ಆಶಿಶ್ ಬ್ಯಾನರ್ಜಿ ಸಾವಿನ ರಹಸ್ಯ: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಸಿಎಂ ಸುವೇಂದು ಅಧಿಕಾರಿ! | Asish Banerjee Death

Asish Banerjee Death > ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಸಿಎಂ ಸುವೇಂದು ಅಧಿಕಾರಿ!
Asish Banerjee Death > ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಸಿಎಂ ಸುವೇಂದು ಅಧಿಕಾರಿ!
Published on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭೆಯ ಮಾಜಿ ಉಪಸಭಾಧ್ಯಕ್ಷ ಹಾಗೂ ತೃಣಮೂಲ ಕಾಂಗ್ರೆಸ್​​ನ ಹಿರಿಯ ನಾಯಕ ಆಶಿಶ್ ಬ್ಯಾನರ್ಜಿ ಅವರ ಸಾವಿನ (Asish Banerjee Death) ಕುರಿತು ವಿವರವಾದ ತನಿಖೆಗೆ ಆಗ್ರಹಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಬ್ಯಾನರ್ಜಿ ಅವರಿಗೆ ಯಾರಾದರೂ ಬೆದರಿಕೆ ಹಾಕಿದ್ದರೇ ಅಥವಾ ಬ್ಲ್ಯಾಕ್‌ಮೇಲ್ ಮಾಡಿದ್ದರೇ ಎಂಬುದನ್ನು ಪೊಲೀಸರು ವಿಚಾರಣೆ ನಡೆಸಬೇಕು ಎಂದು ಸೂಚಿಸಿದ್ದಾರೆ.

2001 ರಿಂದ ಸತತ 25 ವರ್ಷಗಳ ಕಾಲ ರಾಂಪುರ್‌ಹಾಟ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಐದು ಬಾರಿಯ ಶಾಸಕರಾದ ಬ್ಯಾನರ್ಜಿ ಅವರು ಭಾನುವಾರ ಬೀರ್‌ಭೂಮ್ ಜಿಲ್ಲೆಯ ಟಿಎಮ್‌ಸಿ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಚೇರಿಯಿಂದ ವಶಪಡಿಸಿಕೊಂಡ ಡೆತ್ ನೋಟ್‌ನಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಲಾಗಿದೆ. ಜೊತೆಗೆ ಭ್ರಷ್ಟಾಚಾರದ ಆರೋಪಗಳ ವಿರುದ್ಧ ತಮ್ಮ ನಿಷ್ಕಳಂಕತೆಯನ್ನು ಸಮರ್ಥಿಸಿಕೊಂಡಂತೆ ಕಂಡುಬಂದಿದೆ. ಈ ನೋಟ್‌ನ ಅಧಿಕೃತತೆ ಮತ್ತು ಹಸ್ತಾಕ್ಷರವನ್ನು ವಿಧಿವಿಜ್ಞಾನ (ಫೊರೆನ್ಸಿಕ್) ಪರೀಕ್ಷೆಯ ಮೂಲಕ ಪರಿಶೀಲಿಸಲಾಗುವುದು ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.
ರಾಜ್ಯ ಸಚಿವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸುವೇಂದು ಅಧಿಕಾರಿ, ಸಾವಿನ ಕುರಿತು ಹಾಗೂ ಅದಕ್ಕೆ ಕಾರಣವಾದ ಸಾಧ್ಯತೆಗಳ ಬಗ್ಗೆ ನಾನು ಪೊಲೀಸ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

ಯಾರಾದರೂ ಕಿರುಕುಳ ನೀಡಿದ್ದರೇ..?

