ರಣರಂಗವಾಯ್ತು ಬಂಗಾಳದ ಬೆಹಾಲಾ ...ಮೈಕ್ರೊಫೋನ್ ವಿಚಾರಕ್ಕೆ ಬಿಜೆಪಿ ವೇದಿಕೆಯೇ ಭಸ್ಮ | TMC-BJP Supporters Clash

 TMC-BJP Supporters Clash | ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ಘರ್ಷಣೆ
TMC-BJP Supporters Clash | ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ಘರ್ಷಣೆ
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಸಂಘರ್ಷ ಮುಂದುವರೆದಿದ್ದು, ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷ ಬಿಜೆಪಿ ಬೆಂಬಲಿಗರು ಕೋಲ್ಕತ್ತಾದ ಹೊರವಲಯದಲ್ಲಿರುವ ಬೆಹಾಲಾ ಸಖೇರ್ ಬಜಾರ್‌ನಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.
ಟಿಎಂಸಿ ಕೌನ್ಸಿಲರ್ ಸುದೀಪ್ ಪಾಲ್ ಪ್ರತಿ ವರ್ಷದಂತೆ ಈ ವರ್ಷವು ಆಲ್ ಬಂಗಾಳ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಿದ್ದಾರೆ, ಇತ್ತ ಸ್ವಲ್ಪ ದೂರದಲ್ಲಿ ಬಿಜೆಪಿ ಕಾರ್ಯಕ್ರಮ ನಡೆಯುತ್ತಿದೆ, ಟಿಎಂಸಿಯ ಕಾರ್ಯಕ್ರಮದಲ್ಲಿ ಜೋರು ಧ್ವನಿಯಲ್ಲಿ ಮೈಕ್ರೊಫೋನ್ ಬಳಸಲಾಗಿದ್ದು, ಇದು ಕೇಸರಿ ಪಕ್ಷದ ಸಭೆಗೆ ಅಡಚಣೆಯುಂಟಾಗಿದ್ದು ಈ ಕಾರಣದಿಂದಲೇ ಗಲಾಟೆ ನಡೆದಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಂದರ್ಭದಲ್ಲಿ ಕೆಲವು ಬಿಜೆಪಿ ಬೆಂಬಲಿಗರು ಕ್ಲಬ್ ಸದಸ್ಯರನ್ನು ನಿಂದಿಸಿದ್ದಾರೆ ಎಂದು ಬೆಹಲಾ ಪುರ್ಬಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಟಿಎಂಸಿ ಶಾಸಕಿ ರತ್ನ ಚಟರ್ಜಿ ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಸಭೆಯ ವೇದಿಕೆಗೆ ಕೆಲ ಟಿಎಂಸಿ ಗೂಂಡಾಗಳು ದಾಳಿ ಮಾಡಿ, ಬೆಂಕಿ ಹಚ್ಚಿದ್ದಾರೆ, ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ ಅಧೋಗತಿಗೆ ತಲುಪಿದೆ ಎಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಕಾಂತ ಮಜುಂದಾರ್ ತಮ್ಮ​ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.
ಘಟನೆ ನಡೆದಿರುವ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಕಾರ್ಯಚರಣೆ ನಡೆಸಿದೆ. 
ಮುಂಬರುವ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ವಾರಗಳು ಬಾಕಿ ಉಳಿದಿದ್ದು, ಇಂತಹ ಸಂದರ್ಭದಲ್ಲಿ ಹಿಂಸಾಚಾರ ನಡೆದಿದೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದ ವೇಳೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆಯಿದ್ದು, ಪ್ರಸ್ತುತ ಸಿಎಂ ಮಮತಾ ಬ್ಯಾನರ್ಜಿಯ ಟಿಎಂಸಿ ಅಧಿಕಾರದಲ್ಲಿದೆ. 
2021 ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ, ಟಿಎಂಸಿ 213 ಸ್ಥಾನಗಳನ್ನು ಗೆದ್ದು ಸತತ ಮೂರನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಂಡಿದೆ. 2016 ರಲ್ಲಿ ಕೇವಲ ಮೂರು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 77 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಅಂದಿನಿಂದ, ಕೇಸರಿ ಪಕ್ಷ ರಾಜ್ಯದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತಿದೆ ಮತ್ತು ಇದು ಟಿಎಂಸಿಯ ನಿದ್ದೆಗೆಡಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net