ವಿಶ್ವ ಆನೆಗಳ ದಿನ: ಜಾಗತಿಕ ಮಟ್ಟದಲ್ಲಿ ಬೃಹತ್ ಹಸ್ತಿ ಕಲ್ಯಾಣ ಯೋಜನೆ ವಿಸ್ತರಿಸಿದ 'ವಂತಾರ' | Vantara

ಅನಂತ್ ಅಂಬಾನಿ ಅವರ ವಂತಾರ
ಅನಂತ್ ಅಂಬಾನಿ ಅವರ ವಂತಾರ
Published on

ಪ್ರಮುಖ ಮುಖ್ಯಾಂಶಗಳು

  • ಅನಂತ್ ಅಂಬಾನಿ ಅವರ ಕನಸಿನ ಯೋಜನೆ 'ವಂತಾರ'
  • ವಂತಾರ ಕೇಂದ್ರದಲ್ಲಿ 260ಕ್ಕೂ ಅಧಿಕ ಏಷ್ಯನ್ ಆನೆಗಳಿಗೆ ಪುನರ್ವಸತಿ
  • ಜೈಪುರದ 'ಹಾಥಿ ಗಾವ್' ಅಭಿವೃದ್ಧಿಗೆ ರಾಜಸ್ಥಾನ ಸರ್ಕಾರದ ಜತೆ ಒಪ್ಪಂದ
ಗುಜರಾತ್​: ಇಂದು (ಆ.12) ವಿಶ್ವ ಆನೆಗಳ ದಿನದ ಅಂಗವಾಗಿ, ಅನಂತ್ ಅಂಬಾನಿ ಅವರ ಕನಸಿನ ಯೋಜನೆ 'ವಂತಾರ' (Vantara) ಆನೆಗಳ ಸಂರಕ್ಷಣೆ, ಆರೋಗ್ಯ ರಕ್ಷಣೆ ಹಾಗೂ ಜಾಗತಿಕ ಹಸ್ತಿ ಕಲ್ಯಾಣ ಅಭಿಯಾನವನ್ನು ಮತ್ತಷ್ಟು ವಿಸ್ತರಿಸುವುದಾಗಿ ಘೋಷಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ನಿರ್ವಹಿಸುತ್ತಿರುವ ವನ್ಯಜೀವಿ ಸಂರಕ್ಷಣಾ ಕೇಂದ್ರವಾದ 'ವಂತಾರ' ಕಾರ್ಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿದ್ದು, ವಿಶ್ವ ಆನೆಗಳ ದಿನವೇ ಮತ್ತೊಂದು ಹೊಸ ಹೆಜ್ಜೆಯನ್ನು ಇಟ್ಟಿದೆ.  ಆರಂಭದಲ್ಲಿ 'ಗೌರಿ' ಎಂಬ ರಕ್ಷಿಸಲ್ಪಟ್ಟ ಒಂದೇ ಆನೆಯಿಂದ ಶುರುವಾದ ಈ ಪಯಣ, ಇಂದು ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಗಜಗಳ ಜೀವನ ಮಟ್ಟವನ್ನು ಉನ್ನತೀಕರಿಸುವ ಬೃಹತ್ ಅಭಿಯಾನವಾಗಿ ಮಾರ್ಪಟ್ಟಿದೆ.

260ಕ್ಕೂ ಅಧಿಕ ಏಷ್ಯನ್ ಆನೆಗಳಿಗೆ ಆಶ್ರಯ

ಪ್ರಸ್ತುತ ಜಾಮ್‌ನಗರದಲ್ಲಿರುವ 'ವಂತಾರ' ಕೇಂದ್ರವು 260ಕ್ಕೂ ಹೆಚ್ಚು ಏಷಿಯನ್​ ಆನೆಗಳಿಗೆ ಪುನರ್ವಸತಿ ಕಲ್ಪಿಸಿದ್ದು, ವಿಶ್ವದ ಅತ್ಯಂತ ಪ್ರಮುಖ ಆನೆ ಕಲ್ಯಾಣ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ರಕ್ಷಿಸಲ್ಪಟ್ಟ ಪ್ರತಿಯೊಂದು ಪ್ರಾಣಿಗೂ ಸುಧಾರಿತ ವೈದ್ಯಕೀಯ ಚಿಕಿತ್ಸೆ ಮತ್ತು ಗೌರವಯುತ ಜೀವನವನ್ನು ಒದಗಿಸುವುದು ವಂತಾರಾದ ಮುಖ್ಯ ಹಾಗೂ ಮಹತ್ವದ ಗುರಿಯಾಗಿದೆ.

