ವಿಬಿ ಜಿ ರಾಮ್ ಜಿ ಯೋಜನೆ ಇಂದಿನ ಅವಶ್ಯಕತೆ

ವಿಬಿ ಜಿ ರಾಮ್ ಜಿ ಯೋಜನೆ
ವಿಬಿ ಜಿ ರಾಮ್ ಜಿ ಯೋಜನೆ
Published on

ಅದರ ಪ್ರಯೋಜನವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದು ಅದಕ್ಕಿಂತ ಮುಖ್ಯ. ಇದೇ ಸುಶಾಸನದ ಲಕ್ಷಣ. 2005ರಲ್ಲಿ ಜಾರಿಗೆ ಬಂದಿದ್ದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಾಗಲೇ 20 ವರ್ಷಗಳು ಸಂದಿದ್ದವು. ಅದರ ಉದ್ದೇಶ ಸಾರ್ಥಕತೆ ಈಡೇರಿಕೆ ಬಗ್ಗೆ ಕೂಲಂಕಷವಾಗಿ ಪರಾಮಶಿಸಿಯೇ ಹೊಸ ಯೋಜನೆ ಸಾಕಾರಗೊಂಡಿದ್ದು. ಹಳೆಯ ಯೋಜನೆಯಲ್ಲಿನ ಎಲ್ಲ ಉತ್ತಮ ಅಂಶಗಳನ್ನು ಉಳಿಸಿಕೊಂಡು 2047ರ ಹೊತ್ತಿಗೆ ಪರಿಪೂರ್ಣ ವಿಕಸಿತ ಭಾರತದತ್ತ ಮುನ್ನಡೆಯುವ ಏಕೈಕ ಉದ್ದೇಶವೇ ಈ ಹೊಸ ಕಾನೂನು ಹಾಗೂ ಯೋಜನೆಯ ಮುಖ್ಯ ಗುರಿ.

ವಿರೋಧ ಏಕೆ?: ಹೊಸ ಕಾನೂನಿನಲ್ಲಿ 60 ದಿನಗಳ ಬಿಡುವು, ಕೇಂದ್ರ ಮತ್ತು ರಾಜ್ಯಗಳ ನಡುವಿನ ಅನುದಾನ ಪ್ರಮಾಣದಲ್ಲಿನ ಬದಲಾವಣೆ (60:40), ಬೇಡಿಕೆ ಆಧಾರಿತ ಕೆಲಸದ ಬದಲಾಗಿ ಪೂರೈಕೆ ಆಧಾರಿತ ಕೆಲಸದ ವ್ಯವಸ್ಥೆ, ಕೆಲಸ ನೀಡದಿರುವಾಗ ಪರಿಹಾರ ನೀಡಿಕೆ, ರಾಜ್ಯಗಳ ಮೇಲಿನ ಹೆಚ್ಚುವರಿ ಭಾರ, ರಾಷ್ಟ್ರೀಯ ಗ್ರಾಮೀಣ ಸಂಪನ್ಮೂಲಗಳೊಂದಿಗೆ ಕಾಮಗಾರಿಗಳ ಅಗತ್ಯತೆಯ ಜೋಡಣೆ, ಗ್ರಾಮ ಸಭೆಗಳನ್ನು ದುರ್ಬಲಗೊಳಿಸುವ ಹುನ್ನಾರ, ಜಾಬ್ ಕಾರ್ಡ್​ಗಳ ಅವಧಿಯನ್ನು ಐದು ವರ್ಷದಿಂದ ಮೂರು ವರ್ಷಗಳಿಗೆ ಕಡಿತ ಮಾಡಿರುವುದು, ಕಾಮಗಾರಿಗಳನ್ನು ಕೇವಲ ನಾಲ್ಕು ಪ್ರವರ್ಗಗಳಿಗೆ ಸೀಮಿತಗೊಳಿಸಿರುವುದು ಮುಂತಾದ ಕೆಲವು ಸಂಕುಚಿತ ಹಾಗೂ ನಿರಾಧಾರ ವಾದ ಸರಣಿ ಮುಂದಿಟ್ಟಿರುವುದು ಕೇವಲ ವಿರೋಧಕ್ಕಾಗಿ ವಿರೋಧವೆಂಬಂತಿದೆ.

