ಬಡ್ಡಿ ಸಮೇತ ತೀರಿಸಿದ್ದೇವೆ! ಗೌರವ್ ಗೊಗೊಯ್ ಸೋಲಿಗೆ ಹಿಮಂತ ಖಡಕ್ ಪ್ರತಿಕ್ರಿಯೆ; ಕೈ ನಾಯಕನಿಗೆ ಬಿತ್ತು ಭರ್ಜರಿ ಏಟು! Himanta Biswa Sarma

ಬಡ್ಡಿ ಸಮೇತ ತೀರಿಸಿದ್ದೇವೆ! ಗೌರವ್ ಗೊಗೊಯ್ ಸೋಲಿಗೆ ಹಿಮಂತ ಖಡಕ್ ಪ್ರತಿಕ್ರಿಯೆ; ಕೈ ನಾಯಕನಿಗೆ ಬಿತ್ತು ಭರ್ಜರಿ ಏಟು!
ಬಡ್ಡಿ ಸಮೇತ ತೀರಿಸಿದ್ದೇವೆ! ಗೌರವ್ ಗೊಗೊಯ್ ಸೋಲಿಗೆ ಹಿಮಂತ ಖಡಕ್ ಪ್ರತಿಕ್ರಿಯೆ; ಕೈ ನಾಯಕನಿಗೆ ಬಿತ್ತು ಭರ್ಜರಿ ಏಟು!
Published on
ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 102 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿದೆ. ಈ ಐತಿಹಾಸಿಕ ಜಯದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್(Himanta Biswa Sarma) ವಿರುದ್ಧ ಸಿಎಂ ಹಿಮಂತ ಬಿಸ್ವ ಶರ್ಮಾ ಗುಡುಗಿದ್ದಾರೆ. ನಾವು ಅವರಿಗೆ ಬಡ್ಡಿ ಸಮೇತ ಮರುಪಾವತಿ ಮಾಡಿದ್ದೇವೆ ಎಂದು ಹೇಳುವ ಮೂಲಕ ಶರ್ಮಾ ತಮ್ಮ ಹಳೆಯ ಪ್ರತಿಜ್ಞೆಯನ್ನು ಈಡೇರಿಸಿದ ಸಂಭ್ರಮದಲ್ಲಿದ್ದಾರೆ.

ಜೋರ್ಹತ್‌ನಲ್ಲಿ ಕಾಂಗ್ರೆಸ್ ಭದ್ರಕೋಟೆ ಧೂಳೀಪಟ

ಕಾಂಗ್ರೆಸ್‌ನ ಪ್ರಭಾವಿ ನಾಯಕ ಗೌರವ್ ಗೊಗೊಯ್ ಅವರು ಜೋರ್ಹತ್ ಕ್ಷೇತ್ರದಲ್ಲಿ ಬಿಜೆಪಿಯ ಹಿತೇಂದ್ರ ನಾಥ್ ಗೋಸ್ವಾಮಿ ವಿರುದ್ಧ 23,182 ಮತಗಳ ಬೃಹತ್ ಅಂತರದಿಂದ ಪರಾಭವಗೊಂಡಿದ್ದಾರೆ. ಈ ಸೋಲು ಕೇವಲ ಒಬ್ಬ ನಾಯಕನ ಸೋಲಲ್ಲ, ಬದಲಿಗೆ ಅಸ್ಸಾಂನಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬಿದ್ದ ದೊಡ್ಡ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಇದು ಅಭೂತಪೂರ್ವ ಫಲಿತಾಂಶ. ಅಸ್ಸಾಂನ 126 ಸದಸ್ಯ ಬಲದ ವಿಧಾನಸಭೆಯಲ್ಲಿ 102 ಸ್ಥಾನಗಳನ್ನು ಗೆಲ್ಲುವುದು ಸುಲಭದ ಮಾತಲ್ಲ. ಜನರು ನಮ್ಮ ಮೇಲಿಟ್ಟಿರುವ ಅಪಾರ ನಂಬಿಕೆಗೆ ನಾವು ಆಭಾರಿಗಳಾಗಿದ್ದೇವೆ ಎಂದರು.

