_1774117486712.webp?w=480&auto=format%2Ccompress&fit=max)
_1774117486712.webp?w=480&auto=format%2Ccompress&fit=max)
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದು ಹೌದು. ಆದರೆ, ಎಲ್ಪಿಜಿ, ಕಚ್ಚಾ ತೈಲ ಮಾತ್ರವಲ್ಲದೆ ಇತರ ರಂಗಗಳಿಗೂ ಯುದ್ಧದ ಬಿಸಿ ತಟ್ಟಿದೆ. ಪೂರೈಕೆ ಸರಪಳಿಯಲ್ಲಿ ತಡೆಯುಂಟಾಗಿದೆ. ಆತಿಥ್ಯ ಉದ್ಯಮದ ಪ್ರಮುಖ ಭಾಗವಾಗಿರುವ ಹೋಟೆಲ್ಗಳು ಹಲವೆಡೆ ವಹಿವಾಟು ನಿಲ್ಲಿಸಿವೆ. ರೆಸಾರ್ಟ್, ಹೋಮ್್ಟೇಗಳು ಭಣಗುಡುತ್ತಿವೆ. ಫ್ಯಾಬ್ರಿಕೇಶನ್, ರಾಸಾಯನಿಕ ಉತ್ಪಾದನೆಯ ಉದ್ಯಮಗಳಿಗೆ ತೊಂದರೆಯಾಗಿದೆ. ಕೊಲ್ಲಿ ರಾಷ್ಟ್ರಗಳಿಗೆ ಭಾರತದಿಂದ ಆಗುತ್ತಿದ್ದ ರಫ್ತಿಗೆ ತಡೆಯಾಗಿದೆ. ಕಾಫಿ ಉದ್ಯಮ ತಲ್ಲಣಗೊಂಡಿದೆ. ವಿಮಾನ ಪ್ರಯಾಣ ದರ ಏರಿಕೆಯಾಗಿದೆ. ಹೂಡಿಕೆದಾರರು ಕೂಡ ಸದ್ಯ ಹೂಡಿಕೆಯಿಂದ ಹಿಂದೆ ಸರಿದಿದ್ದು, ಒಟ್ಟಾರೆ ವಿತ್ತ ಕ್ಷೇತ್ರದ ಮೇಲೆ ಯುದ್ಧದ ಗ್ರಹಣ ದಟ್ಟವಾಗಿ ಕವಿದಿದೆ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಅಥವಾ ಯುದ್ಧದ ಪರಿಣಾಮವು ಕೇವಲ ಆ ಮೂರು ದೇಶಗಳಿಗೆ ಸೀಮಿತವಾಗಿಲ್ಲ. ಹಲವು ದೇಶಗಳ ಮೇಲೆ ಪರಿಣಾಮವಾಗುತ್ತಿದೆ. ಆದರೆ, ಮೇಲ್ನೋಟಕ್ಕೆ ಕಚ್ಚಾ ತೈಲ ಮತ್ತು ಎಲ್ಪಿಜಿ ಸಮಸ್ಯೆ ಮಾತ್ರ ಗಮನ ಸೆಳೆಯುತ್ತಿದ್ದು, ಯುದ್ಧದಿಂದ ಆಹಾರ, ಜವಳಿ, ಆಭರಣ, ಕೃಷಿ, ಆತಿಥ್ಯ, ಪ್ರವಾಸೋದ್ಯಮ ಸೇರಿದಂತೆ ಹಲವು ರಂಗಗಳು ಸಂಕಷ್ಟಕ್ಕೆ ಈಡಾಗಿವೆ. ಈ ಸಂಘರ್ಷವು ಭಾರತದ ಸಾಮಾನ್ಯ ಜನರ ಜೇಬಿಗೆ ನಷ್ಟ ಉಂಟು ಮಾಡಿರುವುದು ಸೇರಿದಂತೆ, ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯ ವೇಗವನ್ನು ಕುಂಠಿತಗೊಳಿಸುತ್ತಿದೆ ಎಂಬುದು ವಾಸ್ತವ. ಹೊಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಈಗಾಗಲೇ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 108-110 ಡಾಲರ್ಗೆ ತಲುಪಿದೆ. ಯುದ್ಧಾರಂಭವಾಗುವ ಮುನ್ನ ಇದು ಪ್ರತಿ ಬ್ಯಾರೆಲ್ಗೆ 70-73 ಡಾಲರ್ ಇತ್ತು. ಗೃಹಬಳಕೆಯ ಸಿಲಿಂಡರ್ ಬೆಲೆಯನ್ನು ಮಾರ್ಚ್ 7ರಿಂದ ಅನ್ವಯವಾಗುವಂತೆ 60 ರೂ. ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 115 ರೂ. ಹೆಚ್ಚಿಸಲಾಗಿದೆ. ಇದು ಮಧ್ಯಮವರ್ಗದವರ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಅಡುಗೆಮನೆ ಬಜೆಟ್ ಕೂಡ ಕೈಗೆಟುಕದಂತಾಗಿದೆ.
