ಅಧಿವೇಶನದ ಮಧ್ಯೆ ಜರ್ಮನಿಗೆ ಹಾರಿದ ರಾಹುಲ್; ವಿಪಕ್ಷ ನಾಯಕರ ವಿರುದ್ಧ ಮಿತ್ರಪಕ್ಷ ಅಸಮಾಧಾನ | Rahul Germany Trip

Rahul Germany Trip | ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ
Rahul Germany Trip | ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ
Published on
Rahul Germany Trip: ಸಂಸತ್ತಿನ ಚಳಿಗಾಲದ ಅಧಿವೇಶನದ ಮಧ್ಯೆ ಜರ್ಮನಿಗೆ ತೆರಳಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡೆಯನ್ನು ಇಂಡಿಯಾ ಬ್ಲಾಕ್‌ನ ಸದಸ್ಯರಾಗಿರುವ ಸಿಪಿಎಂನ ಜಾನ್ ಬ್ರಿಟ್ಟಾಸ್ ಪ್ರಶ್ನಿಸಿದ್ದಾರೆ.
ಎನ್​ಡಿಟಿವಿಯೊಂದಿಗೆ ಮಾತನಾಡಿದ ಬ್ರಿಟ್ಟಾಸ್, ಚುನಾವಣಾ ಸುಧಾರಣೆಗಳು ಮತ್ತು ಜಿ ರಾಮ್ ಜಿ ಮಸೂದೆಯ ಚರ್ಚೆಯ ಸಮಯದಲ್ಲಿ ರಾಹುಲ್ ಹಾಜರಿರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಸತ್ತಿನ ಚರ್ಚೆಯ ಸಮಯದಲ್ಲಿ ರಾಹುಲ್​ ಉಪಸ್ಥಿತಿಯು ಬೇರೆಯದ್ದೇ ಆದ ಸಂದೇಶ ನೀಡುತ್ತಿತ್ತು, ಈ ವೇಳೆ ನಮ್ಮ ಒಕ್ಕೂಟವನ್ನು ವಿಪಕ್ಷ ನಾಯಕರು ಮುನ್ನಡೆಸುತ್ತಾರೆಂಬ ವಿಶ್ವಾಸವಿತ್ತು, ಅದು ನಮ್ಮ ನಿರೀಕ್ಷೆ, ಬಯಕೆಯಾಗಿತ್ತು, ಕಳೆದ ಮೂರ್ನಾಲ್ಕು ದಶಕಗಳಿಂದ ಸಂಸತ್ತಿನ ಅಧಿವೇಶನಗಳ ಕ್ಯಾಲೆಂಡರ್ ಬಹುತೇಕ ಒಂದೇ ಆಗಿದೆ, ಅಧಿವೇಶನ ಡಿಸೆಂಬರ್ 22 ರ ಸುಮಾರಿಗೆ ಕೊನೆಗೊಳ್ಳುತ್ತದೆ ಎಂದು ಎಲ್ಲರಿಗೂ ಗೊತ್ತಿರುತ್ತದೆ. ಈ ವೇಳೆ ಯಾವುದೇ ಕಾರ್ಯಕ್ರಮವನ್ನು ನಿಗದಿಪಡಿಸಬೇಡಿ ಮತ್ತು ಭಾರತದಲ್ಲಿಯೇ ಇರಿ ಎಂಬ ಮಾತು ಹೇಳಬೇಕೇ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಸಂಸತ್ತಿನಲ್ಲಿ ಇರಬೇಕೇ ಅಥವಾ ಬೇಡವೇ ಎನ್ನುವ ವಿಷಯ ಅವರ ಪಕ್ಷಕ್ಕೆ ಬಿಟ್ಟದ್ದು, ತಮ್ಮ ಕೆಲಸದ ಬಗ್ಗೆ ಗಂಭೀರವಾಗಿದ್ದಾರೆಯೇ ಎಂದು ಪ್ರಶ್ನಿಸಲು ನಾವ್ಯಾರು ಅಲ್ಲ, ಆದರೆ, ನಾವು ಜನರಿಗೆ ಕಳುಹಿಸುವ ಸಂದೇಶ ಒಂದೇ, ವಿರೋಧ ಪಕ್ಷವು ಗಂಭೀರವಾಗಿದೆ, ರಾಹುಲ್ ಗಾಂಧಿಯವರ ಉಪಸ್ಥಿತಿಯಿಂದ ನಿರ್ಧರಿಸಲ್ಪಡುತ್ತದೆ ಎಂದು ನಾನು ಹೇಳುತ್ತಿದ್ದೇನೆ ಎಂದು ಬ್ರಿಟ್ಟಾಸ್​ ತಿಳಿಸಿದರು.

