

ಗುರ್ಗಾಂವ್ನ ಅಪಾರ್ಟ್ಮೆಂಟ್ವೊಂದರಲ್ಲಿ ಕೇರಳ ಮೂಲದ ಟೆಕ್ಕಿ ಆತ್ಮಹತ್ಯೆ.
ಪತ್ನಿ ಹುಟ್ಟುಹಬ್ಬದಂದೇ ಆತ್ಮಹತ್ಯೆ ಮಾಡಿಕೊಂಡ ದಂಪತಿ, ಕಾರಣ ನಿಗೂಢ.
ಇತ್ತೀಚೆಗೆ ಮೊಹಮ್ಮದ್ ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನುವುದು ಬಹಿರಂಗ.
ಕೆಲಸದೊತ್ತಡ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದ ದಂಪತಿ ಕುಟುಂಬಸ್ಥರು.
'ನಾವು ಈ ಲೋಕವನ್ನು ತೊರೆಯುತ್ತಿದ್ದೇವೆ' ಎನ್ನುವ ಬರಹ ಗೋಡೆ ಮೇಲೆ, 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಪತ್ನಿ ಬಟ್ಟೆ ಮೇಲೆ ಇದಿಷ್ಟು ಕಂಡುಬಂದಿದ್ದು, ಶವವಾಗಿ ಪತ್ತೆಯಾದ ದಂಪತಿಯ ಫ್ಲ್ಯಾಟ್ನಲ್ಲಿ. ಹೌದು, ಗುರ್ಗಾಂವ್ನ ಎಂ3ಎಂ ಮರಿನಾದ ಅಪಾರ್ಟ್ಮೆಂಟ್ನಲ್ಲಿ ಕೇರಳ ಮೂಲದ ಟೆಕ್ಕಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೊಹಮ್ಮದ್ ಅಸ್ಲಾಂ (30) ಮತ್ತು ಅವರ ಪತ್ನಿ ಫರ್ಹಾನಾ (28) ಮೃತರು ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬುಧವಾರ ಬೆಳಗ್ಗೆ ತನ್ನ ಕಚೇರಿಗೆ ಮೊಹಮ್ಮದ್ ಅಸ್ಲಾಂ ಮೇಲ್ ಮಾಡಿದ್ದರು ಎನ್ನುವುದು ಬೆಳಕಿಗೆ ಬಂದಿದೆ.
ಬುಧವಾರ ಬೆಳಿಗ್ಗೆ 7ಕ್ಕೆ ಮೊಹಮ್ಮದ್ ಅಸ್ಲಾಂ ತಮ್ಮ ಕಂಪನಿಗೆ ಇಮೇಲ್ ಕಳುಹಿಸಿ, ನಾವು 'ಈ ಲೋಕವನ್ನು ತೊರೆಯಲು ಬಯಸಿದ್ದೇವೆ' ಎಂದಷ್ಟೇ ಮೇಲ್ ಮಾಡಿ..ಪೋಷಕರು ಮತ್ತು ಮನೆ ಮಾಲೀಕರ ನಂಬರ್ ಟ್ಯಾಗ್ ಮಾಡಿ..ಇವರನ್ನು ಸಂಪರ್ಕಿಸಿ ಎಂದು ಮನವಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಹೋದ್ಯೋಗಿಗಳು ಈ ಬಗ್ಗೆ ಮನೆ ಮಾಲೀಕರಿಗೆ ತಿಳಿಸಿದ್ದಾರೆ. ಕೂಡಲೇ ದಂಪತಿ ತಂಗಿದ್ದ ಗುರ್ಗಾಂವ್ನ ಸೆಕ್ಟರ್ 58ರಲ್ಲಿರುವ ಎಂ3ಎಂ ಮರಿನಾದ ಟವರ್ 7ರಲ್ಲಿರುವ ಫ್ಲ್ಯಾಟ್ಗೆ ತೆರಳಿ ನೋಡಿದಾಗ ಇಬ್ಬರು ಶವವಾಗಿ ಪತ್ತೆಯಾಗಿದ್ದರು.
