ಮೊದಲು ವೃತ್ತಿಧರ್ಮ, ಆಮೇಲೆ ಮದುವೆ!...ಅಸ್ವಸ್ಥರಾದ ಕ್ಯಾಟರಿಂಗ್ ಸಿಬ್ಬಂದಿಗೆ ಚಿಕಿತ್ಸೆ ನೀಡಿದ ಕೇರಳದ ವಧು: ವಿಡಿಯೋ ವೈರಲ್! | Doctor Bride

Doctor Bride | ಅಸ್ವಸ್ಥರಾದ ಕ್ಯಾಟರಿಂಗ್ ಸಿಬ್ಬಂದಿಗೆ ಚಿಕಿತ್ಸೆ ನೀಡಿದ ಕೇರಳದ ವಧು: ವಿಡಿಯೋ ವೈರಲ್!
Doctor Bride | ಅಸ್ವಸ್ಥರಾದ ಕ್ಯಾಟರಿಂಗ್ ಸಿಬ್ಬಂದಿಗೆ ಚಿಕಿತ್ಸೆ ನೀಡಿದ ಕೇರಳದ ವಧು: ವಿಡಿಯೋ ವೈರಲ್!
Published on

ಕೇರಳದಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭವೊಂದರಲ್ಲಿ, ನವಜೀವನಕ್ಕೆ ಕಾಲಿಡುತ್ತಿದ್ದ ವೈದ್ಯೆಯೊಬ್ಬರು ತಮ್ಮ ವಿವಾಹದ ಸಂಭ್ರಮದ ನಡುವೆಯೇ ಅಸ್ವಸ್ಥಗೊಂಡ ಇಬ್ಬರು ಕ್ಯಾಟರಿಂಗ್ ಸಿಬ್ಬಂದಿಗಳಿಗೆ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಣ್ಣೂರಿನ ಪಾನೂರ್ ಮೂಲದ ಡಾ. ಶಿರಿನ್ ಸುಬೈರ್ ಅವರು ಡಾ. ರಿಜಾಜ್ ಅವರೊಂದಿಗೆ ನೂತನ ಜೀವನಕ್ಕೆ ಕಾಲಿಡುತ್ತಿದ್ದರು. ಮದುವೆಯ ಕಾರ್ಯಕ್ರಮ ನಡೆಯುತ್ತಿದ್ದಾಗ, ಅಡುಗೆ ಕಾರ್ಯದಲ್ಲಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಅಸ್ವಸ್ಥಗೊಂಡರು. ಅವರಲ್ಲಿ ಒಬ್ಬರಿಗೆ ಮೂಗಿನಿಂದ ರಕ್ತಸ್ರಾವವಾಗಲು ಪ್ರಾರಂಭವಾದರೆ, ಮತ್ತೊಬ್ಬರಿಗೆ ತಲೆಸುತ್ತು ಕಾಣಿಸಿಕೊಂಡಿತು. ಈ ಘಟನೆಯ ಕುರಿತಂತೆ ಮಂಟಪದಲ್ಲಿದ್ದವರು ಶಿರಿನ್​ಗೆ ವಿಷಯ ತಿಳಿಸಿ ನೆರವಿಗೆ ಕರೆದರು. ಈ ವಿಷಯವಾಗಿ ಮಾತನಾಡಿರುವ ಶಿರಿನ್​, ಒಬ್ಬ ವೈದ್ಯೆಯಾಗಿ ಏನು ಮಾಡಬೇಕೋ ಅದನ್ನು ತಕ್ಷಣವೇ ಮಾಡಿದೆ ಎಂದು ತಿಳಿಸಿದ್ದಾರೆ.

