'ಇದೆಂಥ ಅಸಹ್ಯ'... ನಟಿ ತ್ರಿಷಾ ಹೆಸರು ಕೂಗಿದ ಬೆನ್ನಲ್ಲೇ ಉದಯನಿಧಿ ಸ್ಟಾಲಿನ್ ಕೊಟ್ಟ​ ರಿಯಾಕ್ಷನ್​ಗೆ​ ಟಿವಿಕೆ, ಬಿಜೆಪಿ ಛೀಮಾರಿ

ತಮಿಳುನಾಡು ರಾಜಕೀಯ
ತಮಿಳುನಾಡು ರಾಜಕೀಯ
Published on

ಪ್ರಮುಖ ಮುಖ್ಯಾಂಶಗಳು

  • ಸಿಎಂ ವಿಜಯ್​ರನ್ನು ತರಾಟೆಗೆ ತೆಗೆದುಕೊಂಡ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್
  • ಮಾತಿನ ಮಧ್ಯೆ ನಟಿ ತ್ರಿಷಾ ಹೆಸರು ಕೇಳಿದ ಕೂಡಲೇ ಕೊಟ್ಟ ರಿಯಾಕ್ಷನ್​ಗೆ ಭಾರಿ ಖಂಡನೆ
ಚೆನ್ನೈ: ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಿಎಂ ವಿಜಯ್​ರನ್ನು ತರಾಟೆಗೆ ತೆಗೆದುಕೊಂಡ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಮಾತಿನ ಮಧ್ಯೆ ನಟಿ ತ್ರಿಷಾ ಹೆಸರು ಕೇಳಿದ ಕೂಡಲೇ ಕೊಟ್ಟ ರಿಯಾಕ್ಷನ್​ ಸದ್ಯ ವಿಜಯ್​ ಬೆಂಬಲಿಗರು, ಟಿವಿಕೆ ಮತ್ತು ಬಿಜೆಪಿಯನ್ನು ಅಕ್ಷರಶಃ ಕೆರಳಿಸಿದೆ.

ಎಲ್ಲಿಗೆ ನೀರು ಬರಬೇಕೋ....

ಕಾವೇರಿ ನೀರು ಬಿಡದ ಕರ್ನಾಟಕವನ್ನು ಸಿಎಂ ಸಿ. ಜೋಸೆಫ್ ವಿಜಯ್​ ಪ್ರಶ್ನಿಸದೆ ಸುಮ್ಮನಿದ್ದಾರೆ. ಇದು ಸರಿಯೇ? ಎಂದು ತಂಜಾವೂರಿನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅತ್ತ ನಟಿ ತ್ರಿಷಾ ಹೆಸರು ಪದೇ ಪದೇ ಕೂಗಿದ ತಕ್ಷಣ, 'ಎಲ್ಲಿಗೆ ನೀರು ಬರಬೇಕೋ, ಅಲ್ಲಿಗೆ ಬರಬೇಕು... ನಾನು ಕಾವೇರಿ ಬಗ್ಗೆ ಹೇಳಿದೆ' ಎಂದು ಮಾತು ನಿಲ್ಲಿಸಿ, ತಮ್ಮದೇ ಶೈಲಿಯಲ್ಲಿ ನಗುತ್ತಲೇ ಲುಕ್​ ಕೊಟ್ಟಿದ್ದೇ ಸದ್ಯ ತಮಿಳುನಾಡು ರಾಜಕೀಯದಲ್ಲಿ ಭಾರಿ ವಿವಾದ ಕೆರಳಿಸಿದೆ. ಇದು ಡಬಲ್​ ಮೀನಿಂಗ್​ ಎಂದಿರುವ ಟಿವಿಕೆ, ವಿಜಯ್ ಬೆಂಬಲಿಗರು, ನಟಿಯ ಹೆಸರೇಳಿದ್ದಕ್ಕೆ ಹೀಗಾ ನಡೆದುಕೊಳ್ಳುವುದು? ಇದು ಅಸಹ್ಯಕರ ಎಂದು ಛೀಮಾರಿ ಹಾಕಿದ್ದಾರೆ.
ಸಭೆಯಲ್ಲಿ ವಿಜಯ್ ವಿರುದ್ಧ ಉದಯನಿಧಿ ಸಿಡಿದೆದ್ದು ಮಾತನಾಡುತ್ತಿದ್ದ ವೇಳೆ ಸಾರ್ವಜನಿಕರು, "ತ್ರಿಷಾ, ತ್ರಿಷಾ..." ಎಂದು ಜೋರಾಗಿ ಕೂಗಲು ಆರಂಭಿಸಿದರು. ಇದರಿಂದ ಕೆರಳಿದ ಸ್ಟಾಲಿನ್ ಪುತ್ರ, ಕೆಲ ಸೆಕೆಂಡ್​ ಮಾತು ನಿಲ್ಲಿಸಿ, ನಕ್ಕಿದರು. ಇದನ್ನು ನೋಡಿದ ಟಿವಿಕೆ ಮತ್ತು ಬಿಜೆಪಿ, ನಟಿಯ ಹೆಸರು ಕೇಳಿದ್ದಕ್ಕೆ ಹೀಗಾ ದ್ವಂದ್ವ ಅರ್ಥ ಕೊಡುವ ಹೇಳಿಕೆಯನ್ನು ನೀಡೋದು, ವರ್ತಿಸೋದು? ಎಂದು ತರಾಟೆಗೆ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕು ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಖಂಡನೆಗೆ ಗುರಿಯಾಗಿದೆ.

