ಇಂದಿರಾ ಗಾಂಧಿ ಹತ್ಯೆಯ ಅಪರಾಧಿ ಪುತ್ರನಿಗೆ ಪಂಜಾಬ್ ಎಲೆಕ್ಷನ್ ಟಿಕೆಟ್: ತ್ಯಾಗ ಮಾಡಿದ ಕುಟುಂಬಕ್ಕೆ ಮನ್ನಣೆ ಎಂದ ಪಕ್ಷ! | Punjab Politics

Punjab Politics | ಇಂದಿರಾ ಗಾಂಧಿ ಹತ್ಯೆಯ ಅಪರಾಧಿ ಪುತ್ರನಿಗೆ ಪಂಜಾಬ್ ಎಲೆಕ್ಷನ್ ಟಿಕೆಟ್
Punjab Politics | ಇಂದಿರಾ ಗಾಂಧಿ ಹತ್ಯೆಯ ಅಪರಾಧಿ ಪುತ್ರನಿಗೆ ಪಂಜಾಬ್ ಎಲೆಕ್ಷನ್ ಟಿಕೆಟ್
Published on

ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ (Punjab Politics) ಅಕಾಲಿದಳ ವಾರಿಸ್ ಪಂಜಾಬ್ ದೇ ಪಕ್ಷವು ತನ್ನ ಮೊದಲ ಅಭ್ಯರ್ಥಿಯನ್ನು ಘೋಷಿಸಿದ್ದು, ಇಂದಿರಾ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಕೇಹರ್ ಸಿಂಗ್ ಅವರ ಪುತ್ರ ಸತ್ವಂತ್ ಸಿಂಗ್‌ಗೆ ಬಸ್ಸಿ ಪಠಾಣಾ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಸಿಖ್ ಸಮುದಾಯಕ್ಕಾಗಿ ತ್ಯಾಗ ಮಾಡಿದ ಕುಟುಂಬಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿದ್ದು, ಈ ನಡೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಖಲಿಸ್ತಾನ್ ಚಳವಳಿಗೆ ಬೆಂಬಲ ನೀಡಿದ ಆರೋಪದ ಮೇಲೆ 2023 ರಿಂದ ಜೈಲಿನಲ್ಲಿರುವ ಖಡೂರ್ ಸಾಹಿಬ್ ಸಂಸದ ಅಮೃತಪಾಲ್ ಸಿಂಗ್ ತಂದೆ ತರ್ಸೇಮ್ ಸಿಂಗ್ ಈ ಮಹತ್ವದ ಘೋಷಣೆ ಮಾಡಿದ್ದು, ಅಮೃತಸರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತರ್ಸೇಮ್, ಅಕಾಲಿದಳ ವಾರಿಸ್ ಪಂಜಾಬ್ ದೇ ರಾಜಕೀಯವು ಕೇವಲ ಅಧಿಕಾರವನ್ನು ಹಿಡಿಯುವುದಕ್ಕಷ್ಟೆ ಸೀಮಿತವಾಗಿಲ್ಲ. ಪಂಥಿಕ್ ತತ್ವಗಳು, ಪಂಜಾಬಿನ ಹಕ್ಕುಗಳು ಮತ್ತು ಸಿಖ್ ಸಮುದಾಯಕ್ಕಾಗಿ ತ್ಯಾಗ ಮಾಡಿದ ಕುಟುಂಬಗಳ ಗೌರವವನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದರು.
ಕೆಲವು ದಿನಗಳ ಹಿಂದೆ ವಾರಿಸ್ ಪಂಜಾಬ್ ದೇ ಸಂಘಟನೆಯು ಕೌಟುಂಬಿಕ ತ್ಯಾಗ ಮಾಡಿದವರನ್ನು ಮೂಲೆಗುಂಪು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪಕ್ಕೆ ತಿರುಗೇಟು ನೀಡುವಂತೆ ಪಕ್ಷವು ಹುತಾತ್ಮ ಕುಟುಂಬದ ಸದಸ್ಯರೊಬ್ಬರಿಗೆ ತನ್ನ ಮೊದಲ ಟಿಕೆಟ್ ನೀಡುವ ಮೂಲಕ ಈ ವದಂತಿಗಳನ್ನೆಲ್ಲಾ ಆರಂಭದಲ್ಲೇ ತಳ್ಳಿಹಾಕಿದೆ. ಹುತಾತ್ಮ ಕುಟುಂಬಗಳಿಗೆ ನೀಡುವ ಗೌರವವು ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಅವರಿಗೆ ಪಕ್ಷದ ಜವಾಬ್ದಾರಿಗಳಲ್ಲಿಯೂ ಅರ್ಹ ಸ್ಥಾನವನ್ನು ನೀಡಲಾಗುತ್ತಿದೆ ಎಂದು ತರ್ಸೇಮ್ ಸಿಂಗ್ ಸ್ಪಷ್ಟಪಡಿಸಿದ್ದಾರೆ,.

ಪಂಜಾಬ್ ಚುನಾವಣೆಯ ಮೇಲೆ ಬೀರುವ ಪರಿಣಾಮವೇನು..?

ಬಸ್ಸಿ ಪಠಾಣಾ ಕ್ಷೇತ್ರದಲ್ಲಿ ಸತ್ವಂತ್ ಸಿಂಗ್​ರನ್ನು ಕಣಕ್ಕಿಳಿಸಿರುವುದು ಪಂಥಿಕ್ ಮತಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದಾಗ್ಯೂ, ಇಂದಿರಾ ಗಾಂಧಿಯವರ ಹತ್ಯೆಯ ಹಿನ್ನೆಲೆ ಹೊಂದಿರುವ ಕುಟುಂಬದವರನ್ನು ಚುನಾವಣೆಗೆ ತಂದಿರುವುದು ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ. ಪಕ್ಷದ ಬೆಂಬಲಿಗರು ಇದನ್ನು ಪಂಥಿಕ್ ಭಾವನೆ ಮತ್ತು ಸತ್ಕಾರ ಎಂದು ಬಣ್ಣಿಸಿದರೆ, ವಿರೋಧಿಗಳು ಇಂದಿರಾ ಗಾಂಧಿಯವರ ಹತ್ಯೆಯ ಕಪ್ಪು ಚರಿತ್ರೆಯನ್ನು ಪ್ರಶ್ನಿಸುವ ಸಾಧ್ಯತೆಯಿದೆ.
2027ರ ಆರಂಭದಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ಜೊತೆಗೆ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದೆ. ಕಳೆದ 2022 ರ ಸಾರ್ವತ್ರಿಕ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 117 ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳನ್ನು ಗೆದ್ದು ಅಭೂತಪೂರ್ವ ಜಯ ಗಳಿಸಿದ್ದರೆ, ಕಾಂಗ್ರೆಸ್ 18 ಸ್ಥಾನಗಳಿಗೆ ಕುಸಿದಿತ್ತು. ಪ್ರಸ್ತುತ ವಾರಿಸ್ ಪಂಜಾಬ್ ದೇ ಕೈಗೊಂಡಿರುವ ಈ ನಡೆ ಎದುರಾಗಲಿರುವ ಚುನಾವಣೆಯಲ್ಲಿ ಧಾರ್ಮಿಕ ಮತ್ತು ರಾಜಕೀಯ ಸಮೀಕರಣಗಳನ್ನು ಹೇಗೆ ಬದಲಾಯಿಸಲಿದೆ ಎಂಬುದನ್ನು ನಾವೆಲ್ಲಾ ಕಾದುನೋಡಬೇಕಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net