ಪ್ರಧಾನಿ ಅಭ್ಯರ್ಥಿ ವಿಚಾರಕ್ಕೆ ಮೈತ್ರಿಕೂಟದಲ್ಲಿ ಬಿರುಕು!...ಸೆಪ್ಟೆಂಬರ್ 9ಕ್ಕೆ ಎರಡನೇ ಸಮನ್ವಯ ಸಭೆ ಕರೆದ ಟಿವಿಕೆ | TVK

TVK | ಸೆಪ್ಟೆಂಬರ್ 9ಕ್ಕೆ ಎರಡನೇ ಸಮನ್ವಯ ಸಭೆ ಕರೆದ ಟಿವಿಕೆ
TVK | ಸೆಪ್ಟೆಂಬರ್ 9ಕ್ಕೆ ಎರಡನೇ ಸಮನ್ವಯ ಸಭೆ ಕರೆದ ಟಿವಿಕೆ
Published on
ನವದೆಹಲಿ: ಮುಂಬರುವ 2029ರ ಲೋಕಸಭಾ ಚುನಾವಣೆಗೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಪ್ರಯತ್ನಗಳ ನಡುವೆ, ಟಿವಿಕೆ (TVK) ತನ್ನ ಮೈತ್ರಿಕೂಟದ ಪಾಲುದಾರರೊಂದಿಗೆ ಸೆಪ್ಟೆಂಬರ್ 9 ರಂದು ಎರಡನೇ ಸಮನ್ವಯ ಸಭೆಯನ್ನು ಕರೆದಿದೆ. ಇದಕ್ಕೂ ಮುನ್ನ ಜುಲೈನಲ್ಲಿ ಕೊವಲಂನ ಖಾಸಗಿ ಹೋಟೆಲ್‌ನಲ್ಲಿ ಮೊದಲ ಸಭೆ ನಡೆದಿತ್ತು.
ಇತ್ತೀಚಿನ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿವಿಕೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಪೂರ್ಣ ಬಹುಮತದ ಕೊರತೆಯಿಂದಾಗಿ ಕಾಂಗ್ರೆಸ್, ವಿಡುದಲೈ ಚಿರುತೈಗಲ್ ಕಚ್ಚಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹಾಗೂ ಎಡಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ.
ಸಭೆಯ ಹಿನ್ನೆಲೆಯಲ್ಲಿ ಟಿವಿಕೆ ಸಚಿವರಾದ ಎನ್. ಆನಂದ್, ಆಧವ್ ಅರ್ಜುನ , ಆರ್. ನಿರ್ಮಲ್ ಕುಮಾರ್ ಹಾಗೂ ಎ. ರಾಜಮೋಹನ್ ಅವರು ಶುಕ್ರವಾರ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡಿಯನ್ ಅವರನ್ನು ಭೇಟಿ ಮಾಡಿ, ಸರ್ಕಾರಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವಂತೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಅವರನ್ನು ಭೇಟಿ ಮಾಡಲಾಗಿದೆ.

ಕಾಂಗ್ರೆಸ್ ಜೊತೆ ಭಿನ್ನಾಭಿಪ್ರಾಯ!...

ಮುಂದಿನ ಸಾರ್ವತ್ರಿಕ ಚುನಾವಣೆಗೆ ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ಟಿವಿಕೆ ಮುಂದಾಗಿರುವುದು ಕಾಂಗ್ರೆಸ್ ಹಾಗೂ ಟಿವಿಕೆ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ವಿಜಯ್​ ಪಕ್ಷವು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳದಿದ್ದರೆ ಮೈತ್ರಿಕೂಟದಿಂದ ಹೊರಬರುವುದಾಗಿ ಕಾಂಗ್ರೆಸ್ ಎಚ್ಚರಿಸಿದೆ.
ಟಿವಿಕೆ ಪಕ್ಷದ ಈ ನಡೆಗೆ ತಮಿಳುನಾಡಿನ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇದನ್ನು ಅಭಿಮಾನಿಗಳ ಮನಸ್ಥಿತಿ ಎಂದು ಟೀಕಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೇ 2029ರಲ್ಲಿ ಪ್ರಧಾನಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ತಮಿಳುನಾಡು ಸರ್ಕಾರದಲ್ಲಿ ಪಿ. ವಿಶ್ವನಾಥನ್ ಮತ್ತು ಎಸ್. ರಾಜೇಶ್ ಕುಮಾರ್ ಅವರು ಕಾಂಗ್ರೆಸ್‌ನಿಂದ ಸಚಿವರಾಗಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ ತಾರಹೈ ಕತ್ಬರ್ಟ್, ಮೈತ್ರಿಕೂಟದ ನಿಲುವಿನಲ್ಲಿ ಯಾವುದೇ ಗೊಂದಲವಿಲ್ಲ. ಸಿಎಂ ವಿಜಯ್ ಅವರೇ ಹಿಂದೆ ರಾಹುಲ್ ಗಾಂಧಿ ಅವರನ್ನು ಮೈತ್ರಿಕೂಟದ ನಾಯಕ ಎಂದು ಒಪ್ಪಿಕೊಂಡಿದ್ದರು, ಶಾಸಕರ ವೈಯಕ್ತಿಕ ಹೇಳಿಕೆಗಳು ಪಕ್ಷದ ಅಧಿಕೃತ ನಿಲುವಾಗುವುದಿಲ್ಲ ಎಂದು ಹೇಳಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net