ಸಂದೇಶ್‌ಖಾಲಿ ಪಾಪಿಗಳ ರಕ್ಷಣೆಗೆ ನಿಂತಿರುವ ಸರ್ಕಾರವನ್ನು ನಿಮ್ಮ ಮತದ ಮೂಲಕ ಹೊರಗಟ್ಟಿ ಎಂದ ಪ್ರಧಾನಿ ಮೋದಿ; ಏನಿದು ಸಂದೇಶ್‌ಖಾಲಿ ವಿವಾದ..? | Narendra Modi

 Narendra Modi | ನರೇಂದ್ರ ಮೋದಿ
Narendra Modi | ನರೇಂದ್ರ ಮೋದಿ
Published on
ಕೊಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದು , ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ವಿಷಯ ಗಂಭೀರವಾಗಿದೆ ಎಂದು ಆರೋಪಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ನಡೆದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಂದೇಶ್‌ಖಾಲಿಯಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ಆರ್‌ಜಿ ಕಾರ್ ಅತ್ಯಾಚಾರ ಮತ್ತು ವೈದ್ಯೆಯ ಹತ್ಯೆಯಂತಹ ಪ್ರಕರಣಗಳಿಗೆ ಬ್ರೇಕ್​ ಹಾಕಲು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದರು.
ತೃಣಮೂಲ ಸರ್ಕಾರದಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಶಿಕ್ಷಣ ಎನ್ನುವುದು ಸಂಪೂರ್ಣ ಹದಗೆಟ್ಟಿದ್ದು, ಟಿಎಂಸಿ ಆಡಳಿತದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ, ಶಿಕ್ಷಣ ವ್ಯವಸ್ಥೆಯು ಮಾಫಿಯಾಗಳು ಮತ್ತು ಭ್ರಷ್ಟ ಶಕ್ತಿಗಳ ಹಿಡಿತದಲ್ಲಿದೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಬಿಜೆಪಿಗೆ ಮತ ಹಾಕಬೇಕು, ನೀವು ಹಾಕುವ ಪ್ರತಿಯೊಂದು ಮತವು ಇಲ್ಲಿನ ಕಾಲೇಜುಗಳಲ್ಲಿ ಅತ್ಯಾಚಾರ ಮತ್ತು ಹಿಂಸಾಚಾರದ ಘಟನೆಗಳನ್ನು ನಿಗ್ರಹಿಸುತ್ತದೆ, ಸಂದೇಶ್‌ಖಾಲಿಯಂತಹ ಘಟನೆಗಳು ಬಂಗಾಳದಲ್ಲಿ ಮತ್ತೆ ಸಂಭವಿಸದಂತೆ ನೋಡಿಕೊಳ್ಳುತ್ತದೆ ಮತ್ತು ಬಂಗಾಳದಲ್ಲಿ ಸಾವಿರಾರು ಶಿಕ್ಷಕರು ಮತ್ತೆ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವುದಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ಬಂಗಾಳದಲ್ಲಿ ಟಿಎಂಸಿಯ ಜಂಗಲ್​ ರಾಜ್​ ಆಳ್ವಿಕೆ ಕೊನೆಗೊಳ್ಳುವುದು ಮತ್ತು ಬಿಜೆಪಿಯ ಉತ್ತಮ ಆಡಳಿತ ಬರುವುದು ಇಂದಿನ ಅವಶ್ಯಕತೆಯಲ್ಲೊಂದಾಗಿದ್ದು, ಇದಕ್ಕಾಗಿ ಈಶ್ವರ ಚಂದ್ರ ವಿದ್ಯಾಸಾಗರ್ ತೋರಿಸಿದ ಮಾರ್ಗವನ್ನು ನಾವು ಅನುಸರಿಸಬೇಕಾಗುತ್ತದೆ. ಅವರು ಮಹಿಳಾ ಶಕ್ತಿ ಮತ್ತು ಯುವ ಶಕ್ತಿಯನ್ನು ಬದಲಾವಣೆಯ ಮಾಧ್ಯಮವನ್ನಾಗಿ ಮಾಡಿದ್ದರು, ಈಗ ಬಂಗಾಳದ ಹೆಣ್ಣುಮಕ್ಕಳು, ಯುವಜನರು ತಮ್ಮ ಧ್ವನಿಯನ್ನು ಎತ್ತುವ ಕಾಲ ಬಂದಿದೆ ಎಂದರು.

ಕೇಂದ್ರದ ಯೋಜನೆಗಳಿಗೆ ಅವಕಾಶ ನೀಡುತ್ತಿಲ್ಲ..

