ಸಿಎಂ ವಿಜಯ್‌ ಭವಿಷ್ಯವನ್ನು ಸುನಾಮಿಗೆ ಹೋಲಿಸಿದ್ದ ಜ್ಯೋತಿಷಿಗೆ ಈಗ ಪಟ್ಟ! ಸರ್ಕಾರದ ವಿಶೇಷ ಅಧಿಕಾರಿಯಾಗಿ ರಾಧನ್ ಪಂಡಿತ್ ನೇಮಕ | Radhan Pandit

Radhan Pandit |  ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಆಪ್ತ ಜ್ಯೋತಿಷಿ ರಿಕಿ ರಾಧನ್ ಪಂಡಿತ್
Radhan Pandit | ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಆಪ್ತ ಜ್ಯೋತಿಷಿ ರಿಕಿ ರಾಧನ್ ಪಂಡಿತ್
Published on
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಆಪ್ತ ಜ್ಯೋತಿಷಿ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ವಕ್ತಾರರಾಗಿರುವ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್​​ರನ್ನು (Radhan Pandit) ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಯ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ಕುರಿತು ತಮಿಳುನಾಡು ಸಾರ್ವಜನಿಕ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದ್ದು, ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಈ ನೇಮಕಾತಿ ಜಾರಿಗೆ ಬರಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷಕ್ಕೆ ದೊಡ್ಡ ಗೆಲುವು ಸಾಧಿಸಲಿದೆ ಎಂದು ರಾಧನ್ ಪಂಡಿತ್ ಮೊದಲೇ ಭವಿಷ್ಯ ನುಡಿದಿದ್ದರು, ವಿಜಯ್ ಜಾತಕವನ್ನು ಅಸಾಧಾರಣ ಎಂದು ಕರೆದಿದ್ದ ಅವರು, ವಿಜಯ್​ ಇನ್ನು ಹೆಚ್ಚಿನ ಯಶಸ್ಸು ಪಡೆಯಲಿದ್ದಾರೆ ಮತ್ತು ಬಹುಮತದೊಂದಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. ಎಕ್ಸಿಟ್​ ಪೋಲ್​ ಸಮಯದಲ್ಲಿ ಇತರ ಸಮೀಕ್ಷೆಗಳನ್ನು ತಳ್ಳಿಹಾಕಿದ್ದರು.

109 ನೇ ಗಂಟೆಯಲ್ಲಿ ಪ್ರಮಾಣ ವಚನ ಸ್ವೀಕಾರ ಎಂದಿದ್ದ ಪಂಡಿತ್​

ಎಕ್ಸಿಟ್​ ಪೋಲ್​ ಹೊರಬಿದ್ದ ಬಳಿಕ ಮಾತನಾಡಿದ್ದ ರಿಕಿ ರಾಧನ್ ಪಂಡಿತ್, ನಾವು ಈ ಸಮೀಕ್ಷೆಗಳನ್ನು ಒಪ್ಪಿಕೊಳ್ಳುವುದಿಲ್ಲ, ಈ ಚುನಾವಣೆಯಲ್ಲಿ ನಾವು 140 ರಿಂದ 170 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ, ಈಗಾಗಲೇ ನಮ್ಮ ಪಕ್ಷದ ವತಿಯಿಂದ ಚೆನ್ನಾಗಿ ಅಧ್ಯಯನ ಮಾಡಿದ್ದು, ಕನಿಷ್ಠ 45% ಮತ ಪಡೆಯಲಿದ್ದೇವೆ, ಮತ ಎಣಿಕೆಗೆ 108 ಗಂಟೆಗಳು ಬಾಕಿ ಇದ್ದು, 109 ನೇ ಗಂಟೆಯಲ್ಲಿ ನಾವು ಪ್ರಮಾಣ ವಚನ ಸ್ವೀಕರಿಸಲಿದ್ದೇವೆ. ನಮ್ಮ ವಿಜಯ್ ಮುಖ್ಯಮಂತ್ರಿಯಾಗುತ್ತಾರೆ ಎಂದು ತಿಳಿಸಿದ್ದರು.
ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿವಿಕೆ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಪಕ್ಷವು ಸ್ಪಷ್ಟ ಬಹುಮತವನ್ನು ಗಳಿಸದಿದ್ದರೂ, ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸುವಲ್ಲಿ ವಿಜಯ್ ಯಶಸ್ವಿಯಾದರು. ವಿಶೇಷವೆಂದರೆ, ವಿಜಯ್​ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮೊದಲು ಮೇ 10ರ ಮಧ್ಯಾಹ್ನ 3:45 ಕ್ಕೆ ನಿಗದಿಯಾಗಿತ್ತು, ಆದರೆ ಜ್ಯೋತಿಷಿ ರಾಧನ್ ಪಂಡಿತ್ ಸಲಹೆಯಂತೆ ಅದನ್ನು ಬೆಳಿಗ್ಗೆ 10:00 ಗಂಟೆಗೆ ಬದಲಾಯಿಸಲಾಯಿತು ಎನ್ನಲಾಗಿದೆ.
ವಿಜಯ್ ರಾಜಕೀಯ ಪ್ರಯಾಣದುದ್ದಕ್ಕೂ ರಾಧನ್ ಆಪ್ತ ಸಲಹೆಗಾರರಲ್ಲಿ ಒಬ್ಬರಾಗಿದ್ದು, ತಮಿಳುನಾಡಿನಲ್ಲಿ ಪ್ರಮುಖ ಆಧ್ಯಾತ್ಮಿಕ ಗುರು ಮತ್ತು ಜ್ಯೋತಿಷಿ ಎಂದೇ ಖ್ಯಾತರಾಗಿರುವ ರಾಧನ್ ಪಂಡಿತ್ ಮಾರ್ಗದರ್ಶನವನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕೂಡ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಜ್ಯೋತಿಷ್ಯದ ಕುರಿತಾಗಿ ಮಾಹಿತಿ ನೀಡುವ ಇವರು ಕಳೆದ ನಾಲ್ಕು ದಶಕಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net