ಹಿಂದೆಯೂ ನಡೆದಿದೆ ಮತಪಟ್ಟಿ ಕ್ಲೀನಿಂಗ್​ ಡ್ರೈವ್​: ಪ್ರತಿಪಕ್ಷ ನಾಯಕರ ಹಿಂದಿನ ಧ್ವನಿ ಈಗ ಮೌನವೇಕೆ...?

ಹಿಂದೆಯೂ ನಡೆದಿದೆ ಮತಪಟ್ಟಿ ಕ್ಲೀನಿಂಗ್​ ಡ್ರೈವ್​: ಪ್ರತಿಪಕ್ಷ ನಾಯಕರ ಹಿಂದಿನ ಧ್ವನಿ ಈಗ ಮೌನವೇಕೆ...?
Published on: 

ಭಾರತೀಯ ಚುನಾವಣಾ ಆಯೋಗವು ಭಾರತದ ಸಂವಿಧಾನದ ವಿಧಿ 324ರ ಪ್ರಕಾರ ಸ್ಥಾಪಿತವಾದ ಒಂದು ಕಾಯಿದೆಬದ್ಧ ಸಂಸ್ಥೆಯಾಗಿದೆ. ಸಂಪೂರ್ಣ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆ. ಭಾರತದ ಸಂವಿಧಾನ ಹಾಗೂ "ಭಾರತದ ಜನತಾ ಪ್ರಾತಿನಿಧ್ಯ ಕಾಯಿದೆ-1950'ರ ಸೆಕ್ಷನ್​ 21ರ ಪ್ರಕಾರ, ಚುನಾವಣಾ ಆಯೋಗವು ಪ್ರತಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಅಥವಾ ನಿಗದಿತ ಸಮಯಕ್ಕೆ ಅನುಗುಣವಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು ಕಡ್ಡಾಯವಾಗಿದೆ.

ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಪಾಡಲು ಇದು ಅತ್ಯಗತ್ಯ. ಒಬ್ಬನೇ ಒಬ್ಬ ಅರ್ಹ ಮತದಾರನೂ ಮತದಾನದ ಹಕ್ಕಿನಿಂದ ವಂಚಿತನಾಗಬಾರದು, ಹಾಗೆಯೇ ಒಬ್ಬನೇ ಒಬ್ಬ ಅನರ್ಹ ಮತದಾರನೂ ಮತ ಚಲಾಯಿಸುವ ಅವಕಾಶವನ್ನು ಹೊಂದಬಾರದು ಎಂಬುದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುವ ತತ್ವ. ಈ ಸಾಂವಿಧಾನಿಕ ತಳಹದಿಯ ಮೇಲೆಯೇ ಚುನಾವಣಾ ಆಯೋಗವು ಈಗ ಮತದಾರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಹಾಗೆ ನೋಡಿದರೆ ಮತದಾರರ ಪಟ್ಟಿ ಪರಿಷ್ಕರಣೆ ಹೊಸದೇನಲ್ಲ. ಈ ಹಿಂದೆಯೂ ನಡೆದಿದೆ. ಇತಿಹಾಸವನ್ನು ಒಮ್ಮೆ ಗಮನಿಸಿ.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್​ ನೆಹರೂ ಆಳ್ವಿಕೆ ಕಾಲದ 1956 ಹಾಗೂ 1957-1961ರಲ್ಲಿ ಪರಿಷ್ಕರಣೆ ನಡೆದಿದೆ. ಮುಂದೆ, ಅವರ ಮಗಳು ಇಂದಿರಾ ಗಾಂಧಿ ಕಾಲದಲ್ಲಿ 1965-1966 ಹಾಗೂ 1984ರಲ್ಲಿ ಪರಿಷ್ಕರಣೆ ನಡೆದಿದೆ. ರಾಜೀವ್​ ಗಾಂಧಿ ಹಾಗೂ ನರಸಿಂಹರಾವ್​ ಕಾಲದ 1987-1989, 1992ರಲ್ಲೂ ಪರಿಷ್ಕರಣೆ ಆಗಿದೆ. ಅಷ್ಟೇ ಏಕೆ, ಸೋನಿಯಾ ಗಾಂಧಿ ಅವರು ಛಾಯಾ ಪ್ರಧಾನಿಯಾಗಿದ್ದ 2004ರಲ್ಲಿಯೂ ಇದು ಜರುಗಿದೆ.

