ಸ್ವಲ್ಪ ಕಾದು ನೋಡಿ!....ಕ್ಷೇತ್ರಗಳ ಪುನರ್ವಿಂಗಡಣೆ ಮಸೂದೆ ವಿಚಾರದಲ್ಲಿ ಮಹತ್ವದ ಸುಳಿವು ನೀಡಿದ ಸ್ಟಾಲಿನ್​ | MK Stalin

MK Stalin | ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
MK Stalin | ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
Published on
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಕ್ಷೇತ್ರಗಳ ಪುನರ್ವಿಂಗಡಣೆ (Delimitation) ಮಸೂದೆ ವಿಚಾರದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕಾಯ್ದು ನೋಡುವ ತಂತ್ರವನ್ನು ಮುಂದುವರಿಸಿದ್ದಾರೆ. ಕಾಂಗ್ರೆಸ್ ಜೊತೆಗಿನ ಮಿತ್ರತ್ವ ಕಡಿದುಕೊಂಡಿರುವ ಡಿಎಂಕೆ, ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟ ಎರಡಕ್ಕೂ ಶಾಕ್ ನೀಡುವ ಸುಳಿವು ಕೊಟ್ಟಿದೆ.
ಗುರುವಾರ ನಡೆದ ತಮ್ಮ ಪಕ್ಷದ ಸಂಸದರ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಕ್ಷೇತ್ರಗಳ ಪುನರ್ವಿಂಗಡಣೆ ಮಸೂದೆಯ ವಿಷಯದಲ್ಲಿ ಪಕ್ಷವು ಕಾಯ್ದು ನೋಡುವ ತಂತ್ರವನ್ನು ಅನುಸರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಸಿದ್ಧಾಂತ ಮತ್ತು ತಮಿಳುನಾಡಿನ ಹಿತಾಸಕ್ತಿಗಳಿಗೆ ಯಾವುದೇ ರಾಜಕೀಯ ಮೈತ್ರಿಗಿಂತ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಡಿಎಂಕೆ ಪಕ್ಷವು ಬಿಜೆಪಿ ಅಥವಾ ಕಾಂಗ್ರೆಸ್ ಪರವಾಗಿ ನಿಲ್ಲುವುದಿಲ್ಲ, ಬದಲಿಗೆ ಪ್ರತಿಯೊಂದು ವಿಷಯ ಮತ್ತು ಮಸೂದೆಯ ಆಧಾರದ ಮೇಲೆ ತನ್ನ ನಿಲುವನ್ನು ನಿರ್ಧರಿಸಲಿದೆ. ಕೇಂದ್ರ ಸರ್ಕಾರವು ಪ್ರಸ್ತಾವಿತ ಮಸೂದೆಯ ಅಂತಿಮ ಕರಡು ಪ್ರತಿಯನ್ನು ಬಿಡುಗಡೆ ಮಾಡಿದ ನಂತರವಷ್ಟೇ ಡಿಎಂಕೆ ತನ್ನ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನಲ್ಲಿ ಡಿಎಂಕೆ ಸಂಸದರ ಪ್ರಮುಖ ಪಾತ್ರ

ಕೇಂದ್ರ ಸರ್ಕಾರವು ಮರುವಿಂಗಡಣೆ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲು ಮತ್ತೊಮ್ಮೆ ಪ್ರಯತ್ನಿಸಿದರೆ, ಲೋಕಸಭೆಯಲ್ಲಿರುವ ಡಿಎಂಕೆಯ 22 ಸಂಸದರು ಸರ್ಕಾರ ಮತ್ತು ಪ್ರತಿಪಕ್ಷಗಳೆರಡರ ತಂತ್ರಗಾರಿಕೆಗೆ ಅತ್ಯಂತ ನಿರ್ಣಾಯಕವಾಗಲಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಮಸೂದೆಯು ಸಂಸತ್ತಿಗೆ ಬಂದಾಗ, ಡಿಎಂಕೆ ಅದನ್ನು ತೀವ್ರವಾಗಿ ವಿರೋಧಿಸಿತ್ತು. ಪಕ್ಷದ ನಾಯಕರು ಮಸೂದೆಯ ಪ್ರತಿಗಳನ್ನು ಸುಟ್ಟು ಹಾಕಿ, ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸಿದ್ದರು. ಪ್ರತಿಪಕ್ಷಗಳೊಂದಿಗೆ ಸೇರಿ ಮಸೂದೆಯ ವಿರುದ್ಧ ಮತ ಚಲಾಯಿಸುವ ಮೂಲಕ ಮಸೂದೆ ಸೋಲುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬದಲಾದ ರಾಜಕೀಯ ಚಿತ್ರಣ