ಟಿಎಂಸಿ ರಾಜ್ಯದ ಯುವಕರು, ಮಹಿಳೆಯರು, ರೈತರು ಮತ್ತು ಮೀನುಗಾರರ ಪಾಲಿಗೆ ಶತ್ರುವಾಗಿದ್ದು, ಬಿಜೆಪಿಯಿಂದ ಮಾತ್ರ ಪಶ್ಚಿಮ ಬಂಗಾಳ ಅಭಿವೃದ್ಧಿ ಹೊಂದಲು ಸಾಧ್ಯ, ಮಮತಾ ಸರ್ಕಾರ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಅವಕಾಶ ನೀಡುತ್ತಿಲ್ಲ, ಬಿಹಾರದಲ್ಲಿ ಜಂಗಲ್ ರಾಜ್ ಆಡಳಿತ ಅಂತ್ಯವಾಗಿದ್ದು, ಈಗ ಮುಂದಿನ ಸರದಿ ಬಂಗಾಳ ಎಂದರು.
ಪಶ್ಚಿಮ ಬಂಗಾಳಕ್ಕಾಗಿ ತಮ್ಮ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ವಿವರಿಸಿದ ಪ್ರಧಾನಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವೇ ಬಂಗಾಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಗಿದೆ, ಈ ಹಿಂದೆ ಯುಪಿಎ ಸರ್ಕಾರದ ಪಾಲುದಾರನಾಗಿದ್ದ ಟಿಎಂಸಿಗೆ ಈ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.
ಬಿಜೆಪಿಯ ಪ್ರಯತ್ನಗಳಿಂದಾಗಿಯೇ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ದುರ್ಗಾ ಪೂಜೆಗೂ ಸಾಂಸ್ಕೃತಿಕ ಪರಂಪರೆಯ ಸ್ಥಾನಮಾನ ನೀಡಿದೆ, ಪಶ್ಚಿಮ ಬಂಗಾಳಕ್ಕೆ ತನ್ನದೇ ಆದ ಸಾಮರ್ಥ್ಯವಿದ್ದು, ಇಲ್ಲಿ ದೊಡ್ಡ ನದಿಗಳಿವೆ, ಬಹಳ ವಿಸ್ತಾರವಾದ ಕರಾವಳಿ ಪ್ರದೇಶವಿದೆ, ಫಲವತ್ತಾದ ಭೂಮಿ ಇದೆ, ಪಶ್ಚಿಮ ಬಂಗಾಳದ ಪ್ರತಿಯೊಂದು ಜಿಲ್ಲೆಯೂ ವಿಶೇಷವಾದದ್ದನ್ನು ಹೊಂದಿದ್ದು, ಬಿಜೆಪಿ ಪ್ರತಿಯೊಂದು ಜಿಲ್ಲೆಯ ಈ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಮೋದಿ ಭರವಸೆ ನೀಡಿದರು.

ಏನಿದು ಸಂದೇಶ್‌ಖಾಲಿ, ಆರ್‌ಜಿ ಕರ್ ವಿವಾದ..?

2024 ರ ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಲೈಂಗಿಕ ಶೋಷಣೆ ಮತ್ತು ಭೂಕಬಳಿಕೆಯ ಆರೋಪಗಳು ಕೇಳಿಬಂದವು, ಸ್ಥಳೀಯ ಮಹಿಳೆಯರು ತೃಣಮೂಲ ಕಾಂಗ್ರೆಸ್ ನಾಯಕರ ಮೇಲೆ ದೌರ್ಜನ್ಯದ ಆರೋಪವನ್ನು ಹೊರಿಸಿದರು. ಈ ಪ್ರಕರಣದಲ್ಲಿ ಸ್ಥಳೀಯ ಜಿಲ್ಲಾ ಪರಿಷತ್ ಸದಸ್ಯ ಶೇಖ್ ಶಹಜಹಾನ್​ರನ್ನು ಪ್ರಮುಖ ಆರೋಪಿಯನ್ನಾಗಿಸಲಾಯಿತು. ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅವರ ಕಚೇರಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ ಬಳಿಕ ಆತ ತಲೆಮರೆಸಿಕೊಂಡ ಎನ್ನಲಾಗಿದೆ.
2024 ರ ಆಗಸ್ಟ್​ನಲ್ಲಿ 31 ವರ್ಷದ ತರಬೇತಿ ಪಡೆಯುತ್ತಿದ್ದ ವೈದ್ಯೆಯೊಬ್ಬರು ಬಲಿಯಾದ ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿತ್ತು. ದೇಶಾದ್ಯಂತ ವೈದ್ಯರು ಮತ್ತು ಸಾಮಾನ್ಯ ಜನರು ಬೃಹತ್ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net