ಕೋರ್ಟ್ ಆವರಣದಲ್ಲೇ ಮಮತಾ ಬ್ಯಾನರ್ಜಿಗೆ ಚೋರ್ ನಿಂದನೆ; ಹಲ್ಲೆಯ ಆರೋಪ ಮಾಡಿದ ಮಾಜಿ ಸಿಎಂ! ವಿಡಿಯೋ ವೈರಲ್​ | Chor Slogans

Chor Slogans | ಕೋರ್ಟ್ ಆವರಣದಲ್ಲೇ ಮಮತಾ ಬ್ಯಾನರ್ಜಿಗೆ ಚೋರ್ ನಿಂದನೆ
Chor Slogans | ಕೋರ್ಟ್ ಆವರಣದಲ್ಲೇ ಮಮತಾ ಬ್ಯಾನರ್ಜಿಗೆ ಚೋರ್ ನಿಂದನೆ
Published on
ಕೊಲ್ಕತ್ತಾ: ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯ ಬಳಿಕ ನಡೆದ ಹಿಂಸಾಚಾರ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಗಳ ಮೇಲಿನ ದಾಳಿಗೆ ಸಂಬಂಧಿಸಿದ ಪ್ರಕರಣದ ವಾದ ಮಂಡಿಸಲು ಗುರುವಾರ ಕೊಲ್ಕತ್ತಾ ಹೈಕೋರ್ಟ್‌ಗೆ ಹಾಜರಾಗಿದ್ದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಉದ್ರಿಕ್ತ ಗುಂಪಿನಿಂದ ಚೋರ್, ಚೋರ್ (Chor Slogans) ಘೋಷಣೆ ಕೇಳಿಬಂದಿರುವ ವಿಡಿಯೋವೊಂದು ವೈರಲ್​ ಆಗಿದೆ.
ಮಮತಾ ಬ್ಯಾನರ್ಜಿ ಅವರು ವಾದ ಮಂಡನೆ ಮುಗಿಸಿ ನ್ಯಾಯಾಲಯದ ಆವರಣದಿಂದ ಹೊರಡುತ್ತಿದ್ದಂತೆ, ಅಲ್ಲಿ ನೆರೆದಿದ್ದ ಗುಂಪಿನಿಂದ ಈ ಘೋಷಣೆಗಳು ಕೇಳಿಬಂದವು. ಈ ಘಟನೆಯಿಂದ ಆಘಾತಕ್ಕೊಳಗಾದ ದೀದಿ, ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳೊಂದಿಗೆ ಅಸಮಾಧಾನ ತೋಡಿಕೊಂಡರು.

ತೃಣಮೂಲ ಕಾಂಗ್ರೆಸ್ ನಾಯಕರ ಖಂಡನೆ

ಈ ಬೆಳವಣಿಗೆಯನ್ನು ತೃಣಮೂಲ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದು, ಮಮತಾರೊಂದಿಗೆ ನ್ಯಾಯಾಲಯಕ್ಕೆ ಬಂದಿದ್ದ ಟಿಎಂಸಿ ನಾಯಕ, ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ, ಬಿಜೆಪಿಯ ಪ್ರಭಾವದಲ್ಲಿರುವ ವಕೀಲರು ಮಾಜಿ ಮುಖ್ಯಮಂತ್ರಿಯನ್ನು ಕೆಣಕಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದರು. ನ್ಯಾಯಾಲಯ ಯಾರನ್ನೊ ಸಾರ್ವಜನಿಕವಾಗಿ ಕಳ್ಳ ಅಥವಾ ಡಕಾಯಿತ ಎಂದು ಹಣೆಪಟ್ಟಿ ಕಟ್ಟುವ ಸ್ಥಳವಲ್ಲ. ಮಾಜಿ ಮುಖ್ಯಮಂತ್ರಿಯವರಿಗೇ ಇಂತಹ ಪರಿಸ್ಥಿತಿ ಎದುರಾಗುವುದಾದರೆ, ಬಂಗಾಳದ ಟಿಎಂಸಿ ಕಾರ್ಯಕರ್ತರ ಪ್ರಸ್ತುತ ಸ್ಥಿತಿ ಹೇಗಿರಬಹುದು ನೀವೆ ಊಹಿಸಿ ಎಂದು ಆತಂಕ ವ್ಯಕ್ತಪಡಿಸಿದರು.
ತೃಣಮೂಲ ವಕ್ತಾರ ಅರೂಪ್ ಚಕ್ರವರ್ತಿ ಕೂಡ ಪ್ರತಿಕ್ರಿಯಿಸಿದ್ದು, ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಕೋರಲು ಹೋದವರನ್ನು ಈ ರೀತಿ ಕೆಣಕಿದರೆ, ಹೊಸ ಬಿಜೆಪಿ ಆಡಳಿತದಲ್ಲಿ ರಾಜ್ಯದ ಪ್ರಜಾಪ್ರಭುತ್ವದ ವಾತಾವರಣ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದು ಕಿಡಿ ಕಾರಿದರು.

