Viral News: ಸತ್ತ ಮೇಲೆ ಯಾರು ಮಾಡ್ತಾರೆ ಅಂತ ತಾನೇ ಬದುಕಿರುವಾಗಲೇ ತನ್ನ 'ತಿಥಿ ಊಟ' ಹಾಕಿಸಿದ ವೃದ್ಧ!

Viral News
Viral News
Published on

ಪ್ರಮುಖ ಮುಖ್ಯಾಂಶಗಳು

  • ಸತ್ತ ಮೇಲೆ ಯಾರು ಮಾಡ್ತಾರೆ ಅಂತ ಬದುಕಿದ್ದಾಗಲೇ ತನ್ನ 'ತಿಥಿ ಊಟ' ಹಾಕಿಸಿದ ವೃದ್ಧ; ಯುಪಿಯಲ್ಲಿ ನಡೆದ ಈ ಘಟನೆ ಕೇಳಿದ್ರೆ ಕಣ್ಣೀರು ಬರುತ್ತೆ!
  • ಒಂಟಿತನದ ಪರಾಕಾಷ್ಠೆ: 2000 ಜನರಿಗೆ 'ಲೈವ್ ತಿಥಿ' ಔತಣ ನೀಡಿದ 65ರ ವೃದ್ಧ; ವೈರಲ್ ಆಯ್ತು ಇನ್ವಿಟೇಶನ್ ಕಾರ್ಡ್!
  • ತನ್ನ ಅಂತ್ಯಕ್ರಿಯೆ ಬಗ್ಗೆ ಆತಂಕಗೊಂಡ ಅವಿವಾಹಿತ ವೃದ್ಧ: ಸ್ವತಃ ತಾನೇ ಮಾಡಿಕೊಂಡರು '13ನೇ ದಿನದ' ಕಾರ್ಯ!
ಲಖನೌ: ಸಾಮಾನ್ಯವಾಗಿ ಮನುಷ್ಯ ಸತ್ತ ಮೇಲೆ 13ನೇ ದಿನದ ಕಾರ್ಯ ಅಥವಾ ತಿಥಿ ಶಾಸ್ತ್ರವನ್ನು ಮಾಡುವುದು ಸಂಪ್ರದಾಯ. ಆದರೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಲಕ್ಷ್ಮಣಪುರ ಎಂಬ ಹಳ್ಳಿಯಲ್ಲಿ ವಿಚಿತ್ರವೋ ಅಥವಾ ಕರುಣಾಜನಕವೋ ಎನ್ನುವಂತಹ ಘಟನೆಯೊಂದು(Viral News) ನಡೆದಿದೆ.
ಹೌದು, 65 ವರ್ಷದ ವೃದ್ಧರೊಬ್ಬರು ತಾನು ಸತ್ತ ಮೇಲೆ ನನಗಾಗಿ ಈ ಕಾರ್ಯ ಮಾಡಲು ಯಾರೂ ಇಲ್ಲ ಎಂಬ ನೋವಿನಿಂದ, ತಾನೇ ಬದುಕಿರುವಾಗಲೇ ತನ್ನ 'ಜಿಂದಾ ಭಂಡಾರ' (ಬದುಕಿರುವಾಗಲೇ ಮಾಡುವ ತಿಥಿ ಹಬ್ಬ) ಆಯೋಜಿಸಿ ಸುದ್ದಿಯಾಗಿದ್ದಾರೆ!

ಏನಿದು 'ಜಿಂದಾ ಭಂಡಾರ'?

ಲಕ್ಷ್ಮಣಪುರ ಗ್ರಾಮದ ನಿವಾಸಿ ರಾಕೇಶ್ ಯಾದವ್ (65) ಈ ವಿಶಿಷ್ಟ ಕಾರ್ಯಕ್ರಮದ ಆಯೋಜಕರು. ಇವರು ಅವಿವಾಹಿತರಾಗಿದ್ದು, ತಮ್ಮ ಜೀವನದ ಅಂತ್ಯಕಾಲದಲ್ಲಿ ತನಗಾಗಿ ಯಾರೂ ಇಲ್ಲ ಎಂಬ ಅನಾಥ ಪ್ರಜ್ಞೆ ಅವರನ್ನು ಕಾಡತೊಡಗಿತ್ತು. ಹೀಗಾಗಿ, ಸೋಮವಾರದಂದು ಸುಮಾರು 2,000 ಅತಿಥಿಗಳಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದರು. ವಿಶೇಷವೆಂದರೆ, ಅವರು ತಮ್ಮ ಭಾವಚಿತ್ರವಿರುವ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ, ಅದಕ್ಕೆ 'ಜಿಂದಾ ಭಂಡಾರ' ಎಂದು ಹೆಸರಿಟ್ಟು ಸುತ್ತಮುತ್ತಲ ಹಳ್ಳಿಯ ಜನರಿಗೆ ಹಂಚಿದ್ದರು. ಈ ಆಮಂತ್ರಣ ಪತ್ರಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಊಟದ ಮೆನುವಿನಲ್ಲಿ ಏನೇನಿತ್ತು?