ವಿಬಿ ಜಿ ರಾಮ್ ಜಿ ಏಕೆ ಅಗತ್ಯವಾಯಿತು?: 2006ರಲ್ಲಿ ಯುಪಿಎ ಸರ್ಕಾರ ಜಾರಿಗೊಳಿಸಿದ್ದು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಕೃಷಿ ಉದ್ಯೋಗ ಅವಲಂಬಿತ ನಮ್ಮ ದೇಶದ ಗ್ರಾಮೀಣ ಜನರಿಗೆ ಶಾಸನಬದ್ಧ ಕಾಲೋಚಿತ ಉದ್ಯೋಗ ನೀಡಿ ಜೀವನಕ್ಕೆ ಭದ್ರತೆ ನೀಡುವ ಒಂದು ಉತ್ತಮ ಕಾನೂನು ಹಾಗೂ ಯೋಜನೆ ಆಗಬೇಕಾಗಿತ್ತು. ಆದರೆ ಇದು ಭ್ರಷ್ಟಾಚಾರ, ಹಣ ಸೋರಿಕೆ ಹಾಗೂ ವಿವೇಚನಾರಹಿತ ಕಾಟಾಚಾರದ ನಿರ್ವಹಣೆಯಿಂದ ದಲ್ಲಾಳಿಗಳು ಹಾಗೂ ಅನುಷ್ಠಾನಕ್ಕೆ ಸಂಬಂಧಿತರು ಹಣ ಕೊಳ್ಳೆ ಹೊಡೆಯುವ ವೇದಿಕೆಯಾಗಿ ಹೋಯಿತು ಎಂಬುದು ದುರದೃಷ್ಟಕರ.

ಇದರಿಂದ ಸಾವಿರಾರು ಕೋಟಿ ಹಣ ವ್ಯರ್ಥವಾಗಿ ಕಾಂಗ್ರೆಸ್ ಕೃಪಾಪೋಷಿತರಿಗೆ ವರದಾನವಾಯಿತು ಎಂಬುದು ದೇಶಕ್ಕೆ ತಿಳಿದ ವಿಷಯ. ಅಲ್ಲದೇ ಕಳೆದ 20 ವರ್ಷಗಳಲ್ಲಿ ಅದರ ನಿಜವಾದ ಉದ್ದೇಶ ಒಟ್ಟಾರೆ ರಾಷ್ಟ್ರೀಯ ಗ್ರಾಮೀಣ ಸಮಗ್ರ ಕಲ್ಯಾಣದಲ್ಲಿ ಸಾರ್ಥಕಗೊಂಡಿದೆಯೇ ಎಂಬುದನ್ನು ಕೂಡ ನೋಡಲೇಬೇಕು. ಈ ಮೊದಲಿನ ಕಾನೂನಿನಿಂದ ಗ್ರಾಮೀಣ ಕಾರ್ವಿುಕರಿಗೆ ಉದ್ಯೋಗ ಖಾತ್ರಿ ನೀಡುವುದರೊಂದಿಗೆ ಸಾವಿರಾರು ಕೋಟಿ ಅನುದಾನ ವೆಚ್ಚದಿಂದ ಬಾಳಿಕೆ ಬರುವ ರಾಷ್ಟ್ರೀಯ ಆಸ್ತಿಗಳ ನಿರ್ಮಾಣ ಆಗಬೇಕಾಗಿತ್ತು. ಇದು ಆಗಿದೆಯೆ?

ಕಳಪೆ ಗುಣಮಟ್ಟದ ಛಿದ್ರಗೊಂಡ ಆಸ್ತಿಗಳ ನಿರ್ಮಾಣ: ನರೇಗಾದಲ್ಲಿ ಕೈಗೊಂಡ ಕಾಮಗಾರಿಗಳು ಯಾವುದೇ ಗ್ರಾಮ ಮಟ್ಟದ, ಪ್ರಾದೇಶಿಕ ಮಟ್ಟದ ಸಮಗ್ರ ಅಭಿವೃದ್ಧಿಗೆ ಪೂರಕವಾಗದೆ ಕೇವಲ ತಾತ್ಕಾಲಿಕ ಮೂಲಸೌಕರ್ಯವಾದ ರಸ್ತೆಗಳು, ಅರೆಬರೆ ನೀರು ಪೂರೈಕೆ ಸ್ಥಾವರಗಳ ಅಥವಾ ಯೋಜನಾಬದ್ಧವಲ್ಲದ ಕಾಮಗಾರಿಗಳಿಗೆ ಮಾತ್ರ ಸೀಮಿತವಾಗಿ ಅನುದಾನ ವ್ಯರ್ಥವಾಯಿತು. ಆದರೆ ಈಗ ಬಂದ ಹೊಸ ಯೋಜನೆಯನ್ನು ಸಮಗ್ರವಾಗಿ 4 ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