ಬ್ರಿಟ್ಟಾಸ್ ಹಿಂದಿನ ಟೀಕೆಗಳು

ಬ್ರಿಟ್ಟಾಸ್ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ಟೀಕಿಸುತ್ತಿರುವುದು ಇದೇ ಮೊದಲೇನಲ್ಲ. ಜುಲೈನಲ್ಲಿ ಮಾತನಾಡಿದ್ದ ರಾಜ್ಯಸಭಾ ಸದಸ್ಯ, ಇದು ಹಾಸ್ಯಾಸ್ಪದ, ಅಸಂಬದ್ಧ. ರಾಹುಲ್​ ಕೇರಳಕ್ಕೆ ಹೋದಾಗಲೆಲ್ಲಾ ಇಂತಹ ಅಸಂಬದ್ಧ ಮಾತುಗಳನ್ನು ಮಾತನಾಡುವ ಪ್ರವೃತ್ತಿ ಅವರಲ್ಲಿರುತ್ತದೆ. ಅದಕ್ಕೆ ಕೇರಳ ಕಾಂಗ್ರೆಸ್ ಘಟಕವೇ ಕಾರಣ ಎಂಬುದು ನನ್ನ ಭಾವನೆ. ರಾಹುಲ್​ ಆರ್‌ಎಸ್‌ಎಸ್​​ನ್ನು ಎದುರಿಸಲು ಕೇರಳವನ್ನು ಯುದ್ಧಭೂಮಿಯಾಗಿ ಆರಿಸಿಕೊಂಡಿದ್ದಾರೆ, ಆದರೆ, ವಾಸ್ತವವಾಗಿ ಅದು ಎಡಪಂಥೀಯರು ಮತ್ತು ಕಾಂಗ್ರೆಸ್ ನಡುವಿನ ಹೋರಾಟವಾಗಿತ್ತು ಎಂದು ಹೇಳಿದರು.
ಸಂಸತ್ತಿನ ಕಲಾಪವನ್ನು ಆಗಾಗ್ಗೆ ಅಡ್ಡಿಪಡಿಸುವಂತೆ ರಾಹುಲ್ ಗಾಂಧಿ ವಿರೋಧ ಪಕ್ಷದ ಸಂಸದರಿಗೆ ನಿರ್ದೇಶನ ನೀಡಿದ್ದರು ಎಂದು ಆರೋಪಿಸಿದ್ದ ಬ್ರಿಟಾಸ್, ಪ್ರತಿದಿನ ಈ ರೀತಿ ಅಡಚಣೆ ಮಾಡುವುದು ಬಿಜೆಪಿಗೆ ನೆರವಾಗುತ್ತದೆ ಎಂದು ಹೇಳಿದರು.

ಇಂಡಿಯಾ ಕೂಟದಲ್ಲಿ ಬಿರುಕು

ಸಂಸತ್ತಿನಲ್ಲಿ ಮತ್ತು ಇಂಡಿಯಾ ಒಕ್ಕೂಟದಲ್ಲಿ ವಿಪಕ್ಷದ ನಾಯಕರಾಗಿ ಗಾಂಧಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿಲ್ಲ ಎಂದು ಟಿಎಂಸಿ, ಸಮಾಜವಾದಿ ಪಕ್ಷ, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಅವರ ಬಣ)ಯ ನಾಯಕರು ಆರೋಪಿಸಿದ್ದಾರೆ. ಕಾಂಗ್ರೆಸ್ ಪರಿಣಾಮಕಾರಿ ಪ್ರಚಾರವನ್ನು ನಡೆಸಲು, ಸೀಟು ಹಂಚಿಕೆ ಒಪ್ಪಂದಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳಲು ಸಾಧ್ಯವಾಗದಿದ್ದಕ್ಕೆ ಹರಿಯಾಣ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಂತಹ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಹಲವಾರು ಜನ ನಾಯಕರು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net