ದಾಖಲೆಗಳು ಸುಳ್ಳಲ್ಲ: ಗೊಗೊಯ್ ಕುಟುಂಬದ ವಿರುದ್ಧ ವಾಗ್ದಾಳಿ

ಗೌರವ್ ಗೊಗೊಯ್ ಅವರ ಕುಟುಂಬಕ್ಕೆ ಪಾಕಿಸ್ತಾನದ ನಂಟು ಇದೆ ಎಂಬ ಈ ಹಿಂದಿನ ಆರೋಪಗಳನ್ನು ಶರ್ಮಾ ಪುನರುಚ್ಚರಿಸಿದರು. ನಾವು ಯಾವುದೇ ದಾಖಲೆಗಳನ್ನು ಸೃಷ್ಟಿಸಿಲ್ಲ. ನಾವು ನೀಡಿದ ಪುರಾವೆಗಳನ್ನು ಗೌರವ್ ಗೊಗೊಯ್ ಎಂದೂ ಪ್ರಶ್ನಿಸಲಿಲ್ಲ. ಅವರ ಪತ್ನಿ ಎಲಿಜಬೆತ್ ಕೋಲ್ಬರ್ನ್ ಮತ್ತು ಪಾಕಿಸ್ತಾನದ ಲಿಂಕ್‌ಗಳ ಬಗ್ಗೆ ಎಸ್‌ಐಟಿ ತನಿಖೆಯು ಸ್ಫೋಟಕ ಸತ್ಯಗಳನ್ನು ಹೊರಹಾಕಿದೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಸಂಚು ಇದರ ಹಿಂದಿದೆ ಎಂದು ಹಿಮಂತ ಗಂಭೀರವಾಗಿ ಆರೋಪಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಪಾಕಿಸ್ತಾನದ ಹೈಕಮಿಷನರ್ ಜೊತೆ ಗೌರವ್ ಗೊಗೊಯ್ ನಡೆಸಿದ ಭೇಟಿಯನ್ನು ಉಲ್ಲೇಖಿಸಿದ ಶರ್ಮಾ, ಚುನಾವಣಾ ಅಖಾಡದಲ್ಲಿ ಮತದಾರರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.

ಮತಾತೀತ ಮತದಾನ ಮತ್ತು ಒಗ್ಗಟ್ಟಿನ ಮಂತ್ರ

ವಿರೋಧ ಪಕ್ಷಗಳ ಮತಗಳ ಕಳ್ಳತನ ಎಂಬ ಆರೋಪವನ್ನು ತಳ್ಳಿಹಾಕಿದ ಶರ್ಮಾ, ಬಿಜೆಪಿ ಗೆದ್ದ ರಾಜ್ಯಗಳಲ್ಲಿ ಮಾತ್ರ ಯಾಕೆ ಇಂತಹ ಪ್ರಶ್ನೆಗಳು ಏಳುತ್ತವೆ. ಅಲ್ಲದೆ, ಕೇರಳ ಅಥವಾ ತಮಿಳುನಾಡಿನಲ್ಲಿ ಇಂತಹ ಆರೋಪಗಳು ಏಕೆ ಕೇಳಿಬರುವುದಿಲ್ಲ ಎಂದು ಪ್ರಶ್ನಿಸಿದರು.
ಅಸ್ಸಾಂನಲ್ಲಿ ಜಾತಿ ಮತ್ತು ಧರ್ಮದ ರಾಜಕಾರಣ ಕೊನೆಗೊಂಡಿದೆ ಎಂದು ಪ್ರತಿಪಾದಿಸಿದ ಹಿಮಂತ, ಅಸ್ಸಾಂ ಈಗ ಬಿಜೆಪಿಯನ್ನು ಸತತ ಮೂರು ಬಾರಿ ಗೆಲ್ಲಿಸಿದ ವಿಶೇಷ ರಾಜ್ಯಗಳ ಪಟ್ಟಿಗೆ ಸೇರಿದೆ. ನಾವು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕಾಂಗ್ರೆಸ್ ಗೆದ್ದಿರುವ ಸ್ಥಾನಗಳು ಕೇವಲ ಮುಸ್ಲಿಂ ಮತದಾರರು ಹೆಚ್ಚಿರುವ ಕ್ಷೇತ್ರಗಳಾಗಿವೆ ಎಂದು ವಿಶ್ಲೇಷಿಸಿದ್ದಾರೆ.

ಚುನಾವಣೆ ನಮಗೊಂದು ಹಬ್ಬ

ತಮ್ಮ ಮತ್ತು ಮಾಜಿ ಸಿಎಂ ಸರ್ಬಾನಂದ ಸೋನೋವಾಲ್ ಅವರ ನಡುವಿನ ಉತ್ತಮ ಬಾಂಧವ್ಯವನ್ನು ಸ್ಮರಿಸಿದ ಶರ್ಮಾ, ಅಸ್ಸಾಂನಲ್ಲಿ ನಾವು ಚುನಾವಣೆಯನ್ನು ಒಂದು ಹಬ್ಬದಂತೆ ಆಚರಿಸುತ್ತೇವೆ. ಪ್ರಜಾಪ್ರಭುತ್ವವನ್ನು ನಾವು ಸಂಭ್ರಮಿಸುತ್ತೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಪ್ರತಿಯೊಂದು ಭರವಸೆಯನ್ನು ನಾವು ಅಕ್ಷರಶಃ ಈಡೇರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2021ರಲ್ಲಿ 60 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ತನ್ನ ಸಂಖ್ಯೆಯನ್ನು 82ಕ್ಕೆ ಏರಿಸಿಕೊಂಡಿದೆ. ಮೈತ್ರಿಕೂಟದ ಒಟ್ಟು ಬಲ 102ಕ್ಕೆ ತಲುಪಿದ್ದು, ಕಾಂಗ್ರೆಸ್ ಕೇವಲ 19 ಸ್ಥಾನಗಳಿಗೆ ಕುಸಿತ ಕಂಡಿದೆ. ಈ ಫಲಿತಾಂಶವು ಈಶಾನ್ಯ ಭಾರತದಲ್ಲಿ ಕಾಂಗ್ರೆಸ್‌ನ ಪತನವನ್ನು ಮತ್ತಷ್ಟು ಖಚಿತಪಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net