_1776705105953.webp?w=480&auto=format%2Ccompress&fit=max)
_1776705105953.webp?w=480&auto=format%2Ccompress&fit=max)
ಕರುಣಾನಿಧಿ ಎಂಬ ರಾಜಕೀಯ ಆಲದ ಮರ, ಜಯಲಲಿತಾ ಎಂಬ ಜಗಜಟ್ಟಿಯಂತಹ ನಾಯಕಿಯ ಅನುಪಸ್ಥಿತಿಯಲ್ಲಿ ಭಣಗುಡುತ್ತಿದ್ದ ತಮಿಳು ಮಣ್ಣು ಈಗ ಹೊಸ ನಾಯಕತ್ವದ ಹುಡುಕಾಟದಲ್ಲಿದೆ. ಒಂದೆಡೆ ಚಿತ್ರನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಆರ್ಭಟಿಸುತ್ತಿದ್ದರೆ, ಮತ್ತೊಂದೆಡೆ, ಬಿಜೆಪಿಯ ಅಣ್ಣಾಮಲೈ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಾ ಕೇಸರಿ ಕಹಳೆ ಮೊಳಗಿಸುತ್ತಾ ಹೊಸ ಭರವಸೆ ಬಿತ್ತುತ್ತಿದ್ದಾರೆ.
ಇವರಿಬ್ಬರದ್ದೂ ಕೇವಲ ಮತಗಳ ಬೇಟೆಯಲ್ಲ, ಬದಲಾಗಿ ದಶಕಗಳ ದ್ವಿಪಕ್ಷೀಯ ಏಕಸ್ವಾಮ್ಯವನ್ನು ಮುರಿಯಲು ಹೊರಟಿರುವ ಇಬ್ಬರು ಮಹತ್ವಾಕಾಂಕ್ಷಿ ಕಲಿಗಳ ರಣತಂತ್ರವಾಗಿಯೂ ಜನರ ಕಣ್ಣಿಗೆ ಕಾಣಿಸುತ್ತಿದೆ. ತಮಿಳುನಾಡು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಧರ್ಮಪುರಿಯಿಂದ ಸೇಲಂಗೆ ತೆರಳುವ ನಡುವೆ ‘ವಿಜಯವಾಣಿ’ಯ ಸಹಪ್ರಯಾಣಿಕರಾಗಿದ್ದ ಕುಮರೇಶ್ ತಮ್ಮ ರಾಜ್ಯದ ರಾಜಕೀಯ ವಿಶ್ಲೇಷಣೆ ಮಾಡುತ್ತಾ, ಸಿನಿಮಾ ತೆರೆಯ ಮೇಲೆ ಮಿಂಚಿದ್ದ ‘ಇಳಯ ದಳಪತಿ’ ವಿಜಯ್ ಈಗ ರಾಜಕೀಯದ ರಣರಂಗಕ್ಕೆ ಧುಮುಕಿದ್ದು, ಅವರ ನಡೆ ಈ ಹಂತದಲ್ಲಿ ಡಿಎಂಕೆಯ ಸಾಂಪ್ರದಾಯಿಕ ಮತಬ್ಯಾಂಕಿಗೆ ಬಿರುಗಾಳಿಯಂತೆ ಅಪ್ಪಳಿಸಿದಂತೆಯೇ ಕಾಣಿಸುತ್ತಿದೆ. ಡಿಎಂಕೆ ಪಾಲಿನ ‘ದ್ರಾವಿಡ ಮಾಡೆಲ್’ಗೆ ಸೆಡ್ಡು ಹೊಡೆಯುವಂತೆ ವಿಜಯ್ ರೂಪಿಸುತ್ತಿರುವ ಕಾರ್ಯಸೂಚಿಗಳು ಯುವ ಸಮೂಹವನ್ನು ಸೆಳೆಯುತ್ತಿದೆ ಎಂದರು. ಅಷ್ಟೇ ಅಲ್ಲ ಇದು ಮತಗಟ್ಟೆಯಲ್ಲಿ ಸದ್ದಿಲ್ಲದೆ ದೊಡ್ಡ ಮಟ್ಟದ ಸಂಚಲನ ಮೂಡಿಸುವ ಮುನ್ಸೂಚನೆ ನೀಡುತ್ತಿದೆ. ಇದು ಗೆಲುವಿನ ಗೆರೆ ದಾಟಿಸದೇ ಇದ್ದರೂ ಕಿಂಗ್ ಬ್ರೇಕರ್ ಆಗುವುದಂತೂ ದಿಟ ಎಂಬುದು ಅವರ ವಾದ.
