ವೈಭವ್ ಪದಾರ್ಪಣೆಗೆ ಹೆಚ್ಚಿದ ಒತ್ತಡ!...ಸ್ಟಾರ್ ಓಪನರ್‌ ಕೈಬಿಡುವಂತೆ ಮ್ಯಾನೇಜ್‌ಮೆಂಟ್‌ಗೆ ಖಡಕ್ ಸಂದೇಶ ರವಾನಿಸಿದ ಕೈಫ್​ | Vaibhav Soorayavanshi

Vaibhav Soorayavanshi | ವೈಭವ್ ಪದಾರ್ಪಣೆಗೆ ಹೆಚ್ಚಿದ ಒತ್ತಡ!
Vaibhav Soorayavanshi | ವೈಭವ್ ಪದಾರ್ಪಣೆಗೆ ಹೆಚ್ಚಿದ ಒತ್ತಡ!
Published on
Vaibhav Soorayavanshi: ಐರ್ಲೆಂಡ್ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡದ ಮ್ಯಾನೇಜ್‌ಮೆಂಟ್‌ಗೆ ಆಡುವ ಹನ್ನೊಂದರ ಬಳಗ ಆಯ್ಕೆ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಭಾರತ ತಂಡದ ಆರಂಭಿಕ ಜೋಡಿಯಾಗಿ ಭದ್ರವಾಗಿ ನೆಲೆಯೂರಿದ್ದಾರೆ. ಆದರೆ, ಟೀಮ್ ಮ್ಯಾನೇಜ್‌ಮೆಂಟ್ ಈಗ ಅಭಿಷೇಕ್ ಶರ್ಮಾ ಅವರನ್ನು ಆರಂಭಿಕ ಸ್ಥಾನದಿಂದ ಕೆಳಗಿಳಿಸಿ, ಆ ಜಾಗಕ್ಕೆ 15 ವರ್ಷದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಬೇಕು ಎಂಬ ಗಂಭೀರ ಚರ್ಚೆ ಮುನ್ನೆಲೆಗೆ ಬಂದಿದೆ.
ಬೆಲ್‌ಫಾಸ್ಟ್‌ನಲ್ಲಿ ಶುಕ್ರವಾರ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಆರಂಭಿಕ ಜೋಡಿಯ ಆಯ್ಕೆಯ ಗೊಂದಲದ ಬಗ್ಗೆ ಮಾತನಾಡಿರುವ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಆರಂಭಿಕರಾಗಿ ಸಂಜು ಸ್ಯಾಮ್ಸನ್ ಜೊತೆ ಕಣಕ್ಕಿಳಿಯಲು ವೈಭವ್ ಸೂರ್ಯವಂಶಿ ಅವರೇ ಭಾರತದ ಅತ್ಯುತ್ತಮ ಆಯ್ಕೆಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ಬದಲಾವಣೆ ಅನಿವಾರ್ಯ: ಕೈಫ್ ವಾದ

