ಬಂಗಾಳದ ಕಲ್ಯಾಣವೇ ನಮಗೆ ಸರ್ವೋಚ್ಚ... ಸುವೇಂದು ಅಧಿಕಾರಿ ಸಂಪುಟದ ಐತಿಹಾಸಿಕ ನಿರ್ಧಾರಗಳಿಗೆ ಪ್ರಧಾನಿ ಮೋದಿ ಶ್ಲಾಘನೆ! | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಮೊದಲ ಸಂಪುಟ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಮುಕ್ತಕಂಠದಿಂದ ಶ್ಲಾಘಿಸಿದ್ದು, ಇವುಗಳನ್ನು ಜನರ ಕಲ್ಯಾಣದ ನಿಟ್ಟಿನಲ್ಲಿ ಕೈಗೊಂಡ ಮಹತ್ವದ ಕ್ರಮಗಳು ಎಂದು ಬಣ್ಣಿಸಿದ್ದಾರೆ. ವಿಶೇಷವಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಿರುವುದಕ್ಕೆ ಪ್ರಧಾನಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದ ಜನತೆಯ ಕಲ್ಯಾಣವೇ ನಮಗೆ ಸರ್ವೋಚ್ಚವಾಗಿದ್ದು, ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆಯಾದ ಆಯುಷ್ಮಾನ್ ಭಾರತ್ ಈಗ ರಾಜ್ಯದ ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಆಡಳಿತವಿರುವ ಡಬಲ್ ಇಂಜಿನ್ ಸರ್ಕಾರವು ಕೇಂದ್ರದ ಪ್ರಮುಖ ಯೋಜನೆಗಳನ್ನು ಜನರಿಗೆ ಸುಲಭವಾಗಿ ತಲುಪಿಸುವುದನ್ನು ಖಚಿತಪಡಿಸಲಿದೆ ಎಂದು ಬರೆದುಕೊಂಡಿದ್ದಾರೆ.

ಸಿಎಂ ಸುವೇಂದು ಅಧಿಕಾರಿ ತೆಗೆದುಕೊಂಡ 6 ಪ್ರಮುಖ ನಿರ್ಧಾರಗಳು

ಮೇ 9 ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಸೋಮವಾರ ತಮ್ಮ ಮೊದಲ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿ ಆರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಈ ಸಭೆಯಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ಹಾಕುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗಡಿ ಭದ್ರತಾ ಪಡೆಗೆ (BSF) ಭೂಮಿಯನ್ನು ವರ್ಗಾಯಿಸಲು ಮಹತ್ವದ ಒಪ್ಪಿಗೆ ನೀಡಲಾಗಿದೆ.
ಅಕ್ರಮ ಒಳನುಸುಳುವಿಕೆ ಸಮಸ್ಯೆಯನ್ನು ಪರಿಹರಿಸಲು ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ, ಮುಂದಿನ 45 ದಿನಗಳಲ್ಲಿ ಭೂಮಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಿಎಸ್‌ಎಫ್ ಗಡಿ ಬೇಲಿಯನ್ನು ನಿರ್ಮಿಸಲಿದ್ದು, ಒಳನುಸುಳುವಿಕೆ ಸಮಸ್ಯೆಗೆ ಅಲ್ಪಾವಧಿಯಲ್ಲೇ ಪರಿಹಾರ ಸಿಗಲಿದೆ ಎಂದು ಸುವೇಂದು ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಯ ಜೊತೆಗೆ ಕೇಂದ್ರದ ಇತರ ಪ್ರಮುಖ ಅಭಿವೃದ್ದಿ ಯೋಜನೆಗಳನ್ನು ಕೂಡ ರಾಜ್ಯದಲ್ಲಿ ಜಾರಿಗೆ ತರಲು ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಮುಂದಾಗಿದೆ. ಆಯುಷ್ಮಾನ್ ಭಾರತ್ ಮತ್ತು ಜನ ಆರೋಗ್ಯ ಯೋಜನೆ ಮಾತ್ರವಲ್ಲದೆ, ಪ್ರಧಾನ ಮಂತ್ರಿ ಕೃಷಕ್ ಬಿಮಾ ಯೋಜನೆ, ಪಿಎಂ ಶ್ರೀ, ವಿಶ್ವಕರ್ಮ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಹಾಗೂ ಉಜ್ವಲ ಯೋಜನೆಗಳನ್ನು ರಾಜ್ಯದಲ್ಲಿ ತಕ್ಷಣದಿಂದಲೇ ಜಾರಿಗೆ ತರುವ ಪ್ರಕ್ರಿಯೆ ಆರಂಭವಾಗಿದೆ.
ಈ ಎಲ್ಲಾ ಯೋಜನೆಗಳ ಅರ್ಜಿಗಳನ್ನು ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳಿಗೆ ತ್ವರಿತವಾಗಿ ರವಾನಿಸುವಂತೆ ಎಲ್ಲಾ ಜಿಲ್ಲಾ ನ್ಯಾಯಾಧೀಶರಿಗೆ ಸೂಚನೆ ನೀಡಲಾಗಿದ್ದು, ಆಡಳಿತ ಯಂತ್ರವು ಈ ನಿಟ್ಟಿನಲ್ಲಿ ಚುರುಕಾಗಿ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net