ಇನ್ನು ತಮಿಳುನಾಡಿನ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಹರಡಿರುವ ವಿಜಯ್ ಅಭಿಮಾನಿಗಳ ಸೈನ್ಯವು ಮತದಾರರನ್ನು ಸೆಳೆಯಲು ಬೆವರು ಹರಿಸುತ್ತಿದೆ. ಇದು ಈ ಬಾರಿಯ ಚುನಾವಣೆಯ ಫಲಿತಾಂಶದಲ್ಲಿ ಭಾರಿ ಏರುಪೇರು ಮಾಡುವುದು ನಿಶ್ಚಿತ. ಕ್ಲೋಸ್ ಕಂಟೆಸ್ಟ್ ಇರುವ ಕ್ಷೇತ್ರಗಳಲ್ಲಿ ವಿಜಯ್ ಪಡೆಯುವ ಶೇ. 1- 2ರಷ್ಟು ಮತಗಳು ಸಹ ದೊಡ್ಡ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ತಲೆಕೆಳಗು ಮಾಡುವ ಸಾಮರ್ಥ್ಯ ಹೊಂದಿವೆ.
ಇನ್ನೊಂದೆಡೆ, ಬಿಜೆಪಿಯ ಅಣ್ಣಾಮಲೈ ತಮಿಳುನಾಡಿನ ರಾಜಕಾರಣಕ್ಕೆ ಹೊಸ ರಕ್ತದಾನ ಮಾಡಿದಂತೆಯೇ ಭಾಸವಾಗುತ್ತಿದ್ದಾರೆ. ಸರ್ಕಾರ ಬದಲಿಸಲೇ ಬೇಕೆಂಬ ಹಠಕ್ಕೆ ಬಿದ್ದಂತಿರುವ ಈ ಮಾಜಿ ಐಪಿಎಸ್ ಅಧಿಕಾರಿ, ಭ್ರಷ್ಟಾಚಾರದ ವಿರುದ್ಧ ಸಿಂಹಗರ್ಜನೆ ಮಾಡುತ್ತಾ ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಅಣ್ಣಾಮಲೈ ಹೋದಲ್ಲೆಲ್ಲಾ ಹರಿದುಬರುತ್ತಿರುವ ಜನಸಾಗರವು ಕೇವಲ ಕುತೂಹಲವಲ್ಲ, ಬದಲಿಗೆ ರಾಜಕಾರಣದ ಅತಿರೇಕಗಳಿಗೆ ಜನ ನೀಡುತ್ತಿರುವ ಮೌನ ಪ್ರತಿಭಟನೆಯ ಸಂಕೇತವಾಗಿ ಕಂಡುಬರುತ್ತಿದೆ.
ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟಕ್ಕೆ ಅಣ್ಣಾಮಲೈ ಆಕ್ರಮಣಕಾರಿ ಶೈಲಿಯನ್ನು ದೊಡ್ಡ ಆಸ್ತಿ ಎನ್ನಬಹುದು. ಚುನಾವಣೆಗಳಲ್ಲಿ ಅವರಿಗೆ ಸ್ಪರ್ಧಿಸಲು ಅವಕಾಶ ಸಿಗದಿದ್ದರೂ, ಅವರು ಮಾಡುತ್ತಿರುವ ತಳಮಟ್ಟದ ಸಂಘಟನೆ ಮತ್ತು ಯುವಕರಲ್ಲಿ ತುಂಬುತ್ತಿರುವ ಆತ್ಮವಿಶ್ವಾಸವು ಕೇಸರಿ ಪಕ್ಷಕ್ಕಷ್ಟೇ ಅಲ್ಲದೆ ಎನ್‌ಡಿಎ ಪಾಲುದಾರನಾಗಿರುವ ಎಐಎಡಿಎಂಕೆಗೂ ಹಿಂದೆಂದೂ ಕಾಣದ ಬಲ ತಂದಿದೆ. ಭಾಷೆ ಮತ್ತು ಸಂಸ್ಕೃತಿಯ ಭಾವನಾತ್ಮಕ ಅಸ್ತ್ರಗಳ ನಡುವೆಯೇ ಅಭಿವೃದ್ಧಿಯ ಮಂತ್ರವನ್ನೂ ಜಪಿಸುತ್ತಿರುವ ಅಣ್ಣಾಮಲೈ, ತಮಿಳುನಾಡಿನ ರಾಜಕೀಯ ಸಮೀಕರಣವನ್ನು ಸಂಪೂರ್ಣವಾಗಿ ಹಳಿ ತಪ್ಪಿಸುವ ಲಕ್ಷಣ ತೋರುತ್ತಿದ್ದಾರೆ.