ಒಟ್ಟಾಪಾಲಂನ ವಲ್ಲುವನಾಡ್ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ಮೊದಲ ವರ್ಷದ ಎಂಡಿ ವ್ಯಾಸಂಗ ಮಾಡುತ್ತಿರುವ ಡಾ. ಶಿರಿನ್, ಆ ಮಹಿಳೆಯರನ್ನು ಆಸ್ಪತ್ರೆಗೆ ಸೇರಿಸುವುದಕ್ಕಿಂತ ಮುಂಚೆ ಅಗತ್ಯವಿದ್ದ ಪ್ರಥಮ ಚಿಕಿತ್ಸೆಯನ್ನು ನೀಡಿದರು. ಮೂಗಿನಿಂದ ರಕ್ತಸ್ರಾವವಾಗುತ್ತಿದ್ದ ಮಹಿಳೆಗೆ ಮುಂದೆ ಬಾಗಿ, ಬಾಯಿಯಿಂದ ಉಸಿರಾಡುತ್ತಾ ಮೂಗಿನ ಮೃದುವಾದ ಭಾಗವನ್ನು 10 ರಿಂದ 15 ನಿಮಿಷಗಳ ಕಾಲ ಗಟ್ಟಿಯಾಗಿ ಹಿಡಿದುಕೊಳ್ಳಲು ಸಲಹೆ ನೀಡಿದರು. ತಲೆಸುತ್ತಿನಿಂದ

ಬಳಲುತ್ತಿದ್ದ ಮತ್ತೊಬ್ಬ ಮಹಿಳೆಯನ್ನು ಕಾಲನ್ನು ಸ್ವಲ್ಪ ಮೇಲಕ್ಕೆತ್ತಿ ಮಲಗುವಂತೆ ಮಾಡಿದರು.

ಮೆಚ್ಚುಗೆಗೆ ಪಾತ್ರವಾದ ಶಿರಿನ್ ಸಮಯಪ್ರಜ್ಞೆ

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದ್ದು, ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದ್ದರೂ, ಡಾ. ಶಿರಿನ್ ಇದನ್ನು ಅತ್ಯಂತ ಸಾಧಾರಣ ಘಟನೆ ಎಂದು ಕರೆದಿದ್ದಾರೆ. ರಸ್ತೆಯಲ್ಲಿ ಯಾರಾದರೂ ಕುಸಿದುಬಿದ್ದಾಗ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದಿರುವ ಅವರು, ಸಾರ್ವಜನಿಕರಲ್ಲಿ ಪ್ರಾಥಮಿಕ ಚಿಕಿತ್ಸೆ ಹಾಗೂ ಸಿಪಿಆರ್ ಅರಿವು ಇರಬೇಕಾದ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಇದನ್ನೆಲ್ಲಾ ಯಾರೋ ವಿಡಿಯೋ ಮಾಡುತ್ತಿದ್ದಾರೆ ಎಂಬುದು ಶಿರಿನ್ ಅವರಿಗೆ ತಿಳಿದಿರಲಿಲ್ಲ. ಆಂಧ್ರಪ್ರದೇಶದಲ್ಲಿ ಅಸ್ಥಿಚಿಕಿತ್ಸೆ (ಆರ್ಥೋಪೆಡಿಕ್ಸ್) ವಿಭಾಗದಲ್ಲಿ ಸ್ನಾತಕೋತ್ತರ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಅವರ ಪತಿ ಡಾ. ರಿಜಾಜ್, ತುರ್ತು ವೈದ್ಯಕೀಯ ತಜ್ಞರಿಗೆ ಇಂತಹ ಪರಿಸ್ಥಿತಿಗಳಲ್ಲಿ ತಕ್ಷಣವೇ ಸ್ಪಂದಿಸುವ ಶಕ್ತಿ ಹೆಚ್ಚಿರುತ್ತದೆ ಎಂದಿದ್ದಾರೆ. ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಪ್ರತಿಯೊಬ್ಬರಿಗೂ ಪ್ರಾಥಮಿಕ ಚಿಕಿತ್ಸೆಯ ಜ್ಞಾನವಿದ್ದರೆ ತಕ್ಷಣವೇ ಜೀವ ಉಳಿಸಲು ನೆರವಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net