ಆದರೆ, ಈ ಎಲ್ಲ ಅವಧಿಗಳಲ್ಲೂ ಈ ಪರಿಷ್ಕರಣೆಯು ಕೇವಲ ಮೃತಪಟ್ಟವರ ಹೆಸರುಗಳನ್ನು ಡಿಲೀಟ್​ ಮಾಡುವುದಕ್ಕಷ್ಟೇ ಸೀಮಿತವಾಗಿತ್ತು. ಹೊರದೇಶಗಳಿಂದ ಬಂದ ಅಕ್ರಮ ವಲಸಿಗರ ಬಗ್ಗೆ ಅಂದು ಜರಡಿ ಹಿಡಿಯುವ ಗಂಭೀರ ಪ್ರಯತ್ನಗಳು ನಡೆದಿರಲಿಲ್ಲ. ಈಗ ಎಲ್ಲವನ್ನೂ ಜರಡಿ ಮಾಡಲಾಗುತ್ತಿದೆ. ಒಂದರ್ಥದಲ್ಲಿ ಇದು ಮತಪಟ್ಟಿ ಶುದ್ಧೀಕರಣ ಅಭಿಯಾನ. ಇಂಥದ್ದೊಂದು ಕ್ಲೀನಿಂಗ್​ ಡ್ರೈವ್​ ನಡೆಯಬೇಕು ಎಂದು ಭಾಷಣ ಮಾಡಿದವರ ತಲೆಗಳನ್ನು ಎಣಿಸಿದರೆ, ಅಲ್ಲಿ ಕಾಣಸಿಗುವುದು ಕಾಂಗ್ರೆಸ್ಸಿಗರೇ!

ಅಭಿಷೇಕ್​ ಮನು ಸಿಂಘ್ವಿ, ಕಪಿಲ್​ ಸಿಬಲ್​, ಮಮತಾ ಬ್ಯಾನರ್ಜಿ- ಅವರು ಈ ಹಿಂದೆ ಮತಪಟ್ಟಿ ಪರಿಷ್ಕರಣೆ ಬಗ್ಗೆ ಏನು ಮಾತನಾಡಿದ್ದಾರೆ ಎಂಬ ವಿಡಿಯೋಗಳು ಯೂಟ್ಯೂಬ್​ನಲ್ಲಿ ಲಭ್ಯವಿವೆ!

ಒಂದೇ ಒಂದು ವ್ಯತ್ಯಾಸ- ಮೊದಲೆಲ್ಲಾ ಈ ಅಭಿಯಾನಕ್ಕೆ ವೋರ್ಟರ್ಸ್​ ಇಂಟೆನ್ಸಿವ್​ ರಿವಿಶನ್​ ಎನ್ನಲಾಗುತ್ತಿತ್ತು. ಈಗ ಸ್ಪೆಷಲ್​ ಇಂಟೆನ್ಸಿವ್​ ರಿವಿಶನ್​ ಎಂದು ಒಂದು ಪದವನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಹಾಗಾಗಿಯೇ, ಸುಪ್ರೀಂಕೋರ್ಟ್​ ಈ ಅಭಿಯಾನಕ್ಕೆ ಸಮ್ಮತಿ ಸೂಚಿಸಿದೆ.