ವೈಭವ್ ಸೂರ್ಯವಂಶಿಗೆ ಜಾಗ ಮಾಡಿಕೊಡಲು ಅಭಿಷೇಕ್ ಮತ್ತು ಸ್ಯಾಮ್ಸನ್ ಜೋಡಿಯನ್ನು ಬದಲಾಯಿಸಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೈಫ್, ನಾನು ಅದನ್ನೇ ಹೇಳುತ್ತಿದ್ದೇನೆ. ಹಿಂದೆ ಸೂರ್ಯಕುಮಾರ್ ಯಾದವ್ ವಿಶ್ವಕಪ್ ಗೆದ್ದರು, ನಂತರ ಮ್ಯಾನೇಜ್‌ಮೆಂಟ್ ಮುಂದೆ ಸಾಗಿತು. ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿ ಗೆದ್ದರು, ಆ ಬಳಿಕವೂ ತಂಡ ಮುಂದೆ ಸಾಗಿತು ಅಲ್ಲವೇ..? ಹಾಗಾಗಿ ನೀವು ಯಾವಾಗಲೂ ಭವಿಷ್ಯವನ್ನು ನೋಡಬೇಕು. ದೀರ್ಘಕಾಲದವರೆಗೆ ತಂಡಕ್ಕೆ ಯಾರು ಸೇವೆ ಸಲ್ಲಿಸಬಲ್ಲರು ಮತ್ತು ಸದ್ಯ ಲಭ್ಯವಿರುವ ಆಟಗಾರರಲ್ಲಿ ಯಾರು ಅತ್ಯುತ್ತಮ ಆಟಗಾರ ಎಂಬುದನ್ನು ಗಮನಿಸಬೇಕು ಎಂದಿದ್ದಾರೆ.
ಪ್ರಸ್ತುತ ಟೀಮ್​ ಇಂಡಿಯಾದಲ್ಲಿ ಸೂರ್ಯವಂಶಿಗಿಂತ ಉತ್ತಮ ಓಪನರ್ ಯಾರೂ ಇಲ್ಲ ಎಂದು ಕೈಫ್​ ಅಭಿಪ್ರಾಯಪಟ್ಟಿದ್ದಾರೆ. ಅವರು ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ, ಭರ್ಜರಿ ಫಾರ್ಮ್‌ನಲ್ಲಿದ್ದಾರೆ ಮತ್ತು ಒಂದಾದ ಮೇಲೊಂದರಂತೆ ದಾಖಲೆಗಳನ್ನು ಬರೆಯುತ್ತಿದ್ದಾರೆ. ಈಗಾಗಲೇ ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈಭವ್​ ಸೃಷ್ಟಿಸುತ್ತಿರುವ ದಾಖಲೆಗಳನ್ನು ಒಮ್ಮೆ ನೋಡಿ. ಮ್ಯಾನೇಜ್‌ಮೆಂಟ್ ಈಗಾಗಲೇ ಇಂತಹದ್ದೊಂದು ಮಾನದಂಡವನ್ನು ಸೃಷ್ಟಿಸಿರುವುದರಿಂದ, ಈಗ ನೀವು ಅವರಿಗೆ ಆಡಿಸಲೇಬೇಕು ಎಂದು ಕೈಫ್ ಒತ್ತಿ ಹೇಳಿದ್ದಾರೆ.
ಸೂರ್ಯವಂಶಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಒಂದು ಮಹತ್ವದ ಸಲಹೆ ನೀಡಿರುವ ಕೈಫ್​, ವೈಭವ್ ಸೂರ್ಯವಂಶಿಗೆ ಸ್ಥಾನ ಕಲ್ಪಿಸಲು ಅಭಿಷೇಕ್ ಶರ್ಮಾ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಬೇಕಾಗುತ್ತದೆ. ವೈಭವ್ ಸೂರ್ಯವಂಶಿ ಆರಂಭಿಕ ಆಟಗಾರನಾಗಿ ಸಂಜು ಸ್ಯಾಮ್ಸನ್ ಜೊತೆ ಇನ್ನಿಂಗ್ಸ್ ಆರಂಭಿಸಬೇಕು. ಇದಕ್ಕೆ ಬೇರೆ ಪರ್ಯಾಯವೇ ಇಲ್ಲ ಎಂದಿದ್ದಾರೆ.

ಕೋಚ್ ಸಿತಾಂಶು ಕೊಟಕ್ ನಿಲುವೇನು?

ಮತ್ತೊಂದೆಡೆ, ಸೂರ್ಯವಂಶಿ ಆಯ್ಕೆಯ ಈ ಗೊಂದಲದ ಬಗ್ಗೆ ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಅವರನ್ನು ಪ್ರಶ್ನಿಸಿದಾಗ, ವೈಭವ್ ಸದ್ಯ ತಮ್ಮ ಜೀವನದ ಶ್ರೇಷ್ಠ ಫಾರ್ಮ್‌ನಲ್ಲಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಕೇವಲ ಅವರ ಪದಾರ್ಪಣೆಗೆ ಅವಕಾಶ ಮಾಡಿಕೊಡಬೇಕು ಎಂಬ ಕಾರಣಕ್ಕಾಗಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿರುವ ಇತರ ಆಟಗಾರರನ್ನು ತಂಡದಿಂದ ಕೈಬಿಡುವುದು ನ್ಯಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net