ಮಾರ್ಚ್ 30ರಂದು ಮಧ್ಯಾಹ್ನ 3 ಗಂಟೆಯಿಂದಲೇ ಈ ವಿಶಿಷ್ಟ ಔತಣ ಆರಂಭವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರಿಗಾಗಿ ಲಾಡು, ಪುರಿ, ಕಚೋರಿ ಹಾಗೂ ತರಕಾರಿ ಪಲ್ಯಗಳನ್ನು ತಯಾರಿಸಲಾಗಿತ್ತು. ಹಳ್ಳಿಯ ಮಹಿಳೆಯರು, ಯುವಕರು ಮತ್ತು ಹಿರಿಯರು ಎಲ್ಲರೂ ಸೇರಿ ಈ ಅಡುಗೆ ತಯಾರಿಯಲ್ಲಿ ಭಾಗಿಯಾಗಿದ್ದರು. ಒಬ್ಬ ವ್ಯಕ್ತಿ ಸತ್ತ ಮೇಲೆ ಮಾಡುವ ಎಲ್ಲಾ ಅಡುಗೆಗಳನ್ನು ಇಲ್ಲಿ ಸಿದ್ಧಪಡಿಸಲಾಗಿತ್ತು.

ನೋವಿನ ಹಿನ್ನೆಲೆ: ಕುಟುಂಬದಲ್ಲಿ ಯಾರೂ ಇಲ್ಲ!

ರಾಕೇಶ್ ಯಾದವ್ ಅವರ ಈ ನಿರ್ಧಾರದ ಹಿಂದೆ ದೊಡ್ಡದೊಂದು ನೋವಿನ ಕಥೆಯಿದೆ. ರಾಕೇಶ್ ಒಟ್ಟು ಮೂವರು ಸಹೋದರರು. ಅವರಲ್ಲಿ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ. ಒಬ್ಬ ಸಹೋದರ ಚಂದ್ರಪಾಲ್ ಅನಾರೋಗ್ಯದಿಂದ ಮೃತಪಟ್ಟರೆ, ಇನ್ನೊಬ್ಬ ಸಹೋದರ ನರೇಶ್ ಕೊಲೆಯಾಗಿದ್ದರು. ದುರದೃಷ್ಟವಶಾತ್ ಈ ಮೂವರು ಸಹೋದರರು ಮದುವೆಯಾಗಿರಲಿಲ್ಲ. ರಾಕೇಶ್ ಅವರಿಗೆ ಒಬ್ಬ ವಿವಾಹಿತ ತಂಗಿ ಇದ್ದಾಳೆ. ಅವಳಿಗೆ ಮಕ್ಕಳಿದ್ದರೂ ಸಹ, ತನ್ನ ಅಂತ್ಯಕಾಲದಲ್ಲಿ ಅವರು ತನ್ನನ್ನು ನೋಡಿಕೊಳ್ಳುತ್ತಾರೆ ಅಥವಾ ಸತ್ತ ಮೇಲೆ ಶಾಸ್ತ್ರ ಮಾಡುತ್ತಾರೆ ಎಂಬ ನಂಬಿಕೆ ರಾಕೇಶ್ ಅವರಿಗೆ ಇಲ್ಲದಂತಾಗಿದೆ.

ನನ್ನ ನಂಬಿಕೆ ನನ್ನ ಮೇಲೆ ಮಾತ್ರ..

ತಮ್ಮ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ರಾಕೇಶ್ ಯಾದವ್, "ನನ್ನ ವೃದ್ಧಾಪ್ಯದಲ್ಲಿ ನನಗೆ ಬೆಂಬಲ ನೀಡಲು ಯಾರೂ ಇಲ್ಲ. ನಾನು ಸತ್ತ ಮೇಲೆ ನನ್ನ ಅಂತ್ಯಕ್ರಿಯೆ ಮಾಡುವವರು ಅಥವಾ 13ನೇ ದಿನದ ಕಾರ್ಯ ಮಾಡುವವರು ಯಾರೂ ಇಲ್ಲ ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ಅನೇಕ ಸಂಬಂಧಿಕರಿದ್ದರೂ ನನಗೆ ಯಾರ ಮೇಲೂ ನಂಬಿಕೆಯಿಲ್ಲ. ಹಾಗಾಗಿ ನಾನೇ ಬದುಕಿರುವಾಗ ಗ್ರಾಮಸ್ಥರ ಸಮ್ಮುಖದಲ್ಲಿ ಈ ಔತಣ ಕೂಟ ಏರ್ಪಡಿಸಿ ನನ್ನ ಆಸೆಯನ್ನು ಪೂರೈಸಿಕೊಂಡಿದ್ದೇನೆ" ಎಂದು ಭಾವುಕರಾಗಿ ಹೇಳಿದ್ದಾರೆ.
ರಾಕೇಶ್ ಈಗಾಗಲೇ ತಮ್ಮ ಪಿತ್ರಾರ್ಜಿತ ಮನೆಯನ್ನು ಸಂಬಂಧಿಯೊಬ್ಬರಿಗೆ ದಾನ ಮಾಡಿದ್ದು, ಪ್ರಸ್ತುತ ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.

ಗ್ರಾಮದಲ್ಲಿ ಪರ-ವಿರೋಧ ಚರ್ಚೆ

ಈ ಘಟನೆಯು ಹಳ್ಳಿಯಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದು ವೃದ್ಧರ ತೀವ್ರತರದ ಒಂಟಿತನದ ಪರಮಾವಧಿ ಎಂದು ಮರುಕ ಪಟ್ಟರೆ, ಇನ್ನು ಕೆಲವರು ಇದನ್ನು ಅವರ ಮಾನಸಿಕ ಸ್ಥಿತಿಯ ಪ್ರತಿಬಿಂಬ ಎಂದು ವಿಶ್ಲೇಷಿಸುತ್ತಿದ್ದಾರೆ. ಆದರೆ ರಾಕೇಶ್ ಮಾತ್ರ, ಇದು ಕೇವಲ ಪ್ರೀತಿಯ ಔತಣವೇ ಹೊರತು ಯಾವುದೇ ಧಾರ್ಮಿಕ 'ಪಿಂಡ ಪ್ರದಾನ' ಶಾಸ್ತ್ರಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net