ಆನೆಗಳಿಗೆ ಅನಂತ್ ಅಂಬಾನಿ ಪ್ರೀತಿ

ಈ ಬಗ್ಗೆ ವಂತಾರಾದ ಸಂಸ್ಥಾಪಕ ಅನಂತ್ ಅಂಬಾನಿ ಮಾತನಾಡಿ, "ಆನೆಗಳು ನನ್ನ ಹೃದಯದಲ್ಲಿ ಹಾಗೂ ವಂತಾರಾದ ಪಯಣದಲ್ಲಿ ಸದಾ ವಿಶೇಷ ಸ್ಥಾನವನ್ನು ಹೊಂದಿವೆ. ಗೌರಿಯ ರಕ್ಷಣೆಯೊಂದಿಗೆ ಆರಂಭವಾದ ನಮ್ಮೀ ಪಯಣ, ಇಂದು ಆನೆಗಳ ಆರೈಕೆದಾರರಿಗೆ ನೆರವಾಗುವುದು, ಜ್ಞಾನ ವಿನಿಮಯ ಮಾಡಿಕೊಳ್ಳುವುದು ಹಾಗೂ ವಿಶ್ವದಾದ್ಯಂತ ಆನೆಗಳ ಸಂರಕ್ಷಣೆಗೆ ಶ್ರಮಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ವಿಶ್ವ ಆನೆಗಳ ದಿನದಂದು ಈ ಅದ್ಭುತ ಜೀವಿಗಳಿಗೆ ಸುರಕ್ಷಿತ ಮತ್ತು ಉತ್ತಮ ಭವಿಷ್ಯವನ್ನು ಕಲ್ಪಿಸಲು ನಾವು, ನಮ್ಮ ತಂಡ ಸದಾ ಬದ್ಧರಾಗಿದ್ದೇವೆ" ಎಂದರು. 

ಜೈಪುರದ 'ಹಾಥಿ ಗಾವ್' ಅಭಿವೃದ್ಧಿಗೆ ಒಪ್ಪಂದ

ವಿಶ್ವ ಆನೆಗಳ ದಿನದ ಅಂಗವಾಗಿ ರಾಜಸ್ಥಾನ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವ ಸಂಜಯ್ ಶರ್ಮಾ ಅವರು ವಂತಾರ ಜತೆಗಿನ ಪ್ರಮುಖ ಸಹಭಾಗಿತ್ವವನ್ನು ಘೋಷಿಸಿದ್ದಾರೆ. ಜೈಪುರದ 'ಹಾಥಿ ಗಾವ್'ನಲ್ಲಿ ಸುಧಾರಿತ ಆಸ್ಪತ್ರೆ, ಪೋಷಕಾಂಶ ಕೇಂದ್ರ ಮತ್ತು 'ಹೈಡ್ರೋಥೆರಪಿ' (Hydrotherapy) ಸೌಲಭ್ಯವನ್ನು ಹೊಂದಿರುವ ಆನೆಗಳ ನೂತನ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಹಿರಿಯ ಹಸ್ತಿಗಳ ವಿಶ್ರಾಂತಿ ಮತ್ತು ಆರೈಕೆಗಾಗಿ 'ರಿಟೈರ್‌ಮೆಂಟ್ ಅಂಡ್​ ಕೇರ್ ಸೆಂಟರ್' ಅನ್ನೂ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ. 

ರಾಷ್ಟ್ರೀಯ ಆನೆ ಕಲ್ಯಾಣ ವಿಸ್ತರಣಾ ಕಾರ್ಯಕ್ರಮ

ವಂತಾರ ಸಂಸ್ಥೆಯು ಇತ್ತೀಚೆಗೆ ವಿವಿಧ ರಾಜ್ಯಗಳ ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸೇರಿ ಬರೋಬ್ಬರಿ 8 ವಿವಿಧ ಪ್ರದೇಶಗಳಲ್ಲಿ ಬೃಹತ್ 'ರಾಷ್ಟ್ರೀಯ ಆನೆಗಳ ಕಲ್ಯಾಣ ಯೋಜನೆ'ಯನ್ನು (Elephant Welfare Outreach Programme) ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಗಮನಾರ್ಹ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net