ಆದರೆ ಏಪ್ರಿಲ್ ನಂತರ ಹಲವು ರಾಜಕೀಯ ಬದಲಾವಣೆಗಳು ಸಂಭವಿಸಿವೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋಲನುಭವಿಸಿದೆ ಹಾಗೂ ತನ್ನ ಪ್ರಮುಖ ಮಿತ್ರಪಕ್ಷವಾದ ಕಾಂಗ್ರೆಸ್‌ನಿಂದ ದೂರವಾಗಿದೆ. ಈ ಬಿರುಕು ಬಿಜೆಪಿಗೆ ಹೊಸ ಭರವಸೆಯನ್ನು ನೀಡಿದ್ದು, ಸಂಸತ್ತಿನಲ್ಲಿ ವಿಷಯಾಧಾರಿತ ಬೆಂಬಲ ಪಡೆಯಲು ಡಿಎಂಕೆಯನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ. ಸಂಸತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಬಳಿ ಕುಳಿತುಕೊಳ್ಳಲು ಇಷ್ಟವಿಲ್ಲದ ಕಾರಣ, ಡಿಎಂಕೆ ಈಗಾಗಲೇ ಲೋಕಸಭಾ ಸ್ಪೀಕರ್ ಬಳಿ ಹೊಸ ಆಸನ ವ್ಯವಸ್ಥೆಗೆ ಮನವಿ ಮಾಡಿದೆ. ಅಷ್ಟೇ ಅಲ್ಲದೆ, ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಸಭೆಯನ್ನೂ ಸಹ ಡಿಎಂಕೆ ಬಹಿಷ್ಕರಿಸಿತ್ತು.

ಬಿಜೆಪಿಗೆ ವರವಾದ ರಾಜಕೀಯ ಸಮೀಕರಣ

ಈ ಎಲ್ಲಾ ಬೆಳವಣಿಗೆಗಳು ಬಿಜೆಪಿ ಪಾಲಿಗೆ ಆಶಾದಾಯಕವಾಗಿವೆ. ಮುಂಬರುವ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ತಿದ್ದುಪಡಿ ಮಾಡಿದ ಮರುವಿಂಗಡಣೆ ಮಸೂದೆಗೆ ಡಿಎಂಕೆ ಸಂಸದರ ಬೆಂಬಲ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಆಡಳಿತ ಪಕ್ಷವಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲಾ ರಾಜ್ಯಗಳಾದ್ಯಂತ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಸಮಾನ ಶೇಕಡಾ 50 ರಷ್ಟು ಹೆಚ್ಚಳ ಮಾಡುವ ಭರವಸೆಯ ನಿಬಂಧನೆಯೊಂದಿಗೆ ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ತರಬಹುದು ಎಂದು ಮೂಲಗಳು ಸೂಚಿಸಿವೆ. ಸಂಸತ್ತಿನಲ್ಲಿ ನಡೆದ ಚರ್ಚೆಯ ಸಮಯದಲ್ಲಿ, ಈ ಶೇ. 50 ರಷ್ಟು ಮಿತಿಯನ್ನು ಮಸೂದೆಯ ಕರಡಿನ ಭಾಗವಾಗಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು.
ಇನ್ನೊಂದೆಡೆ, ಇಂಡಿಯಾ ಒಕ್ಕೂಟದ ಮತ್ತೊಂದು ಮಿತ್ರಪಕ್ಷವಾದ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಕೂಡ, ಒಂದು ವೇಳೆ ಶೇ. 50 ರಷ್ಟು ಮಿತಿಯ ನಿಬಂಧನೆಯನ್ನು ಲಿಖಿತವಾಗಿ ಮಸೂದೆಯಲ್ಲಿ ಸೇರಿಸಿದರೆ ಬೆಂಬಲಿಸುವ ಸುಳಿವು ನೀಡಿದೆ. ಶೇಕಡಾ 50 ರಷ್ಟು ಸೀಟು ಹೆಚ್ಚಳದ ಷರತ್ತನ್ನು ಕಾಗದದ ಮೇಲೆ ನೀಡಿ, ಆ ಬಳಿಕ ನಾವು ಚರ್ಚಿಸುತ್ತೇವೆ ಎಂದು ಸುಪ್ರಿಯಾ ಸುಳೆ ಬುಧವಾರ ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net