1. ನೀರು ಪೂರೈಕೆ ಭದ್ರತೆ:

2. ಮೂಲಭೂತ ಸೌಲಭ್ಯಗಳ ನಿರ್ಮಾಣ

3. ಜೀವನೋಪಾಯ ಸಂಬಂಧಿತ ಮೂಲ ಸೌಕರ್ಯಗಳು

4. ಪ್ರತಿಕೂಲ ಹವಾಮಾನ ಸವಾಲುಗಳ ಹಾಗೂ ವಿಪತ್ತುಗಳ ನಿರ್ವಹಣೆ.

ಹೀಗೆ ಕೈಗೊಳ್ಳಬೇಕಾದ ಕಾಮಗಾರಿಗಳು ಸೂಕ್ತವಾಗಿ ನಿರ್ದಿಷ್ಟವಾಗಿ ಗುರುತಿಸಲ್ಪಡುವುದರಿಂದ ಹಾಗೂ ಕಾಲಮಿತಿಗಳನ್ನು ಒಳಗೊಳ್ಳುವುದರಿಂದ ಬೇಕಾಬಿಟ್ಟಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಕಡಿವಾಣ ಹಾಕಿ ಸರ್ಕಾರದ ಹಣ ವ್ಯರ್ಥ ಪೋಲಾಗುವುದನ್ನು ತಡೆಗಟ್ಟಲಾಗುವುದು. ಈ ಹೊಸ ಯೋಜನೆ ಕಾಮಗಾರಿಗಳ ಅಗತ್ಯತೆಯನ್ನು ರಾಷ್ಟ್ರೀಯ ಗ್ರಾಮೀಣ ಸಂಪನ್ಮೂಲಗಳೊಂದಿಗಿನ ಜೋಡಿಸಿದೆ, ಜಾಬ್ ಕಾರ್ಡ್​ಗಳ ಅವಧಿ ಕಡಿತ ಹಾಗೂ 60 ಕೆಲಸದ ದಿನಗಳ ಬಿಡುವು ಪೂರೈಕೆ ಆಧಾರಿತವಾಗಿರುವುದರಿಂದ ಸ್ಥಳೀಯರ ಉದ್ಯೋಗದ ಹಕ್ಕನ್ನು ನಿಷ್ಕ್ರಿಯಗೊಳಿಸುವುದಲ್ಲದೆ ಗ್ರಾಮ ಸಭೆಗಳು ಅಪ್ರಸ್ತುತವಾಗಿವೆ ಎಂಬ ಕೂಗು ಅರ್ಥವಿಲ್ಲದ್ದು. ಬದಲಾಗಿ ಈ ವ್ಯವಸ್ಥೆ ಹೆಚ್ಚು ಪಾರದರ್ಶಕ ಅನುಷ್ಠಾನ, ಭ್ರಷ್ಟಾಚಾರಕ್ಕೆ ತಡೆ ಹಾಗೂ ಕೆಲಸದ ದಿನಗಳನ್ನು 125ಕ್ಕೆ ಹೆಚ್ಚಿಸಲಾಗಿದೆ.

