ವಂದೇ ಮಾತರಂ ಸಂದೇಶ ಸಾರ್ವಕಾಲಿಕ...ಭವಿಷ್ಯದ ಪೀಳಿಗೆಗೆ ಅದರ ಮಹತ್ವ ತಿಳಿಸಲು ಚರ್ಚೆ ಅವಶ್ಯ: ಗೃಹ ಸಚಿವ ಅಮಿತ್​ ಷಾ | Amit Shah

Amit Shah | ಕೇಂದ್ರ ಗೃಹ ಸಚಿವ ಅಮಿತ್​ ಷಾ
Amit Shah | ಕೇಂದ್ರ ಗೃಹ ಸಚಿವ ಅಮಿತ್​ ಷಾ
Published on
ದೆಹಲಿ: ವಂದೇ ಮಾತರಂ ಗೀತೆಯ ಸಂಯೋಜನೆಯು ದೇಶಭಕ್ತಿ ಮತ್ತು ರಾಷ್ಟ್ರೀಯ ಸಂಸ್ಕೃತಿಯ ಚೈತನ್ಯವನ್ನು ಸಾಕಾರಗೊಳಿಸುತ್ತದೆ, ಈ ಸಂಪರ್ಕವನ್ನು ಬಲಪಡಿಸುವುದರಿಂದ ಭವಿಷ್ಯದ ಪೀಳಿಗೆಗೆ ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಂಗಳವಾರ (ಡಿ.9) ನಡೆದ ವಂದೇ ಮಾತರಂನ 150 ವರ್ಷಗಳ ಸ್ಮರಣಾರ್ಥ ಚರ್ಚೆಯ ನೇತೃತ್ವ ವಹಿಸಿದ್ದ ಸಚಿವ ಷಾ, ಇಂತಹ ಮೌಲ್ಯಯುತ ಚರ್ಚೆಯ ಅಗತ್ಯವನ್ನು ಸದನದ ಕೆಲ ಸದಸ್ಯರು ಪ್ರಶ್ನಿಸಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಂಸದೆ ಪ್ರಿಯಾಂಕಾ ಹೇಳಿಕೆಗಳನ್ನು ಉಲ್ಲೇಖಿಸಿದರು. ವಂದೇ ಮಾತರಂನ ಪ್ರಸ್ತುತತೆ ಹಿಂದೆಯೂ ಇತ್ತು, ಈಗಲೂ ಇದೆ ಮತ್ತು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ, ಇದು ಸಾರ್ವಕಾಲಿಕ, ಅದರ ಮಹತ್ವವನ್ನು ನೋಡಲು ವಿಫಲರಾದವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಾಗಿ ಈ ಚರ್ಚೆ ಆಯೋಜಿಸಲಾಗಿದೆ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದ ಷಾ, ನಮ್ಮ ರಾಷ್ಟ್ರೀಯ ಗೀತೆಯ ವೈಭವೀಕರಣವನ್ನು ಕೆಲವರು ಕಡಿಮೆ ಮಾಡಲು ಬಯಸುತ್ತಾರೆ. ಬಂಕಿಮ್ ಚಂದ್ರ ಚಟರ್ಜಿ ಬಂಗಾಳ ಮೂಲದವರಾಗಿದ್ದರೂ, ಆನಂದ್ ಮಠ ಕೂಡ ಬಂಗಾಳದಲ್ಲಿ ಹುಟ್ಟಿಕೊಂಡಿತು, ವಂದೇ ಮಾತರಂ ಎನ್ನುವುದು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿದ್ದಲ್ಲ ಎಂದರು. ಇಂದಿಗೂ, ದೇಶವನ್ನು ಒಳಗಿನಿಂದ ಕಾಪಾಡುವ ಪೊಲೀಸ್, ದೇಶದ ಗಡಿಯಲ್ಲಿರುವ ಸೈನಿಕರ ತುಟಿಗಳಲ್ಲಿ ವಂದೇ ಮಾತರಂ ಎಂಬ ಮಾತು ಮೊದಲು ಬರುತ್ತದೆ, ಇದು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಒಂದು ಘೋಷವಾಕ್ಯವಾಯಿತು ಮತ್ತು ಇಂದು ಸ್ಫೂರ್ತಿಯ ಮೂಲವಾಗಿ ಉಳಿದಿದೆ ಎಂದು ಹೇಳಿದರು.
ಈಗ ಸಂಸತ್ತಿನ ಚಳಿಗಾಲದ ಸಮಯದಲ್ಲಿ ಎರಡೂ ಸದನಗಳಲ್ಲಿ ಈ ಚರ್ಚೆಯನ್ನು ಆಯೋಜಿಸುವ ಮೂಲಕ, ಮುಂದಿನ ಪೀಳಿಗೆಗಳು ವಂದೇ ಮಾತರಂನ ಶಾಶ್ವತ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಗೀತೆಯ ಕುರಿತು ಚರ್ಚೆ ಅಗತ್ಯವಾಗಿದ್ದು,  ಭವಿಷ್ಯದಲ್ಲಿ 2047 ಕ್ಕೆ ನಾವು ಕಲ್ಪಿಸಿಕೊಂಡಿರುವ ಉಜ್ವಲ ಭವಿಷ್ಯಕ್ಕಾಗಿ ಇದು ಯಾವಾಗಲೂ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು.

ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು..? 

 ಸೋಮವಾರ (ಡಿ.8) ಲೋಕಸಭೆಯಲ್ಲಿ ಮಾತನಾಡಿದ್ದ ಸಂಸದೆ ಪ್ರಿಯಾಂಕಾ ಗಾಂಧಿ, ಕೇಂದ್ರ ಸರ್ಕಾರವು ಮುಂದಿನ ವರ್ಷ ನಡೆಯಲಿರುವ ಬಂಗಾಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಂದೇ ಮಾತರಂ ಬಗ್ಗೆ ಚರ್ಚೆ ನಡೆಸುತ್ತಿದೆ. ಈ ಹಾಡು 150 ವರ್ಷಗಳಿಗೂ ಹೆಚ್ಚು ಕಾಲ ನಮ್ಮ ಹೃದಯದಲ್ಲಿ ಸ್ಥಾನ ಪಡೆದಿದೆ. ನಮ್ಮ ದೇಶವು 75 ವರ್ಷಗಳಿಂದ ಸ್ವತಂತ್ರವಾಗಿದೆ. ಈಗ ಈ ಚರ್ಚೆಯ ಅಗತ್ಯವೇನು? ಎಂದು ಪ್ರಶ್ನಿಸಿದ್ದರು.
ನಾವು ವಂದೇ ಮಾತರಂ ಬಗ್ಗೆ ಚರ್ಚಿಸದಿದ್ದರೆ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಯನ್ನು ನಿರಾಕರಿಸುವುದಾಗಿ ಹೇಳಿದ್ದೀರಿ, ಇದು ನಮ್ಮ ರಾಷ್ಟ್ರೀಯ ಗೀತೆ. ಇದರ ಬಗ್ಗೆ ಚರ್ಚೆ ಏನು..?. ಸರ್ಕಾರವು ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಈ ತಂತ್ರ ಹೆಣೆದಿದೆ. ಈ ಸರ್ಕಾರವು ವರ್ತಮಾನ ಮತ್ತು ಭವಿಷ್ಯವನ್ನು ನೋಡಲು ಇಚ್ಛೆಪಡುತ್ತಿಲ್ಲ, ನಮ್ಮನ್ನು ಭೂತಕಾಲದಲ್ಲಿ ಇಡುವುವೇ ಇದರ ಉದ್ದೇಶ ಎಂದಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net