ರಸ್ತೆ ರಿಪೇರಿ ಬಗ್ಗೆ ಕೇಳಿದ್ದೇ ತಪ್ಪಾಯ್ತಾ? ಯುವಕನ ಮೇಲೆ ಭೀಕರ ಹಲ್ಲೆ; ಮುರಿದ ಹಲ್ಲುಗಳನ್ನೇ ಕೈಗಿಟ್ಟ ಕಿರಾತಕರು! Young Man Attacked

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಾನ್ಪುರ: ಸಾಮಾನ್ಯವಾಗಿ ಊರಿನ ರಸ್ತೆಗಳು ಸರಿಯಿಲ್ಲದಿದ್ದರೆ ನಾವು, ನಮ್ಮೂರಿನಲ್ಲಿ ಒಂದು ರಸ್ತೆ ಸಹ ಸರಿಯಿಲ್ಲ, ಈ ಹಾಳಾದ ಸರ್ಕಾರದವರು ಯಾವ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಎಂದು ಹಿಡಿ ಶಾಪ ಹಾಕುತ್ತೆವೆ. ಆದರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಈ ಘಟನೆ (Young Man Attacked) ನೋಡಿದರೆ, ನೀವು ಇನ್ಮುಂದೆ ರಸ್ತೆ ಬಗ್ಗೆ ಮಾತನಾಡುವ ಮುನ್ನ ನೂರು ಬಾರಿ ಯೋಚಿಸಬೇಕು.
ಏಕೆಂದರೆ, ಇಲ್ಲಿ ಕೆಟ್ಟ ರಸ್ತೆಯ ಬಗ್ಗೆ ಮಾಡಿದ ಒಂದು ಸಣ್ಣ ಹಾಸ್ಯ, ಯುವಕನೊಬ್ಬನ ಮೂರು ಹಲ್ಲುಗಳು ಉದುರುವಂತೆ ಮಾಡಿದೆ. ಅಷ್ಟೇ ಅಲ್ಲ, ಹಲ್ಲೆ ಮಾಡಿದ ಕಿರಾತಕರು ಆ ಮುರಿದ ಹಲ್ಲುಗಳನ್ನೇ ಅವನ ಕೈಗಿಟ್ಟು ಅಣಕಿಸಿರುವ ಕ್ರೌರ್ಯದ ಘಟನೆ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ನಡೆದಿದ್ದೇನು?

ಘಟನೆ ನಡೆದಿದ್ದು ಕಾನ್ಪುರದ ಶಾರದಾ ನಗರ ಪ್ರದೇಶದಲ್ಲಿ. ಇಲ್ಲಿನ ನಿವಾಸಿಯಾದ ಯುವಕನೊಬ್ಬ ಭಾನುವಾರ(ಏ.12) ಸಂಜೆ ಎಂದಿನಂತೆ ಹಾಲು ತರಲು ಹತ್ತಿರದ ಅಂಗಡಿಗೆ ಹೋಗಿದ್ದ. ಆ ಅಂಗಡಿಯ ಮುಂದಿನ ರಸ್ತೆ ಬಹಳ ದಿನಗಳಿಂದ ಗುಂಡಿ ಬಿದ್ದು ಹಾಳಾಗಿತ್ತು. ಹಾಲು ಖರೀದಿಸುವಾಗ ಆತ ಸಹಜವಾಗಿ, ಏನ್ ಸಾಹೇಬ್ರೇ, ರಸ್ತೆ ರಿಪೇರಿ ಆಗುತ್ತಾ ಅಥವಾ ಹೀಗೆ ಇರುತ್ತಾ? ಎಂದು ತಮಾಷೆಯಾಗಿ ಕೇಳಿದ್ದಾನೆ.
ಬಹುಶಃ ಆ ಯುವಕ ಅದು ಇಷ್ಟೊಂದು ದೊಡ್ಡ ವಿವಾದವಾಗುತ್ತದೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಯುವಕನ ಈ ಪ್ರಶ್ನೆ ಅಂಗಡಿಯವನ ಕೆಂಗಣ್ಣಿಗೆ ಗುರಿಯಾಗಿದೆ. ನನ್ನ ಅಂಗಡಿ ಮುಂದಿನ ರಸ್ತೆ ಬಗ್ಗೆ ಕೇಳಲು ನೀನು ಯಾರು? ಎಂದು ಶುರುವಾದ ಮಾತಿನ ಚಕಮಕಿ ನೋಡನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿದೆ.