ಟಿವಿಕೆ, ಬಿಜೆಪಿ ನಾಯಕರ ತೀವ್ರ ಆಕ್ರೋಶ

ಟಿವಿಕೆ ಶಾಸಕ ರೇವಂತ್ ಚರಣ್ ಆಕ್ರೋಶ ವ್ಯಕ್ತಪಡಿಸಿ, "ಇದೆಂಥ ಅಸಹ್ಯಕರ. ಯಾವುದೇ ವ್ಯಕ್ತಿಯ ವಿರುದ್ಧ ಇಂತಹ ಕೀಳುಮಟ್ಟದ ಹೇಳಿಕೆ ನೀಡುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಅವರ ಹತಾಶೆ ಮತ್ತು ರಾಜಕೀಯ ಸಂಸ್ಕೃತಿಯ ಅಧಃಪತನವನ್ನು ಎತ್ತಿಹಿಡಿಯುತ್ತದೆ" ಎಂದಿದ್ದಾರೆ.
ಮತ್ತೊಂದೆಡೆ, ತಮಿಳುನಾಡು ಬಿಜೆಪಿಯ ವಕ್ತಾರ ನಾರಾಯಣನ್ ತಿರುಪತಿ ಮಾತನಾಡಿ, "ತಾಯಿ, ಹೆಂಡತಿ ಮತ್ತು ಮಗಳಿರುವ ಯಾವುದೇ ವ್ಯಕ್ತಿಯು ಸಾರ್ವಜನಿಕವಾಗಿ ಇಷ್ಟು ಕೀಳಾಗಿ ಮಾತನಾಡಲು ಸಾಧ್ಯವಿಲ್ಲ. ಇಂತಹ ಅಸಭ್ಯ ವರ್ತನೆ ತೋರಿದ ಉದಯನಿಧಿಯನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಬೇಕು" ಎಂದು ಸಿಎಂ ವಿಜಯ್ ಅವರನ್ನು ಆಗ್ರಹಿಸಿದ್ದಾರೆ.
ಈ ಹಿಂದೆ ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ಉದಯನಿಧಿ ಸ್ಟಾಲಿನ್​ ಹೇಳಿಕೆಗೆ ಭಾರಿ ಆಕ್ರೋಶ, ಟೀಕೆಗಳು ವ್ಯಕ್ತವಾಗಿತ್ತು. ಸುಪ್ರೀಂ ಕೋರ್ಟ್‌ನಿಂದಲೂ ತೀಕ್ಷ್ಣ ತಾರತಮ್ಯ ಎದುರಿಸಿದ್ದ ಉದಯನಿಧಿ ಸ್ಟಾಲಿನ್, ಟಿವಿಕೆ ಪಕ್ಷದ ವಿರುದ್ಧ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಮತ್ತೆ ಈಗ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವುದು ದುರಂತ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net