾನಿಸಲಾಗುತ್ತದೆ. ಅವರನ್ನು ರಾಜ್ಯದ ಅತಿಥಿಗಳೆಂದು ಪರಿಗಣಿಸಲಾಗುತ್ತದೆ. ಇದರರ್ಥ ಅವರು ಇತರೆ ರಾಜ್ಯಗಳಿಗೆ ಹೋದಾಗ, ಆ ರಾಜ್ಯದ ಸರ್ಕಾರವು ಅವರಿಗೆ ವಸತಿ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಭಾರತೀಯ ರೈಲ್ವೆಯಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನೂ ನೀಡಲಾಗಿದೆ,(ನಿಯಮಗಳ ಅನುಸಾರ).(ಏಜೆನ್ದೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net