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಬ್ಯಾನರ್ಜಿ ಅವರ ಕುಟುಂಬದ ಜೊತೆ ಮಾತನಾಡಿ, ನಿಮಗೆ ಯಾರಾದರೂ ಕಿರುಕುಳ ನೀಡಿದ್ದರೇ..? ಎಂದು ವಿಚಾರಿಸಿದ್ದಾರೆ. ಆದರೆ, ಕುಟುಂಬದವರು ಅಂತಹ ಯಾವುದೇ ಕಿರುಕುಳ ಆಗಿಲ್ಲ ಎಂದು ಹೇಳಿದ್ದಾರೆ. ಆದರೂ ತನಿಖಾಧಿಕಾರಿಗಳು ಇದನ್ನು ನಿರ್ಲಕ್ಷಿಸಬಾರದು, ವಿಶೇಷವಾಗಿ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಗುಂಪಿನಿಂದ ಮಾಜಿ ಶಾಸಕರು ದೂರವಾದ ನಂತರ, ಟಿಎಮ್‌ಸಿಯ ಭ್ರಷ್ಟ ಜನರ ಬೆದರಿಕೆ ಬ್ಯಾನರ್ಜಿ ಅವರಿಗೆ ಬಂದಿರಬಹುದು ಎಂಬ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಸುವೇಂದು ಹೇಳಿದ್ದಾರೆ.
ಬ್ಯಾನರ್ಜಿ ಅವರ ಮೊಬೈಲ್ ಫೋನ್‌ಗಳನ್ನು ಪೊಲೀಸರಿಗೆ ನೀಡುವಂತೆ ಕುಟುಂಬಕ್ಕೆ ಸುವೇಂದು ಅಧಿಕಾರಿ ಸಲಹೆ ನೀಡಿದ್ದಾರೆ. ಕರೆ ದಾಖಲೆ ಹಾಗೂ ಸಂದೇಶಗಳನ್ನು ಪರಿಶೀಲಿಸಿದರೆ ಅವರಿಗೆ ಬೆದರಿಕೆ ಬಂದಿತ್ತೇ ಎಂಬುದು ಸ್ಪಷ್ಟವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಮ್‌ಸಿ ಮುಖಭಂಗ ಅನುಭವಿಸಿದ ಬಳಿಕ ಮಮತಾ ಬ್ಯಾನರ್ಜಿ ರಚಿಸಿದ್ದ ಸಮಿತಿಗೆ ಆಶಿಶ್ ಬ್ಯಾನರ್ಜಿ ರಾಜೀನಾಮೆ ನೀಡಿದ್ದರು. ಈ ರೀತಿ ಅವರು ರಾಜಕೀಯವಾಗಿ ಕಾಯ್ದುಕೊಂಡಿದ್ದ ಅಂತರವು ತನಿಖೆಯ ದೃಷ್ಟಿಯಿಂದ ಮಹತ್ವದ ಅಂಶವಾಗಬಹುದು ಎಂದು ಸುವೇಂದು ಅಧಿಕಾರಿ ಸುಳಿವು ನೀಡಿದ್ದಾರೆ.
ಸುವೇಂದು ಅಧಿಕಾರಿ ಆಶಿಶ್ ಬ್ಯಾನರ್ಜಿ ಅವರನ್ನು ಪ್ರಾಮಾಣಿಕ ಮತ್ತು ಸಭ್ಯ ನಾಯಕ ಎಂದು ಬಣ್ಣಿಸಿದ್ದು, ರಾಜಕೀಯವಾಗಿ ವಿರೋಧಿಗಳಾಗಿದ್ದರೂ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿತ್ತು. 2006 ರಲ್ಲಿ ಅತ್ಯಂತ ಕಡಿಮೆ ಟಿಎಂಸಿ ಶಾಸಕರಿದ್ದಾಗ ಅವರಲ್ಲಿ ಬ್ಯಾನರ್ಜಿ ಮತ್ತು ನಾನು ಇದ್ದೆವು. ಅವರ ಸಾವಿನ ಘಟನೆ ತುಂಬಾ ನೋವು ತಂದಿದೆ ಎಂದು ಸುವೇಂದು ಹೇಳಿದ್ದಾರೆ. ಬ್ಯಾನರ್ಜಿ ಅವರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಎಲ್ಲರೊಂದಿಗೂ ಚೆನ್ನಾಗಿದ್ದರು ಎಂದು ಅವರ ಕುಟುಂಬ ಹೇಳಿದೆ. ಚುನಾವಣೆಯಲ್ಲಿ ಬ್ಯಾನರ್ಜಿ ಅವರನ್ನು ಸೋಲಿಸಿದ ಮೇಲೂ ಬಿಜೆಪಿ ಶಾಸಕ ಧ್ರುವ ಸಹಾ ಅವರು ಬ್ಯಾನರ್ಜಿ ಆಶೀರ್ವಾದ ಪಡೆಯಲು ಹೋಗಿದ್ದನ್ನು ಸುವೇಂದು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net