

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ( Uttarakhand Helicopter Crash ) ಸಾವಿಗೀಡಾದ ಆರು ಮಂದಿಯಲ್ಲಿ ಐವರು ಕನ್ನಡಿಗರೆಂದು ತಿಳಿದುಬಂದಿದೆ. ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ತೆರಳುತ್ತಿದ್ದ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್, ಚಮೋಲಿ ಜಿಲ್ಲೆಯ ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದ ವೇಳೆ ಸಂಪರ್ಕ ಕಳೆದುಕೊಂಡು ದುರಂತಕ್ಕೀಡಾಗಿದೆ. ಓರ್ವ ಪೈಲಟ್ ಹಾಗೂ ಐವರು ಪ್ರಯಾಣಿಕರು ಸೇರಿ ಒಟ್ಟು ಆರು ಮಂದಿ ಇದ್ದರು ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.
ಜೋಶಿಮಠ ಆಡಳಿತ ಮಂಡಳಿಯ ಮಾಹಿತಿಯ ಪ್ರಕಾರ, ಚಾಯ್ ಗ್ರಾಮದ ಮೇಲಿರುವ ಸೇನಾ ಶಿಬಿರದ ಬಳಿ ಈ ಹೆಲಿಕಾಪ್ಟರ್ ಕೊನೆಯ ಬಾರಿಗೆ ತನ್ನ ಲೊಕೇಶನ್ ದಾಖಲಿಸಿತ್ತು. ಮಧ್ಯಾಹ್ನ ಸುಮಾರು 2.21ರ ಸುಮಾರಿಗೆ ಜೋಶಿಮಠದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಕಚೇರಿಯಿಂದ ಈ ಅಪಘಾತದ ಕುರಿತು ಪ್ರಾಥಮಿಕ ಮಾಹಿತಿ ಲಭ್ಯವಾಯಿತು. ತಕ್ಷಣವೇ ಎಚ್ಚೆತ್ತ ಜಿಲ್ಲಾಡಳಿತವು ನಾಪತ್ತೆಯಾದ ಹೆಲಿಕಾಪ್ಟರ್ ಪತ್ತೆಗಾಗಿ ಮತ್ತೊಂದು ಹೆಲಿಕ್ಯಾಪ್ಟರ್ ಬಳಸಿ ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿತು.
ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ನೀಡಿರುವ ವಿವರಗಳಂತೆ, 'VT-HCX' ಕಾಲ್ ಸೈನ್ ಹೊಂದಿದ್ದ ಈ ಹೆಲಿಕಾಪ್ಟರ್ ಗುರುವಾರ ಮಧ್ಯಾಹ್ನ 1.14ರ ಸುಮಾರಿಗೆ ಬದರಿನಾಥದಿಂದ ಟೇಕಾಫ್ ಆಗಿತ್ತು. ಜೋಶಿಮಠ ಕಣಿವೆಯ ಮೇಲೆ ಹಾರುತ್ತಿದ್ದಾಗ ಹೆಲಿಕಾಪ್ಟರ್‌ನ ಸಂವಹನ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗಿದ್ದು, ಅದೇ ಸಮಯದಲ್ಲಿ ಅದರ ಟ್ರ್ಯಾಕಿಂಗ್ ಸಿಸ್ಟಮ್ ಕೂಡ ಸಿಗ್ನಲ್ ನೀಡುವುದನ್ನು ನಿಲ್ಲಿಸಿತ್ತು. ಇದರಿಂದಾಗಿ ಕಾಪ್ಟರ್ ಎಲ್ಲಿದೆ ಎಂಬ ನಿಖರ ಸ್ಥಳವನ್ನು ಗುರುತಿಸುವುದು ಕಷ್ಟಕರವಾಯಿತು.
ಹೆಲಿಕಾಪ್ಟರ್‌ನಲ್ಲಿದ್ದವರ ವಿವರಗಳನ್ನು ಗುರುತಿಸಲಾಗಿದ್ದು, ಪೈಲಟ್ ಆಗಿ ಕ್ಯಾಪ್ಟನ್ ಹಿಮಾನ್ಶು ಸಭರ್ವಾಲ್ ಕಾರ್ಯನಿರ್ವಹಿಸುತ್ತಿದ್ದರು. ಇವರೊಂದಿಗೆ ಪ್ರಯಾಣಿಕರಾದ ಅರುಣ್ ಸಾಲಂಕಿ, ಎಚ್.ಎಸ್. ನಾಗರಾಜ, ಪ್ರತಾಪ್ ಬಚಿಹಳ್ಳಿ ನಿಂಗರಾಜನ್, ಸುಧೀರ್ ಕೆ ಹಾಗೂ ಶಂಕರಗೌಡ ವಿ.ಬಿ. ಪ್ರಯಾಣಿಸುತ್ತಿದ್ದರು. ಆರು ಮಂದಿಯೂ ಸಾವಿಗೀಡಾಗಿದ್ದು, ಕುಟುಂಬಸ್ಥರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಸ್ನೇಹಿತರು ಮತ್ತು ಕುಟುಂಬಸ್ಥರ ಜತೆಗೂಡಿ ಭಕ್ತಿಯಿಂದ ಚಾರ್‌ಧಾಮ್ ಯಾತ್ರೆ ಕೈಗೊಂಡಿದ್ದ ಬೆಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಲಂಕಿ ಅವರು ಈ ಭೀಕರ ಪತನದಲ್ಲಿ ಜೀವ ಕಳೆದುಕೊಂಡಿದ್ದಾರೆ. ಸಾಲಂಕಿ ಅವರು ತಮ್ಮ ಇಬ್ಬರು ಮುದ್ದು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಈ ಹೃದಯವಿದ್ರಾವಕ ಘಟನೆಗೆ ತೀವ್ರ ಕಂಬನಿ ಮಿಡಿದಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಜೋಶಿಮಠ ಸಮೀಪ ನಡೆದ ಅಪಘಾತವು ಅತ್ಯಂತ ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಎಸ್‌ಡಿಆರ್‌ಎಫ್ (SDRF) ತಂಡಗಳು ಸ್ಥಳದಲ್ಲಿದ್ದು, ಜಂಟಿಯಾಗಿ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ ಸಿಎಂ, ತಾವು ಸ್ವತಃ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಗಂಭೀರವಾಗಿ ಗಾಯಗೊಂಡವರಿದ್ದರೆ ಅವರನ್ನು ಕೂಡಲೇ ಉನ್ನತ ಚಿಕಿತ್ಸೆಗಾಗಿ ಏರ್‌ಲಿಫ್ಟ್ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರು ಸುರಕ್ಷಿತವಾಗಿ ಮರಳಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಭಾರತೀಯ ಸೇನೆ, ಚಮೋಲಿ ಜಿಲ್ಲಾಡಳಿತ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು ಕೂಡಲೇ ಕಾರ್ಯಪ್ರವೃತ್ತವಾಗಿ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಧಾವಿಸಿವೆ. ಇದರ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಇಡೀ ಹೆಲಿಕಾಪ್ಟರ್ ಸಮೂಹದ ಹಾರಾಟವನ್ನು ವಿಮಾನಯಾನ ಪ್ರಾಧಿಕಾರವು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.