ಬಾಲ್ಯದ ಭರವಸೆ ಈಡೇರಿಸಿದ ಮಗ: ತಾಯಿಯ ಮೊದಲ ಹೆಲಿಕಾಪ್ಟರ್ ಪ್ರಯಾಣದ ಹೃದಯಸ್ಪರ್ಶಿ ವೀಡಿಯೊ ವೈರಲ್! Helicopter Ride

Helicopter Ride  (ಚಿತ್ರ X)
Helicopter Ride (ಚಿತ್ರ X)
Published on
ಡೆಹ್ರಾಡೂನ್: ಹೆತ್ತ ತಾಯಿಗಿಂತ ದೊಡ್ಡ ದೈವವಿಲ್ಲ ಎಂಬ ಮಾತಿಗೆ ಅತ್ಯುತ್ತಮ ಉದಾಹರಣೆಯೊಂದು ಇತ್ತೀಚೆಗೆ ಮುನ್ನೆಲೆಗೆ ಬಂದಿದೆ. ಉತ್ತರಾಖಂಡದ ವ್ಯಕ್ತಿಯೊಬ್ಬರು ತಮ್ಮ ಬಾಲ್ಯದಲ್ಲಿ ತಾಯಿಗೆ ನೀಡಿದ್ದ ಭರವಸೆಯೊಂದನ್ನು ಕೊನೆಗೂ ಈಡೇರಿಸುವ ಮೂಲಕ ಇಡೀ ದೇಶದ ಜನರ ಮನ ಗೆದ್ದಿದ್ದಾರೆ. ಮಗ ತಾಯಿಗಾಗಿ ಮೊದಲ (Helicopter Ride) ಹೆಲಿಕಾಪ್ಟರ್ ಸವಾರಿಯ ಭಾವನಾತ್ಮಕ ಕ್ಷಣಗಳನ್ನು ಹೃದಯಸ್ಪರ್ಶಿ ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ?

ವಿಡಿಯೋದಲ್ಲಿ ಮಾತನಾಡಿದ ಯೋಗೇಶ್, ನಾನು ಚಿಕ್ಕವನಿದ್ದಾಗ, ನನ್ನ ತಾಯಿಗೆ ಒಂದು ದಿನ ಅವರನ್ನು ಹೆಲಿಕಾಪ್ಟರ್‌ನಲ್ಲಿ ಕೂರಿಸುತ್ತೇನೆ ಎಂದು ಭರವಸೆ ನೀಡಿದ್ದೆ. ಇಂದು ಆ ದಿನ ಕೊನೆಗೂ ಬಂದಿದೆ. ಅವರು ಹೆಲಿಕಾಪ್ಟರ್​ ಅನ್ನು ಹತ್ತಿರದಿಂದ ನೋಡಿದ ನಂತರ ಸ್ವಲ್ಪ ಆತಂಕಗೊಂಡಿದ್ದಾರೆ ಎಂದು ಹೇಳಿದ್ದಾರೆ.
ತಾಯಿಯ ದಶಕಗಳ ಕನಸು ನನಸು ಮಾಡಿದ ಮಗ!
ಇದಾದ ಬಳಿಕ ಯೋಗೇಶ್​ ತಾಯಿ-ಮಗ ಜೋಡಿಯಾಗಿ ಹೆಲಿಕಾಪ್ಟರ್ ಕಡೆಗೆ ನಡೆದುಕೊಂಡು ಹೋಗುವುದನ್ನು ತೋರಿಸಲಾಗಿದ್ದು, ಈ ವೇಳೆ ಇಬ್ಬರೂ ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಕ್ಯಾಮೆರಾಗೆ ತೋರಿಸಿದರು.

ಟೇಕ್-ಆಫ್ ವೇಳೆ ತಾಯಿಗಿದ್ದ ನಡುಕ, ಮಗ ನೀಡಿದ ಧೈರ್ಯ!