ಮೊಹಮ್ಮದ್ ಅಸ್ಲಾಂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಾಗೂ ಅವರ ಪತ್ನಿ ಫರ್ಹಾನಾ ಕುತ್ತಿಗೆಯ ಮೇಲೆ ಗಾಯದ ಗುರುತಿನೊಂದಿಗೆ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಮನೆ ಮಾಲೀಕರು ಈ ಬಗ್ಗೆ ಬಾದ್ಷಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮೊದಲು ಪತ್ನಿಯನ್ನು ಕೊಂದು ನಂತರ ಅಸ್ಲಾಂ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ರಡಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ದಂಪತಿಯ ಫ್ಲ್ಯಾಟ್ನಿಂದ ಸದ್ಯ ಪೊಲೀಸರು, ಎರಡು ಮೊಬೈಲ್ ಫೋನ್ಗಳು, ಒಂದು ಹಗ್ಗ, ಟಿಪ್ಪಣಿ, ಡೈರಿ, ಕತ್ತರಿ ಮತ್ತು ಪೆನ್ ಡ್ರೈವ್ ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ದೊರೆತ ಟಿಪ್ಪಣಿಯಲ್ಲಿ ಯಾರ ವಿರುದ್ಧವೂ ಯಾವುದೇ ಆರೋಪಗಳಿಲ್ಲ. 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಫರ್ಹಾನರ ಬಟ್ಟೆ ಮೇಲೆ ಬರೆದಿರುವುದು ಪತ್ತೆಯಾಗಿದೆ. ಫ್ಲ್ಯಾಟ್ನ ಒಂದು ಮೂಲೆಯಲ್ಲಿ ನಾವು ಈ ಲೋಕ ತೊರೆಯುತ್ತಿದ್ದೇವೆ ಎಂದು ಬರೆಯಲಾಗಿತ್ತು ಎನ್ನುವುದನ್ನು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಮಧ್ಯರಾತ್ರಿಯ ಸುಮಾರಿಗೆ ಈ ದುರ್ಘಟನೆ ನಡೆದಿರಬಹುದು ಎಂದು ಕುಟುಂಬದವರು ಶಂಕಿಸಿದ್ದಾರೆ. ಅಂದೇ ಫರ್ಹಾನಾ ಅವರ ಹುಟ್ಟುಹಬ್ಬವಿತ್ತು. ಶುಕ್ರವಾರ ಕುಟುಂಬದವರಿಂದ ಶವಗಳನ್ನು ಗುರುತಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎನ್ನಲಾಗಿದೆ.
ಕೇರಳ ಮೂಲದ ಈ ದಂಪತಿಗಳು ಸುಮಾರು ಮೂರು ತಿಂಗಳ ಹಿಂದೆ ಬೆಂಗಳೂರಿನಿಂದ ಗುರ್ಗಾಂವ್ಗೆ ಬಂದು ನೆಲೆಸಿದ್ದರು. ಕೇರಳದ ಕೋಳಿಕೋಡ್ ಮೂಲದ ಅಸ್ಲಾಂ, ಸೆಕ್ಟರ್ 58ರಲ್ಲಿ ಕಚೇರಿಯನ್ನು ಹೊಂದಿರುವ ಇಂಡೋನೇಷ್ಯಾ ಮೂಲದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಲಪ್ಪುರಂ ಮೂಲದ ಫರ್ಹಾನಾ ಅವರು ಬೆಂಗಳೂರು ಮೂಲದ ಐಟಿ ಸಂಸ್ಥೆಯೊಂದಕ್ಕೆ ಮನೆಯಿಂದಲೇಕೆಲಸ ಮಾಡುತ್ತಿದ್ದರು.
2023ರಲ್ಲಿ ವಿವಾಹವಾಗಿದ್ದ ಈ ದಂಪತಿಗಳು ಗುರ್ಗಾಂವ್ಗೆ ಬರುವ ಮುನ್ನ ಸುಮಾರು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅಸ್ಲಾಂ ಅವರು 2018ರಲ್ಲಿ ಎನ್ಐಟಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಹಾಗೂ 2020ರಲ್ಲಿ ಐಐಎಂ ಇಂದೋರ್ನಲ್ಲಿ ಎಂಬಿಎ (MBA) ಪೂರೈಸಿದ್ದರು. ಫರ್ಹಾನಾ ಅವರು ಕೇರಳದ ಕುಟ್ಟಿಪ್ಪುರಂನಲ್ಲಿರುವ ಎಂಇಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಬಿಟೆಕ್ ಮುಗಿಸಿದ್ದರು.
ಫರ್ಹಾನಾ ಅವರ ಸಹೋದರ ಫೈಜಲ್ ಮಾತನಾಡಿ, ದಂಪತಿಗಳ ನಡುವೆ ಯಾವುದೇ ಕೌಟುಂಬಿಕ ಕಲಹವಿರಲಿಲ್ಲ ಮತ್ತು ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಕುಟುಂಬದವರ ಜತೆಗೂ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ಈ ಸುದ್ದಿ ಕೇಳಿ ಎರಡು ಕುಟುಂಬಗಳೂ ಆಘಾತಗೊಂಡಿವೆ ಎಂದು ಹೇಳಿದರು.
ಅಲ್ಲದೆ, ಅಸ್ಲಾಂ ಕಳೆದ ಒಂದೂವರೆ ವರ್ಷದಿಂದ ಖಿನ್ನತೆಗೆ ಒಳಗಾಗಿದ್ದು, ಅದಕ್ಕಾಗಿ ಚಿಕಿತ್ಸೆ ಹಾಗೂ ಥೆರಪಿ ಪಡೆಯುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಅಸ್ಲಾಂ ಅಥವಾ ಫರ್ಹಾನಾ ಇಬ್ಬರೂ ತಮಗೆ ಯಾವುದೇ ಕಷ್ಟವಿದೆ ಎಂದು ಎಂದಿಗೂ ಹೇಳಿಕೊಂಡಿರಲಿಲ್ಲ. ಐಟಿ ವಲಯದಲ್ಲಿನ ವಿಪರೀತ ಕೆಲಸದೊತ್ತಡವೇ ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ, (ಏಜೆನ್ಸೀಸ್).