ಈ ಇಬ್ಬರು ನಾಯಕರ ಮಿಂಚಿನ ಸಂಚಾರವು ಕೇವಲ ಯುವ ಮತದಾರರನ್ನು ಸೆಳೆಯುತ್ತಿಲ್ಲ, ಬದಲಾಗಿ ತಟಸ್ಥ ಮತದಾರರನ್ನೂ ಆಲೋಚನೆಗೆ ಹಚ್ಚಿದೆ. ಕರುಣಾನಿಧಿ- ಜಯಲಲಿತಾ ಯುಗದ ಅಂತ್ಯದ ನಂತರ ತಮಿಳುನಾಡು ಒಂದು ಬಲಿಷ್ಠ ಪರ್ಯಾಯ ನಾಯಕತ್ವಕ್ಕಾಗಿ ಹಂಬಲಿಸುತ್ತಿತ್ತು. ಆ ಹಂಬಲಕ್ಕೆ ವಿಜಯ್ ಅವರ ಸಿನಿಮಾ ಗ್ಲಾಮರ್ ಮತ್ತು ಅಣ್ಣಾಮಲೈ ಅವರ ಆಡಳಿತಾತ್ಮಕ ಅನುಭವದ ಬದ್ಧತೆ ಉತ್ತರ ನೀಡುವಂತೆ ತೋರುತ್ತಿದೆ. ಫಲಿತಾಂಶ ಏನೇ ಬರಲಿ, ಸಾಂಪ್ರದಾಯಿಕ ಪಕ್ಷಗಳ ಭದ್ರಕೋಟೆಗಳು ಈ ಬಾರಿ ಬಿರುಕು ಬಿಡುವುದಂತೂ ಗ್ಯಾರಂಟಿ.
ಇದು ನಾಯಕತ್ವ ವಿಚಾರವಾದರೆ ಕಣದಲ್ಲಿ ತಳಮಟ್ಟದಲ್ಲಿ ಫ್ರಿಜ್ ಮತ್ತು ಕೂಪನ್ ಅಬ್ಬರ ಜೋರಾಗಿದೆ. ಸೇಲಂನಲ್ಲಿ ಪ್ರತಿಕ್ರಿಯೆ ನೀಡಿದ ಸೆಲ್ವ ಕುಮಾರ್, ಚುನಾವಣೆಯಲ್ಲಿ ಗೆದ್ದರೆ ಎಂಟು ಸಾವಿರ ರೂ. ಮೌಲ್ಯದ ಕೂಪನ್ ನೀಡುವುದಾಗಿ ಡಿಎಂಕೆ ಪ್ರಚಾರ ಮಾಡುತ್ತಿದೆ. ಪ್ರತಿಯಾಗಿ ಪ್ರತಿ ಮನೆಗೆ ಫ್ರಿಜ್ ನೀಡುವುದಾಗಿ ಮತ್ತು ಒಂದು ಬಾರಿಗೆ ಹತ್ತು ಸಾವಿರ ರೂ. ನೀಡುವುದಾಗಿ ಎಐಎಡಿಎಂಕೆ ಘೋಷಿಸಿದೆ. ಮತದಾರರ ನಡುವೆ ಇದೇ ವಿಚಾರವಾಗಿ ಲಾಭ ನಷ್ಟದ ಚರ್ಚೆಯಾಗುತ್ತಿದೆ. ಇದು ಖಂಡಿತ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಅಂದಹಾಗೆ ತಮಿಳುನಾಡು ಚುನಾವಣೆ ಕಣ ಉಡುಗೊರೆ ವಿಚಾರದಲ್ಲಿ ಹಿಂದಿನಿಂದಲೂ ರಾಷ್ಟ್ರದ ಗಮನ ಸೆಳೆದಿದೆ. ಟಿವಿ, ಸ್ಕೂಟಿ, ಫ್ಯಾನ್ ಮತದಾರರ ಮನೆ ಸೇರಿದ್ದಿದೆ. ಈ ಬಾರಿ ಫ್ರಿಜ್ ಆಸೆ ತೋರಿಸಲಾಗಿದೆ.
