ನಾವು ತೆಲಂಗಾಣ ರಾಜಕೀಯವನ್ನೇ ಬದಲಾಯಿಸುತ್ತೇವೆ!...ಸ್ವಪಕ್ಷ ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ! | Rajagopal Reddy

Rajagopal Reddy | ಸ್ವಪಕ್ಷ ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ!
Rajagopal Reddy | ಸ್ವಪಕ್ಷ ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ!
Published on

ಇಲ್ಲಿನ ರವೀಂದ್ರ ಭಾರತಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ತೆಲಂಗಾಣ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಶಾಸಕ ಕೊಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ (Rajagopal Reddy) ತಮ್ಮದೇ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಶೀಘ್ರದಲ್ಲೇ ಹೊಸ ರಾಜಕೀಯ ಶಕ್ತಿಯೊಂದು ಹೊರಹೊಮ್ಮಲಿದ್ದು, ಅದು ಭ್ರಷ್ಟಾಚಾರ, ಶೋಷಣೆ ಮತ್ತು ಅಧಿಕಾರ ದುರ್ಬಳಕೆಗೆ ಸವಾಲು ಹಾಕಲಿದೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.

ಸಾರ್ವಜನಿಕ ಚಳವಳಿಗಳ ಭಾಗವಾಗಿದ್ದವರು, ಪ್ರಾಮಾಣಿಕ ವ್ಯಕ್ತಿಗಳು ಮತ್ತು ಯುವಕರು ಅಂತಿಮವಾಗಿ ವಿಧಾನಸಭೆಯನ್ನು ಪ್ರವೇಶಿಸಲಿದ್ದಾರೆ ಹಾಗೂ ರಾಜ್ಯದ ರಾಜಕೀಯ ಚಿತ್ರಣದಲ್ಲೇ ಬೃಹತ್ ಬದಲಾವಣೆಯನ್ನು ತರಲಿದ್ದಾರೆ ಎಂದು ರೆಡ್ಡಿ ಸಭೆಯನ್ನುದ್ದೇಶಿಸಿ ಹೇಳಿದರು.
ನಾವು ಶಾಸನಸಭೆಯನ್ನು ಪ್ರವೇಶಿಸಿ ತಮಿಳುನಾಡಿನ ಮಾದರಿಯಲ್ಲಿ ತೆಲಂಗಾಣ ರಾಜಕೀಯವನ್ನು ಬದಲಾಯಿಸುತ್ತೇವೆ ಎಂದ ರಾಜಗೋಪಾಲ್ ರೆಡ್ಡಿ, ಕೆಲವರು ಹಣದ ಚೀಲಗಳೊಂದಿಗೆ ಬರಬಹುದು, ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡುತ್ತಿರುವವರ ವಿರುದ್ಧ ನಾವು ಹೋರಾಡುತ್ತೇವೆ ಎಂದರು. ಮುಖ್ಯಮಂತ್ರಿ ರೇವಂತ್ ರೆಡ್ಡಿ ಟೀಕಾಕಾರರಾಗಿರುವ ರಾಜಗೋಪಾಲ್, ನಾವು ಶೋಷಣೆಯ ವಿರುದ್ಧ ಹೋರಾಡುತ್ತೇವೆ, ನಮ್ಮ ತಾಳ್ಮೆ ಮತ್ತು ಸಹನೆಯನ್ನು ಅಸಹಾಯಕತೆ ಎಂದು ತಪ್ಪಾಗಿ ತಿಳಿಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಶೇಷವಾಗಿ, ರೇವಂತ್ ರೆಡ್ಡಿ ನೇತೃತ್ವದ ಸರ್ಕಾರವು 5 ಲಕ್ಷ ರೂಪಾಯಿ ಗೃಹ ನೆರವು ಪಡೆಯಲು ಬಯಸುವ ಬಡ ಕುಟುಂಬಗಳ ಮೇಲೆ ವಿಧಿಸಿರುವ ಕಟ್ಟುನಿಟ್ಟಿನ ನಿಬಂಧನೆಗಳನ್ನು ಶಾಸಕ ರೆಡ್ಡಿ ತೀವ್ರವಾಗಿ ಟೀಕಿಸಿದ್ದು, ಬಡ ಫಲಾನುಭವಿಗಳು ನೆರವು ಪಡೆಯಲು ಹಲವಾರು ಅರ್ಹತಾ ಷರತ್ತುಗಳನ್ನು ಪೂರೈಸಬೇಕಾದ ಅನಗತ್ಯ ಜಟಿಲ ವ್ಯವಸ್ಥೆಯನ್ನು ಅವರು ಪ್ರಶ್ನಿಸಿದರಲ್ಲದೆ, ಉನ್ನತ ಮಟ್ಟದಲ್ಲಿ ಬೃಹತ್ ಪ್ರಮಾಣದ ಹಣವನ್ನು ಕೊಳ್ಳೆಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು. ಸರ್ಕಾರವು ಫಲಾನುಭವಿಗಳಿಗೆ ಅಡೆತಡೆಗಳನ್ನು ಸೃಷ್ಟಿಸುವ ಬದಲು, ನಿಜವಾದ ಅರ್ಹ ಕುಟುಂಬಗಳಿಗೆ ಅಭಿವೃದ್ದಿ ಯೋಜನೆಗಳು ತಲುಪುವಂತೆ ನೋಡಿಕೊಳ್ಳುವತ್ತ ಗಮನಹರಿಸಬೇಕು ಎಂದು ರಾಜಗೋಪಾಲ್ ರೆಡ್ಡಿ ಸಲಹೆ ನೀಡಿದರು.
ಸಮಯ ಬಂದಾಗ ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಯುವಕರು, ರೈತರು, ಬಡವರು ಮತ್ತು ನಮ್ಮ ಸಹೋದರಿಯರಿಗಾಗಿ ನಾವು ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರುತ್ತೇವೆ, ನಾವು ಹಿಂದೆ ಸರಿಯುವುದಿಲ್ಲ ಮತ್ತು ಹೆದರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ರಾಜಗೋಪಾಲ್ ರೆಡ್ಡಿ ಅವರ ಈ ಹೇಳಿಕೆಗಳನ್ನು ಮುಖ್ಯಮಂತ್ರಿಗಳ ವಿರುದ್ಧದ ಬಹಿರಂಗ ಬಂಡಾಯವೆಂದೇ ವಿಶ್ಲೇಷಿಸಲಾಗುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net