ವಾಣಿಜ್ಯ ಸಿಲಿಂಡರ್ಗಳ ಕೊರತೆಯಿಂದ ದೊಡ್ಡ ಸಮೂಹಗಳ ಹೋಟೆಲ್ಗಳಿಂದ ಹಿಡಿದು ಸಣ್ಣ ದರ್ಶಿನಿಯಂಥ ಹೋಟೆಲ್ಗಳು ಕಾರ್ಯಾಚರಣೆಯನ್ನು ಕ್ರಮೇಣ ನಿಲ್ಲಿಸುತ್ತಿವೆ. ಕೆಲ ಹೋಟೆಲ್ಗಳು ದಿನದ ಕೆಲವೇ ಗಂಟೆಗಳ ಕಾಲ ಸೇವೆ ನೀಡುತ್ತಿದ್ದರೂ, ಇಡ್ಲಿ, ದೋಸೆಯಿಂದ ಹಿಡಿದು ಚಹಾ, ಕಾಫಿವರೆಗೆ ಎಲ್ಲ ಖಾದ್ಯ, ಪಾನೀಯಗಳ ದರಗಳನ್ನು ಹೆಚ್ಚಿಸಲಾಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ. ಗಾಯದ ಮೇಲೆ ಬರೆ ಎಂಬಂತೆ ಆಹಾರ ಪೂರೈಕೆ ವೇದಿಕೆ ಜೊಮ್ಯಾಟೋ ಪ್ಲಾಟ್ಫಾಮ್ರ್ ಶುಲ್ಕವನ್ನು ಪ್ರತಿ ಆರ್ಡರ್ಗೆ 12.50 ರೂ.ನಿಂದ 14.90 ರೂ.ಗೆ ಹೆಚ್ಚಿಸಿದೆ. ಇದರಿಂದ, ಆನ್ಲೈನ್ ಮೂಲಕ ಆಹಾರ ತರಿಸಿಕೊಳ್ಳುವುದು ದುಬಾರಿಯಾಗಿ ಪರಿಣಮಿಸಿದೆ.
ಜೂನ್ನಲ್ಲಿ ಮುಂಗಾರು ಆರಂಭವಾಗುವ ಮುನ್ನವೇ ಯೂರಿಯಾ ದಾಸ್ತಾನು ಮಾಡಿಕೊಳ್ಳುವುದು ವಾಡಿಕೆ ಮತ್ತು ಮುಂಗಾರು ಹಂಗಾಮಿನಲ್ಲಿ ಸಕಾಲಿಕವಾಗಿ ಬಿತ್ತನೆ ನಡೆಯಲು ಇದು ಅಗತ್ಯ ಕೂಡ ಹೌದು. ಆದರೆ, ಯುದ್ಧದಿಂದ ರಸಗೊಬ್ಬರಕ್ಕೂ ಪರದಾಡುವಂತಾಗಿದೆ. ಜಾಗತಿಕವಾಗಿ ಮಾರಾಟವಾಗುವ ಯೂರಿಯಾದ ಶೇಕಡ 10ರಷ್ಟನ್ನು ಕತಾರ್ ದೇಶವೊಂದೇ ಉತ್ಪಾದಿಸುತ್ತದೆ. ಆದರೆ, ಇರಾನ್ ನಡೆಸುತ್ತಿರುವ ದಾಳಿಗಳಿಂದ ಕತಾರ್ನ ಯೂರಿಯಾ ತಯಾರಿಕೆಯ ಹಲವು ಘಟಕಗಳು ಮುಚ್ಚಿದ್ದು, ಉತ್ಪಾದನೆ ಸ್ಥಗಿತಗೊಂಡಿದೆ. ಭಾರತದಲ್ಲಿ ಪ್ರತಿ ವರ್ಷ ಕೃಷಿ ಉಪಯೋಗಕ್ಕಾಗಿ 350 ಲಕ್ಷ ಟನ್ ಯೂರಿಯಾ ಬಳಸಲಾಗುತ್ತದೆ. ಈ ಪೈಕಿ ಶೇಕಡ 25 ಆಮದಿನ ಮೂಲಕವೇ ಭಾರತಕ್ಕೆ ಬರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ರಸಗೊಬ್ಬರದ ಕೊರತೆ ತೀವ್ರವಾಗಿ ಕಾಡುವ ಮತ್ತು ಬೆಲೆಯೇರಿಕೆ ಆಗುವ ಆತಂಕ ಹೆಚ್ಚಿದೆ.