ಹೀಗಿದ್ದರೂ ವಿರೋಧವೇಕೆ? ಸ್ಮೂತ್​ ಆಗಿ ಗಮನಿಸಿದರೆ ಈ ವಿರೋಧಗಳು ಹೊಸದಲ್ಲ. ಇವು ಹಳೆಯ ನಾಟಕಗಳಷ್ಟೆ. 2014ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವ್ಯವಸ್ಥಿತವಾಗಿ ಸರ್ಕಾರದ ವಿರುದ್ಧ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಅವಾರ್ಡ್​ ವಾಪಸಿ ಚಳವಳಿ ಹಾಗೂ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧದ ಪ್ರತಿಭಟನೆಗಳ ಉದ್ದೇಶ ಸರ್ಕಾರಕ್ಕೆ ಕಳಂಕ ತರುವುದೇ ಆಗಿತ್ತು. ಈಗ ಅದೇ ಮಾದರಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ಗದ್ದಲ ಸೃಷ್ಟಿಸಲಾಗುತ್ತಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಆರಂಭವಾದ ಈ ವಿರೋಧಗಳು ನ್ಯಾಯಾಲಯದ ಮೆಟ್ಟಿಲೇರಿದ್ದರೂ, ಸಮಗ್ರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಚುನಾವಣಾ ಆಯೋಗಕ್ಕೆ ಎಸ್​ಐಆರ್​ ಕಟ್ಟುನಿಟ್ಟಾಗಿ ಮುಂದುವರೆಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.

ಈಗ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಮತ್ತು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರಕಾಶ್​ ರಾಜ್​ರಂತಹವರಿಂದ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವುದರ ಅಸಲಿ ಉದ್ದೇಶ ಏನು ಎಂಬುದು ಈಗ ಸ್ಪಷ್ಟವಾಗಿದೆ. ಕೇರಳದಲ್ಲಿ ಕಾಂಗ್ರೆಸ್​ ಸರ್ಕಾರ, ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಅಧಿಕಾರಕ್ಕೆ ಬಂದಿರುವುದು ಕಾಣಿಸದವರಿಗೆ, ಚುನಾವಣಾ ಫಲಿತಾಂಶಗಳು ತಮ್ಮಿಷ್ಟದಂತೆ ಬಾರದಿದ್ದಾಗ ಆಯೋಗವನ್ನು ದೂಷಿಸುವುದು ಹೊಸದಲ್ಲ.

ಫಾರ್ಮ್​-7ರ ಕಾನೂನುಬದ್ಧತೆ ಮತ್ತು ಹೈಕೋರ್ಟ್​ ತೀರ್ಪಿನ ಕುರಿತು ಪರಿಶೀಲಿಸೋಣ. ಅಕ್ರಮ ಮತದಾರರ ಹೆಸರನ್ನು ಕೈಬಿಡಲು ಆಕ್ಷೇಪಣೆ ಸಲ್ಲಿಸಲು ಫಾರ್ಮ್​-7 ಒಂದು ಕಾನೂನುಬದ್ಧ ಅವಕಾಶವಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು, ಸ್ಥಳಾಂತರಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಪ್ರತ್ಯೇಕ ಫಾರ್ಮ್​ಗಳಿವೆ. ಯಾವುದೇ ಮತದಾರನಿಗೆ ಅನುಮಾನವಿದ್ದರೆ ಈ ಫಾರ್ಮ್​ ಮೂಲಕ ಆಕ್ಷೇಪಣೆ ಸಲ್ಲಿಸಲು ಬಾಧಿತವಾಗಿ ಎಲ್ಲರಿಗೂ ಸಮಾನ ಅವಕಾಶವಿದೆ.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಇಬ್ಬರು ಬಿಜೆಪಿ ಬೂತ್​ ಮಟ್ಟದ ಏಜೆಂಟರ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ಗೆ ಕರ್ನಾಟಕ ಹೈಕೋರ್ಟ್​ ಮಧ್ಯಂತರ ತಡೆ ನೀಡಿರುವುದು ಇಲ್ಲಿ ಗಮನಾರ್ಹ. ನ್ಯಾಯಮೂರ್ತಿ ಅನಂತ್​ ರಾಮನಾಥ ಹೆಗಡೆ ಅವರ ಪೀಠವು, "ಸಮ ಪ್ರಾಧಿಕಾರವೇ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸದ ಹಿನ್ನೆಲೆಯಲ್ಲಿ ಈ ಎಫ್​ಐಆರ್​ಗಳು ಅಪಕ್ವವಾಗಿವೆ. ನಿಯಮಬದ್ಧ ಚುನಾವಣಾ ಪ್ರಕ್ರಿಯೆಯಲ್ಲಿ ಆಕ್ಷೇಪಣೆ ಸಲ್ಲಿಸಿರುವುದರಲ್ಲಿ ಕ್ರಿಮಿನಲ್​ ಅಪರಾಧವೇನಿದೆ?' ಎಂದು ಪ್ರಶ್ನಿಸಿದೆ.