ನ್ಯಾಯಾಲಯದಲ್ಲಿ ವಾದ ಮಂಡನೆ

ಇದಕ್ಕೂ ಮುನ್ನ, ಮಮತಾ ಬ್ಯಾನರ್ಜಿ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದರು. ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯದ ಜನರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟಲು ನ್ಯಾಯಾಲಯದ ಮಧ್ಯಸ್ಥಿಕೆಗೆ ಮನವಿ ಮಾಡಿದರು.
ಈ ಪ್ರಕರಣವು ತೃಣಮೂಲ ಕಾಂಗ್ರೆಸ್ ಪರವಾಗಿ ವಕೀಲ ಶಿರ್ಷಣ್ಯ ಬಂಡೋಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (PIL) ಸಂಬಂಧಿಸಿದ್ದಾಗಿದೆ. ಅರ್ಜಿದಾರರ ಪ್ರಕಾರ, ಹಲವಾರು ತೃಣಮೂಲ ನಾಯಕರು ಮತ್ತು ಕಾರ್ಯಕರ್ತರು ಪಕ್ಷದೊಂದಿಗಿನ ಸಂಬಂಧದಿಂದಾಗಿ ದಾಳಿಗೊಳಗಾಗಿದ್ದಾರೆ ಮತ್ತು ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗುವಂತೆ ಒತ್ತಾಯಿಸಲಾಗಿದೆ. ಮೇ 12 ರಂದು ಸಲ್ಲಿಸಲಾಗಿದ್ದ ಈ ಅರ್ಜಿಯ ವಿಚಾರಣೆ ಗುರುವಾರ ವಿಭಾಗೀಯ ಪೀಠದ ಮುಂದೆ ನಡೆಯಿತು.

ಸಾಂವಿಧಾನಿಕ ಮೌಲ್ಯಗಳಿಗಾಗಿ ಹೋರಾಟ ನಿರಂತರ ಎಂದ ಟಿಎಂಸಿ

ಮಮತಾ ಬ್ಯಾನರ್ಜಿ ನ್ಯಾಯಾಲಯಕ್ಕೆ ಹಾಜರಾದ ಬೆನ್ನಲ್ಲೇ ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ತೃಣಮೂಲ ಕಾಂಗ್ರೆಸ್, ಇಂದು ನ್ಯಾಯಾಲಯದಲ್ಲಿ ಅವರ ಖುದ್ದು ಹಾಜರಾತಿಯು ಜನರ ಪರವಾಗಿ ಅವರಿಗಿರುವ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಬಂಗಾಳದ ಜನರಿಗೆ ಅಗತ್ಯವಿರುವ ಸಮಯದಲ್ಲಿ ಅವರು ಎಂದಿಗೂ ಕೈಬಿಡುವುದಿಲ್ಲ. ಸತ್ಯ, ನ್ಯಾಯ ಮತ್ತು ಸಾಂವಿಧಾನಿಕ ಮೌಲ್ಯಗಳಿಗಾಗಿ ಅವರ ಹೋರಾಟ ನಿರಂತರವಾದುದು ಎಂದು ಬರೆದುಕೊಂಡಿದೆ.
ಬಿಜೆಪಿಯದ್ದು ದ್ವೇಷದ ರಾಜಕೀಯ ಎಂದಿರುವ ಟಿಎಂಸಿ, ಮಮತಾ ಬ್ಯಾನರ್ಜಿ ಅಂತಹ ಟೀಕೆಗಳಿಗಿಂತಲೂ ಎತ್ತರಕ್ಕೆ ಬೆಳೆದಿದ್ದಾರೆ ಮತ್ತು ಈ ಮೂಲಕ ತಮ್ಮ ಕರುಣೆ, ಧೈರ್ಯ ಹಾಗೂ ದೃಢನಿಶ್ಚಯವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದೆ. ಎಸ್‌ಐಆರ್ ಅನ್ಯಾಯವನ್ನು ಎದುರಿಸುವುದಿರಲಿ ಅಥವಾ ಬಿಜೆಪಿಯ ನಡವಳಿಕೆಯ ವಿರುದ್ಧ ದೃಢವಾಗಿ ನಿಲ್ಲುವುದಿರಲಿ, ದೇಶದಲ್ಲಿ ಅವರಂತಹ ಧೀಮಂತ ನಾಯಕಿ ಮತ್ತೊಬ್ಬರಿಲ್ಲ ಎಂಬುದನ್ನು ಅವರು ಸತತವಾಗಿ ಸಾಬೀತುಪಡಿಸುತ್ತಲೇ ಇದ್ದಾರೆ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ. ಪ್ರಸ್ತುತ ಈ ಪ್ರಕರಣವು ನ್ಯಾಯಾಂಗದ ಪರಿಗಣನೆಯಲ್ಲಿದ್ದು, ಅರ್ಜಿಯಲ್ಲಿ ಎತ್ತಲಾದ ಚುನಾವಣೋತ್ತರ ಹಿಂಸಾಚಾರದ ಆರೋಪಗಳನ್ನು ಕಲ್ಕತ್ತಾ ಹೈಕೋರ್ಟ್ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಳು ನಡೆಯುವ ನಿರೀಕ್ಷೆಯಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net