ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ; ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರಣೆ ಕೇಳಿದ ಕೇಂದ್ರ ಸರ್ಕಾರ | Violation of protocol

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸಿಎಂ ಮಮತಾ ಬ್ಯಾನರ್ಜಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸಿಎಂ ಮಮತಾ ಬ್ಯಾನರ್ಜಿ
Published on
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿ ವೇಳೆ ಶಿಷ್ಟಾಚಾರ ಉಲ್ಲಂಘನೆ ಮತ್ತು ಕಾರ್ಯಕ್ರಮದಲ್ಲಿ ಲೋಪಗಳ ಆರೋಪದ ಮೇಲೆ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಗೃಹಸಚಿವಾಲಯದ ಕಾರ್ಯದರ್ಶಿ ಪತ್ರ ಬರೆದಿದ್ದು, ಇಂದು(ಮಾ. 08) ಸಂಜೆ 5 ಗಂಟೆಯೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಗೃಹ ಕಾರ್ಯದರ್ಶಿ, ಸಿಎಸ್​ಗೆ ಬರೆದ ಪತ್ರದಲ್ಲಿ, ರಾಷ್ಟ್ರಪತಿಗಳು ರಾಜ್ಯಕ್ಕೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಇಲ್ಲದಿರುವುದು 'ಬ್ಲೂ ಬುಕ್' ನಿಯಮಗಳ ಶಿಷ್ಟಾಚಾರ, ಸ್ಥಳ ಮತ್ತು ಮಾರ್ಗ ವ್ಯವಸ್ಥೆಗಳ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದ್ದಾರೆ.
ರಾಷ್ಟ್ರಪತಿಗಳು ಬುಡಕಟ್ಟು ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದಾಗ ಅವರನ್ನು ಸ್ವಾಗತಿಸಲು ಸಿಲಿಗುರಿ ಮೇಯರ್ ಮಾತ್ರ ಹಾಜರಿದ್ದಿದ್ದು, ಅಲ್ಲಿಂದ ರಾಷ್ಟ್ರಪತಿಗಳನ್ನು ಡಾರ್ಜಿಲಿಂಗ್​ಗೆ ಕರೆದೊಯ್ಯಲು ಆಡಳಿತವು ಆಯ್ಕೆ ಮಾಡಿದ ಮಾರ್ಗವು ಕಸದಿಂದ ತುಂಬಿರುವುದಕ್ಕೆ ಕಾರಣವೇನು? ಈ ಲೋಪಕ್ಕೆ ನೇರ ಹೊಣೆಗಾರರಾಗಿರುವ ಡಾರ್ಜಿಲಿಂಗ್ ಜಿಲ್ಲಾ ಮ್ಯಾಜಿಸ್ಟ್ರೇಟ್, ಸಿಲಿಗುರಿ ಪೊಲೀಸ್ ಆಯುಕ್ತ ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರುದ್ಧ ತೆಗೆದುಕೊಂಡ ಕ್ರಮಗಳೇನು? ಎಂಬುದನ್ನು ವಿವರಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದೆ.

ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ರಾಷ್ಟ್ರಪತಿ ಅಸಮಾಧಾನ

ಉತ್ತರ ಬಂಗಾಳದ ಸಿಲಿಗುರಿಯಲ್ಲಿ ನಡೆದ 9ನೇ ಅಂತರರಾಷ್ಟ್ರೀಯ ಆದಿವಾಸಿ ಸಂತಲ್ ಸಮ್ಮೇಳನದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು, ಶಿಷ್ಟಾಚಾರದ ಪ್ರಕಾರ ರಾಜ್ಯದ ಸಿಎಂ ಅಥವಾ ಪ್ರತಿನಿಧಿಗಳು ನನ್ನನ್ನು ಸ್ವಾಗತಿಸಲು ಬರಲಿಲ್ಲ ಎಂಬ ಕಾರಣಕ್ಕೆ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.
ಮಮತಾ ಬ್ಯಾನರ್ಜಿ ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಅದಕ್ಕಾಗಿಯೇ ಅವರು ಅಥವಾ ಅವರ ಸಚಿವರು ಬರಲಿಲ್ಲವೇ? ನಾನು ಕೂಡ ಬಂಗಾಳದ ಮಗಳು, ಮಮತಾ ನನಗೆ ತಂಗಿಯಂತೆ. ಕಾರ್ಯಕ್ರಮದ ಸ್ಥಳವನ್ನು ಕೂಡ ಕೊನೆಯ ಕ್ಷಣದಲ್ಲಿ ಬದಲಿಸಲಾಗಿದೆ, ಇದು ಯಾಕೆ ಎಂದು ತಿಳಿಯುತ್ತಿಲ್ಲ ಎಂದು ತಮ್ಮ ಭಾಷಣದಲ್ಲಿ ಎಂದು ಬೇಸರ ಹೊರ ಹಾಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಬ್ಯಾನರ್ಜಿ, ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಷ್ಟ್ರಪತಿಗಳು ಭಾರತೀಯ ಜನತಾ ಪಕ್ಷದ(ಬಿಜೆಪಿ) ಆದೇಶದ ಮೇರೆಗೆ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ತುಂಬಾ ಕೆಳಮಟ್ಟಕ್ಕೆ ಇಳಿದಿದೆ. ಅವರು ನನ್ನನ್ನು ಕೆಣಕಲು ಮತ್ತು ರಾಜ್ಯ ಸರ್ಕಾರವನ್ನು ಅಪಖ್ಯಾತಿಗೊಳಿಸಲು ರಾಷ್ಟ್ರಪತಿ ಕಚೇರಿಯನ್ನು ಬಳಸಲು ಪ್ರಯತ್ನಿಸುತ್ತಿದೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ತಮ್ಮ ಮತ್ತು ರಾಜ್ಯ ಪ್ರತಿನಿಧಿಗಳ ಅನುಪಸ್ಥಿತಿಯ ಬಗ್ಗೆ ರಾಷ್ಟ್ರಪತಿಗಳಿಗೆ ತಿಳಿಸಿರುವ ಮಾಹಿತಿ ತಪ್ಪಾಗಿದೆ. ಚುನಾವಣಾ ಸಮಯದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಹಾಜರಾಗುವುದು ಯಾವಾಗಲೂ ಸಾಧ್ಯವಿಲ್ಲ. ನೀವು ವರ್ಷಕ್ಕೊಮ್ಮೆ ಬಂದರೆ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ, ಆದರೆ ನೀವು ಚುನಾವಣೆಯ ಸಮಯದಲ್ಲಿ ಬಂದರೆ, ನಾನು ಜನರ ಹಕ್ಕುಗಳಲ್ಲಿ ನಿರತನಾಗಿರುವುದರಿಂದ ನಿಮ್ಮ ಕಾರ್ಯಕ್ರಮಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಸಿಎಂ ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net