ಹೊಸ ಮತದಾರರ ಸೇರ್ಪಡೆ ಕುರಿತು ಫಾರ್ಮ್​ ನಂಬರ್​ 6ರ ಬಗ್ಗೆಯೂ ಈಗ ಇಂಥ ಅನುಮಾನ ಎದ್ದಿದೆ. ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಮಹನೀಯರೇ, ಫಾರ್ಮ್​ ನಂಬರ್​ 6 ಅನ್ನು ತಿದ್ದುಪಡಿ ಮಾಡಲಾಗಿದೆ ಎಂದು ದೂರುತ್ತಿದ್ದಾರೆ. ಇದನ್ನೇ, ಆಯೋಗದ ಇಬ್ಬರು ಆಯುಕ್ತರು ಆಕ್ಷೇಪಿಸಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಒಪ್ಪೋಣ. ಫಾರ್ಮ್​ ನಂಬರ್​ 6ಕ್ಕೆ ಸುಪ್ರೀಂಕೋರ್ಟ್​ ಸಮ್ಮತಿ ಇದೆ ಎಂಬುದು ಆಯೋಗದ ಹೊಸ ಸ್ಪಷ್ಟನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೋರ್ಟ್​ ತಾನು ಯಾವುದೇ ಬದಲಾವಣೆಗೆ ಸಮ್ಮತಿಸಿಲ್ಲ ಎಂದಿದೆ. ಈಗ ಇದು ಕೂಡ ವಿವಾದವಾಗಿದ್ದು, ಏನೋ ನಡೆಯಬಾರದ್ದು ನಡೆದಿದೆ, ಕೋರ್ಟನ್ನೂ ವಂಚಿಸಲಾಗಿದೆ ಎಂಬ ನೆರೇಟಿವ್​ ಕಟ್ಟಲಾಗುತ್ತಿದೆ. ಇಷ್ಟಕ್ಕೂ ಈ ವಿದ್ಯಮಾನದ ಅಸಲಿ ಸಂಗತಿ ಏನು ಗೊತ್ತೆ? ಆಯೋಗವೇ ನೀಡಿರುವ ಸ್ಪಷ್ಟನೆ ಅನುಸಾರ, ಅದು ಫಾರ್ಮ್​ ನಂಬರ್​ 6ರಲ್ಲಿ ಒಂದು ಅಲ್ಪವಿರಾಮವನ್ನೂ ಬದಲಿಸಿಲ್ಲ. ಹೊಸ ಮತದಾರರ ಕುರಿತು ಅನೆಕ್ಸರ್​ ಮೂಲಕ ಹೆಚ್ಚುವರಿ ಮಾಹಿತಿಯನ್ನು ಕೇಳಿದೆ. ಅದು ಯಾವ ಮಾಹಿತಿ, ಈ ಹಿಂದಿನ ಪರಿಷ್ಕರಣೆ ವೇಳೆಯಲ್ಲಿ ನಿಮ್ಮ ಪಾಲಕರ ಹೆಸರು ಮ್ಯಾಪಿಂಗ್​ ಆಗಿದ್ದರೆ, ಆ ವಿವರವನ್ನೂ ಸಲ್ಲಿಸಿ ಎಂದಷ್ಟೆ! ಇದರಲ್ಲಿ ದೊಡ್ಡ ಅಪರಾಧ ಏನಿದೆ?

