ಪ್ರಧಾನಿ ಮೋದಿಗೆ 'ಝಲ್ಮುರಿ' ನೀಡಿದ್ದ ವ್ಯಾಪಾರಿಗೆ ಕೊಲೆ ಬೆದರಿಕೆ; ಎಚ್ಚರಿಕೆ ಕರೆ ಬೆನ್ನಲ್ಲೇ ಪೊಲೀಸರಿಂದ ಬಿಗಿ ಭದ್ರತೆ! | Jhalmuri Vendor

Jhalmuri Vendor | ಪ್ರಧಾನಿ ಮೋದಿಗೆ 'ಝಲ್ಮುರಿ' ನೀಡಿದ್ದ ವ್ಯಾಪಾರಿಗೆ ಕೊಲೆ ಬೆದರಿಕೆ
Jhalmuri Vendor | ಪ್ರಧಾನಿ ಮೋದಿಗೆ 'ಝಲ್ಮುರಿ' ನೀಡಿದ್ದ ವ್ಯಾಪಾರಿಗೆ ಕೊಲೆ ಬೆದರಿಕೆ
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಸಿದ್ಧ ತಿಂಡಿ ಝಲ್ಮುರಿ ನೀಡಿದ್ದ ವ್ಯಾಪಾರಿ (Jhalmuri Vendor) ವಿಕ್ರಮ್ ಸಾವೊಗೆ ಕೊಲೆ ಹಾಗೂ ಬಾಂಬ್ ದಾಳಿಯ ಬೆದರಿಕೆ ಕರೆ ಬಂದಿದ್ದು, ಈ ಆಘಾತಕಾರಿ ಘಟನೆಯ ಕುರಿತು ಸ್ವತಃ ಪ್ರತಿಕ್ರಿಯೆ ನೀಡಿರುವ ಸಾವೊ, ತಮಗೆ ವಾಟ್ಸಾಪ್ ಮೂಲಕ ಅಪರಿಚಿತರಿಂದ ಜೀವಬೆದರಿಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಅವರು ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸದ್ಯ ಪೊಲೀಸರು ಸಾವೊಗೆ ಸೂಕ್ತ ರಕ್ಷಣೆ ಒದಗಿಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ಕೃಷ್ಣನಗರದಲ್ಲಿ ನಡೆದ ಚುನಾವಣಾ ರ‍್ಯಾಲಿಯ ಸಂದರ್ಭದಲ್ಲಿ ವಿಕ್ರಮ್ ಸಾವೊ ಪ್ರಧಾನಿ ಮೋದಿಗೆ ಝಲ್ಮುರಿ ನೀಡಿದ್ದರು. ಈ ಘಟನೆಯ ಬಳಿಕವೇ ಅವರಿಗೆ ಇಂತಹ ಬೆದರಿಕೆ ಕರೆಗಳು ಬರಲಾರಂಭಿಸಿವೆ ಎಂದು ವರದಿಯಾಗಿದೆ.
ಝಾರ್ಗ್ರಾಮ್ ಮೂಲದ ಈ ವ್ಯಾಪಾರಿಗೆ ಬಂದಿರುವ ಜೀವಬೆದರಿಕೆ ಕುರಿತು ಪಶ್ಚಿಮ ಬಂಗಾಳದ ಸಚಿವ ದಿಲೀಪ್ ಘೋಷ್ ತೀವ್ರ ಆಕ್ರೋಶ ಹೊರಹಾಕಿದ್ದು, ಇಂತಹ ಕೃತ್ಯಗಳ ಮೂಲಕ ದೇಶದಲ್ಲಿ ಅನಾವಶ್ಯಕವಾಗಿ ಉದ್ವೇಗ ಮೂಡಿಸಲು ಮತ್ತು ಶಾಂತಿ ಕದಡಲು ಯತ್ನಿಸುವ ಕೆಲವು ವ್ಯಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ, ಇಂತಹ ದುಷ್ಕೃತ್ಯಗಳ ಮೂಲಕ ಭಾರತದಲ್ಲಿ ಆತಂಕ ಸೃಷ್ಟಿಸುವ ಕಾಲ ಈಗ ಮುಗಿದುಹೋಗಿದೆ. ಈಗ ಇರುವುದು ನಮ್ಮ ಸರ್ಕಾರ, ಪ್ರತಿಯೊಂದು ಇಂತಹ ಬೆದರಿಕೆಗಳಿಗೂ ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗೆ ಬಿಜೆಪಿ ಸರ್ಕಾರದ ಬುಲ್ಡೋಜರ್ ಸಂಸ್ಕೃತಿ ವಿರುದ್ಧ ಪ್ರತಿಭಟನೆ ನಡೆಸುವ ಕುರಿತು ಚರ್ಚಿಸಲು ತಮ್ಮ ಪಕ್ಷದ ಶಾಸಕರ ತುರ್ತು ಸಭೆ ಕರೆದಿರುವುದನ್ನು ದಿಲೀಪ್ ಘೋಷ್ ತೀವ್ರವಾಗಿ ಟೀಕಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿದ್ದ ಅಧಿಕಾರ ಅವಧಿಯಲ್ಲಿ ಇಂತಹ ಸಭೆಗಳನ್ನು ನಡೆಸಿ ಜನರ ಕಷ್ಟಗಳನ್ನು ಆಲಿಸಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಹಿಂದೆ ಬಂಗಾಳದಲ್ಲಿ ಏನು ನಡೆಯುತ್ತಿದೆ ಎಂಬ ಕನಿಷ್ಠ ಕಲ್ಪನೆಯೂ ಅಂದಿನ ಮುಖ್ಯಮಂತ್ರಿಗೆ ಇರಲಿಲ್ಲ ಮತ್ತು ಆಗಿನ ಆಡಳಿತವು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು. ಈಗ ನಡೆಸುತ್ತಿರುವ ಸಭೆಗಳನ್ನು ಅಂದೇ ನಡೆಸಿ ಜನರ ಸಂಕಷ್ಟಗಳನ್ನು ಅರ್ಥಮಾಡಿಕೊಂಡಿದ್ದರೆ, ಇಂದು ಬಂಗಾಳದ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಘೋಷ್ ಲೇವಡಿ ಮಾಡಿದ್ದಾರೆ(ಏಜೆನ್ಸೀಸ್​​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net