ಕಳೆದ ಹದಿನೈದು ದಿನಗಳಿಂದ ತಮಿಳುನಾಡಿನ ಊಟಿ ಭಾಗದಲ್ಲಿ ನಮ್ಮ ಪಕ್ಷದ ಪರ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ಎನ್‌ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತವೆಂಬುದು ತಳಮಟ್ಟದ ಜನಾಭಿಪ್ರಾಯದಿಂದ ಗೊತ್ತಾಗುತ್ತಿದೆ. ಡಿಎಂಕೆ ವಿರುದ್ಧ ದೊಡ್ಡ ಪ್ರಮಾಣದ ಆಡಳಿತ ವಿರೋಧಿ ಅಲೆ ಎಲ್ಲೆಡೆ ಕಂಡುಬರುತ್ತಿದೆ. ಮೋದಿ, ಎಡಪ್ಪಾಡಿ, ಅಣ್ಣಾಮಲೈ ನೇತೃತ್ವದಲ್ಲಿ ಮೇ 4 ರ ನಂತರ ಹೊಸ ಶಕೆ ಖಂಡಿತ.| ಎಂ.ಜಿ. ಮಹೇಶ್, ಊಟಿ ಭಾಗದಲ್ಲಿ ಚುನಾವಣೆ ಕಾರ್ಯದಲ್ಲಿರುವ ಬಿಜೆಪಿ ವಕ್ತಾರ
2021ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ 10 ಕ್ಷೇತ್ರಗಳಲ್ಲಿ ಗೆಲುವಿನ ಅಂತರವು ಸಾವಿರ ಮತಗಳಿಗಿಂತ ಕಡಿಮೆ ಇತ್ತು. ಸುಮಾರು 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವಿನ ಅಂತರವು 5 ಸಾವಿರ ಮತಗಳಿಗಿಂತ ಕಡಿಮೆ ಇತ್ತು. ಈ ‘ಕ್ಲೋಸ್ ಫೈಟ್’ ಕ್ಷೇತ್ರಗಳಿಂದ ಅತಿ ಹೆಚ್ಚು ಲಾಭ ಪಡೆದಿದ್ದು ಡಿಎಂಕೆ ಮತ್ತು ಅದರ ಮೈತ್ರಿಕೂಟ. ವಿಶೇಷವಾಗಿ ಗ್ರಾಮೀಣ ಮತ್ತು ಅರೆ-ಪಟ್ಟಣ ಪ್ರದೇಶಗಳಲ್ಲಿ ಡಿಎಂಕೆ ಅಭ್ಯರ್ಥಿಗಳು ಎದುರಾಳಿಗಳ ಕಠಿಣ ಸವಾಲನ್ನು ಮೀರಿ ಅಲ್ಪ ಮತಗಳಿಂದ ಗೆದ್ದು ಬೀಗಿದರು. ಈ ನಿಕಟ ಪೈಪೋಟಿಯಿಂದ ಅತಿ ಹೆಚ್ಚು ನಷ್ಟ ಅನುಭವಿಸಿದ್ದು ಎಐಎಡಿಎಂಕೆ. 2021ರ ಈ ನಿಕಟ ಕದನಗಳು 2026ರ ಚುನಾವಣೆಗೆ ದಿಕ್ಸೂಚಿಯಂತಾಗಿವೆ. ಕಡಿಮೆ ಅಂತರದ ಸೋಲು- ಗೆಲುವುಗಳು ಪಕ್ಷಗಳ ತಳಮಟ್ಟದ ಸಂಘಟನೆಯ ಮಹತ್ವವನ್ನು ನೆನಪಿಸಿವೆ.