ಒಂದು ವರ್ಷದ ಅವಧಿಯಲ್ಲಿ ಒಟ್ಟು 60 ದಿನಗಳ ಬಿಡುವು ನೀಡುವುದನ್ನು ಕೃಷಿ ಹಂಗಾಮಿನ ಅವಧಿಯಲ್ಲಿ ಜಾರಿಗೊಳಿಸಿದಲ್ಲಿ ರೈತರಿಗೆ ಆ ಅವಧಿಯಲ್ಲಿ ಕಾರ್ವಿುಕರ ಲಭ್ಯತೆ ಆಗುವುದರಿಂದ ಕೃಷಿ ಚಟುವಟಿಕೆಗಳು ಹಂಗಾಮಿನಲ್ಲಿ ಸುರಳಿತ ಕೈಗೂಡುವುದು. ಮೊದಲಿನ ಕಾನೂನಿನಲ್ಲಿ ಇದಕ್ಕೆ ಅವಕಾಶ ಇದ್ದಿರದ ಕಾರಣ ನಿರಂತರವಾಗಿ ಕೃಷಿಕರಿಂದ ಈ ಬಗ್ಗೆ ಒತ್ತಡವಿತ್ತು. ಅಲ್ಲದೇ ಆಗಿನ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಕೂಡ ಈ ವಿಷಯ ಅಗತ್ಯವೆಂದು ಪ್ರತಿಪಾದಿಸಿದ್ದರು.

ಗ್ರಾಮೀಣ ಭಾಗದ ಬಡತನದ ಪ್ರಮಾಣ 2011-12ರಲ್ಲಿ ಶೇ. 25.7 ಇದ್ದರೆ 2023-24ರ ವೇಳೆಗೆ ಶೇ. 4.86ಕ್ಕೆ ಗಣನೀಯವಾಗಿ ಇಳಿದಿರುವುದರಿಂದ (ಪ್ರಧಾನಿ ಮೋದಿಯವರ 10 ವರ್ಷಗಳ ಸುಶಾಸದ ಕಾರಣ) ಇದನ್ನು ಅನೇಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಸಮೀಕ್ಷಾ ಸಂಸ್ಥೆಗಳ ವರದಿಗಳು ಸೃಷ್ಟಪಡಿಸಿವೆ. ಅಭಿವೃದ್ಧಿ ಆಧಾರಿತ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾಗಿ ವ್ಯವಸ್ಥೆ ಬದಲಾಗುವುದು ಅವಶ್ಯ. ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ಖಾತ್ರಿಯೊಂದಿಗೆ ಉತ್ಪಾದಕ ಆಸ್ತಿಗಳ ನಿರ್ಮಾಣ ಆರ್ಥಿಕ ವಿಕಾಸಕ್ಕೆ ದಾರಿಯಾಗುವುದು.

ಹಳೆಯ ನರೇಗಾದಲ್ಲಿ ಭ್ರಷ್ಟಾಚಾರದ ಪ್ರಕರಣಗಳು: ಎಂಜಿ ನರೇಗಾದಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮಗಳ ತಡೆಯಲ್ಲಿ ಅವಶ್ಯವಾಗಿರುವ ಪ್ರಬಲವಾದ ಯಾಂತ್ರೀಕೃತ ವ್ಯವಸ್ಥೆ ಹಾಗೂ ಪರಿವೀಕ್ಷಣ ಸಾಧನಗಳ ಕೊರತೆಯಿಂದ ಬೃಹತ್ ಪ್ರಮಾಣದ ಹಣ ಸೋರಿಕೆ, ಭ್ರಷ್ಟಾಚಾರ ಅನೇಕ ಬಗೆಯ ಅಕ್ರಮಗಳಾದಂತಹ ಖೊಟ್ಟಿ ಜಾಬ್ ಕಾರ್ಡಗಳು, ಖೊಟ್ಟಿ ಫಲಾನುಭವಿಗಳು ಹಾಗೂ ಬೃಹತ್ ಪ್ರಮಾಣದ ಅನುದಾನಗಳ ದುರುಪಯೋಗ ಇತ್ಯಾದಿಗಳು ಸಾವಿರಾರು ಕೋಟಿಗಳ ಪ್ರಕರಣಗಳು ಪಂಜಾಬ್, ಪಶ್ಚಿಮ ಬಂಗಾಳ ಹಾಗೂ ತೆಲಂಗಾಣದಂತಹ ರಾಜ್ಯಗಳಲ್ಲಿ ವಿಶೇಷವಾಗಿ ಬಂದಿದ್ದವು.