ಇರಾನ್ ಯುದ್ಧದ ಬಳಿಕ ಮಧ್ಯಪ್ರಾಚ್ಯದ ವಾಯುಪ್ರದೇಶ ಅಸ್ಥಿರಗೊಂಡಿದೆ. ಇದರಿಂದ, ಏರ್ಲೈನ್ಸ್ಗಳು ಮಾರ್ಗ ಬದಲಿಸಿವೆ. ಹಲವು ವಿಮಾನಗಳು ಇರಾನ್ ಮತ್ತು ಸುತ್ತಮುತ್ತಲಿನ ಉದ್ವಿಗ್ನ ವಾಯುಕ್ಷೇತ್ರವನ್ನು ಬಳಸದೆ ದೀರ್ಘ ದೂರ ಕ್ರಮಿಸುತ್ತಿವೆ. ಪರಿಣಾಮ, ಇಂಧನ ವೆಚ್ಚ, ಪ್ರಯಾಣದ ಸಮಯ ಮತ್ತು ವಿಮೆ ದರ ಹೆಚ್ಚಳವಾಗಿದೆ. ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಕಂಪನಿಗಳು ಟಿಕೆಟ್ ದರವನ್ನು ಹೆಚ್ಚಿಸಿದ್ದು, ಪ್ರಯಾಣಿಕರ ಮೇಲೆ ಭಾರ ಬಿದ್ದಿದೆ. ಅಲ್ಲದೆ, ಮಧ್ಯಪ್ರಾಚ್ಯಕ್ಕೆ ಪ್ರಯಾಣ ಬೆಳೆಸಬೇಕಿದ್ದ ಹಲವು ವಿಮಾನಗಳು ಉದ್ವಿಗ್ನತೆ ಹಿನ್ನೆಲೆಯಲ್ಲಿ ಸಂಚಾರ ರದ್ದುಗೊಳಿಸಿದ್ದರಿಂದ, ಪ್ರಯಾಣಿಕರು ಪರದಾಡುವಂತಾಯಿತು. ಗಲ್ಪ್ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರು ಕೂಡ ತೊಂದರೆ ಎದುರಿಸುವಂತಾಯಿತು. ಯುದ್ಧ ಮುಂದುವರಿದಿರುವುದರಿಂದ ವಿಮಾನಯಾನ ಕ್ಷೇತ್ರ ಇನ್ನಷ್ಟು ಬಿಕ್ಕಟ್ಟು ಎದುರಿಸಲಿದ್ದು, ಅಂತಾರಾಷ್ಟ್ರೀಯ ಪ್ರಯಾಣ ತುಟ್ಟಿಯಾಗಲಿದೆ.
ತೈಲ ಬೆಲೆ ಹೆಚ್ಚಾದಾಗ ಭಾರತವು ಡಾಲರ್ ರೂಪದಲ್ಲಿ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಇದರಿಂದ ಭಾರತೀಯ ರೂಪಾಯಿಯ ಮೌಲ್ಯ ಡಾಲರ್ ಎದುರು ಕುಸಿಯುತ್ತಿದೆ. ಇದು ದೇಶದ ಹಣದುಬ್ಬರ ಹೆಚ್ಚಾಗಲು ಕಾರಣ ವಾಗಿ, ದಿನಬಳಕೆಯ ಎಲ್ಲ ವಸ್ತುಗಳ ಬೆಲೆ ಏರಿಕೆಯಾ ಗುತ್ತದೆ. ಯುದ್ಧ ಆರಂಭವಾಗುವ ಮುನ್ನ ಡಾಲರ್ ಎದುರು ರೂಪಾಯಿ ಮೌಲ್ಯ 90-91 ರೂ. ಇದ್ದದ್ದು, ಪ್ರಸ್ತುತ 93.70 ರೂ.ಗೆ ತಲುಪಿದೆ.
