VB G RAM Gಗೆ ವಿರೋಧ; ಕಾಂಗ್ರೆಸ್​ಗೆ ರಾಮನ ಹೆಸರಿನ ಬಗ್ಗೆಯೇ ಸಮಸ್ಯೆಯಿದೆ; ಅನುರಾಗ್ ಠಾಕೂರ್ ವಾಗ್ದಾಳಿ

ಬಿಜೆಪಿ ಸಂಸದ ಅನುರಾಗ್ ಠಾಕೂರ್
ಬಿಜೆಪಿ ಸಂಸದ ಅನುರಾಗ್ ಠಾಕೂರ್
Published on
ನವದೆಹಲಿ: ಮನರೇಗಾ ಯೋಜನೆಯನ್ನು VB G RAM G ಎಂದು ಮರು ನಾಮಕರಣ ಮಾಡಿದ್ದನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಕಾಂಗ್ರೆಸ್​ಗೆ ರಾಮನ ಹೆಸರಿನ ಬಗ್ಗೆಯೇ ಸಮಸ್ಯೆ ಇದೆ. ಅಲ್ಲಿಂದಲೇ ಈ ಬಗ್ಗೆ ಆಕ್ಷೇಪಣೆ ಹುಟ್ಟಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಕಾಂಗ್ರೆಸ್‌ಗೆ ರಾಮನ ಹೆಸರಿನೊಂದಿಗೆ ಮಾತ್ರ ಸಮಸ್ಯೆಯಿದ್ದು, ರಾಮನ ಭಕ್ತರನ್ನು ಅವಮಾನಿಸಲು ಬಯಸುತ್ತದೆ. ಹಿಂದೆ ರಾಮಭಕ್ತರ ಮೇಲೆ ಗುಂಡು ಹಾರಿಸಿದರು, ರಾಮ ಮಂದಿರವನ್ನು ವಿರೋಧಿಸಿದರು. ಇಲ್ಲಿಯವರೆಗೂ ಅವರು ರಾಮಮಂದಿರಕ್ಕೆ ಭೇಟಿ ನೀಡಿಲ್ಲ. ರಾಮಸೇತುವೆಯನ್ನು ವಿರೋಧಿಸಿದ್ದಾರೆ. ತಮಿಳುನಾಡು ಸಿಎಂ ಸಹ ರಾಮಮಂದಿರದ ಪೂಜೆ ಕಾರ್ಯಗಳು ನಡೆಯುವಾಗ ದೇವಾಲಯದ ಬಾಗಿಲಗಳನ್ನು ಮುಚ್ಚಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್​ ಚುನಾವಣೆ ದೃಷ್ಟಿಯಿಂದ ದುರ್ಬಲಗೊಂಡಿರುವ ಪಕ್ಷ, ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಪಕ್ಷವೂ ಶೀಘ್ರದಲ್ಲಿ ಸೋಲುಗಳಲ್ಲಿ ಶತಕದ ಸಾಧನೆ ಮಾಡಲಿದೆ. ಸನಾತನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಭಾರತದಲ್ಲಿ ಜೀವಂತವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಮನರೇಗಾ ಹೆಸರು ಬದಲಾವಣೆಯನ್ನು ಸಮರ್ಥಿಸಿಕೊಂಡ ಅವರು, ಈ ಯೋಜನೆಯನ್ನು 1989ರಲ್ಲಿ 'ಜವಾಹರ್ ರೋಜ್‌ಗಾರ್ ಯೋಜನೆ' ಎಂದು ಹೆಸರಿಸಲಾಯಿತು. 1999 ರಲ್ಲಿ 'ಜವಾಹರ್ ಗ್ರಾಮ ಸಮೃದ್ಧಿ ಯೋಜನೆ' ಎಂದು, 2001ರಲ್ಲಿ 'ಸಂಪೂರ್ಣ ಗ್ರಾಮೀಣ ರೋಜ್‌ಗಾರ್ ಯೋಜನೆ' ಎಂದು, ನಂತರ 2004 ರಲ್ಲಿ ಯುಪಿಎ ಸರ್ಕಾರದ ಅಡಿಯಲ್ಲಿ 'ಎನ್‌ಆರ್‌ಇಜಿಎ' ಎಂದು ಹೆಸರಿಸಲಾಯಿತು. ಅಂತಿಮವಾಗಿ 2009 ರಲ್ಲಿ ಎಂಜಿಎನ್‌ಆರ್‌ಇಜಿಎ ಎಂದು ಮತ್ತೊಮ್ಮೆ ಮರುನಾಮಕರಣ ಮಾಡಲಾಯಿತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಹಾತ್ಮಾ ಗಾಂಧಿಯವರ ಪರಂಪರೆಯನ್ನು ರಾಜಕೀಯಗೊಳಿಸುತ್ತಿದೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸುವಂತೆ ಗಾಂಧಿಯವರು ಸ್ವತಃ ಕೇಳಿಕೊಂಡಿದ್ದರು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net