ಸಾಮಾಜಿಕ ಆಡಿಟ್​ಗಳು ಕಡ್ಡಾಯವಾಗಿದ್ದರೂ ಕಾಟಾಚಾರಕ್ಕೆ ನಡೆದವು ಅಥವಾ ನಡೆಯಲೇ ಇಲ್ಲವೆಂಬ ಸ್ಥಿತಿಗೂ ಹೊರತಾಗಿರಲಿಲ್ಲ. ಅಲ್ಲದೆ ಅನುಷ್ಠಾನ ಪ್ರಾಧಿಕಾರಗಳು, ಆಡಿಟ್ ವ್ಯವಸ್ಥೆ ಹಾಗೂ ಕುಂದುಕೊರತೆಗಳ ಪರಿಹಾರ ತಂಡಗಳ ನಡುವಿನ ಸಮನ್ವಯ ಕೊರತೆ ಇವೆಲ್ಲದಕ್ಕೂ ಕಾರಣವಾಗಿದ್ದುದು ಮೂಲ ಕಾನೂನಿನಲ್ಲಿನ ದೋಷವೆಂದೇ ಪರಿಗಣಿಸಬೇಕು. ಇದಲ್ಲದೆ ಸಕಾಲದಲ್ಲಿ ಬೇಡಿಕೆ ಇದ್ದಾಗಲೂ ಕೆಲಸ ನೀಡದ ಸಂದರ್ಭದಲ್ಲಿ ನೀಡಬೇಕಾದ ನಿರುದ್ಯೋಗ ಭತ್ಯೆ ಹಾಗೂ ವಿಳಂಬ ಸಂಭಾವನೆ ಸಂದರ್ಭದಲ್ಲಿ ಪರಿಹಾರ ನೀಡದೆ ನುಂಗಿ ಹಾಕಿದ ಪ್ರಕರಣಗಳು ಕೂಡ ಬೆಳಕಿಗೆ ಬಂದು ಈ ವಿಷಯದಲ್ಲೂ ಬದಲಾವಣೆ ಮತ್ತಷ್ಟು ಅವಶ್ಯಕವಾಗಿತ್ತು.

‘ವಿಬಿ ಜಿ ರಾಮ್ ಜಿ’ಯಲ್ಲಿ ಕೆಳಮಟ್ಟದಿಂದ ಸುವ್ಯವಸ್ಥೆಗೆ ಒತ್ತು: ಬಯೋಮೆಟ್ರಿಕ್, ಜಿಯೋ ಸ್ಪೇಷಿಯಲ್ (ಭೂ ಪ್ರಾದೇಶಿಕ) ಆಧಾರಿತ ಯೋಜನಾ ಪದ್ಧತಿ, ಕೃತಕ ಬುದ್ಧಿಮತ್ತೆ (ಎಐ) ಬೆಂಬಲಿತ ಅಕ್ರಮಗಳ ಶೋಧನೆ, ಮೊಬೈಲ್ ಆಧಾರಿತ ನಿಜ ಅಕ್ರಮ ಕುರುಹುಗಳ ಪತ್ತೆ ಇತ್ಯಾದಿಗಳ ಸುವ್ಯವಸ್ಥಿತ ಅಕ್ರಮ ತಡೆ ವಿಧಿ ವಿಧಾನಗಳು, 6 ತಿಂಗಳಿಗೊಮ್ಮೆ ಸೋಶಿಯಲ್ ಆಡಿಟ್ ಕಡ್ಡಾಯ ಕಾನೂನಿನ ಭಾಗವನ್ನಾಗಿಯೇ ಮಾಡಿದ್ದು ಹೊಸ ಯೋಜನೆಯ ವಿಶೇಷ. 2013ರಲ್ಲಿ ಸಿಎಜಿ 4.33 ಲಕ್ಷಕ್ಕೂ ಹೆಚ್ಚು ನಕಲಿ ಜಾಬ್ ಕಾರ್ಡ್​ಗಳನ್ನು ಪತ್ತೆ ಮಾಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇದಲ್ಲದೆ ಹೊಸ ಯೋಜನೆಯಲ್ಲಿ ಹೊಸ ಕೇಂದ್ರೀಕೃತ ಪಾವತಿ ವ್ಯವಸ್ಥೆ ಇದ್ದು ಯಾವುದೇ ಅಕ್ರಮಗಳು ಕಷ್ಟ ಸಾಧ್ಯ.