ಜಾಗತಿಕ ಅನಿಶ್ಚಿತತೆಯಿಂದಾಗಿ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ತೀವ್ರವಾಗಿ ಕುಸಿದಿವೆ. ಯುದ್ಧದ ಕಾರಣದಿಂದ ಕಳೆದ ಮೂರು ವಾರದಲ್ಲಿ ಭಾರತೀಯ ಷೇರುಪೇಟೆ ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸಿದೆ. ಯುದ್ಧಾರಂಭದಿಂದ ಈವರೆಗೆ ಹೂಡಿಕೆದಾರರ 30-34 ಲಕ್ಷ ಕೋಟಿ ರೂಪಾಯಿ ಸಂಪತ್ತು ಕರಗಿದೆ. ಕಳೆದ ಮೂರು ವಾರಗಳಲ್ಲೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಷೇರುಪೇಟೆಯಿಂದ 52 ಸಾವಿರ ಕೋಟಿ ರೂ. ಹಿಂಪಡೆದಿದ್ದಾರೆ.
ಭಾರತವು ಇರಾನ್ಗೆ ಅತಿ ಹೆಚ್ಚು ಬಾಸ್ಮತಿ ಅಕ್ಕಿ, ಟೀ, ಕಾಫಿ ಮತ್ತು ಸಕ್ಕರೆಯನ್ನು ರಫ್ತು ಮಾಡುತ್ತದೆ. ಯುದ್ಧದಿಂದ ಈ ರಫ್ತು ಪ್ರಮಾಣ ಕುಸಿತಗೊಂಡಿದ್ದು, ಭಾರತೀಯ ರೈತರು ಮತ್ತು ರಫ್ತುದಾರರಿಗೆ ಭಾರಿ ನಷ್ಟವಾಗುತ್ತಿದೆ. ಭಾರತವು ಇರಾನ್ಗೆ ದೊಡ್ಡ ಪ್ರಮಾಣದ ಔಷಧಗಳನ್ನು ಕೂಡ ರಫ್ತು ಮಾಡುತ್ತದೆ. ಇದಕ್ಕೂ ಹೊಡೆತ ಬಿದ್ದಿದೆ.
ಏಪ್ರಿಲ್ ಆರಂಭದಿಂದಲೇ ಪ್ಲಾಸ್ಟಿಕ್ ಉತ್ಪನ್ನಗಳ ಬೆಲೆ ಶೇಕಡ 50-60ರಷ್ಟು ಹೆಚ್ಚುವ ಸಾಧ್ಯತೆ ಇದೆ. ಕಚ್ಚಾ ತೈಲ ಹಾಗೂ ಗ್ಯಾಸ್ನಿಂದ ತಯಾರಿಸಲಾಗುವ ಪಾಲಿಮರ್ಗಳ ಬೆಲೆ ಕಳೆದ ಕೆಲ ದಿನಗಳಲ್ಲೇ ಶೇ. 50-60ರಷ್ಟು ಹೆಚ್ಚಳಗೊಂಡಿದೆ. ಪೆಟ್ರೋಕೆಮಿಕಲ್ ಪೂರೈಕೆ ಜಾಲದ ಮೇಲೂ ವ್ಯತಿರಿಕ್ತ ಪರಿಣಾಮವಾಗಿದೆ. ಪಾಲಿಪ್ರಾಪಲಿನ್ (ಪಿಪಿ), ಹೈ ಡೆನ್ಸಿಟಿ ಪಾಲಿ ಎಥಿಲಿನ್, ಲಿನಿಯರ್ ಲೋ ಡೆನ್ಸಿಟಿ ಪಾಲಿ ಎಥಿಲಿನ್ ಬೆಲೆಗಳು ಶೇ. 68ರಿಂದ 78ರವರೆಗೆ ಏರಿಕೆ ಕಂಡಿವೆ.