ಅವರಿಬ್ಬರೂ ಹೆಲಿಕಾಪ್ಟರ್‌ನ ಸೀಟುಗಳಲ್ಲಿ ಕುಳಿತುಕೊಳ್ಳುತ್ತಿದ್ದಂತೆ, ತಾಯಿಯ ಮುಖದಲ್ಲಿ ಸಣ್ಣದೊಂದು ಆತಂಕ ಕಾಣಿಸಿಕೊಂಡಿತು. ಮೊದಲ ಬಾರಿಗೆ ಹೆಲಿಕಾಪ್ಟರ್ ಏರುತ್ತಿದ್ದರಿಂದ ಆಕೆಗೆ ಒಳಗೊಳಗೇ ತುಸು ಭಯವಿತ್ತು. ಹೆಲಿಕಾಪ್ಟರ್ ಟೇಕ್-ಆಫ್ ಆಗಲು ಸಿದ್ಧತೆ ನಡೆಸುತ್ತಿದ್ದಾಗ, ಆಕೆ ಹೆದರಿಕೆಯಿಂದ ಮಗನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನ್ನು ಯೋಗೇಶ್ ಪ್ರೀತಿಯಿಂದ ಕ್ಯಾಮೆರಾದಲ್ಲಿ ತೋರಿಸಿದ್ದಾರೆ. ಆದರೆ ಮಗನ ಜೊತೆಗಿದ್ದಾನೆ ಎಂಬ ಧೈರ್ಯ ಆಕೆಯ ಭಯವನ್ನು ದೂರ ಮಾಡಿತು.

ಆಕಾಶದಲ್ಲಿ ರೆಕ್ಕೆ ಬಿಚ್ಚಿದಾಗ ಮೂಡಿದ ಆಶ್ಚರ್ಯ

ಒಮ್ಮೆ ಹೆಲಿಕಾಪ್ಟರ್ ಗಾಳಿಯಲ್ಲಿ ತೇಲುತ್ತಾ ಆಕಾಶಕ್ಕೆ ಚಿಮ್ಮುತ್ತಿದ್ದಂತೆ, ತಾಯಿಯಲ್ಲಿದ್ದ ಆತಂಕವೆಲ್ಲಾ ಮಾಯವಾಗಿ ಆ ಜಾಗದಲ್ಲಿ ಅಪಾರ ಆಶ್ಚರ್ಯ ಮೂಡಿತು. ಉತ್ತರಾಖಂಡದ ಅತ್ಯಂತ ಸುಂದರವಾದ ಮತ್ತು ಹಸಿರುಮಯ ಕಾಡುಗಳು, ಹಾವಿನಂತೆ ಬಳುಕುವ ರಸ್ತೆಗಳು ಹಾಗೂ ಭವ್ಯವಾದ ಪರ್ವತಗಳ ಮನಮೋಹಕ ದೃಶ್ಯಗಳು ಕಿಟಕಿಯ ಮೂಲಕ ಕಾಣಿಸುತ್ತಿದ್ದಂತೆ ಆ ತಾಯಿ ಎಲ್ಲವನ್ನೂ ಮರೆತು ಆನಂದಿಸಿದರು. ವರ್ಷಗಳ ಕಾಲ ತನ್ನ ಮನಸ್ಸಿನಲ್ಲೇ ಉಳಿಸಿಕೊಂಡಿದ್ದ ಬಾಲ್ಯದ ಭರವಸೆಯನ್ನು ಮಗ ಯೋಗೇಶ್ ಈ ಮೂಲಕ ಯಶಸ್ವಿಯಾಗಿ ಈಡೇರಿಸಿದ್ದರು.
ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಜನರ ಮನಸ್ಸನ್ನು ಮುಟ್ಟಿತು. ಕೆಲವು ಬಳಕೆದಾರರು ಸವಾರಿಯ ಉದ್ದಕ್ಕೂ ತಾಯಿಯ ಅಭಿವ್ಯಕ್ತಿಗಳು ಆ ಕ್ಷಣವನ್ನು ವಿಶೇಷವಾಗಿಸಿದೆ ಎಂದು ಕಾಮೆಂಟ್​ ಮಾಡಿದರೆ, ಇನ್ನೂ ಕೆಲವರು ಪೋಷಕರು ಕನಸು ಕಂಡಿದ್ದನ್ನು ಅನುಭವಿಸಲು ಸಹಾಯ ಮಾಡುವುದಕ್ಕಿಂತ ಹೆಚ್ಚು ಅರ್ಥಪೂರ್ಣವಾದ ಉಡುಗೊರೆಗಳು ಕೆಲವು ಮಾತ್ರ ಎಂದು ಹೇಳಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net