ಬಿಹಾರ ಚುನಾವಣೆಗೂ ಮುನ್ನ ಹೆಚ್ಚುವರಿ ಮಾಹಿತಿ ಸಂಗ್ರಹಿಸಲು ಆಯೋಗಕ್ಕೆ ಪರಮಾಧಿಕಾರ ಇದೆ ಎಂದು ಕೋರ್ಟ್​ ಹೇಳಿದೆ. ಹಾಗಾಗಿಯೇ ಆಯೋಗ ಫಾರ್ಮ್​ ನಂಬರ್​ 6ರಲ್ಲಿ ಅಲ್ಪ ವಿರಾಮವನ್ನು ಬದಲಿಸಿಲ್ಲ ಎಂದಿರುವುದು! ಇರಲಿ, ಈ ವಿಷಯವಾಗಿ ಸುಪ್ರೀಂಕೋರ್ಟ್​ ಏನು ಹೇಳುತ್ತೆ ಎಂಬುದನ್ನು ಕಾದುನೋಡೋಣ.

ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸುವ ಕಾಂಗ್ರೆಸ್​ ಪಕ್ಷವು, ತನ್ನದೇ ಆಳ್ವಿಕೆಯಿರುವ ಕರ್ನಾಟಕದಲ್ಲಿ "ಗೃಹಲಕ್ಷ್ಮಿ' ಯೋಜನೆ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ಮುಂದಾಗಿದೆ. ಈ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಬಹುದಾದರೆ, ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಹೇಗೆ ತಪ್ಪು?

ಗೋರಕ್ಷಣಾ ಕಾರ್ಯಕರ್ತ ಪುನೀತ್​ ಕೆರೆಹಳ್ಳಿ ದಾಖಲಿಸಿದ ಪ್ರಕರಣದ ವಿಚಾರಣೆ ವೇಳೆ, ರಾಜ್ಯದಲ್ಲಿ ಸರಿಸುಮಾರು 20 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿರಬಹುದೆಂದು ಸ್ವತಃ ರಾಜ್ಯ ಸರ್ಕಾರವೇ ಹೈಕೋರ್ಟ್​ಗೆ ಮಾಹಿತಿ ನೀಡಿದೆ. ಇವರಲ್ಲಿ ಕೆಲವರಾದರೂ ಮತದಾನದ ಹಕ್ಕು ಪಡೆದಿರಲು ಸಾಧ್ಯವಿಲ್ಲವೇ?

2014ರಿಂದ 2024ರವರೆಗೆ ಭಾರತದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ವಿದೇಶಿ ಟೂಲ್​ಕಿಟ್​ ತಂಡಗಳು ಯತ್ನಿಸುತ್ತಿರುವ ಆರೋಪಗಳು ಗಂಭೀರವಾಗಿವೆ. ಜರ್ಮನಿಯ ಬರ್ಲಿನ್​ನಲ್ಲಿ ನೆಲೆಸಿರುವ ಧ್ರುವ್​ ರಾಠಿ ಹಾಗೂ ಅಮೆರಿಕದಿಂದ ಬರುವ ಸಿಜೆಪಿ ಸಂಸ್ಥಾಪಕ ಅಭಿಜೀತ್​ ದೀಪ್ಕೆ ಮುಂತಾದವರ ಚಟುವಟಿಕೆಗಳನ್ನು ಕೇಂದ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net