ಇಂಡಿಯಾ ಒಕ್ಕೂಟದ ಸಭೆಯಿಂದ ವಿಜಯ್ ನೇತೃತ್ವದ ಟಿವಿಕೆ ದೂರ: ದ್ರಾವಿಡ ರಾಜಕಾರಣದ ಹೊಸ ಬಿಕ್ಕಟ್ಟಿನ ಹಿಂದಿರುವ ಮರ್ಮವೇನು? TVK Skipped INDIA Bloc Meeting

ಇಂಡಿಯಾ ಒಕ್ಕೂಟದ ಸಭೆಯಿಂದ ವಿಜಯ್ ನೇತೃತ್ವದ ಟಿವಿಕೆ ದೂರ: ದ್ರಾವಿಡ ರಾಜಕಾರಣದ ಹೊಸ ಬಿಕ್ಕಟ್ಟಿನ ಹಿಂದಿರುವ ಮರ್ಮವೇನು?
ಇಂಡಿಯಾ ಒಕ್ಕೂಟದ ಸಭೆಯಿಂದ ವಿಜಯ್ ನೇತೃತ್ವದ ಟಿವಿಕೆ ದೂರ: ದ್ರಾವಿಡ ರಾಜಕಾರಣದ ಹೊಸ ಬಿಕ್ಕಟ್ಟಿನ ಹಿಂದಿರುವ ಮರ್ಮವೇನು?
Published on
ಚೆನ್ನೈ: ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳ ಹಿನ್ನಡೆಯ ನಂತರ, ವಿರೋಧ ಪಕ್ಷಗಳ ಒಗ್ಗಟ್ಟನ್ನು ಪರೀಕ್ಷಿಸಲು ನವದೆಹಲಿಯ ಕಾನ್ಸ್ಟಿಟ್ಯೂಷನಲ್ ಕ್ಲಬ್‌ನಲ್ಲಿ ಸೋಮವಾರ ಮಹತ್ವದ ಇಂಡಿಯಾ (TVK Skipped INDIA Bloc Meeting) ಒಕ್ಕೂಟದ ಸಭೆ ನಡೆಯಿತು. ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್​ಜೆಡಿ, ಶಿವಸೇನೆ (ಯುಬಿಟಿ) ಸೇರಿದಂತೆ ಸುಮಾರು 23 ರಾಜಕೀಯ ಪಕ್ಷಗಳು ಭಾಗವಹಿಸಿದ್ದ ಈ ಉನ್ನತ ಮಟ್ಟದ ಸಭೆಯಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಗೈರುಹಾಜರಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ಟಿವಿಕೆ, ರಾಷ್ಟ್ರ ರಾಜಕಾರಣದ ಈ ಪ್ರಮುಖ ಸಭೆಯಿಂದ ದೂರ ಉಳಿದಿರುವುದರ ಹಿಂದೆ ದೊಡ್ಡ ರಾಜಕೀಯ ತಂತ್ರಗಾರಿಕೆ ಅಡಗಿದೆ ಎನ್ನಲಾಗುತ್ತಿದೆ.

ಸಭೆಯಿಂದ ದೂರ ಉಳಿಯಲು 3 ಪ್ರಮುಖ ಕಾರಣಗಳು:

1. ಸಂಸತ್ತಿನಲ್ಲಿ ಪ್ರಾತಿನಿಧ್ಯದ ಕೊರತೆ:

ಸೋಮವಾರ ನಡೆದ ‘ಇಂಡಿಯಾ’ ಒಕ್ಕೂಟದ ಸಭೆಯು ಮುಖ್ಯವಾಗಿ ಮುಂಬರುವ ಸಂಸತ್ ಅಧಿವೇಶನದ ಕಾರ್ಯತಂತ್ರ ಮತ್ತು ರಾಷ್ಟ್ರೀಯ ಮಟ್ಟದ ಸಮನ್ವಯಕ್ಕೆ ಸೀಮಿತವಾಗಿತ್ತು. ಹೀಗಾಗಿ, ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಸಂಸದರನ್ನು ಹೊಂದಿರುವ ಪಕ್ಷಗಳಿಗೆ ಮಾತ್ರ ಕಾಂಗ್ರೆಸ್ ಆಹ್ವಾನ ನೀಡಿತ್ತು ಎನ್ನಲಾಗಿದೆ. ನಟ ವಿಜಯ್ ಅವರ ಟಿವಿಕೆ ಪಕ್ಷವು ಇತ್ತೀಚೆಗಷ್ಟೇ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಗಳಿಸಿದೆಯೇ ಹೊರತು, ಇನ್ನು ಯಾವುದೇ ಲೋಕಸಭಾ ಚುನಾವಣೆಯನ್ನು ಎದುರಿಸಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ಟಿವಿಕೆಗೆ ಆಹ್ವಾನ ಸಿಕ್ಕಿರಲಿಲ್ಲ.