ಕೊಲ್ಲಿ ರಾಷ್ಟ್ರಗಳಲ್ಲಿ 90 ಲಕ್ಷಕ್ಕೂ ಹೆಚ್ಚು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಯುದ್ಧದ ತೀವ್ರತೆ ಹೆಚ್ಚಾದರೆ ಅವರ ಉದ್ಯೋಗ ಮತ್ತು ಜೀವಕ್ಕೆ ಸಂಚಕಾರ ಬರಬಹುದು. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವುದು ಸರ್ಕಾರಕ್ಕೆ ದೊಡ್ಡ ಸವಾಲು. ಈ ಅನಿವಾಸಿ ಭಾರತೀಯರು ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ಭಾರತಕ್ಕೆ ಕಳುಹಿಸುತ್ತಾರೆ. ಯುದ್ಧದಿಂದ ಈ ಹಣದ ಹರಿವು ನಿಂತುಹೋಗಿ ಭಾರತದ ವಿದೇಶಿ ವಿನಿಮಯ ಮೀಸಲು ಕಡಿಮೆಯಾಗುತ್ತದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ನೀಡಿರುವ ಮಾಹಿತಿಯಂತೆ ಈವರೆಗೆ ಮಧ್ಯಪ್ರಾಚ್ಯದಿಂದ 67 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ.
ಭಾರತವು ಇರಾನ್ಗೆ ಅತಿ ಹೆಚ್ಚು ಬಾಸ್ಮತಿ ಅಕ್ಕಿ, ಟೀ, ಕಾಫಿ ಮತ್ತು ಸಕ್ಕರೆಯನ್ನು ರಫ್ತು ಮಾಡುತ್ತದೆ. ಯುದ್ಧದಿಂದ ಈ ರಫ್ತು ಪ್ರಮಾಣ ಕುಸಿತಗೊಂಡಿದ್ದು, ಭಾರತೀಯ ರೈತರು ಮತ್ತು ರಫ್ತುದಾರರಿಗೆ ಭಾರಿ ನಷ್ಟವಾಗುತ್ತಿದೆ. ಭಾರತವು ಇರಾನ್ಗೆ ದೊಡ್ಡ ಪ್ರಮಾಣದ ಔಷಧಗಳನ್ನು ಕೂಡ ರಫ್ತು ಮಾಡುತ್ತದೆ. ಇದಕ್ಕೂ ಹೊಡೆತ ಬಿದ್ದಿದೆ.
ಇರಾನ್ನಲ್ಲಿರುವ ಚಾಬ ಹಾರ್ ಬಂದರನ್ನು ಭಾರತವೇ ಅಭಿವೃದ್ಧಿಪಡಿಸುತ್ತಿದೆ. ಇದು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ದೇಶಗಳೊಂದಿಗೆ ವ್ಯಾಪಾರ ಮಾಡಲು ಭಾರತಕ್ಕಿರುವ ಪ್ರಮುಖ ದಾರಿ. ಯುದ್ಧದಿಂದ ಈ ಮಹತ್ವದ ಯೋಜನೆಯ ಮೇಲೆ ಹೂಡಿಕೆ ಮಾಡಿದ ಹಣ ಮತ್ತು ಆಯಕಟ್ಟಿನ ಹಾದಿ ಎರಡೂ ಅಪಾಯಕ್ಕೆ ಸಿಲುಕಿದೆ.
ದೇಶದಲ್ಲಿ ಪ್ರಸ್ತುತ ಹಣದುಬ್ಬರ ಶೇಕಡ 2.75ರಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರಲ್ಗೆ 10 ಡಾಲರ್ ಹೆಚ್ಚಾದರೂ, ಹುಣದುಬ್ಬರ ಶೇ.0.20-0.25ರಷ್ಟು ಹೆಚ್ಚಾಗುತ್ತದೆ. ಈಗಾಗಲೇ, ಪ್ರಿಮಿಯಂ ಪೆಟ್ರೋಲ್ ದರವನ್ನು ಲೀಟರ್ಗೆ 2 ರೂಪಾಯಿ ಹಾಗೂ ಕೈಗಾರಿಕೆಗೆ ಬಳಸುವ ಡೀಸೆಲ್ ದರವನ್ನು ಲೀಟರ್ಗೆ 22 ರೂ.ನಷ್ಟು ಹೆಚ್ಚಿಸಲಾಗಿದೆ.