ಅಮೆರಿಕದಲ್ಲಿ ಗೃಹಪ್ರವೇಶ ಸಮಾರಂಭದಲ್ಲಿ ಮೊಳಗಿದ ವಂದೇ ಮಾತರಂ ಮತ್ತು ಜನಗಣಮನ ಗೀತೆ | America

ಮನೆಯ ಗೃಹಪ್ರವೇಶ ಸಮಾರಂಭ
ಮನೆಯ ಗೃಹಪ್ರವೇಶ ಸಮಾರಂಭ
Published on
America​: ಅಮೆರಿಕದ ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಕನ್ನಡಿಗರಾದ ಸುಚಿತ ಜಾಜು ಮತ್ತು ಅಮೋಲ್ ಜಾಜು ಅವರ ನೂತನ ಮನೆಯ ಗೃಹಪ್ರವೇಶ ಸಮಾರಂಭ ಅದ್ದೂರಿಯಾಗಿ ನಡೆದಿದ್ದು, ಸಮಾರಂಭದಲ್ಲಿ ವಂದೇ ಮಾತರಂ ಮತ್ತು ಜನಗಣಮನ ಗೀತೆ ಮೊಳಗಿದೆ.
ಜಾಜು ಕುಟುಂಬದವರ ಗೃಹಪ್ರವೇಶದ ಸಮಾರಂಭದಲ್ಲಿ ಹೋಮ, ಹವನ ಹಾಗೂ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗಿತ್ತು. ಪೂಜೆಯ ಕೊನೆಯಲ್ಲಿ ಮಂಗಳಾರತಿ ನಡೆಯುತ್ತಿದ್ದ ಸಂದರ್ಭದಲ್ಲಿ ಪುರೋಹಿತರಾದ ಶ್ರೀಧರ ಆಚಾರ್ಯ ಅವರು ಇಂದು ಆಗಸ್ಟ್ 15 ಎಂಬುದನ್ನು ನೆನಪಿಸಿ ಭಾರತದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸುವಂತೆ ಕರೆ ನೀಡಿದರು.
ತಕ್ಷಣವೇ ಅಲ್ಲಿ ನೆರೆದಿದ್ದ ಎಲ್ಲರೂ ಒಟ್ಟಾಗಿ ‘ವಂದೇ ಮಾತರಂ’ ಮತ್ತು ‘ಜನಗಣಮನ’ ಗೀತೆಗಳನ್ನು ಹಾಡಿದರು. ನಂತರ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳು ಮೊಳಗಿಸಿದ್ದಾರೆ. ಗೃಹಪ್ರವೇಶದ ಸಂಭ್ರಮ ಕ್ಷಣಾರ್ಧದಲ್ಲಿ ದೇಶಭಕ್ತಿಯ ಸಂಭ್ರಮವಾಗಿಯೂ ಮಾರ್ಪಟ್ಟಿತು.
ಬಂಕಿಮಚಂದ್ರ ಚಟ್ಟೋಪಾಧ್ಯಾಯರು 1875ರಲ್ಲಿ ರಚಿಸಿದ ‘ವಂದೇ ಮಾತರಂ’ಗೆ ಈಗ 150 ವರ್ಷಗಳ ಸಂಭ್ರಮ. ಈ ಐತಿಹಾಸಿಕ ಸಂದರ್ಭವನ್ನು ಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2025ರ ನವೆಂಬರ್‌ನಿಂದ 2026ರ ನವೆಂಬರ್‌ವರೆಗೆ ದೇಶಾದ್ಯಂತ ‘ವಂದೇ ಮಾತರಂ’ 150ನೇ ವರ್ಷಾಚರಣೆಯನ್ನು ಹಮ್ಮಿಕೊಂಡಿದೆ. ಅದೇ ‘ವಂದೇ ಮಾತರಂ’ ಇಂದು ತಾಯ್ನಾಡಿನಿಂದ ಸಾವಿರಾರು ಮೈಲು ದೂರದ ಅಮೆರಿಕದ ಆಲ್ಬನಿಯ ಮನೆಯೊಂದರ ಗೃಹಪ್ರವೇಶದಲ್ಲೂ ಮೊಳಗಿರುವುದು ವಿಶೇಷವಾಗಿದೆ.
ಮನೆ ಅಮೆರಿಕದಲ್ಲಿರಬಹುದು... ಆದರೆ ಮನಸ್ಸಿನಲ್ಲಿ ಭಾರತ! ತಾಯ್ನಾಡಿನಿಂದ ಸಾವಿರಾರು ಮೈಲು ದೂರದಲ್ಲಿ ನೆಲೆಸಿದ್ದರೂ ತಮ್ಮ ಮನೆಯ ಶುಭ ಸಮಾರಂಭದಲ್ಲಿಯೂ ಸ್ವಾತಂತ್ರ್ಯ ದಿನವನ್ನು ಮರೆಯದೆ ವಂದೇ ಮಾತರಂ ಮತ್ತು ಜನಗಣಮನ ಹಾಡಿ ದೇಶಪ್ರೇಮ ಮೆರೆದ ಈ ಕ್ಷಣ ನಿಜಕ್ಕೂ ಸ್ಫೂರ್ತಿದಾಯವಾಗಿದೆ.
ದೇಶಪ್ರೇಮಕ್ಕೆ ಗಡಿಗಳಿಲ್ಲ, ದೂರವೂ ಅಡ್ಡಿಯಲ್ಲ. ತಾಯ್ನಾಡು ಸಾವಿರಾರು ಮೈಲು ದೂರವಿದ್ದರೂ ಭಾರತವನ್ನು ಹೃದಯದಲ್ಲಿ ಹೊತ್ತು ಬದುಕಬಹುದು ಎಂಬುದಕ್ಕೆ ಈ ಗೃಹಪ್ರವೇಶವೇ ಒಂದು ಸುಂದರ ಉದಾಹರಣೆಯಾಗಿದೆ ಎನ್ನಬಹುದು.
ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net