2. ಅಧಿಕೃತವಾಗಿ ಒಕ್ಕೂಟ ಸೇರದ ವಿಜಯ್:

ತಮಿಳುನಾಡಿನಲ್ಲಿ ಸರ್ಕಾರ ರಚನೆಗಾಗಿ ಕಾಂಗ್ರೆಸ್ ಪಕ್ಷವು ಟಿವಿಕೆಯನ್ನು ಬೆಂಬಲಿಸಿದೆಯಾದರೂ, ಈ ಮೈತ್ರಿ ಕೇವಲ ರಾಜ್ಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದೆ. ಟಿವಿಕೆ ಪಕ್ಷವು ಇದುವರೆಗೆ ಅಧಿಕೃತವಾಗಿ ‘ಇಂಡಿಯಾ’ ಒಕ್ಕೂಟದ ಸದಸ್ಯತ್ವವನ್ನು ಪಡೆದುಕೊಂಡಿಲ್ಲ. ತಮಿಳುನಾಡಿನಲ್ಲಿ ಸ್ವತಂತ್ರ ಶಕ್ತಿಯಾಗಿ ಹೊರಹೊಮ್ಮಲು ಬಯಸಿರುವ ವಿಜಯ್, ಸದ್ಯಕ್ಕೆ ಯಾವುದೇ ರಾಷ್ಟ್ರೀಯ ಒಕ್ಕೂಟಗಳೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

3. ಡಿಎಂಕೆ-ಕಾಂಗ್ರೆಸ್ ಮೈತ್ರಿ ಮುರಿದುಬೀಳಲು ಕಾರಣವಾದ ಟಿವಿಕೆ!

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಸೀಟುಗಳ ಪೈಕಿ 108 ಸ್ಥಾನಗಳನ್ನು ಗೆದ್ದು ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ 118 ಸೀಟುಗಳ ಅಗತ್ಯವಿದ್ದಾಗ ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಸಿಕೆ (VCK) ವಿಜಯ್ ಕೈ ಹಿಡಿದಿದ್ದವು. ಇದರಿಂದ ಆಕ್ರೋಶಗೊಂಡ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ, ಕಾಂಗ್ರೆಸ್ ತಮಗೆ ಬೆನ್ನಿಗೆ ಇರಿದಿದೆ ಎಂದು ಆರೋಪಿಸಿ ಎರಡು ದಶಕಗಳ ಮೈತ್ರಿಯನ್ನು ಕಡಿದುಕೊಂಡಿದೆ.

ತಮಿಳುನಾಡಿನಲ್ಲಿ ಹೆಚ್ಚಿದ ರಾಜಕೀಯ ಕಿಚ್ಚು

ಕಾಂಗ್ರೆಸ್ ಪಕ್ಷವು ತಮಗೆ ದ್ರೋಹ ಮಾಡಿದೆ ಎಂದು ಆರೋಪಿಸಿರುವ ಡಿಎಂಕೆ, ಸೋಮವಾರದ ಇಂಡಿಯಾ ಒಕ್ಕೂಟದ ಸಭೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿದೆ. ಅತ್ತ ಭಾನುವಾರವಷ್ಟೇ ಮಾತನಾಡಿದ್ದ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ಈಗ ಅಧಿಕಾರದಲ್ಲಿರುವ ಸರ್ಕಾರದ (ವಿಜಯ್ ಸರ್ಕಾರ) ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಆರು ತಿಂಗಳು ಯಾವುದೇ ಟೀಕೆ ಮಾಡುವುದಿಲ್ಲ ಎಂದಿದ್ದೆ. ಆದರೆ, ಪರಿಸ್ಥಿತಿಗಳು ನನ್ನನ್ನು ಅದಕ್ಕಿಂತ ಮುಂಚೆಯೇ ಮಾತನಾಡುವಂತೆ ಮಾಡುವ ಭೀತಿ ಎದುರಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಟಿವಿಕೆ ವಕ್ತಾರರು, ಡಿಎಂಕೆಗೆ ನೈತಿಕತೆ ಇಲ್ಲ, ಅವರು ದೆಹಲಿಯ ನಾಯಕರ ಆದೇಶ ಪಾಲಿಸುವ ಮೂಲಕ ಬಿಜೆಪಿಯೊಂದಿಗೆ ಗುಪ್ತ ಮೈತ್ರಿ ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ, ಚೆನ್ನೈನಿಂದ ದೆಹಲಿಯವರೆಗೆ ಹರಡಿರುವ ಈ ರಾಜಕೀಯ ಹಗ್ಗಜಗ್ಗಾಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net