ಅಂಗಡಿಯೊಳಗೆ ಅಮಾನವೀಯ ಹಲ್ಲೆ

ಮಾತು ಬೆಳೆಯುತ್ತಿದ್ದಂತೆ ಅಂಗಡಿಯವ ಮತ್ತು ಆತನ ಮಗ ಸೇರಿ ಯುವಕನ ಮೇಲೆ ಮುಗಿಬಿದ್ದಿದ್ದಾರೆ. ಆರೋಪಗಳ ಪ್ರಕಾರ, ಆತನನ್ನು ಬಲವಂತವಾಗಿ ಅಂಗಡಿಯೊಳಗೆ ಎಳೆದುಕೊಂಡು ಹೋಗಿ ಶಟರ್ ಎಳೆಯಲಾಗಿದೆ. ಅಲ್ಲಿ ಆತನನ್ನು ಮನಬಂದಂತೆ ಕೋಲುಗಳಿಂದ ಥಳಿಸಲಾಗಿದೆ. ಹಲ್ಲೆಯ ತೀವ್ರತೆ ಎಷ್ಟಿತ್ತೆಂದರೆ, ಯುವಕನ ಮುಖಕ್ಕೆ ಬಲವಾದ ಪೆಟ್ಟು ಬಿದ್ದು ಆತನ ಮುಂದಿನ ಮೂರು ಹಲ್ಲುಗಳು ಸ್ಥಳದಲ್ಲೇ ಮುರಿದು ಬಿದ್ದಿವೆ.

ಇಗೋ ನಿನ್ನ ಹಲ್ಲು, ಹೋಗಿ ಕೇಸ್ ಹಾಕೋ!

ಈ ಘಟನೆಯಲ್ಲಿ ಹಲ್ಲೆಗಿಂತಲೂ ಹೆಚ್ಚು ಆಘಾತ ತಂದಿದ್ದು ಆರೋಪಿಗಳ ವಿಕೃತ ಮನಸ್ಥಿತಿ. ಯುವಕ ರಕ್ತಸಿಕ್ತವಾಗಿ ಬಿದ್ದಿದ್ದರೂ ಸುಮ್ಮನಾಗದ ಆರೋಪಿಗಳು, ನೆಲದ ಮೇಲೆ ಬಿದ್ದಿದ್ದ ಆತನ ಮುರಿದ ಹಲ್ಲುಗಳನ್ನು ಆರಿಸಿಕೊಟ್ಟಿದ್ದಾರೆ. "ನೋಡು, ಈಗ ನಿನ್ನ ರಸ್ತೆ ನಿರ್ಮಾಣವಾಯಿತು (ರಸ್ತೆ ರಿಪೇರಿಯಾಯಿತು). ಈ ಹಲ್ಲುಗಳನ್ನು ತಗೊಂಡು ಹೋಗಿ ಎಫ್‌ಐಆರ್ ದಾಖಲಿಸು" ಎಂದು ಕ್ರೂರವಾಗಿ ಅಣಕಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಅಲೆ

ಈ ಘಟನೆಯ ಫೋಟೋಗಳು ಮತ್ತು ವಿವರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದು ಸಣ್ಣ ಹಾಸ್ಯಕ್ಕೆ ಇಷ್ಟೊಂದು ದೊಡ್ಡ ಶಿಕ್ಷೆಯೇ?, ಇದು ಮನುಷ್ಯರ ನಾಡು ಹೌದೋ ಅಲ್ವೋ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net