ಒಟ್ಟಾರೆ ಹಳೇ ನರೇಗಾದಿಂದ ಹೊಸ ರೂಪ ತಳೆದ ವಿಬಿ ಜಿ ರಾಮ್ ಜಿ ಹೊಣೆಗಾರಿಕೆಯಡೆಗಿನ ವ್ಯಾಪಕ ಯೋಜನೆಯಾಗಿ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯ ನಿಜ ಸಾಕಾರವಾಗಿದೆ. 2005-06ರಲ್ಲಿ ಜಾರಿಯಾಗಿದ್ದ ಯೋಜನೆಗೆ ಮಹಾತ್ಮಾ ಗಾಂಧಿ ಹೆಸರು ಸೇರಿದ್ದು 2009ರಲ್ಲಿ. ಅಲ್ಲದೇ ಈ ಯೋಜನೆಯ/ ಕಾನೂನಿನ ಪೂರ್ತಿ ಹೆಸರು ವಿಕಸಿತ ಭಾರತ- ಗ್ಯಾರಂಟಿ ರೋಜ್​ಗಾರ್, ಆಜಿವಿಕಾ ಮಿಶನ್- ಗ್ರಾಮೀಣ ಎಂದು. ಅದನ್ನು ಸಂಕ್ಷಿಪ್ತವಾಗಿ ಓದಿದಾಗ ವಿಬಿ ಜಿ ರಾಮ್ ಜಿ ಆಗುತ್ತದೆ. ನೇರವಾಗಿ ಅದಕ್ಕೆ ರಾಮನ ಹೆಸರನ್ನು ಇಡಲಾಗಿಲ್ಲ.

ನೆಹರೂ- ಗಾಂಧಿ ಪರಿವಾರದವರ ಹೆಸರನ್ನು ನೂರಾರು ಯೋಜನೆಗಳಿಗೆ ಇಟ್ಟು ಜಪ ಮಾಡುತ್ತಿರುವ ಕಾಂಗ್ರೆಸ್ಸಿಗರಿಗೆ ಒಂದು ಕಾನೂನಿನ/ ಯೋಜನೆಯ ವಿವರವಾದ ಹೆಸರನ್ನು ಸರಳೀಕರಿಸಿ ಓದುವಾಗ ರಾಮ್ ಅನ್ನಲು ಅಲರ್ಜಿಯಾದರೆ ಅದನ್ನು ವಿವರವಾಗಿಯೇ ಅನ್ನಲಿ, ಬೇಡ ಅನ್ನುವವರಾರು? ಸ್ವಾತಂತ್ರ್ಯಾನಂತರ ಸುಮಾರು 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಕ್ರೀಡೆ, ಶಿಕ್ಷಣ, ಸರ್ಕಾರಿ ಸಂಘ ಸಂಸ್ಥೆಗಳು, ವಿವಿಧ ಯೋಜನೆಗಳಿಗೆ ಒಟ್ಟು ಸುಮಾರು 415 ಕಡೆ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೆಸರುಗಳನ್ನು ಇಟ್ಟು ನಕಲಿ ಗಾಂಧಿಗಳ ಜಪವನ್ನೇ ಮಾಡುತ್ತಿರುವುದನ್ನು ಮೊದಲು ಕಾಂಗ್ರೆಸ್ಸಿಗರು ನೆನಪಿನಲ್ಲಿಡಲಿ.

ತಮ್ಮ ಪಕ್ಷದವರೇ ಆಗಿದ್ದ ಸುಭಾಷ್ ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ರಾಷ್ಟ್ರ ಪುರುಷರ ಹೆಸರು ಇವರಿಗೆ ಏಕೆ ನೆನಪಾಗಲಿಲ್ಲ ಎಂಬುದನ್ನು ದೇಶದ ಜನತೆಗೆ ಮೊದಲು ಉತ್ತರಿಸಲಿ. ಹಳೇ ನರೇಗಾದಲ್ಲಿನ ಎಲ್ಲ ತತ್ವಗಳನ್ನು ಉಳಿಸಿಕೊಂಡು ದೋಷಗಳನ್ನು ಸರಿಪಡಿಸಿ 2047 ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಮುಖ್ಯ ಹಾಗೂ ಪ್ರಾಮಾಣಿಕ ಉದ್ದೇಶವೇ ವಿಬಿ ಜಿ ರಾಮ್ ಜಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net